
ನವದೆಹಲಿ, ಸೆಪ್ಟೆಂಬರ್ 24: ತಮಿಳುನಾಡಿಗೆ ಕಾವೇರಿ ನದಿ ನೀರು ಹರಿಸುವ ವಿಚಾರ ಸಂಬಂಧ ಅರ್ಜಿ ವಿಚಾರಣೆ ನಡೆಸಿದ ಸುಪ್ರೀಂಕೋರ್ಟ್ CWMA ಆದೇಶ ಪಾಲನೆ ಮುಂದುವರಿಸಲು ಕರ್ನಾಟಕ್ಕೆ ಸೂಚನೆ ನೀಡಿದೆ. ಜೊತೆಗೆ ತಮಿಳುನಾಡಿನ ಆಕ್ಷೇಪಕ್ಕೆ ಒಂದು ವಾರದಲ್ಲಿ ಅಫಿಡವಿಟ್ ಸಲ್ಲಿಸಲು ತಿಳಿಸಿ ಮುಂದಿನ ವಿಚಾರಣೆಯನ್ನು ಅಕ್ಟೋಬರ್ 12ಕ್ಕೆ ಮುಂದೂಡಿಕೆ ಮಾಡಿದೆ. ಕರ್ನಾಟಕ ಎಲ್ಲಾ ನೀರನ್ನು ಬಳಸಿಕೊಳ್ಳುತ್ತಿದೆ ಎಂದು ತಮಿಳುನಾಡು ಆರೋಪಿಸಿದರೆ, ಇದಕ್ಕೆ ಪ್ರತಿಯಾಗಿ ರಾಜ್ಯದಲ್ಲಿ ಬರ ಪರಿಸ್ಥಿತಿ ಎದುರಾಗಿದೆ ಎಂದು ಕರ್ನಾಟಕ ಕೋರ್ಟ್ ಗಮನಕ್ಕೆ ತಂದಿದೆ.
ಮಳೆ ಕೊರತೆಯಿಂದ ಡ್ಯಾಮ್ಗಳಲ್ಲಿ ನೀರಿನ ಸಂಗ್ರಹ ಕಡಿಮೆ ಇದೆ . ಕಳೆದ ವರ್ಷ ಇದೇ ಸಮಯದಲ್ಲಿ 81 ಟಿಎಂಸಿ ನೀರಿತ್ತು ಈ ವರ್ಷ ನೀರಿನ ಒಳಹರಿವಿನಲ್ಲಿ ಕೊರತೆ ಇದೆ . ಕರ್ನಾಟಕದಲ್ಲಿ ಮುಂಗಾರು ವಿಫಲವಾಗಿದ್ದು, ಬರ ಘೋಷಣೆಯಾಗಿದೆ. ಬೇಸಿಗೆಯಲ್ಲಿ ಕುಡಿಯುವ ನೀರಿನ ಸಮಸ್ಯೆ ಎದುರಾಗುವ ಆತಂಕ ಇದೆ. ಹೀಗಾಗಿ ನೀರು ಬಿಡುಗಡೆ ಮಾಡುವಂತೆ CWMA ಆದೇಶಕ್ಕೆ ಕರ್ನಾಟಕದ ವಿರೋಧವಿದೆ. ಬರ ಪರಿಸ್ಥಿತಿಯಲ್ಲಿ CWMA ಆದೇಶ ಪಾಲನೆ ಕಷ್ಟ ಎಂದು ಕರ್ನಾಟಕ ವಾದಿಸಿದೆ. ಕಾವೇರಿ ಜಲಾನಯನ ಪ್ರದೇಶದಲ್ಲೇ ನೀರಿನ ಕೊರತೆ ಇದೆ. ಹೀಗಾಗಿ ಕುಡಿಯುವ ನೀರು, ಪರಿಸರ, ಕೈಗಾರಿಕೆಗಳ ಅಗತ್ಯ ಪರಿಗಣಿಸಿ ಹೆಚ್ಚುವರಿ ನೀರಿಗೆ ತಮಿಳುನಾಡು ಬೇಡಿಕೆಯ ಅರ್ಜಿ ವಜಾಕ್ಕೆ ಮನವಿ ಮಾಡಿದೆ.
ಇದನ್ನೂ ಓದಿ: ತಮಿಳುನಾಡಿಗೆ 6 ಸಾವಿರ ಕ್ಯೂಸೆಕ್ ನೀರು ಹರಿಸುವ ಆದೇಶ ಮಾರ್ಪಾಡಿಗೆ ಆಗ್ರಹಿಸಿ CWMAಗೆ ಕರ್ನಾಟಕ ಮೇಲ್ಮನವಿ
ತಮಿಳುನಾಡಿನಲ್ಲಿ ನೀರಿನ ಕೊರತೆ ಇದೆ. 4.5 ಲಕ್ಷ ಎಕರೆ ಬೆಳೆಗಳಿಗೆ ನೀರಿನ ಅಗತ್ಯವಿದೆ ಎಂದು ತಮಿಳುನಾಡು ವಾದಿಸಿದ್ದು, CWMA ಆದೇಶ ಪಾಲನೆಯಾಗುತ್ತಿಲ್ಲ ಎಂದು ಆಕ್ಷೇಪ ಕೂಡ ವ್ಯಕ್ತಪಡಿಸಿದೆ. ನೀರಿನ ಕೊರತೆಯಿಂದಾಗಿ ನಾವು ಈಗಾಗಲೇ ಪೂರ್ವೈ ಬೆಳೆಯನ್ನು ಕಳೆದುಕೊಂಡಿದ್ದೇವೆ. ಪ್ರಮಾಣಾನುಗುಣವಾಗಿ ನೀರು ಬಿಡುಗಡೆ ಮಾಡುವಂತೆ ಆದೇಶಿಸಿರುವ ತೀರ್ಪಿನ ಜಾರಿಗೆ ನಾವು ಒತ್ತಾಯಿಸುತ್ತಿದ್ದೇವೆ ಎಂದು ತಮಿಳುನಾಡು ಪರ ವಕೀಲರು ನ್ಯಾಯಾಲಯಕ್ಕೆ ತಿಳಿಸಿದ್ದಾರೆ.
ವರದಿ: ನಟರಾಜ್, ಟಿವಿ9 ನವದೆಹಲಿ
ಮತ್ತಷ್ಟು ಸುದ್ದಿ ಓದಲು ಇಲ್ಲಿ ಕ್ಲಿಕ್ ಮಾಡಿ.
Published On - 12:24 pm, Thu, 24 September 26