
ಮಂಗಳೂರು: ಇತ್ತೀಚಿನ ದಿನಗಳಲ್ಲಿ ಜೋರಾಗಿ ಸದ್ದು ಮಾಡುತ್ತಿರುವ ಡ್ರಗ್ ದಂಧೆ ಮಂಗಳೂರಿಗೂ ತನ್ನ ಕಬಂದ ಬಾಹುಗಳನ್ನು ಚಾಚಿ ಬಹಳ ಕಾಲವಾಗಿದೆ . ದೇಶವ್ಯಾಪಿ ಸುದ್ದಿಯಾದ ಡ್ರಗ್ ಕೇಸ್ಗಳಲ್ಲಿ ಮಂಗಳೂರಿಗೂ ಸಂಬಂಧವಿರುವುದು ಕಂಡುಬಂದಿತ್ತು. ಈ ವಿಚಾರ ಬೆನ್ನಟ್ಟಿದ್ದ ಮಂಗಳೂರು ಪೊಲೀಸರಿಗೆ ವಿದೇಶದ ಲಿಂಕ್ ಸಿಕ್ಕಿತ್ತು. ಓರ್ವ ವಿದೇಶಿ ಪ್ರಜೆ ಕೂಡ ಬಂಧನವಾಗಿದ್ದ. ಡ್ರಗ್ ಜಾಲ ತಡೆಗಟ್ಟುವುದು ಸವಾಲಾಗಿ ಪರಿಣಮಿಸಿರುವ ಈ ಸಂದರ್ಭದಲ್ಲಿ, ಕಡಲತಡಿಯ ಪೊಲೀಸರು ಸಾಲು ಸಾಲು ಆಂಟಿ ಡ್ರಗ್ ಡ್ರೈವ್ಗಳನ್ನು ಮಾಡುತ್ತಿದ್ದಾರೆ.
ಡ್ರಗ್ ದಂಧೆ ತಡೆಯಲು ಆಂಟಿ ಡ್ರಗ್ ಡ್ರೈವ್
ಗೋವಾ, ಮುಂಬೈ ಸೇರಿದಂತೆ ವಿವಿಧ ಕಡೆಯಿಂದ ಜಲಮಾರ್ಗ, ವಾಯುಮಾರ್ಗ ಮತ್ತು ನೆಲಮಾರ್ಗದಲ್ಲಿ ಮಂಗಳೂರಿಗೆ ಡ್ರಗ್ಸ್ ಬರುತ್ತಿರುವ ಬಗ್ಗೆ ಮಾಹಿತಿ ಇದೆ. ಬಾಲಿವುಡ್ ನಟ ಕಿಶೋರ್ ಶೆಟ್ಟಿ ಬಂಧನ ಪ್ರಕರಣದಲ್ಲಿ ಹಲವು ಸಿನಿಮಾ ನಟ-ನಟಿಯರು ಭಾಗಿಯಾಗಿದ್ದರು. ಇದರ ಜಾಡು ಹುಡುಕುತ್ತಾ ಹೊರಟ ಮಂಗಳೂರು ಸಿಸಿಬಿ ಪೊಲೀಸರಿಗೆ ಮುಂಬೈ ಲಿಂಕ್ ಸಿಕ್ಕಿತ್ತು.
ಜೊತೆಗೆ, ದಕ್ಷಿಣ ಭಾರತ ಭಾಗಗಳಿಗೆ ಡ್ರಗ್ ಸರಬರಾಜು ಮಾಡುತ್ತಿದ್ದ ನೈಜೀರಿಯನ್ ಪ್ರಜೆ ಕೂಡ ಬಂಧನವಾಗಿದ್ದ. ಈ ಎಲ್ಲಾ ಮೂಲಗಳನ್ನು ಪತ್ತೆ ಹಚ್ಚಿ ಡ್ರಗ್ ಜಾಲ ತಡೆಗಟ್ಟಲು ಪೊಲೀಸರು ಕೆಲಸ ಮಾಡಿದ್ದರು. ಆದರೆ, ಪೊಲೀಸರು ಚಾಪೆ ಸಂದಿ ನುಗ್ಗಿದರೆ, ಡ್ರಗ್ ದಂಧೆಕೋರರು ರಂಗೋಲಿ ಅಡಿ ನುಗ್ಗುತ್ತಿದ್ದರು. ಡ್ರಗ್ ದಂಧೆ ಮಟ್ಟಹಾಕಲು ಹೊರಟಿರುವ ಪೊಲೀಸರು ಈಗ ಸಾರ್ವಜನಿಕರನ್ನು ವಿಶ್ವಾಸಕ್ಕೆ ತೆಗೆದುಕೊಂಡು ಕೆಲಸ ಮಾಡುತ್ತಿದ್ದಾರೆ.
ಈ ಬಗ್ಗೆ, ಮಂಗಳೂರು ನಗರ ಪೊಲೀಸ್ ಕಮಿಷನರ್ ಆಯುಕ್ತರ ಕಚೇರಿಯ ಮೂಲಕ ಸಾಲು ಸಾಲು ಮಾದಕ ವಸ್ತು ತಡೆ ಮತ್ತು ಜಾಗೃತಿ ಅಭಿಯಾನಗಳನ್ನು ನಡೆಸಲಾಗುತ್ತಿದೆ. ಶಾಲಾ ಕಾಲೇಜು ವಿದ್ಯಾರ್ಥಿಗಳಲ್ಲೂ ಜಾಗೃತಿ ಮೂಡಿಸಲು ಪೊಲೀಸರು ಮುಂದಾಗಿದ್ದಾರೆ. ಯುವ ಸಮುದಾಯವನ್ನು ಕೇಂದ್ರೀಕರಿಸಿ ನಡೆಯುತ್ತಿರುವ ಮಾದಕ ತಡೆ ಅಭಿಯಾನಗಳಲ್ಲಿ ಯುವಜನರನ್ನು ಕರೆದು ಜಾಗೃತಿ ನೀಡಲಾಗುತ್ತಿದೆ. ಅಪರಾಧ ತಡೆ ಮಾಸಾಚರಣೆಯಲ್ಲಿ ಪ್ರಮುಖವಾಗಿ ಡ್ರಗ್ ತಡೆ ಬಗ್ಗೆಯೇ ಹೆಚ್ಚಿನ ಕಾರ್ಯಕ್ರಮ ಹಮ್ಮಿಕೊಳ್ಳಲಾಗುತ್ತಿದೆ.
ಮಂಗಳೂರು ಸೇರಿದಂತೆ ವಿವಿಧ ಕಡೆಗಳಲ್ಲಿ ಬೈಕ್ ಜಾಥಾ ಮಾಡುವುದರ ಮೂಲಕ ಜಾಗೃತಿ ಮೂಡಿಸಲಾಗುತ್ತಿದೆ. ಸಾರ್ವಜನಿಕರು, ಯುವಸಮುದಾಯ ಹಾಗೂ ವಿದ್ಯಾರ್ಥಿಗಳು, ಪೊಲೀಸ್ ಇಲಾಖೆಯೊಂದಿಗೆ ಕೈ ಜೋಡಿಸಿದರೆ ಡ್ರಗ್ ಜಾಲವನ್ನು ಬೇರು ಸಮೇತ ಕಿತ್ತುಹಾಕಬಹುದು ಎಂದು ಪೊಲೀಸರು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.
-ಪೃಥ್ವಿರಾಜ್ ಬೊಮ್ಮನಕೆರೆ
Published On - 3:11 pm, Fri, 18 December 20