Cauvery Water Dispute: ಇಂದು ಕಾವೇರಿ ನಿಯಂತ್ರಣ ಸಮಿತಿ ಸಭೆ, ಕರ್ನಾಟಕಕ್ಕೆ ಜಲಾತಂಕ..!
ಕಾವೇರಿ ನದಿ ನೀರು ಹಂಚಿಕೆ ವಿಚಾರಕ್ಕೆ ಸಂಬಂಧಿಸಿದಂತೆ ಇಂದು (ಅಕ್ಟೋಬರ್ 11) ಮತ್ತೊಂದು ಸಭೆ ಕರೆಯಲಾಗಿದೆ. ಒಂದು ದಿನ ಮುಂಚಿತವಾಗಿಯೇ ಸಭೆ ಕರೆಯಲಾಗಿದ್ದು, ಕರ್ನಾಟಕ, ತಮಿಳುನಾಡು, ಕೇರಳ ಮತ್ತು ಪುದುಚೇರಿ ಪ್ರತಿನಿಧಿಗಳು ವರ್ಚುಯಲ್ ಮೂಲಕ ಸಭೆಯಲ್ಲಿ ಪಾಲ್ಗೊಳ್ಳಲಿದ್ದಾರೆ. ಈ ಹಿಂದಿನ ಆದೇಶ ಅಕ್ಟೋಬರ್ 15ಕ್ಕೆ ಅವಧಿ ಮುಕ್ತಾಯವಾಗುತ್ತಿರುವುದರಿಂದ ಇಂದಿನ ಸಭೆ ಮಹತ್ವ ಪಡೆದುಕೊಂಡಿದೆ.
ನವದೆಹಲಿ (ಅಕ್ಟೋಬರ್ 11): ಕಾವೇರಿ ನೀರು ನಿಯಂತ್ರಣ ಸಮಿತಿ(ಸಿಡಬ್ಲ್ಯುಆರ್‌ಸಿ) (Cauvery Water Regulation Committee) ಮತ್ತೆ ಇಂದು (ಬುಧವಾರ) ಸಭೆ ಸೇರಲಿದೆ. ನವದೆಹಲಿಯ CWRC ಕಚೇರಿಯಲ್ಲಿ ಮಧ್ಯಾಹ್ನ 2 ಗಂಟೆಗೆ ನಡೆಯಲಿರುವ ಈ ಸಭೆಯಲ್ಲಿ ಕರ್ನಾಟಕದ ಪರವಾಗಿ ಕಾವೇರಿ ನೀರಾವರಿ(cauvery water) ನಿಗಮದ ಎಂ.ಡಿ. ಮಹೇಶ್ ಭಾಗಿಯಾಗಲಿದ್ದಾರೆ. ಇನ್ನು ತಮಿಳುನಾಡು, ಕೇರಳ, ಪುದುಚೇರಿ ಅಧಿಕಾರಿಗಳು, ವಕೀಲರು ಭಾಗವಹಿಸಲಿದ್ದಾರೆ. ಕಳೆದ ಬಾರಿ ತಮಿಳುನಾಡಿಗೆ 15 ದಿನ ನಿತ್ಯ 3 ಸಾವಿರ ಕ್ಯುಸೆಕ್ ನೀರು ಬಿಡುವಂತೆ ಆದೇಶಿಸಿದ್ದ ಸಮಿತಿ, ಈ ಬಾರಿ ಯಾವ ಆದೇಶ ನೀಡಲಿದೆ ಎನ್ನುವ ಆತಂಕ ಮನೆಮಾಡಿದೆ.
ಕಾವೇರಿ ಜಲಾನಯನ ಪ್ರದೇಶದ ಹಲವು ತಾಲೂಕುಗಳಲ್ಲಿ ಬರ ಘೋಷಣೆಯಾಗಿರುವುದು ಸೇರಿ ರಾಜ್ಯದಲ್ಲಿ ನೀರಿನ ಕೊರತೆ ಕುರಿತು ಅಧಿಕಾರಿಗಳು ಮತ್ತೊಮ್ಮೆ ಸಭೆಯ ಗಮನಕ್ಕೆ ತರಲು ಅಗತ್ಯ ಸಿದ್ಧತೆ ಮಾಡಿಕೊಂಡಿದ್ದಾರೆ. ಇನ್ನೊಂದೆಡೆ ತಮಿಳುನಾಡಿಗೆ ಕಾವೇರಿ ನೀರು ಹರಿಸುವುದನ್ನು ವಿರೋಧಿಸಿ ಕರ್ನಾಟಕದಲ್ಲಿ ಪ್ರತಿಭಟನೆಗಳು ಮುಂದುವರೆದಿವೆ.
ಇಂದಿನ ಸಭೆಯಲ್ಲಿ ಜಲಾಶಯಗಳಲ್ಲಿ ನೀರಿನ ಪ್ರಮಾಣ ಎಷ್ಟಿದೆ? ಒಳಹರಿವು ಎಷ್ಟಿದೆ ಎಂಬುದರ ಮಾಹಿತಿ ಸಂಗ್ರಹಿಸಲಾಗುತ್ತದೆ. ಒಳಹರಿವಿನ ಪ್ರಮಾಣವನ್ನು ನೋಡಿಕೊಂಡು ಹೊಸ ಆದೇಶ ಬರುವ ಸಾಧ್ಯತೆ ಇದೆ. ತಮಿಳುನಾಡು ಸರ್ಕಾರ ಇಂದಿನ ಸಭೆಯಲ್ಲಿ ದಿನಕ್ಕೆ 13,000 ಕ್ಯೂಸೆಕ್ ನೀರು ಬಿಡುವಂತೆ ಆದೇಶಿಸಲು ಮನವಿ ಮಾಡಲಿದೆ. ಆದ್ರೆ ಕರ್ನಾಟಕ ತನ್ನ ವಾದ ಮಂಡಿಸಲಿದ್ದು, ಕರ್ನಾಟಕದ ವಸ್ತುಸ್ಥಿತಿಯನ್ನ ವಿವರಿಸಲಿದೆ.
ಸೆಪ್ಟೆಂಬರ್ 29ರಂದು ಕಾವೇರಿ ನೀರು ನಿಯಂತ್ರಣ ಸಮಿತಿ ಸಭೆಯಲ್ಲಿ ದಿನಕ್ಕೆ 3 ಸಾವಿರ ಕ್ಯೂಸೆಕ್ ನೀರು ಹರಿಸುವಂತೆ ಕರ್ನಾಟಕಕ್ಕೆ ಸೂಚನೆ ನೀಡಲಾಗಿತ್ತು. ಅಕ್ಟೋಬರ್ 15ಕ್ಕೆ ಅವಧಿ ಮುಕ್ತಾಯವಾಗುತ್ತಿರುವುದರಿಂದ ಇಂದಿನ ಸಭೆ ಮಹತ್ವ ಪಡೆದುಕೊಂಡಿದೆ.
ರಾಜ್ಯದ ಪ್ರಮುಖ ಸುದ್ದಿಗಳನ್ನು ಓದಲು ಇದರ ಮೇಲೆ ಕ್ಲಿಕ್ ಮಾಡಿ