ಭ್ರಷ್ಟಾಚಾರ: ಬೆಂಗಳೂರಿನಲ್ಲಿ ಇಡಿ ಅಧಿಕಾರಿ ಬಂಧನ
ಇಡಿ ಅಧಿಕಾರಿಗೆ ಬೌರಿಂಗ್ ಆಸ್ಪತ್ರೆಯಲ್ಲಿ ಆರೋಗ್ಯ ತಪಾಸಣೆ ಮಾಡಿಸಿದ್ದು, ವೈದ್ಯಕೀಯ ಪರೀಕ್ಷೆ ಬಳಿಕ ಸಿಬಿಐ ಅಧಿಕಾರಿಗಳು ಲಲಿತ್ ಬಜಾಡ್ ಅನ್ನು ಕರೆದೊಯ್ದಿದ್ದಾರೆ.

ಬೆಂಗಳೂರು: ನಗರದ ಸಿಬಿಐ ಅಧಿಕಾರಿಗಳು ಭ್ರಷ್ಟಾಚಾರ ಆರೋಪದಡಿ ಇಡಿ ಅಧಿಕಾರಿಯನ್ನು ಬಂಧಿಸಿದ್ದಾರೆ. ಶಾಂತಿನಗರದ ಇಡಿ ಕಚೇರಿಯಲ್ಲಿ ಕೆಲಸ ಮಾಡುತ್ತಿದ್ದ ಲಲಿತ್ ಬಜಾಡ್ ಅವರನ್ನು ಬಂಧಿಸಲಾಗಿದೆ. ಇಡಿ ಅಧಿಕಾರಿಗೆ ಬೌರಿಂಗ್ ಆಸ್ಪತ್ರೆಯಲ್ಲಿ ಆರೋಗ್ಯ ತಪಾಸಣೆ ಮಾಡಿಸಿದ್ದು, ವೈದ್ಯಕೀಯ ಪರೀಕ್ಷೆ ಬಳಿಕ ಸಿಬಿಐ ಅಧಿಕಾರಿಗಳು ಲಲಿತ್ ಬಜಾಡ್ ಅನ್ನು ಕರೆದೊಯ್ದಿದ್ದಾರೆ.
ಬೆಂಗಳೂರಿನಲ್ಲಿ ದ್ವಿಚಕ್ರವಾಹನ ಕದಿಯುತ್ತಿದ್ದ ಆರೋಪಿ ಸೆರೆ: ಬೆಂಗಳೂರಿನಲ್ಲಿ ದ್ವಿಚಕ್ರ ವಾಹನ ಕದಿಯುತ್ತಿದ್ದ ಆರೋಪಿ ರಾಗಿಗುಡ್ಡ ಸ್ಲಂನ ಮಾರಿಮುತ್ತು ಅಲಿಯಾಸ್ ಮಾರಿಯನ್ನು ತಿಲಕ್ ನಗರ ಠಾಣೆ ಪೊಲೀಸರು ಬಂಧಿಸಿದ್ದಾರೆ. ಬಂಧಿತನಿಂದ 4.50 ಲಕ್ಷ ರೂಪಾಯಿ ಮೌಲ್ಯದ 5 ಬೈಕ್ ಅನ್ನು ವಶಕ್ಕೆ ಪಡೆಯಲಾಗಿದೆ. ರಾತ್ರಿ ವೇಳೆ ಮನೆ ಮುಂದೆ ನಿಲ್ಲಿಸಿದ್ದ ಬೈಕ್ಗಳನ್ನು ಟಾರ್ಗೆಟ್ ಮಾಡಿ ಲಾಕ್ ಮುರಿದು ಕಳ್ಳತನ ಮಾಡುತ್ತಿದ್ದ ಮಾರಿಯನ್ನು (24) ಸದ್ಯ ಪೊಲೀಸರು ಬಂಧಿಸಿದ್ದಾರೆ.
ಬೆಂಗಳೂರಲ್ಲಿ ಮನೆಯೊಳಗೆ ನುಗ್ಗಿ ಕಳ್ಳತನ ಮಾಡಿದ ಆರೋಪಿಗಳ ಬಂಧನ: ಮನೆಯೊಳಗೆ ನುಗ್ಗಿ ಚಾಕು ತೋರಿಸಿ ದರೋಡೆ ಮಾಡಿದ 10 ಆರೋಪಿಗಳನ್ನು ಬೆಂಗಳೂರಲ್ಲಿ ಅನ್ನಪೂರ್ಣೇಶ್ವರಿ ಠಾಣೆ ಪೊಲೀಸರು ಬಂಧಿಸಿದ್ದಾರೆ. ನಾಗೇಂದ್ರ(30), ಪಾರ್ಥಿವನ್(25), ಸುರೇಶ್(33), ನಯಾಜ್ ಪಾಷಾ(35), ಸೈಯದ್ ಸಿದ್ದಿಕ್(30), ಸತೀಶ್(30), ಹನುಮೇಗೌಡ(28), ಧರ್ಮರಾಜ(28), ಇಮ್ರಾನ್ ಪಾಷಾ(32), ಹೇಮಂತ್(22) ಬಂಧಿತರು.
ಬಂಧಿತರಿಂದ 80 ಗ್ರಾಂ ಚಿನ್ನಾಭರಣ, ಮೊಬೈಲ್ ಫೋನ್ 1.45 ಲಕ್ಷ ನಗದು, ಆಟೋರಿಕ್ಷಾ, 2 ದ್ವಿಚಕ್ರ ವಾಹನ ಜಪ್ತಿ ಮಾಡಿದ್ದಾರೆ. ಮಾರ್ಚ್ 6ರಂದು ಅನ್ನಪೂರ್ಣೇಶ್ವರಿ ಠಾಣಾ ವ್ಯಾಪ್ತಿಯಲ್ಲಿ ದರೋಡೆ ನಡೆದಿತ್ತು. ಮನೆಯವರನ್ನು ಬೆದರಿಸಿ ದರೋಡೆ ಮಾಡಿದ್ದ ಆರೋಪಿಗಳು ಸದ್ಯ ಪೊಲೀಸರ ವಶದಲ್ಲಿ ಇದ್ದಾರೆ.

ಬೈಕ್ ಕಳ್ಳತನ ಮಾಡುತ್ತಿದ್ದ ಮಾರಿ (24) ಬಂಧನ
ಶಿವಳ್ಳಿ ಬಳಿ ಬರ್ತ್ಡೇ ಪಾರ್ಟಿಯಲ್ಲಿ ಫೈರಿಂಗ್ ಮಾಡಿದ ಇಬ್ಬರು ಪೊಲೀಸ್ ವಶ: ಧಾರವಾಡದ ಶಿವಳ್ಳಿ ಗ್ರಾಮದ ತೋಟದಲ್ಲಿ ಬರ್ತ್ಡೇ ಪಾರ್ಟಿಯಲ್ಲಿ ಫೈರಿಂಗ್ ಮಾಡಿದ ‘ಕೈ’ ಮುಖಂಡ ಮಲ್ಲಿಕಾರ್ಜುನ ಆಯಟ್ಟಿ, ಅಣ್ಣಪ್ಪಗೌಡ ಎಂಬ ಇಬ್ಬರನ್ನು ಧಾರವಾಡ ಗ್ರಾಮೀಣ ಪೊಲೀಸರು ವಶಕ್ಕೆ ಪಡೆದಿದ್ದಾರೆ. ತಾಲೂಕು ಪಂಚಾಯತಿ ಮಾಜಿ ಸದಸ್ಯ ಅಣ್ಣಪ್ಪಗೌಡ ಚಿನ್ನಗುಡಿ ಅವರ ಜನ್ಮದಿನದ ಪ್ರಯುಕ್ತ ಪಾರ್ಟಿ ಮಾಡುತ್ತಿದ್ದರು. ಈ ವೇಳೆ ಗಾಳಿಯಲ್ಲಿ ಗುಂಡು ಹಾರಿಸಿದ್ದ ಮಲ್ಲಿಕಾರ್ಜುನ, ರಿವಾಲ್ವರ್ ತೋರಿಸಿ ವಿಶ್ ಮಾಡಿದ್ದಾರೆ. ಹೀಗಾಗಿ ಪೊಲೀಸರು ಸದ್ಯ ಇಬ್ಬರನ್ನು ವಶಕ್ಕೆ ತೆಗೆದುಕೊಂಡಿದ್ದಾರೆ.
ಹೈದರಾಬಾದನಲ್ಲಿ ಡ್ರಗ್ ಸಪ್ಲೈ ಮಾಡುತ್ತಿದ್ದ ವ್ಯಕ್ತಿ ಬಂಧನ: ಹೈದರಾಬಾದನಲ್ಲಿ ಪ್ರಮುಖರಿಗೆ ಡ್ರಗ್ ಸಪ್ಲೈ ಮಾಡುತ್ತಿದ್ದ ವ್ಯಕ್ತಿಯ ಅಡ್ಡೆಯ ಮೇಲೆ ಎಕ್ಸೈಜ್ ಅಧಿಕಾರಿಗಳು ದಾಳಿ ನಡೆಸಿದ್ದಾರೆ. ಗೋವಾ, ಬೆಂಗಳೂರು ಕೇಂದ್ರವಾಗಿಸಿಕೊಂಡು ಡ್ರಗ್ ವ್ಯವಹಾರ ಮಾಡುತ್ತಿದ್ದ ಡಾಡಿ ಬಾಯ್ ಎಂಬುವವನು ಕಳೆದ 4ವರ್ಷದಿಂದ ಹೈದರಾಬಾದನಲ್ಲಿ ವಾಸಿಸುತ್ತಾ ಡ್ರಗ್ ಪೂರೈಕೆ ಮಾಡುತ್ತಿದ್ದ. 153ಗ್ರಾಂ ಕೊಕೆಯಿನ್ ಕಳುಹಿಸಿದ್ದ ಡ್ರಗ್ ಡೀಲರ್, ಮತ್ತೆ ಡ್ರಗ್ ಪೂರೈಕೆ ಯತ್ನದಲ್ಲಿದ್ದಾಗ ಸಿಕ್ಕಿಹಾಕಿಕೊಂಡಿದ್ದಾನೆ.
ಹೈದ್ರಾಬಾದ್ನಲ್ಲಿ ಗುಡ್ ಸ್ಟಫ್ ಅಂತಾ ವಾಟ್ಸಪ್ ಗ್ರೂಪ್ ಮೂಲಕ ಮೆಸ್ಸೇಜ್ ಕಳುಹಿಸುತ್ತಿದ್ದ ಡ್ರಗ್ ಡೀಲರ್, ಜೇಮ್ಸ್ ಎನ್ನುವ ನೈಜೀರಿಯನ್ ವ್ಯಕ್ತಿ ಮೂಲಕ ಡ್ರಗ್ ಡೆಲಿವರಿ ಮಾಡುತ್ತಿದ್ದ. ಫೋನ್ ನಂಬರ್ ಬದಲು ವಾಟ್ಸಪ್ ಕಾಲ್ ಮೂಲಕ ವ್ಯವಹಾರ ನಡೆಸಿದುತ್ತಿದ್ದ ಕಿಲಾಡಿ ಸದ್ಯ ಪೊಲೀಸರ ವಶದಲ್ಲಿದ್ದಾನೆ. ಪ್ರಮಖ ಹೋಟೆಲ್, ನೆಕ್ ಲೆಸ್ ರೋಡ್ ಪೋಸ್ಟ್, ಡ್ರೈವ್ ಇನ್ ಹೋಟೆಲ್‌ಗಳಲ್ಲಿ ಡ್ರಗ್ ಡೆಲಿವರಿ ಮಾಡುತ್ತಿದ್ದ ಎಂದು ತಿಳಿದು ಬಂದಿದೆ. ಡ್ರಗ್ ಸರಬರಾಜು ವೇಳೆ ನೈಜೀರಿಯನ್ ಜೇಮ್ಸ ಬಂಧಿಸಲಾಗಿತ್ತು, ನಂತರ ಮಾಹಿತಿ ಸಂಗ್ರಹಿಸಿ ಡ್ರಗ್ ಡೀಲರ್ ಡಾಡಿ ಬಾಯ್ ಕೇಂದ್ರದ ಮೇಳೆ ದಾಳಿ ಮಾಡಲಾಗಿದೆ.
ಇದನ್ನೂ ಓದಿ:
ಕಮರಿಪೇಟೆಯಲ್ಲಿ ಸಿಸಿಬಿ ಪೊಲೀಸರ ಕಾರ್ಯಾಚರಣೆ: ಕ್ರಿಕೆಟ್ ಬೆಟ್ಟಿಂಗ್, ಅಕ್ರಮ ಮದ್ಯ ಸಂಗ್ರಹಿಸಿದ್ದ ಮೂವರ ಬಂಧನ