
ಬೆಂಗಳೂರು, (ಜುಲೈ 22): ಕರ್ನಾಟಕದ ಕಾಂಗ್ರೆಸ್ ಸರ್ಕಾರ (Karnataka Congress Government) ಸಣ್ಣಪುಟ್ಟ ವ್ಯಾಪಾರಿಗಳಿಗೆ (small traders) ತೆರಿಗೆ ಬಾಕಿ ನೋಟಿಸ್ ಕೊಟ್ಟು, ಇದೀಗ ರಾಜ್ಯ ಸರ್ಕಾರಕ್ಕೂ ಹಾಗೂ ಜಿ ಎಸ್ ಟಿ ನೋಟಿಸ್ ಗೂ ಯಾವುದೇ ಸಂಬಂಧವಿಲ್ಲ ಎಂದು ಹೇಳುತ್ತಿರುವುದು ನಿಜಕ್ಕೂ ಹಾಸ್ಯಾಸ್ಪದ. GST ನಲ್ಲಿ ಕೇಂದ್ರ ಸರ್ಕಾರದ ಅಡಿಯಲ್ಲಿ CGST ಮತ್ತು ರಾಜ್ಯ ಸರ್ಕಾರಗಳ ಅಡಿಯಲ್ಲಿ SGST ಎರಡು ಭಾಗಗಳಿದೆ. ಸಣ್ಣಪುಟ್ಟ ವ್ಯಾಪಾರಿಗಳಿಗೆ ನೋಟಿಸ್ ನೀಡಿರುವುದು ರಾಜ್ಯ ಸರ್ಕಾರದ ವಾಣಿಜ್ಯ ತೆರಿಗೆ ಇಲಾಖೆ. ಇದರಲ್ಲಿ ಕೇಂದ್ರ ಸರ್ಕಾರದ ಯಾವುದೇ ಪಾತ್ರವಿಲ್ಲ ಎಂದು ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ (Pralhad Joshi) ಸ್ಪಷ್ಟಪಡಿಸಿದರು.
ಜಿ ಎಸ್ ಟಿ ಕೌನ್ಸಿಲ್ ನಲ್ಲಿ ಯಾವುದೇ ತೀರ್ಮಾನ ತಗೆದುಕೊಳ್ಳಲು ಮಹತ್ವದ ಪಾತ್ರ ವಹಿಸಿರುವುದು ರಾಜ್ಯ ಸರ್ಕಾರಗಳು. ಕೇಂದ್ರ ಸರ್ಕಾರಕ್ಕೆ ಕೇವಲ 3 ನೇ ಒಂದು ಭಾಗ ಮಾತ್ರ ಅಧಿಕಾರವಿದೆ. ಉಳಿದ ಅಧಿಕಾರ ರಾಜ್ಯ ಸರ್ಕಾರದ ಕೈಯಲ್ಲಿದೆ. 3ನೇ ಎರಡು ಭಾಗದಷ್ಟು ಅಧಿಕಾರ ಹೊಂದಿರುವ ರಾಜ್ಯ ಸರ್ಕಾರಗಳ ನಿರ್ಣಯವೇ ಅಂತಿಮವಾಗಿರಲಿದೆ. ಇದೀಗ ಹಣ್ಣು, ಹಾಲು, ತರಕಾರಿ ಸೇರಿದಂತೆ ದಿನನಿತ್ಯದ ಅಗತ್ಯ ಸರಕು ಸೇವಾ ವ್ಯಾಪಾರಿಗಳಿಗೆ ನೋಟಿಸ್ ನೀಡಿ, ಅವರಿಗೆ ತೊಂದರೆ ಕೊಡುತ್ತಿದ್ದಾರೆ ಎಂದು ಕಿಡಿಕಾರಿದರು.
ಬೇರೆ ಯಾವುದೇ ರಾಜ್ಯಗಳಲ್ಲಿ ನೀಡದ ನೋಟಿಸ್, ಕರ್ನಾಟಕದಲ್ಲಿನ ಕಾಂಗ್ರೆಸ್ ಸರ್ಕಾರ ಸಣ್ಣಪುಟ್ಟ ವ್ಯಾಪಾರಿಗಳಿಗೆ ನೋಟಿಸ್ ನೀಡಿದೆ. ಯುಪಿಐ ಟ್ರಾನ್ಸಾಕ್ಷನ್ ಇದೀಗ ಇಡೀ ವಿಶ್ವಕ್ಕೆ ಮಾದರಿಯಾಗಿದೆ. ಈ ಮಧ್ಯೆ ರಾಜ್ಯದಲ್ಲಿ ಡಿಜಿಟಲ್ ಟ್ರಾನ್ಸಾಕ್ಷನ್ ಹದಗೆಡಿಸುವ ದುಸಾಹಸಕ್ಕೆ ಕಾಂಗ್ರೆಸ್ ಸರ್ಕಾರ ಕೈಹಾಕಿರುವುದು ನಿಜಕ್ಕೂ ದುರಂತ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಸಣ್ಣ ಸಣ್ಣ ವ್ಯಾಪಾರಿಗಳಿಗೆ ನೋಟಿಸ್ ನೀಡಿರುವುದನ್ನು ವಿರೋಧಿಸಿ ಜುಲೈ 23 ಬುಧವಾರ ಮತ್ತು, ಜುಲೈ 24 ಗುರುವಾರದಂದು ಹಾಲು ಉತ್ಪನ್ನಗಳ ಮಾರಾಟ ಮಾಡದಿರಲು ಅಂಗಡಿ ಮಾಲೀಕರು ನಿರ್ಧರಿಸಿದ್ದಾರೆ. ಹಾಗೆಯೇ ಜುಲೈ 25ರಂದು ಎಲ್ಲಾ ಅಂಗಡಿಗಳನ್ನ ಬಂದ್ ಮಾಡಿ ಫ್ರೀಡಂಪಾರ್ಕ್‌ನಲ್ಲಿ ಭಾರೀ ಪ್ರತಿಭಟನೆ ನಡೆಸಲು ನಿರ್ಧರಿಸಿದ್ದಾರೆ.
ಇನ್ನು ಈ ವಿಚಾರವಾಗಿ ರಾಜಕೀಯ ನಾಯಕರ ಆರೋಪ-ಪ್ರತ್ಯಾರೋಪಗಳು ಶುರುವಾಗಿದ್ದು, ಕಾಂಗ್ರೆಸ್ನವರು ಕೇಂದ್ರದ ಮೇಲೆ ಬೊಟ್ಟು ಮಾಡುತ್ತಿದ್ದರೆ, ಬಿಜೆಪಿ ಹಾಗೂ ಜೆಡಿಎಸ್ನವರು ಕಾಂಗ್ರೆಸ್ ಸರ್ಕಾರದತ್ತ ಕೈ ಮಾಡಿ ತೋರಿಸುತ್ತಿದ್ದಾರೆ.
ಟ್ಯಾಕ್ಸ್ ವಿಚಾರದಲ್ಲಿ ವ್ಯಾಪಾರಿಗಳಿಗೆ ಗೊಂದಲ ಯಾಕೆ ಎಂದು ನೋಡುವುದಾದರೆ, ಸಣ್ಣಪುಟ್ಟ ವ್ಯಾಪಾರಿಗಳಿಗೆ ಕಮರ್ಷಿಯಲ್ ಟ್ಯಾಕ್ಸ್ ಪಾವತಿಯ ಬಗ್ಗೆ ಸರಿಯಾದ ಮಾಹಿತಿ ಇಲ್ಲ.ಕಳೆದ ನಾಲ್ಕು ವರ್ಷಗಳ ಟ್ಯಾಕ್ಸ್ ಪಾವತಿ ಮಾಡಬೇಕೆಂದು ಲಕ್ಷ, ಕೋಟಿ ಲೆಕ್ಕದಲ್ಲಿ ಕಳೆದ ಹದಿನೈದು ದಿನಗಳಿಂದ ಕಮರ್ಷಿಯಲ್ ಡಿಪಾರ್ಟ್ಮೆಂಟ್ ನೋಟಿಸ್ ನೀಡುತ್ತಿದೆ. ಈಗ ನೀಡಿರುವ ನೋಟಿಸ್ 2021-22ರಲ್ಲೇ ನೀಡಿದ್ರೆ, ಇಷ್ಟು ಗೊಂದಲ ಆಗುತ್ತಿರಲಿಲ್ಲ ಅನ್ಸುತ್ತೆ. ಹೂವು, ಹಾಲಿನ ವ್ಯಾಪಾರಿಗಳಿಗೂ ಲಕ್ಷ ಲಕ್ಷ ರೂ. ನೋಟಿಸ್ ನೀಡಲಾಗಿದೆ. ನಮಗೆ ಈ ಬಗ್ಗೆ ಹಿಂದೆಯೇ ಮಾಹಿತಿಯೇ ನೀಡಿದ್ರೆ, ನಾವು ಟ್ಯಾಕ್ಸ್ ಕಟ್ಟುತ್ತಿದ್ದೆವು, ನಮಗೆ ಯಾರು ಯಾವುದೇ ಮಾಹಿತಿ ನೀಡಿಲ್ಲ. ಈಗ ಕೊಟ್ಟಿರುವ ಟ್ಯಾಕ್ಸ್ ಮನ್ನಾ ಮಾಡಿ, ಮುಂದೆ ಬರುವ ಟ್ಯಾಕ್ಸ್ ಪಾವತಿ ಮಾಡುತ್ತೇವೆ ಎಂದು ಕೆಲವು ವ್ಯಾಪಾರಿಗಳು ಹೇಳುತ್ತಿದ್ದಾರೆ.