
ನವದೆಹಲಿ, ನವೆಂಬರ್ 05: ಅಕ್ಟೋಬರ್ 23ರಿಂದ ಕರ್ನಾಟಕವು ಕಾವೇರಿ ನದಿ ನೀರನ್ನು ಬಿಡುಗಡೆ ಮಾಡಿಲ್ಲ ಎಂದು ಆರೋಪಿಸಿರುವ ತಮಿಳುನಾಡು, ಈ ವಿಚಾರದಲ್ಲಿ ಮಧ್ಯಪ್ರವೇಶಿಸುವಂತೆ ಸುಪ್ರೀಂ ಕೋರ್ಟ್‌ಗೆ ತುರ್ತು ಮನವಿ ಮಾಡಿದೆ. ಪ್ರತಿದಿನ 3,000 ಕ್ಯೂಸೆಕ್ ನೀರು ಬಿಡುಗಡೆ ಮಾಡುವಂತೆ ಕಾವೇರಿ ನೀರು ನಿರ್ವಹಣಾ ಪ್ರಾಧಿಕಾರ ಸೂಚಿಸಿದ್ದರೂ ಕರ್ನಾಟಕ ನೀರು ಹರಿಸಿಲ್ಲ ಎಂದು ತಮಿಳುನಾಡು ಆರೋಪಿಸಿದೆ. ಇದರಿಂದ ಬೆಳೆ ಬೆಳೆಯಬೇಕಿರುವ ನಾಲ್ಕು ಲಕ್ಷ ಹೆಕ್ಟೇರ್ ಕೃಷಿ ಭೂಮಿಗೆ ಅಪಾಯ ಎದುರಾಗಿದ್ದು, ಸ್ಥಳೀಯ ರೈತರಿಗೆ ತೀವ್ರ ಸಂಕಷ್ಟ ಉಂಟಾಗಬಹುದು ಎಂದು ತಮಿಳುನಾಡು ಪರ ವಕೀಲರು ನ್ಯಾಯಾಲಯದ ಗಮನಕ್ಕೆ ತಂದಿದ್ದಾರೆ.
ಕಾವೇರಿ ನ್ಯಾಯಮಂಡಳಿಯು ನೆರೆಯ ರಾಜ್ಯಕ್ಕೆ ನೀರು ಹಂಚಿಕೆ ಮಾಡುವಂತೆ ನೀಡಿರುವ ಆದೇಶಗಳನ್ನು ಕರ್ನಾಟಕ ನಿರಂತರವಾಗಿ ಉಲ್ಲಂಘಿಸುತ್ತಿದೆ. ಪ್ರವಾಹದ ಕಾರಣದಿಂದ ಜಲಾಶಯಗಳಲ್ಲಿ ಅನಿವಾರ್ಯವಾಗಿ ಹೆಚ್ಚುವರಿ ನೀರು ಸಂಗ್ರಹವಾದ ಕೆಲವೇ ಸಂದರ್ಭಗಳಲ್ಲಿ ಮಾತ್ರ ಕರ್ನಾಟಕ ನೀರು ಬಿಡುಗಡೆ ಮಾಡಿದೆ ಎಂದು ಭಾರತದ ಮುಖ್ಯ ನ್ಯಾಯಮೂರ್ತಿ ಸೂರ್ಯಕಾಂತ್ ನೇತೃತ್ವದ ಪೀಠದ ಎದುರು ತಮಿಳುನಾಡು ಸರ್ಕಾರದ ಪರ ವಕೀಲ ಬಿ. ಕರುಣಾಕರನ್ ಆರೋಪಿಸಿದ್ದಾರೆ. ಬೆಳೆ ಬೆಳೆಯಬೇಕಿದ್ದ ನಾಲ್ಕು ಲಕ್ಷ ಹೆಕ್ಟೇರ್ ಭೂಮಿ ಸಂಪೂರ್ಣವಾಗಿ ನಾಶವಾಗಲಿದೆ. ಕರ್ನಾಟಕ ನೀರು ಬಿಡುಗಡೆ ಮಾಡುತ್ತಿಲ್ಲ. ನಾವೀಗ ಎಲ್ಲಿಗೆ ಹೋಗಬೇಕು? ಎಂದವರು ಪ್ರಶ್ನಿಸಿದ್ದಾರೆ.
ಇದನ್ನೂ ಓದಿ: ‘ಪ್ರತಿಬಾರಿಯೂ ತಮಿಳುನಾಡು ಸಮಸ್ಯೆ ಹೇಳುತ್ತಿದೆ’: ಕಾವೇರಿ ಜಲ ವಿವಾದ ಅರ್ಜಿ ವಿಚಾರಣೆ ವೇಳೆ ಸುಪ್ರೀಂಕೋರ್ಟ್
ಈ ಪ್ರಕರಣವನ್ನು ತ್ವರಿತವಾಗಿ ವಿಚಾರಣೆ ನಡೆಸುವಂತೆ ತಮಿಳುನಾಡು ಮಾಡಿರುವ ಮನವಿಗೆ ಸುಪ್ರೀಂ ಕೋರ್ಟ್ ಒಪ್ಪಿಗೆ ನೀಡಿದ್ದು, ಶೀಘ್ರದಲ್ಲೇ ವಿಚಾರಣೆ ಕೈಗೆತ್ತಿಕೊಳ್ಳಲಿದೆ. ರೈತರ ಹಿತಾಸಕ್ತಿ ಕಾಪಾಡಲು ತ್ವರಿತ ಕ್ರಮ ಕೈಗೊಳ್ಳುವಂತೆ ತಮಿಳುನಾಡು ಒತ್ತಾಯಿಸುತ್ತಿದ್ದು, ಉಭಯ ರಾಜ್ಯಗಳ ನಡುವಿನ ಕಾವೇರಿ ನೀರು ಹಂಚಿಕೆ ವಿವಾದ ಮತ್ತೊಂದು ಹಂತಕ್ಕೆ ಈಗ ತಲುಪಿದೆ. ಇದಕ್ಕೂ ಮುನ್ನ, ತಮಿಳುನಾಡು ತನಗೆ ಬರಬೇಕಾದ ಬಾಕಿ ನೀರನ್ನು ಬಿಡುಗಡೆ ಮಾಡಲು ಕರ್ನಾಟಕಕ್ಕೆ ಆದೇಶಿಸಬೇಕು ಎಂದು ಕೋರಿ ಸಲ್ಲಿಸಿದ್ದ ಅರ್ಜಿಯ ಸುದೀರ್ಘ ವಾದ-ಪ್ರತಿವಾದಗಳನ್ನು ಆಲಿಸಿದ್ದ ಸುಪ್ರೀಂಕೋರ್ಟ್ ತನ್ನ ಆದೇಶವನ್ನು ಕಾಯ್ದಿರಿಸಿತ್ತು.
ಮತ್ತಷ್ಟು ಸುದ್ದಿ ಓದಲು ಇಲ್ಲಿ ಕ್ಲಿಕ್ ಮಾಡಿ.
Published On - 12:40 pm, Thu, 5 November 26