
ಗುಂಡ್ಲುಪೇಟೆ, ಅ.3: ಬಂಡೀಪುರ ಹುಲಿ ಸಂರಕ್ಷಿತ ಪ್ರದೇಶದ (Bandipur Tiger Reserve) ವ್ಯಾಪ್ತಿಯ ಗುಂಡ್ಲುಪೇಟೆ-ಊಟಿ ರಾಷ್ಟ್ರೀಯ ಹೆದ್ದಾರಿಯಲ್ಲಿ ರಸ್ತೆಗೆ ಬಂದಿದ್ದ ಕಾಡಾನೆಯೊಂದಕ್ಕೆ ಲಾರಿ ಡಿಕ್ಕಿ ಹೊಡೆಸಲು ಯತ್ನಿಸಿದ ಅಮಾನವೀಯ ಹಾಗೂ ಅಪಾಯಕಾರಿ ಘಟನೆಗೆ ಸಂಬಂಧಿಸಿದಂತೆ ಅರಣ್ಯ ಇಲಾಖೆ ತಕ್ಷಣವೇ ಕಾರ್ಯಪ್ರವೃತ್ತರಾಗಿ, ಕೇರಳ ಮೂಲದ ಲಾರಿ ಚಾಲಕನಿಗೆ 5,000 ರೂ. ದಂಡ ವಿಧಿಸಿ ತಕ್ಕ ಶಿಸ್ತುಕ್ರಮ ಕೈಗೊಂಡಿದೆ.
ಅರಣ್ಯ ಪ್ರದೇಶದ ಹೆದ್ದಾರಿಯಲ್ಲಿ ವನ್ಯಜೀವಿಗಳ ಸುರಕ್ಷತೆಯನ್ನು ಗಾಳಿಗೆ ತೂರಿ, ವಾಹನವನ್ನು ಬೇಜವಾಬ್ದಾರಿಯಿಂದ ಚಲಾಯಿಸಿದ್ದಕ್ಕಾಗಿ ಈ ದಂಡ ವಿಧಿಸಲಾಗಿದೆ. ಗುಂಡ್ಲುಪೇಟೆ-ಊಟಿ ಮಾರ್ಗದಲ್ಲಿ ಲಾರಿ ಚಾಲಕ ಸಾಗುತ್ತಿದ್ದಾಗ, ಹತ್ತಿರದ ಕಾಡಿನಿಂದ ಬಂದ ಕಾಡಾನೆಯೊಂದು ದಿಢೀರನೆ ರಸ್ತೆ ದಾಟಲು ಬಂದಿದೆ.
ರಸ್ತೆಯಲ್ಲಿ ಬೃಹತ್ ಆನೆ ಇರುವುದು ಕಣ್ಣಿಗೆ ಕಾಣಿಸುತ್ತಿದ್ದರೂ ಚಾಲಕ ಲಾರಿಯ ವೇಗವನ್ನು ತಗ್ಗಿಸದೆ, ಆನೆಗೆ ಡಿಕ್ಕಿ ಹೊಡೆಯುವ ರೀತಿಯಲ್ಲಿ ಅತ್ಯಂತ ಅಪಾಯಕಾರಿಯಾಗಿ ಲಾರಿಯನ್ನು ಮುನ್ನುಗ್ಗಿಸಿದ್ದಾನೆ. ಈ ಲಾರಿಯ ಹಿಂಭಾಗದಲ್ಲಿ ಬರುತ್ತಿದ್ದ ಕಾರೊಂದರ ‘ಡ್ಯಾಶ್ ಕ್ಯಾಮೆರಾ’ದಲ್ಲಿ ಚಾಲಕನ ಈ ಪುಂಡಾಟ ಸಂಪೂರ್ಣವಾಗಿ ಸೆರೆಯಾಗಿತ್ತು. ಈ ವೀಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದ್ದಂತೆ ಅರಣ್ಯ ಇಲಾಖೆ ಅಧಿಕಾರಿಗಳು ತಕ್ಷಣ ಕಾರ್ಯಾಚರಣೆಗಿಳಿದರು.
ವೀಡಿಯೋ ಆಧರಿಸಿ ತನಿಖೆ ಕೈಗೊಂಡ ಬಂಡೀಪುರ ವಲಯ ಅರಣ್ಯಾಧಿಕಾರಿ (RFO) ಮೋಹನ್ ಕುಮಾರ್ ಅವರು, ಲಾರಿ ಹಾಗೂ ಕೇರಳ ಮೂಲದ ಚಾಲಕನನ್ನು ಪತ್ತೆ ಹಚ್ಚುವಲ್ಲಿ ಯಶಸ್ವಿಯಾದರು. ಚಾಲಕನನ್ನು ಬಂಡೀಪುರ ಅರಣ್ಯ ಇಲಾಖೆಯ ಕಚೇರಿಗೆ ಕ ಕರೆಸಿಕೊಂಡು ಘಟನೆಯ ಕುರಿತು ಸುದೀರ್ಘ ವಿಚಾರಣೆ ನಡೆಸಲಾಯಿತು. ತಪ್ಪನ್ನು ಒಪ್ಪಿಕೊಂಡ ಹಿನ್ನೆಲೆಯಲ್ಲಿ ವನ್ಯಜೀವಿ ಸಂರಕ್ಷಣಾ ಕಾಯ್ದೆಯಡಿ 5,000 ರೂ. ನಗದು ದಂಡ ವಿಧಿಸಲಾಯಿತು.
ಇದನ್ನೂ ಓದಿ: ಹಾಸನ: ಅಪಘಾತದಲ್ಲಿ ಬ್ರೈನ್ ಡೆಡ್ ಆದ ಯುವ ಇಂಜಿನಿಯರ್ ಅಂಗಾಂಗ ದಾನ: ದುಃಖದಲ್ಲೂ ಮಾದರಿಯಾದ ಪೋಷಕರು
ವನ್ಯಜೀವಿ ವಲಯಗಳಲ್ಲಿ ಇಂತಹ ಘಟನೆ ಮರುಕಳಿಸದಂತೆ ಎಚ್ಚರಿಕೆ ನೀಡಿದ ಅಧಿಕಾರಿಗಳು, ಚಾಲಕನಿಂದ ಲಿಖಿತ ಮುಚ್ಚಳಿಕೆ ಪತ್ರವನ್ನು ಬರೆಸಿಕೊಂಡು ಬಿಡುಗಡೆ ಮಾಡಿದ್ದಾರೆ. ಬಂಡೀಪುರ ಹಾಗೂ ನಾಗರಹೊಳೆ ಅಭಯಾರಣ್ಯಗಳ ಹೆದ್ದಾರಿಯಲ್ಲಿ ಸಂಚರಿಸುವ ವಾಹನ ಸವಾರರು ವನ್ಯಜೀವಿಗಳನ್ನು ಕಂಡಾಗ ವಾಹನಗಳ ವೇಗ ತಗ್ಗಿಸಿ, ಅವುಗಳಿಗೆ ಹಾದಿ ಮಾಡಿಕೊಡಬೇಕು. ನಿಯಮ ಉಲ್ಲಂಘಿಸುವವರ ವಿರುದ್ಧ ಕಠಿಣ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದು ಅರಣ್ಯ ಇಲಾಖೆ ಅಧಿಕಾರಿಗಳು ಎಚ್ಚರಿಸಿದ್ದಾರೆ.
ರಾಜ್ಯದ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ