ನನಗೆ 71, ವಿಜಯೇಂದ್ರನಿಗೆ 46 ವರ್ಷ; ಅವರೊಂದಿಗೆ ನನ್ನನ್ನು ಹೋಲಿಸಬೇಡಿ: ಸಚಿವ ವಿ ಸೋಮಣ್ಣ
2023ಕ್ಕೆ ಹೇಗೂ ಚುನಾವಣೆ ಬರುತ್ತೆ. ಹೈಕಮಾಂಡ್ ಟಿಕೆಟ್ ಕೊಡಬೇಕು. ಯಾರ ಹಣೆಬರಹ ಏನಿದೆಯೋ ಹಾಗೆಯೇ ಆಗುತ್ತದೆ ಎಂದು ಸೋಮಣ್ಣ ಹೇಳಿದರು.
ಚಾಮರಾಜನಗರ: ‘ಮುಂದಿನ ಮುಖ್ಯಮಂತ್ರಿ ವಿಜಯೇಂದ್ರ (BY Vijayendra) ಎಂದು ಕೆಲ ಕಾರ್ಯಕರ್ತರು ಘೋಷಣೆ ಕೂಗಿದ್ದು ನಿನ್ನೆಗೇ ಮುಗಿದ ಅಧ್ಯಾಯ’ ಎಂದು ಸಚಿವ ವಿ.ಸೋಮಣ್ಣ (V Somanna) ಹೇಳಿದರು. 2023ಕ್ಕೆ ಹೇಗೂ ಚುನಾವಣೆ ಬರುತ್ತೆ. ಹೈಕಮಾಂಡ್ ಟಿಕೆಟ್ ಕೊಡಬೇಕು. ಯಾರ ಹಣೆಬರಹ ಏನಿದೆಯೋ ಹಾಗೆಯೇ ಆಗುತ್ತದೆ ಎಂದು ಸೋಮಣ್ಣ ಹೇಳಿದರು. ಈಗ ನನಗೆ 71 ವರ್ಷ, ಯಡಿಯೂರಪ್ಪ ಅವರ ಮಗ ವಿಜಯೇಂದ್ರನಿಗೆ 46 ವರ್ಷ. ನಾನು 7 ಬಾರಿ ಆಯ್ಕೆಯಾಗಿದ್ದೇನೆ. ಅವರು ಒಮ್ಮೆಯೂ ಆಯ್ಕೆಯಾಗಿಲ್ಲ. ಯಡಿಯೂರಪ್ಪ ಪುತ್ರ ವಿಜಯೇಂದ್ರ ಜತೆಗೆ ನನ್ನನ್ನು ಹೋಲಿಸಬೇಡಿ ಎಂದು ಅವರು ಕಾರ್ಯಕರ್ತರಲ್ಲಿ ಮನವಿ ಮಾಡಿದರು.
ಕೇಂದ್ರದಲ್ಲಿ ನರೇಂದ್ರ ಮೋದಿ ಮತ್ತು ರಾಜ್ಯದಲ್ಲಿ ಬಿಜೆಪಿ ಸರ್ಕಾರಗಳು ಮತ್ತೆ ಅಧಿಕಾರಕ್ಕೆ ಬರಬೇಕಿದೆ. ಅದಕ್ಕಾಗಿ ನಾವೆಲ್ಲರೂ ಪರಿಶ್ರಮ ಹಾಕಬೇಕು. ವಿಜಯೇಂದ್ರ ಒಂದು ಬಾರಿಯು ಆಯ್ಕೆಯಾಗಿಲ್ಲ. ಆಗ್ಲಿ ಬಿಡ್ರಪ್ಪ. ಡಬಲ್ ಇಂಜಿನ್ ಸರ್ಕಾರ ಬರಬೇಕು ಎಂಬುದು ನನ್ನಾಸೆ ಎಂದರು.
ಬೆಂಗಳೂರು ಉಗ್ರರ ಸ್ಲೀಪರ್ ಸೆಲ್ ಆಗುತ್ತಿದೆ ಎಂದು ಹಲವರು ಆತಂಕ ವ್ಯಕ್ತಪಡಿಸಿರುವ ಕುರಿತು ಪ್ರತಿಕ್ರಿಯಿಸಿದ ಅವರು, ನಾಡಪ್ರಭು ಕೆಂಪೇಗೌಡರು ವಿಶಾಲ ಮನೋಭಾವದಿಂದ ಬೆಂಗಳೂರು ನಿರ್ಮಿಸಿದರು. ಎಲ್ಲ ಜಾತಿಯವರಿಗೂ ಮಾನ್ಯತೆ ಕೊಟ್ಟರು. ಮೊಹಮದ್ ಪೇಟೆ, ಕುಂಬಾರ ಪೇಟೆ, ಮಾಮೂಲ್ ಪೇಟೆಗಳು ಬೆಂಗಳೂರಿನಲ್ಲಿ ಇವೆ. ಇಲ್ಲಿ ಎಲ್ಲ ಥರದ ಜನರೂ ವಾಸ ಮಾಡುತ್ತಿದ್ದಾರೆ. ಬೆಂಗಳೂರಿನ ಮಣ್ಣಿನ ಗುಣ, ಸಾಂಸ್ಕೃತಿಕ ನಗರದ ಗುಣ ಎಲ್ಲವೂ ಸ್ವಾಭಿಮಾನಕ್ಕೆ ಮತ್ತೊಂದು ಹೆಸರು. ನಮ್ಮ ಪೊಲೀಸ್ ಇಲಾಖೆ ತುಂಬಾ ಚೆನ್ನಾಗಿ ಕೆಲಸ ಮಾಡ್ತಿದೆ. ಸೇರಿಸಬೇಕಾದವರನ್ನು ಸೇರಿಸಬೇಕಾದ ಕಡೆಗೆ ಪೊಲೀಸರು ಸೇರಿಸುತ್ತಿದ್ದಾರೆ ಎಂದು ಪೊಲೀಸರ ಕೆಲಸವನ್ನು ಸಚಿವ ಸೋಮಣ್ಣ ಮುಕ್ತ ಕಂಠದಿಂದ ಶ್ಲಾಘಿಸಿದರು.
ಶಾಸಕ, ಸಚಿವ, ಸಿಎಂ ಆಗಬೇಕೆಂಬ ಪ್ರಶ್ನೆ ಬರಲ್ಲ: ವಿಜಯೇಂದ್ರ
ಹಾಸನ: ಪಕ್ಷದ ಸಂಘಟನೆ ಹೊರತುಪಡಿಸಿ, ನನ್ನ ಮನಸ್ಸಿನಲ್ಲಿ ಬೇರೆ ಏನೂ ಇಲ್ಲ ಎಂದು ಬಿಜೆಪಿ ರಾಜ್ಯ ಘಟಕದ ಉಪಾಧ್ಯಕ್ಷ ವಿಜಯೇಂದ್ರ ಹೇಳಿದರು. ಹಾಸನದಲ್ಲಿ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು, ನಾನು ಈಗ ಪಕ್ಷದ ಸಂಘಟನೆಯ ಕಡೆಗೆ ಗಮನ ಕೊಡುತ್ತಿದ್ದೇನೆ. ಅದರ ಹೊರತು ಶಾಸಕ, ಸಚಿವ, ಸಿಎಂ ಆಗಬೇಕೆಂಬ ಪ್ರಶ್ನೆ ಉದ್ಭವಿಸುವುದಿಲ್ಲ. ಇಂಥ ಚರ್ಚೆಗಳು ಅನಗತ್ಯ ಎಂದರು. ಮುರುಗೇಶ್ ನಿರಾಣಿ ಮತ್ತು ನಾರಾಯಣಗೌಡರು ದೊಡ್ಡ ಮಾತು ಹೇಳಿದ್ದಾರೆ. ಹಣೆಬರಹದಲ್ಲಿ ಇರುವುದನ್ನು ಬದಲಿಸಲು ಆಗುವುದಿಲ್ಲ ಎಂದು ಹೇಳಿದರು.
ಪಕ್ಷದಲ್ಲಿ ನಾನು ಇನ್ನೂ ಒಬ್ಬ ಸಾಮಾನ್ಯ ಕಾರ್ಯಕರ್ತನಷ್ಟೇ. ಕಳೆದ ಐದಾರು ವರ್ಷದಿಂದ ಪಕ್ಷದ ಸಂಘಟನೆಯಲ್ಲಿ ತೊಡಗಿದ್ದೇನೆ. ರಾಜ್ಯ ಯುವ ಮೋರ್ಚಾದ ಪ್ರದಾನ ಕಾರ್ಯದರ್ಶಿಯಾಗಿದ್ದೆ. ಈಗ ರಾಜ್ಯ ಉಪಾದ್ಯಕ್ಷನಾಗಿ ಕೆಲಸ ಮಾಡುತ್ತಿಧ್ದೇನೆ. ನಮ್ಮ ರಾಜ್ಯದಲ್ಲಿ ಲಕ್ಷಾಂತರ ಜನ ಕಾರ್ಯಕರ್ತರು ಯಾವುದೇ ಸ್ಥಾನಮಾನ ಇಲ್ಲದೆ ಪಕ್ಷಕ್ಕಾಗಿ ದುಡಿಯುತ್ತಿದ್ದಾರೆ. ಹಾಗಾಗಿ ಸ್ಥಾನಮಾನದ ಬಗ್ಗೆ ಇಂತಹ ಚರ್ಚೆಗಳು ಅನವಶ್ಯಕ. ನಾನು ಮುಂದೆ ಯಾವ ರೀತಿ ಹೋಗಬೇಕು, ಯಾವ ರೀತಿ ಪಕ್ಷಕ್ಕೆ ಬಲ ಕೊಡಬೇಕು ಎಂಬ ಬಗ್ಗೆ ನನ್ನಲ್ಲಿ ಸ್ಪಷ್ಟತೆ ಇದೆ. ಅದನ್ನ ಕಣ್ಣಮುಂದೆ ಇರಿಸಿಕೊಂಡು ನಾನು ಕೆಲಸ ಮಾಡುತ್ತಿದ್ದೇನೆ ಎಂದರು.
ರಾಜ್ಯದಲ್ಲಿ ವ್ಯಾಪಕ ಪ್ರವಾಸ ಮಾಡಬೇಕು. ಕಾರ್ಯಕರ್ತರಿಗೆ ಶಕ್ತಿ ತುಂಬಬೇಕು ಎಂದು ಯೋಚಿಸಿದ್ದೇನೆ. ಕಾರ್ಯಕರ್ತರ ಪ್ರೀತಿ ವಿಶ್ವಾಸಕ್ಕೆ ನಾವು ಬೆಲೆ ಕಟ್ಟಲು ಆಗುವುದಿಲ್ಲ. ಹಾಗಾಗಿಯೇ ಯಡಿಯೂರಪ್ಪ ಇಷ್ಟು ಎತ್ತರಕ್ಕೆ ಬೆಳೆದದ್ದು. ನಾನೂ ಅಷ್ಟೇ, ಕೂಡ ಕಾರ್ಯಕರ್ತರ ಪ್ರೀತಿ ವಿಶ್ವಾಸ ಗಳಿಸಿ ಕೆಲಸ ಮಾಡುತ್ತೇನೆ ಎಂದರು.
ಕರ್ನಾಟಕದ ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ. ದೇಶದ ಇತರ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ ಪ್ರಮುಖ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
Published On - 6:12 pm, Wed, 8 June 22