ಮೈಸೂರು, (ಮೇ 31): ವಿಧಾನಸಭೆಯಿಂದ ವಿಧಾನಪರಿಷತ್ ಚುನಾವಣೆಗೆ ದಿನಾಂಕ ನಿಗದಿಯಾಗಿದ್ದು, ಆಡಳಿತರೂಢ ಕಾಂಗ್ರೆಸ್ ಪಕ್ಷದಲ್ಲಿ ಆಕಾಂಕ್ಷಿಗಳ ಪಟ್ಟಿ ಹನುಮಂತನ ಬಾಲದಂತೆ ಬೆಳೆದಿದೆ. ಒಟ್ಟು 13 ಸ್ಥಾನಗಳ ಪೈಕಿ ಕಾಂಗ್ರೆಸ್ ಪಾಲಿನ ಏಳು ಸ್ಥಾನಗಳಿಗೆ ನೂರಾರು ಆಕಾಂಕ್ಷಿಗಳು ಮೇಲ್ಮನೆ ಪ್ರವೇಶಕ್ಕಾಗಿ ಕಸರತ್ತು ನಡೆಸಿದ್ದಾರೆ. ಆದ್ರೆ, ಯಾರನ್ನು ಆಯ್ಕೆ ಮಾಡಬೇಕೆಂದು ಸಿಎಂ, ಡಿಸಿಎ. ಚರ್ಚೆ ಮಾಡಿ ಅಂತಿಮಪಟ್ಟಿಯನ್ನು ಹೈಕಮಾಂಡ್‌ಗೆ ನೀಡಿ ಬಂದಿದ್ದಾರೆ. ಆದ್ರೆ, ಇದರ ಮಧ್ಯೆ ಸಿದ್ದರಾಮಯ್ಯನವರ ಪುತ್ರ ಯತೀಂದ್ರ ಸಿದ್ದರಾಮಯ್ಯ ಅವರಿಗೆ ಎಂಎಲ್ಸಿ ಟಿಕೆಟ್ ಫಿಕ್ಸ್ ಆಗಿದೆ. ಈ ಬಗ್ಗೆ ಸ್ವತಃ ಯತೀಂದ್ರ ಸಿದ್ದರಾಮಯ್ಯನವರೇ ಸುಳಿವು ಕೊಟ್ಟಿದ್ದಾರೆ. ನಾನು ಎಂಎಲ್ ಸಿಯಾಗಿ ಶಾಸಕನಾಗಿ ಅನುದಾನ ಹಾಕಿಕೊಡುತ್ತೇನೆ ಎಂದು ಪ್ರಚಾರ ಸಭೆಯಲ್ಲಿ ಹೇಳಿದ್ದಾರೆ. ಹೈಕಮಾಂಡ್ ಘೋಷಣೆಗೂ ಮುನ್ನವೇ ಯತೀಂದ್ರ ಎಂಎಲ್ಸಿ ಟಿಕೆಟ್ ತಮಗೆ ಸಿಗುವುದು ಖಚಿತ ಎಂದು ಹೇಳಿರುವುದು ಸಂಚಲನಕ್ಕೆ ಕಾರಣವಾಗಿದೆ.
ದಕ್ಷಿಣ ಶಿಕ್ಷಕರ ಕ್ಷೇತ್ರ ಚುನಾವಣೆ ಹಿನ್ನೆಲೆಯಲ್ಲಿ ಇಂದು (ಮೇ 31) ಟಿ ನರಸೀಪುರದಲ್ಲಿ ಕಾಂಗ್ರೆಸ್ ಅಭ್ಯರ್ಥಿ ಮರಿತಿಬ್ಬೆಗೌಡ ಪರ ಪ್ರಚಾರಕ್ಕೆ ಆಗಮಿಸಿದ್ದ ಯತೀಂದ್ರ ಅವರಿಗೆ ಶಾಲೆಗೆ ಅನುದಾನ ಬಿಡುಗಡೆ ಮಾಡಿಕೊಡುವಂತೆ ಶಿಕ್ಷಕಿ ಮನವಿ ಮಾಡಿದರು. ಈ ವೇಳೆ ನಾನು ಎಂಎಲ್ಸಿ ಆಗಿ ಶಾಸಕನಾಗುತ್ತೇನೆ. ಆಗ ಶಾಸಕರ ಅನುದಾನದಲ್ಲಿ ಹಣ ಹಾಕುತ್ತೇನೆ. ನಮ್ಮ ತಂದೆಯವರ ಕ್ಷೇತ್ರಕ್ಕೆ ಶಾಲೆ ಬರುವ ಕಾರಣ ಅವರ ಬಳಿ ಮಾತನಾಡಿ ಅವರಿಂದಲೂ ಅನುದಾನ ಕೊಡುಸ್ತೇನೆ ಎಂದು ಭರವಸೆ ನೀಡಿದರು.ಈ ಮೂಲಕ ಪರೋಕ್ಷವಾಗಿ ತಾವು ಎಂಎಲ್ಸಿ ಆಗುವುದು ಖಚಿತ ಎನ್ನುವ ಸುಳಿವು ನೀಡಿದ್ದಾರೆ.
ದೆಹಲಿಯಿಂದ ಬಂದ ಬಳಿಕ ನಿನ್ನೆ(ಮೇ 30) ಅಷ್ಟೇ ಮಾಧ್ಯಮಗಳ ಜೊತೆ ಮಾತನಾಡಿದ ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್, ದೆಹಲಿಗೆ ಹೋಗಿ ಪಟ್ಟಿ ನೀಡಿ ಬಂದಿದ್ದೇವೆ. 11 ಸ್ಥಾನಕ್ಕೆ 300 ಆಕಾಂಕ್ಷಿಗಳು ಇದ್ದರು. ನಾವು 65 ಮಂದಿಯ ಶಾರ್ಟ್ಲಿಸ್ಟ್ ಕೊಟ್ಟು ಬಂದಿದ್ದೇವೆ. ನಮ್ಮ ಅಭಿಪ್ರಾಯವನ್ನು ಹೇಳಿದ್ದೇವೆ. ಯತೀಂದ್ರ ಅವರದ್ದು ಮೊದಲೇ ಕಮಿಟ್ ಮೆಂಟ್ ಇದೆ. ಹಾಗಾಗಿ ಅವರಿಗೆ ಟಿಕೆಟ್ ನೀಡುವುದಕ್ಕೆ ಹೈಕಮಾಂಡ್ ಕೂಡ ಸಮ್ಮತಿ ನೀಡಿದೆ. ಇವರ ಜೊತೆಗೆ ವಿಧಾನಸಭಾ ಟಿಕೆಟ್ ತ್ಯಾಗ ಮಾಡಿದ ಹಿರಿಯರು, ಸೋತವರು ಇದ್ದಾರೆ. ಬೋಸುರಾಜ್ ವಿಚಾರ ಹೈಕಮಾಂಡ್ ತೀರ್ಮಾನ ಮಾಡುತ್ತದೆ ಎಂದಿದ್ದರು. ಈ ಮೂಲಕ ಯತೀಂದ್ರ ಅವರಿಗೆ ಎಂಎಲ್ಸಿ ಸ್ಥಾನ ಸಿಗುವುದು ಖಚಿತ ಎನ್ನುವ ಅರ್ಥದಲ್ಲಿ ಹೇಳಿದ್ದರು.
ಪರಿಷತ್ ಚುನಾವಣೆಯಲ್ಲಿ 11 ಕ್ಷೇತ್ರಗಳ ಪೈಕಿ ವಿಧಾನಸಭೆಯಲ್ಲಿನ ಸಂಖ್ಯಾಬಲ ಆಧಾರದಲ್ಲಿ ಪಕ್ಷಕ್ಕೆ ಗೆಲ್ಲುವ ಅವಕಾಶವಿರುವ 7 ಅಭ್ಯರ್ಥಿಗಳನ್ನು ಫೈನಲ್ ಮಾಡಲು ಕಸರತ್ತು ನಡೆದಿದೆ. ಮೂಲಗಳ ಪ್ರಕಾರಣ ಯತೀಂದ್ರ ಫೈನಲ್ ಆಗಿದ್ದು, ಉಳಿದ ಆರು ಸ್ಥಾನಗಳಿಗೆ ಗೊಂದಲ ಮುಂದುವರಿದಿದೆ.
ಕಾಂಗ್ರೆಸ್ ಗೆಲ್ಲಲು ಸಾಧ್ಯವಿರುವ ಏಳು ಮಂದಿಯ ಆಯ್ಕೆ ವಿಚಾರ ಈಗ ಕ್ಲೈಮಾಕ್ಸ್ ಹಂತ ಮುಟ್ಟಿದೆ. ಚೆಂಡು ಈಗ ಹೈಕಮಾಂಡ್ ಅಂಗಳದಲ್ಲಿದೆ. ಏಕೆಂದರೆ, ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರು ಕೆಲ ವರ್ಗಕ್ಕೆ ಮಾತ್ರ ಒಮ್ಮತದ ಅಭ್ಯರ್ಥಿ ಸೂಚಿಸಿದ್ದು, ಉಳಿದ ವರ್ಗಗಳ ವಿಚಾರದಲ್ಲಿ ಇಬ್ಬರೂ ಪ್ರತ್ಯೇಕ ಪಟ್ಟಿಯನ್ನು ಹೈಕಮಾಂಡ್‌ಗೆ ಸಲ್ಲಿಸಿದ್ದಾರೆ ಎಂದು ಉನ್ನತ ಮೂಲಗಳು ತಿಳಿಸಿವೆ.
ಜೂನ್ 13 ರಂದು ಮತದಾನ ನಡೆಯಲಿದ್ದು, ನಾಮಪತ್ರ ಸಲ್ಲಿಸಲು ಜೂನ್ 3 ಕೊನೆಯ ದಿನವಾಗಿದ್ದು, ಅಂತಿಮವಾಗಿ ಹೈಕಮಾಂಡ್ ಯಾರಿಗೆ ಮಣೆಹಾಕುತ್ತೆ ಎನ್ನುವುದು ಕುತೂಹಲ ಮೂಡಿಸಿದೆ.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ