ಮತ್ತೆ ಮುನ್ನೆಲೆಗೆ ಬಂದ ಚಾಮರಾಜನಗರದ ಸಿದ್ದಾಪ್ಪಾಜಿ ಮಾಂಸಾಹಾರದ ಪಂಕ್ತಿ ಸೇವೆ

| Updated By: ಗಂಗಾಧರ​ ಬ. ಸಾಬೋಜಿ

Updated on: Jan 15, 2025 | 6:00 PM

ಚಿಕ್ಕಲ್ಲೂರು ಸಿದ್ದಪ್ಪಾಜಿ ಜಾತ್ರೆಯಲ್ಲಿ ನಡೆಯುವ ಮಾಂಸಾಹಾರದ ಪಂಕ್ತಿಸೇವೆ ಕಾನೂನುಬಾಹಿರ ಪ್ರಾಣಿ ಬಲಿಯೇ ಎಂಬುದು ವಿವಾದಾತ್ಮಕವಾಗಿದೆ. ಜಿಲ್ಲಾಡಳಿತ ಪ್ರಾಣಿ ಬಲಿ ನಿಷೇಧಿಸಿದ್ದರೂ, ಭಕ್ತರು ಇದನ್ನು ಪಂಕ್ತಿಸೇವೆ ಎಂದು ವಾದಿಸಿದ್ದಾರೆ. ಪ್ರಾಣಿ ಕಲ್ಯಾಣ ಸಂಘಟನೆಗಳು ಮತ್ತು ಸ್ಥಳೀಯರು ಭಿನ್ನ ಅಭಿಪ್ರಾಯಗಳನ್ನು ಹೊಂದಿದ್ದು, ಈ ವಿಚಾರ ಮತ್ತೆ ಮುನ್ನೆಲೆಗೆ ಬಂದಿದೆ.

ಮತ್ತೆ ಮುನ್ನೆಲೆಗೆ ಬಂದ ಚಾಮರಾಜನಗರದ ಸಿದ್ದಾಪ್ಪಾಜಿ ಮಾಂಸಾಹಾರದ ಪಂಕ್ತಿ ಸೇವೆ
ಮತ್ತೆ ಮುನ್ನೆಲೆಗೆ ಬಂದ ಚಾಮರಾಜನಗರದ ಸಿದ್ದಾಪ್ಪಾಜಿ ಮಾಂಸಾಹಾರದ ಪಂಕ್ತಿ ಸೇವೆ
Follow us on

ಚಾಮರಾಜನಗರ, ಜನವರಿ 15: ಪ್ರಸಿದ್ದ ಚಿಕ್ಕಲ್ಲೂರು ಘನ ನೀಲ ಸಿದ್ದಾಪ್ಪಾಜಿ (Siddappaji) ಜಾತ್ರೆಯಲ್ಲಿ ನಡೆಯುವ ಮಾಂಸಾಹಾರದ ಪಂಕ್ತಿ ಸೇವೆ ಕಾನೂನು ಬಾಹಿರವೇ? ಇಲ್ಲಿ ಪ್ರಾಣಿಗಳ ಬಲಿ ನಡೆಯುತ್ತಾ? ಇಲ್ಲವಾ? ಎಂಬ ವಿವಾದ ಮತ್ತೆ ಮುನ್ನೆಲೆಗೆ ಬಂದಿದೆ. ಇಲ್ಲಿ ಯಾವುದೇ ಬಲಿಪೀಠ ಇಲ್ಲ. ಹಾಗಾಗಿ ಇಲ್ಲಿ ನಡೆಯುವುದು ಪ್ರಾಣಿ ಬಲಿ ಅಲ್ಲ ಎಂದು ಪ್ರಗತಿಪರ ಸಂಘಟನೆಗಳು ವಾದಿಸಿದರೆ, ಇದು ಪಂಕ್ತಿಸೇವೆಯ ಹೆಸರಿನಲ್ಲಿ ನಡೆಯುವ ಪ್ರಾಣಿ ಬಲಿ ಎಂದು ವಿಶ್ವ ಪ್ರಾಣಿ ಕಲ್ಯಾಣ ಮಂಡಳಿ ಪ್ರತಿಪಾದಿಸುತ್ತಿದೆ.

ಪ್ರಾಣಿ ಬಲಿ ನೀಡದಂತೆ ದಯಾನಂದ ಸ್ವಾಮೀಜಿ ಒತ್ತಾಯ

ಜಿಲ್ಲೆಯ ಕೊಳ್ಳೇಗಾಲ ತಾಲೂಕಿನ ಚಿಕ್ಕಲ್ಲೂರು ಘನ ನೀಲಿ ಸಿದ್ದಪ್ಪಾಜಿ ಜಾತ್ರಾ ಮಹೋತ್ಸವ ಐದು ದಿನಗಳ ಕಾಲ ನಡೆಯುತ್ತದೆ. ಚಾಮರಾಜನಗರ, ಮೈಸೂರು, ಮಂಡ್ಯ, ರಾಮನಗರ, ಬೆಂಗಳೂರು ಮೊದಲಾದ ಕಡೆಗಳಿಂದ ಸಹಸ್ರಾರು ಭಕ್ತರು ಈಗಾಗಲೇ ಆಗಮಿಸಿ ಬೀಡುಬಿಟ್ಟಿದ್ದಾರೆ. ಮೊದಲ ದಿನ ಚಂದ್ರ ಮಂಡಲೋತ್ಸವ ಶ್ರದ್ದಾಭಕ್ತಿಯಿಂದ ನಡೆಯಿತು. ಬಿದಿರಿನಲ್ಲಿ ಚಂದ್ರಮಂಡಲದ ಆಕೃತಿ ರಚಿಸಿ ಅದಕ್ಕೆ ಅಗ್ನಿಸ್ಪರ್ಶ ಮಾಡಲಾಗಿದ್ದು, ಮೊದಲು ಉತ್ತರಾಭಿಮುಖವಾಗಿ ಉರಿದ ಚಂದ್ರ ಮಂಡಲ ಜ್ಯೋತಿ ಕೊನೆಗೆ ದಕ್ಷಿಣ ದಿಕ್ಕಿಗೆ ವಾಲಿತು. ಹಾಗಾಗಿ ದಕ್ಷಿಣ ದಿಕ್ಕಿನಲ್ಲಿ ಈ ಬಾರಿ ಮಳೆ, ಬೆಳೆ ಚೆನ್ನಾಗಿ ಆಗುತ್ತದೆ ಎಂಬುದು ಭಕ್ತರ ನಂಬಿಕೆಯಾಗಿದೆ.

ಇದನ್ನೂ ಓದಿ: ಕೊಳ್ಳೇಗಾಲ ಚಿಕ್ಕಲ್ಲೂರು ಸಿದ್ದಪ್ಪಾಜಿ ಜಾತ್ರೆಗೆ ಇಂದು ವಿದ್ಯುಕ್ತ ಚಾಲನೆ; ಪ್ರಾಣಿಬಲಿಗೆ ಅವಕಾಶ ಇಲ್ಲದಂತೆ ಜಿಲ್ಲಾಡಳಿತ ಕ್ರಮ

ಇನ್ನೂ ಜಾತ್ರೆ ಆವರಣದಲ್ಲಿ ಪ್ರಾಣಿ ಬಲಿ ನಿಷೇಧಿಸಿ ಜಿಲ್ಲಾಡಳಿತ ಆದೇಶ ಹೊರಡಿಸಿದೆ. ಇದು ಜಾತ್ರೆಯಲ್ಲಿ ನಾಲ್ಕನೇ ದಿನ ನಡೆಯುವ ಮಾಂಸಹಾರದ ಪಂಕ್ತಿ ಸೇವೆಗೆ ದೊಡ್ಡ ಹೊಡೆತ ನೀಡಿದೆ. ಜಾತ್ರೆಗೆ ಬರುವ ಭಕ್ತರು ದೇವಸ್ಥಾನದ ಸುತ್ತಮುತ್ತ ಬಿಡಾರ ಹೂಡಿ ಮಂಟೇಸ್ವಾಮಿ, ಸಿದ್ದಾಪ್ಪಾಜಿ ಕಂಡಾಯ ಸ್ಥಾಪಿಸಿ ಕುರಿ, ಕೋಳಿ ಕಡಿದು ಕಂಡಾಯಕ್ಕೆ ಮಾಂಸಾಹಾರದ ಎಡೆ ಇಟ್ಟು ಬಂಧುಬಳಗದವವನ್ನು ಆಹ್ವಾನಿಸಿ ಅವರಿಗೆ ಮಾಂಸಹಾರ ಬಡಿಸುವ ಪಂಕ್ತಿ ಸೇವೆ ಮೊದಲಿನಿಂದಲು ನಡೆದುಬಂದಿತ್ತು. ಆದರೆ ಇದು ದೇವರ ಪಂಕ್ತಿಸೇವೆ ಹೆಸರಿನಲ್ಲಿ ನಡೆಯುವ ಪ್ರಾಣಿ ಬಲಿ ಎಂದು ಪ್ರತಿಪಾದಿಸಿದ ಪ್ರಾಣಿ ದಯಾ ಸಂಘಟನೆಗಳು ಜಿಲ್ಲಾಡಳಿತದಿಂದ ಪ್ರಾಣಿ ಬಲಿ ನಿಷೇಧ ಆದೇಶ ಹೊರಡಿಸುವಲ್ಲಿ ಯಶಸ್ವಿಯಾಗಿದೆ. ಈ ಹಿನ್ನೆಲೆಯಲ್ಲಿ ಕಳೆದ ಆರೇಳು ವರ್ಷಗಳಿಂದ ಇಲ್ಲಿ ಪ್ರಾಣಿ ಬಲಿಯನ್ನು ನಿಷೇಧಿಸಲಾಗಿದೆ.

ಇಲ್ಲಿ ಯಾವುದೇ ಬಲಿಪೀಠ ಇಲ್ಲ, ಭಕ್ತರು ತಮ್ಮ ತಮ್ಮ ಬಿಡಾರಗಳಲ್ಲಿ ಮಾಂಸಹಾರ ತಯಾರಿಸಿದರೆ ಅದು ಪ್ರಾಣಿ ಬಲಿಯಾಗುವುದಿಲ್ಲ ಎಂದು ಮಂಟೇಸ್ವಾಮಿ ಸ್ವಾಮಿ ಪರಂಪರೆ ಉಳಿಸಿ ಹೋರಾಟ ಸಮಿತಿ ಉಗ್ರ ನರಸಿಂಹೇಗೌಡ ಹೇಳಿದ್ದಾರೆ. ಭಕ್ತರು ಯಾವುದೇ ಅಡತಡೆ ಇಲ್ಲದೇ ಮಾಂಸಹಾರದ ಪಂಕ್ತಿ ಸೇವೆ ಮಾಡಲು ಅವಕಾಶ ನೀಡಬೇಕು ಎಂದು ಒತ್ತಾಯಿಸಿದ್ದಾರೆ.

ಇದನ್ನೂ ಓದಿ: ಮೈಕ್ರೋ ಫೈನಾನ್ಸ್ ಕಂಪನಿಗಳ ಟಾರ್ಚರ್‌: ಗ್ರಾಮ ತೊರೆದ ನೂರಾರು ಕುಟುಂಬಗಳು

ಇಲ್ಲಿ ನಡೆಯುವುದು ಪ್ರಾಣಿ ಬಲಿಯೋ ? ಅಲ್ಲವೋ ಎಂಬುದರ ಬಗ್ಗೆ ಮತ್ತೆ ವಿವಾದ ಶುರುವಾಗಿದೆ. ಜಿಲ್ಲಾಡಳಿತ ಜಾತ್ರೆ ಆವರಣಕ್ಕೆ ಕುರಿ, ಕೋಳಿ ತರಲು ನಿರ್ಬಂಧ ಹೇರಿದೆ. ಈ ಹಿನ್ನಲೆಯಲ್ಲಿ ಜನವರಿ 16 ರಂದು ನಡೆಯುವ ಪಂಕ್ತಿ ಸೇವೆ ಯಾವ ಸ್ವರೂಪ ಪಡೆದುಕೊಳ್ಳಲಿದೆ ಎಂಬುದು ಕುತೂಹಲ ಮೂಡಿಸಿದೆ.

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.