Highway Projects: ಚುನಾವಣೆ ಹೊಸ್ತಿಲಲ್ಲಿ ಕರ್ನಾಟಕಕ್ಕೆ ಭರ್ಜರಿ ಕೊಡುಗೆ, ವಿವಿಧ ಜಿಲ್ಲೆಗಳ ಹೆದ್ದಾರಿಗೆ ಹಣ ಮಂಜೂರು
ವಿಧಾನಸಭೆ ಚುನಾವಣೆ ಹೊಸ್ತಿಲಲ್ಲೇ ಕರ್ನಾಟಕಕ್ಕೆ ಕೇಂದ್ರ ಭೂಸಾರಿಗೆ ಮತ್ತು ಹೆದ್ದಾರಿ ಸಚಿವ ನಿತಿನ್ ಗಡ್ಕರಿ ಭರ್ಜರಿ ಕೊಡುಗೆ ನೀಡಿದ್ದಾರೆ. ವಿವಿಧ ಜಿಲ್ಲೆಗಳ ರಾಷ್ಟ್ರೀಯ ಹೆದ್ದಾರಿಗಾಗಿ ಹಣ ಮಂಜೂರು ಮಾಡಿದ್ದಾರೆ.
ನವದೆಹಲಿ: ವಿವಿಧ ರಾಷ್ಟ್ರೀಯ ಹೆದ್ದಾರಿ ಯೋಜನೆಗಳಿಗಾಗಿ(highway projects) ಕರ್ನಾಟಕಕ್ಕೆ (Karnataka) 1,345 ಕೋಟಿ ರೂಪಾಯಿ ಮಂಜೂರು ಮಾಡಲಾಗಿದೆ. ಈ ಬಗ್ಗೆ ಕೇಂದ್ರ ಭೂಸಾರಿಗೆ ಮತ್ತು ಹೆದ್ದಾರಿ ಸಚಿವ ನಿತಿನ್ ಗಡ್ಕರಿ(Nitin Gadkari) ಮಾಹಿತಿ ನೀಡಿದ್ದಾರೆ. ಕಾರವಾರ ಜಿಲ್ಲೆಗಳ್ಲಿ ರಾಷ್ಟ್ರೀಯ ಹೆದ್ದಾರಿ-52ರಲ್ಲಿ 18 ಕಿ.ಮೀಟರ್ ಉದ್ದದ ರಸ್ತೆಯನ್ನು ದ್ವಿಪಥದಿಂದ ಚತುಷ್ಪಥಕ್ಕೆ ವಿಸ್ತರಿಸಲು ಒಟ್ಟು 232.84 ಕೋಟಿ ರೂಪಾಯಿ ಮಂಜೂರು ಮಾಡಲಾಗಿದೆ ಎಂದು ಅವರು ಟ್ವೀಟ್ ಮೂಲಕ ತಿಳಿಸಿದ್ದಾರೆ.
ರಾಯಚೂರು ಜಿಲ್ಲೆಯ ರಾಷ್ಟ್ರೀಯ ಹೆದ್ದಾರಿ 150ಎ ನಲ್ಲಿ ವೆಂಕಟೇಶ್ವರ ಕ್ಯಾಂಪ್ನಿಂದ ಧಡೇಸ್ಗೂರು ವರೆಗೆ ಸುಮಾರು 13.8 ಕಿ.ಮೀಟರ್ ಉದ್ದದ ರಸ್ತೆಯನ್ನು ವಿಸ್ತರಣೆ ಮಾಡಲು 142 ಕೋಟಿ ರೂ. ಹಾಗೂ ಇದೇ ಹೆದ್ದಾರಿಯ ಸಿಂದಿಗೇರಿ-ಬಳ್ಳಾರಿ ವಿಭಾಗದಲ್ಲಿ ರಸ್ತೆ ವಿಸ್ತರಣೆಗೆ 120 ಕೋಟಿ ರೂ. ಮಂಜೂರು ಮಾಡಲಾಗಿದೆ ಎಂದು ಹೇಳಿದ್ದಾರೆ.
ಇನ್ನು ಶಿವಮೊಗ್ಗ ಜಿಲ್ಲೆಯ ರಾಷ್ಟ್ರೀಯ ಹೆದ್ದಾರಿ 69 ಹೊನ್ನಾವರ-ಚಿತ್ತೂರು ವಿಭಾಗದಲ್ಲಿ ಮೇಲ್ಸೇತುವೆ ನಿರ್ಮಾಣಕ್ಕೆ 198 ಕೋಟಿ ರೂ. ಮಂಜೂರು ಮಾಡಲಾಗಿದೆ. ಇದೇ ಹೆದ್ದಾರಿಯಲ್ಲಿ ರಸ್ತೆಯನ್ನು ದ್ವಿಪಥದಿಂದ ಚತುಷ್ಪಥಕ್ಕೆ ವಿಸ್ತರಿಸಲು ಹಾಗು ಉತರ ಕಾಮಗಾರಿಗಳಿಗೆ 653 ಕೋಟಿ ರೂಪಾಯಿ ಮಂಜೂರು ಮಾಡಲಾಗಿದೆ ಎಂದು ಸಚಿವ ನಿತಿನ್ ಗಡ್ಕರಿ ವಿವರಿಸಿದ್ದಾರೆ.
ಇನ್ನಷ್ಟು ಸುದ್ದಿಗಾಗಿ ಇಲ್ಲಿ ಕ್ಲಿಕ್ಕಿಸಿ