ಬೆಂಗಳೂರು, (ಜುಲೈ 12): ತಮಿಳುನಾಡಿಗೆ ಜುಲೈ 31 ರವರೆಗೆ ಪ್ರತಿನಿತ್ಯ 1 ಟಿಎಂಸಿ ನೀರು ಹರಿಸಬೇಕೆಂಬ ಕಾವೇರಿ ನಿಯಂತ್ರಣ ಸಮಿತಿ ಆದೇಶ ಸಂಬಂಧ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಇಂದು (ಜುಲೈ 12) ಬೆಂಗಳೂರಿನಲ್ಲಿ ಹಿರಿಯ ಅಧೀಕಾರಿಗಳ ಜೊತೆ ಮಹತ್ವದ ಸಭೆ ನಡೆಸಿದರು. ಈ ಸಭೆಯಲ್ಲಿ ಕಾವೇರಿ ನೀರಿನ ಸ್ಥಿತಿಗತಿ ಬಗ್ಗೆ ಸುದೀರ್ಘವಾಗಿ ಚರ್ಚೆ ಮಾಡಿದ್ದು, ಯಾವುದೇ ಕಾರಣಕ್ಕೂ ನೀರು ಬಿಡದಿರಲು ನಿರ್ಧರಿಸಲಾಗಿದೆ. ಅಲ್ಲದೇ ಕಾವೇರಿ ನಿಯಂತ್ರಣ ಸಮಿತಿ ಆದೇಶದ ವಿರುದ್ಧ ಕಾವೇರಿ ನೀರು ನಿಯಂತ್ರಣ ಪ್ರಾಧಿಕಾರಕ್ಕೆ ಮೇಲ್ಮನವಿ ಸಲ್ಲಿಸಲು ತೀರ್ಮಾನಿಸಲಾಗಿದೆ. ಅಲ್ಲದೇ ಇದೇ ಜುಲೈ 14ರಂದು ಸರ್ವ ಪಕ್ಷಗಳ ಸಭೆ ಕರೆಯಲು ನಿರ್ಧರಿಸಲಾಗಿದೆ.
ಸಭೆ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಸಿದ್ದರಾಮಯ್ಯ, ನೀರು ಬಿಡುವುದಕ್ಕೆ ಆಗುವುದಿಲ್ಲ. ಈ ಆದೇಶದ ವಿರುದ್ಧ ಅಪೀಲ್ ಹಾಕಬೇಕು ಎನ್ನುವ ಅಭಿಪ್ರಾಯಕ್ಕೆ ಬಂದಿದ್ದೇವೆ. ನಾನು ಹಾಗೂ ಎಲ್ಲಾ ಸಚಿವರು ಈ ನಿರ್ಧಾರ ಕೈಗೊಂಡಿದ್ದೇವೆ. ಜುಲೈ 14ರಂದು ಸರ್ವಪಕ್ಷಗಳ ಸಭೆ ಕರೆಯಲು ನಿರ್ಧರಿಸಲಾಗಿದ್ದು, ಒಟ್ಟಾಗಿ ಇದರ ವಿರುದ್ದ ನಿಲ್ಲಬೇಕಾಗಿದೆ ಎಂದು ಹೇಳಿದರು.
ಇದನ್ನೂ ಓದಿ: ಕಾವೇರಿಯ ಒಡಲು ತುಂಬುತ್ತಿರುವಾಗಲೇ ತಮಿಳುನಾಡಿಗೆ ನಿತ್ಯ 1 ಟಿಎಂಸಿ ನೀರು ಹರಿಸುವಂತೆ CWRC ಆದೇಶ
ತಮಿಳುನಾಡಿಗೆ ಪ್ರತಿದಿನ 1 TMC ನೀರು ಹರಿಸುವಂತೆ ಆದೇಶ ಹೊರಡಿಸಿದೆ. ಸಿಡಬ್ಲ್ಯುಆರ್ಸಿ ಆದೇಶದ ಬಗ್ಗೆ ಚರ್ಚಿಸಲು ಡಿಸಿಎಂ ಡಿ.ಕೆ.ಶಿವಕುಮಾರ್ ಸರ್ವಪಕ್ಷ ಸಭೆ ಕರೆಯುತ್ತಿದ್ದಾರೆ. ಸರ್ವಪಕ್ಷ ಸಭೆಯಲ್ಲಿ ನಾನು ಕೂಡ ಭಾಗಿಯಾಗುತ್ತೇನೆ. ಕೇಂದ್ರ ಸಚಿವರು, ಆ ಭಾಗದ ಸಂಸದರನ್ನು ಆಹ್ವಾನಿಸುತ್ತೇವೆ. ಕಾವೇರಿ ನದಿ ಪಾತ್ರದ ಶಾಸಕರನ್ನೂ ಸಭೆಗೆ ಆಹ್ವಾನಿಸುತ್ತೇವೆ. ಎಲ್ಲರನ್ನೂ ವಿಶ್ವಾಸಕ್ಕೆ ತೆಗೆದುಕೊಂಡು ಮುಂದಿನ ನಿರ್ಧಾರ ಕೈಗೊಳ್ಳಲಾಗುವುದು. ಏನು ಹೆಜ್ಜೆ ಇಡಬೇಕೆಂಬ ತೀರ್ಮಾನ ತೆಗೆದುಕೊಳ್ಳುತ್ತೇವೆ ಎಂದು ವಿವರಿಸಿದರು.
ಕಾವೇರಿ ಜಲಾನಯನ ಪ್ರದೇಶದ ಎಲ್ಲಾ 4 ಜಲಾಶಯಗಳಲ್ಲಿ ಒಟ್ಟು ಕೇವಲ 60 ಟಿಎಂಸಿ ನೀರು ಲಭ್ಯವಿದೆ. ಕೃಷಿ ಚಟುವಟಿಕೆಗಳಿಗೂ ನಾವು ನೀರು ಒದಗಿಸಬೇಕಾಗಿದೆ. ಮಳೆ ಕೊರತೆಯನ್ನು ಗಮನದಲ್ಲಿರಿಸಿ ಜುಲೈ ಅಂತ್ಯದವರೆಗೆ ಕಾಯಲು ಮನವಿ ಮಾಡಿದ್ದೆವು.
ಬಿಳಿಗುಂಡ್ಲುವಿನಲ್ಲಿ ಅಳತೆ ಮಾಡುವಾಗ, ಕಬಿನಿ ಅಣೆಕಟ್ಟಿನ ಒಳಹರಿವಿನಷ್ಟು ಕ್ಯೂಸೆಕ್ಸ್ನಷ್ಟು ನೀರನ್ನು… pic.twitter.com/VVDbFL5CoN
— CM of Karnataka (@CMofKarnataka) July 12, 2024
ಹವಾಮಾನ ಮುನ್ಸೂಚನೆ ಇದ್ರೂ ಕೂಡ ಇಲ್ಲಿವರೆಗೆ ಶೇ 28 ರಷ್ಟು ನೀರಿನ ಕೊರತೆ ಇದೆ. CWRC ಮುಂದೆ ನಮ್ಮ ನಿಲುವು ಹೇಳಿದ್ದೇವೆ. ಜೊತೆಗೆ ಯಾವುದೇ ತೀರ್ಮಾನ ಮಾಡಕೂಡುದು ಅಂತಾನೂ ಹೇಳಿದ್ದೀವಿ. ಜುಲೈ ಅಂತ್ಯದವರೆಗೂ ಕಾಯಬೇಕು ಎಂದು ಹೇಳಿದ್ದೀವಿ. ಆದರೂ ಕಾವೇರಿ ಸಮಿತಿಯವರು ಜುಲೈ 12ರಿಂದ ಪ್ರತಿ ದಿನ ಒಂದು ಟಿಎಂಸಿ ನೀರು ಬಿಡಬೇಕು ಎಂದು ಹೇಳಿದ್ದಾರೆ. ಆದ್ರೆ, ನಾವು ನೀರು ಬಿಡಲು ಸಾಧ್ಯವಿಲ್ಲ ಎಂದು ಸಿಎಂ ಸಿದ್ದರಾಮಯ್ಯ ಸ್ಪಷ್ಟಪಡಿಸಿದರು.
ನೀರು ಬಿಡುವ ಆದೇಶವನ್ನ ನಾವು ಪಾಲಿಸೋದಿಲ್ಲ. ಜುಲೈ ಅಂತ್ಯದವರೆಗೂ ತಮಿಳುನಾಡಿಗೆ ನೀರು ಬಿಡುವುದಕ್ಕೆ ಆಗುವುದಿಲ್ಲ. ನಮ್ಮಲ್ಲೇ ಶೇಕಡಾ 28ರಷ್ಟು ನೀರಿನ ಕೊರತೆ ಇದೆ. ಹೀಗಾಗಿ ತಮಿಳುನಾಡಿಗೆ ನೀರು ಹರಿಸಲು ಆಗುವುದಿಲ್ಲ. 3 ದಿನಗಳಿಂದ ಕಬಿನಿ ಡ್ಯಾಮ್ನಿಂದ ನೀರು ಹೋಗುತ್ತಿದೆ. ಈ ವಿಚಾರವಾಗಿ ಜು.14ರಂದು ಸರ್ವಪಕ್ಷ ಸಭೆ ನಡೆಸಿ ವಿರೋಧ ಪಕ್ಷಗಳ ಸಲಹೆ ಪಡೆದು ಮುಂದಿನ ತೀರ್ಮಾನ ಮಾಡುತ್ತೇವೆ ಎಂದರು.
ಮುಖ್ಯಮಂತ್ರಿ @siddaramaiah ಅವರು ಇಂದು ಗೃಹಕಚೇರಿ ಕೃಷ್ಣಾದಲ್ಲಿ ಕಾವೇರಿ ನೀರು ನಿಯಂತ್ರಣ ಸಮಿತಿಯು ನೀರು ಬಿಡುವಂತೆ ನೀಡಿರುವ ಆದೇಶದ ಕುರಿತು ಸಂಪುಟ ಸಹೋದ್ಯೋಗಿಗಳು ಹಾಗೂ ಹಿರಿಯ ಅಧಿಕಾರಿಗಳ ಜೊತೆ ಸುದೀರ್ಘ ಚರ್ಚೆ ನಡೆಸಿ, ನಂತರ ಪತ್ರಿಕಾಗೋಷ್ಠಿಯನ್ನು ಉದ್ದೇಶಿಸಿ ಮಾತನಾಡಿದರು.
ತಮಿಳುನಾಡಿಗೆ ಪ್ರತಿ ದಿನ 1 ಟಿಎಂಸಿ ನೀರು ಬಿಡುಗಡೆ… pic.twitter.com/zpRu607jXn
— CM of Karnataka (@CMofKarnataka) July 12, 2024
ಇನ್ನು ಈ ಸಭೆಯಲ್ಲಿ ಜಲಸಂಪನ್ಮೂಲ ಸಚಿವ ಡಿ.ಕೆ.ಶಿವಕುಮಾರ್, ಸಚಿವರಾದ ಕೆ.ಹೆಚ್.ಮುನಿಯಪ್ಪ, ಡಾ.ಹೆಚ್.ಸಿ.ಮಹದೇವಪ್ಪ. ಚಲುವರಾಯಸ್ವಾಮಿ, ರಾಮಲಿಂಗಾ ರೆಡ್ಡಿ, ಭೈರತಿ ಸುರೇಶ್, ಸಿಎಂ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ಎಲ್.ಕೆ.ಅತೀಕ್, ಜಲಸಂಪನ್ಮೂಲ ಇಲಾಖೆ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ,
ಕಾರ್ಯದರ್ಶಿ ಕೃಷ್ಣಮೂರ್ತಿ ಕುಲಕರ್ಣಿ ಸೇರಿ ಹಲವರು ಭಾಗಿಯಾಗಿದ್ದರು.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 5:30 pm, Fri, 12 July 24