ಭದ್ರತೆ ವಿಚಾರದಲ್ಲಿ ರಾಜ್ಯ ಸರ್ಕಾರ ಎಡವಿದೆ: ಕೇಂದ್ರದ ಮಾಜಿ ಸಚಿವ ಡಿ.ವಿ ಸದಾನಂದ ಗೌಡ
ಬಿಜೆಪಿ ಯುವ ಮೋರ್ಚಾ ಮುಖಂಡ ಪ್ರವೀಣ್ ನೆಟ್ಟಾರು ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ರಾಜ್ಯ ಸರ್ಕಾರ ಮತ್ತು ಕೇಂದ್ರ ಸರ್ಕಾರ ಬಿಜೆಪಿಯದ್ದೇ ಇದ್ದು ಕೂಡ, ಪ್ರವೀಣ್ ಹತ್ಯೆ ಖಂಡನೀಯವಾಗಿದೆ ಎಂದು ಕೇಂದ್ರ ಸಚಿವ ಡಿವಿ ಸದಾನಂದಗೌಡ ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ದಕ್ಷಿಣ ಕನ್ನಡ : ಬಿಜೆಪಿ (BJP) ಯುವ ಮೋರ್ಚಾ ಮುಖಂಡ ಪ್ರವೀಣ್ ನೆಟ್ಟಾರು (Praveen Nettar) ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ರಾಜ್ಯ ಸರ್ಕಾರ ಮತ್ತು ಕೇಂದ್ರ ಸರ್ಕಾರ ಬಿಜೆಪಿಯದ್ದೇ ಇದ್ದು ಕೂಡ, ಪ್ರವೀಣ್ ಹತ್ಯೆ ಖಂಡನೀಯವಾಗಿದೆ ಎಂದು ಕೇಂದ್ರ ಮಾಜಿ ಸಚಿವ ಡಿವಿ ಸದಾನಂದಗೌಡ (DV Sadananda Gowda) ಮಂಗಳೂರಿನಲ್ಲಿ (Mangalore) ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಸರ್ಕಾರ ಯಾಕೆ ದಿಟ್ಟ ಹೆಜ್ಜೆ ಇಡಲು ಹಿಂದೇಟು ಹಾಕುತ್ತಿದೆ ಅನ್ನೋ ಪ್ರಶ್ನೆ ಕಾರ್ಯಕರ್ತರಲ್ಲಿ ಇದೆ. ಸರ್ಕಾರ ದಿಟ್ಟ ಹೆಜ್ಜೆಯನ್ನು ಈಗಾಗಲೇ ಇಡಬೇಕಿತ್ತು ಎಂದು ಹೇಳಿದ್ದಾರೆ.
ಹರ್ಷ ಕೊಲೆ ಹಾಗೂ ಹಿಂದೆ ನಡೆದ ಕೊಲೆ ಸಂದರ್ಭದಲ್ಲಿ ದಿಟ್ಟ ಹೆಜ್ಜೆ ತಗೋಬೇಕಿತ್ತು. ಅದರಲ್ಲಿ ರಾಜ್ಯ ಸರ್ಕಾರ ಎಡವಿದೆ ಅನ್ನೋದನ್ನ ಒಪ್ಪಿಕೊಳ್ಳುತ್ತೇನೆ. ಪೊಲೀಸ್ ಇಲಾಖೆ ದುರ್ಬಲವಾಗುತ್ತಿದೆ. ಯಾರು ಹೆದರದ ವಾತಾವರಣ ಸೃಷ್ಟಿಯಾಗಿರೋದು ದುರ್ದೈವ. ಪ್ರವೀಣ್ ಪತ್ನಿ ಎರಡು ತಿಂಗಳಿಂದ ಬೆದರಿಕೆ ಬರ್ತಾ ಇತ್ತು ಅಂತಾ ಹೇಳಿದ್ದಾರೆ ಎಂದು ಹೇಳಿದರು.
ಅದನ್ನು ಪೊಲೀಸರಿಗೆ ಹೇಳಿದರೂ ಪ್ರಯೋಜನವಾಗಿಲ್ಲ ಎಂದಿದ್ದಾರೆ. ಹೀಗೆನಾದರೂ ಆಗಿದ್ದರೇ ಅದು ನಿಜಕ್ಕೂ ಖಂಡನೀಯವಾದದ್ದು. ಶೀಘ್ರವಾಗಿ ಆರೋಪಿಗಳ ಪತ್ತೆಯಾಗಬೇಕು. ಮಸೂದ್ ಮನೆಗೆ ಮುಖ್ಯಮಂತ್ರಿ ಭೇಟಿ ನೀಡಿಲ್ಲ ಅನ್ನೋ ವಿಚಾರವಾಗಿ ಮಾತನಾಡಿದ ಅವರು ಯಾರೆ ಇದ್ದರೂ ಅವರ ಮನೆಗೆ ಹೋಗಬೇಕು. ಜವಾಬ್ದಾರಿ ಇದ್ದವರು ಆ ಕೆಲಸ ಮಾಡಬೇಕು ಎಂದು ಚಾಟಿ ಬೀಸಿದ್ದಾರೆ.
ಕಾಂಗ್ರೆಸ್ ಇದ್ದಾಗ ನಾವು ಸಾಕಷ್ಟು ಪ್ರತಿಭಟನೆ ನಡೆಸಿದ್ದೇವೆ. ಆಗ ಹಿಂದೂ ಸಮಾಜದವರಿಗೆ ನಮ್ಮ ಸರ್ಕಾರ ಬಂದರೆ ರಕ್ಷಣೆ ಸಿಗತ್ತೆ ಅನ್ನೋ ಭಾವನೆ ಇತ್ತು. ಅದು ಕಡಿಮೆ ಆಗಿದೆ ಅನ್ನೋದಕ್ಕೆ ವ್ಯಕ್ತವಾಗುತ್ತಿರುವ ವಿರೋಧ ಸಾಕ್ಷಿಯಾಗಿದೆ ಎಂದರು.
ತೇಜಸ್ವಿ ಸೂರ್ಯ ಹೇಳಿಕೆ ವಿಚಾರ ಮಾತನಾಡಿದ ಅವರು ಒಬ್ಬೊಬ್ಬರಿಗೆ ರಕ್ಷಣೆ ಕೊಡಲು ಸಾಧ್ಯವಿಲ್ಲ. ಆದರೆ ಸರ್ಕಾರ ಅಂತಹ ವಾತಾವರಣ ಸೃಷ್ಟಿ ಮಾಡಬೇಕು ಎಂದು ತಿಳಿಸಿದರು.
Published On - 2:34 pm, Sat, 30 July 22