ತಮ್ಮ ಬಹುಕಾಲದ ಒಡನಾಡಿಯೂ ಆಗಿದ್ದ ಕಾಂಗ್ರೆಸ್ ನಾಯಕ ಎಚ್.ಎಸ್.ಮಹದೇವ ಪ್ರಸಾದ್ ನಿಧನದಿಂದ ದೊಡ್ಡ ಹಿನ್ನೆಡೆಯಾಗಿದೆ. ಮಹದೇವ್ ಪ್ರಸಾದ್ ಅವರ ನಿಧನ ದೊಡ್ಡ ಹಿನ್ನೆಡೆ. ಪ್ರಸಾದ್ ಅವರ ಹೆಂಡತಿಯನ್ನು ನಾನು ಮಂತ್ರಿ ಮಾಡಿದ್ದೆ. ಇದೀಗ ಅವರ ಮಗ ಗಣೇಶ್ ಪ್ರಸಾದ್ ಬೆಳೆಯುತ್ತಿದ್ದಾನೆ. ಮಹದೇವ್ ಪ್ರಸಾದ್ ಅವರು ಯಾವ ಜವಾಬ್ದಾರಿ ಕೊಟ್ಟಿದ್ದರೂ ಅಚ್ಚುಕಟ್ಟಾಗಿ ನಿರ್ವಹಿಸುತ್ತಿದ್ದರು ಎಂದು ನೆನಪಿಸಿಕೊಂಡರು.
ನೀರಾವರಿ ಸಚಿವ ಗೋವಿಂದ ಕಾರಜೋಳ ಅವರು ಸಾಕ್ಷ್ಯ ಬಿಡುಗಡೆ ಮಾಡುವುದಾಗಿ ಹೇಳಿರುವ ಕುರಿತು ಪ್ರತಿಕ್ರಿಯಿಸಿದ ಅವರು, ಅವರ ಬಳಿ ಅದೇನು ಸಾಕ್ಷ್ಯವಿದೆಯೋ ಬಿಡುಗಡೆ ಮಾಡಲಿ. ರಾಜ್ಯದ ಜನರಿಗೂ ಸತ್ಯ ಗೊತ್ತಾಗಲಿ ಎಂದು ತಿರುಗೇಟು ನೀಡಿದರು. ತಮಿಳುನಾಡಿನವರ ಮಾತು ಕೇಳಿ ಇವರು ವಿಸ್ತೃತ ಯೋಜನಾ ವರದಿ (Detailed Project Report – DPR) ರೂಪಿಸಲು ಅನುಮತಿ ಕೊಡುತ್ತಿಲ್ಲ. ಅವನ್ಯಾರೋ ಅಣ್ಣಾಮಲೈ ಮಾತನ್ನು ಇವರು ಕೇಳ್ತಿದ್ದಾರೆ. ಅಣ್ಣಾಮಲೈನನ್ನು ಕೇಂದ್ರದ ಬಿಜೆಪಿ ನಾಯಕರೇ ಎತ್ತಿ ಕಟ್ಟಿದ್ದಾರೆ. ಸಿ.ಟಿ.ರವಿ ಬಿಜೆಪಿ ತಮಿಳುನಾಡು ರಾಜ್ಯ ಘಟಕದ ಉಸ್ತುವಾರಿ. ಅವರೇ ಅಣ್ಣಾಮಲೈನನ್ನು ಎತ್ತಿಕಟ್ಟಿದ್ದಾರೆ. ಹೀಗಾಗಿಯೇ ಮೇಕೆದಾಟು ಯೋಜನೆ ತಡವಾಗ್ತಿದೆ ಎಂದು ಬಿಜೆಪಿ ನಾಯಕರ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದರು.
ನಮ್ಮ ಕಾಲದಲಲ್ಲಿ ನಡೆದ ಕಾಮಗಾರಿಗಳ ಬಿಲ್ಗಳು ಇಂದಿಗೂ ಬಾಕಿಯಿವೆ. ಕಮಿಷನ್ ಕೊಟ್ಟಿಲ್ಲ ಎಂಬ ಕಾರಣಕ್ಕೆ ಗುತ್ತಿಗೆದಾರರಿಗೆ ಹಣ ಬಿಡುಗಡೆ ಮಾಡಿಲ್ಲ. ವಿಧಾನಸೌಧದಲ್ಲಿ ಸರ್ಕಾರಿ ಕೆಲಸ ದೇವರ ಕೆಲಸ ಎಂದು ಕೆತ್ತನೆ ಆಗಿದೆ. ಆದರೆ ಇಂದು ವಿಧಾನಸೌಧದಲ್ಲಿ ರಾಕ್ಷಸರೇ ಕುಳಿತುಕೊಂಡಿದ್ದಾರೆ. ವಿಧಾನಸೌಧದಲ್ಲಿ ಮನುಷ್ಯರ ರಕ್ತ ಕುಡಿಯುವವರು ಕೂತಿದ್ದಾರೆ. ಅವರನ್ನು ಒದ್ದು ಓಡಿಸಬೇಕು, ಹೀಗಾಗಿ ಕಾಂಗ್ರೆಸ್ಗೆ ಶಕ್ತಿ ತುಂಬಬೇಕು ಎಂದು ನುಡಿದರು.
ಮೇಕೆದಾಟು ಯೋಜನೆಗೆ ನಮ್ಮ ಸರ್ಕಾರ ಇದ್ದಾಗಲೇ ಡಿಪಿಆರ್ ಸಿದ್ಧಪಡಿಸಿ ಕೇಂದ್ರ ಸರ್ಕಾರಕ್ಕೆ ಕಳುಹಿಸಿಕೊಡಲಾಗಿತ್ತು. ಡಿ.ಕೆ.ಶಿವಕುಮಾರ್ ನೀರಾವರಿ ಸಚಿವರಾಗಿದ್ದಾಗಲೇ ₹ 5912 ಕೋಟಿ ಮೊತ್ತದ ಡಿಪಿಆರ್ ಸಿದ್ಧಪಡಿಸಿ ಕೇಂದ್ರ ಸರ್ಕಾರಕ್ಕೆ ಕಳಿಸಿದ್ದೆವು. ಮೂರು ವರ್ಷ ಕಳೆದರೂ ಯೋಜನೆ ಯಾವುದೇ ಪ್ರಗತಿ ಕಂಡಿಲ್ಲ. ಯೋಜನೆಗೆ ಅರಣ್ಯ ಇಲಾಖೆ ಅನುಮತಿ ಸಿಗಬೇಕಿದೆ. ಮಾತಿಗೆ ಮುನ್ನ ಡಬಲ್ ಇಂಜಿನ್ ಸರ್ಕಾರ ಎನ್ನುತ್ತಾರೆ. ಇಂದು ಡಬಲ್ ಇಂಜಿನ್ ಸರ್ಕಾರ ಇದ್ದರೂ ಯಾಕೆ ಯೋಜನೆಯನ್ನು ಜಾರಿ ಮಾಡುತ್ತಿಲ್ಲ ಎಂದು ಬಿಜೆಪಿ ನಾಯಕರ ವಿರುದ್ಧ ವಾಗ್ದಾಳಿ ನಡೆಸಿದರು.
ವಸತಿ ಸಚಿವ ವಿ.ಸೋಮಣ್ಣ ಮತ್ತು ಯಡಿಯೂರಪ್ಪ ಪುತ್ರ ಬಿ.ವೈ.ವಿಜಯೇಂದ್ರ ನಡುವೆ ಸಂಬಂಧ ಸರಿಯಿರಲಿಲ್ಲ. ಹೀಗಾಗಿಯೇ ವಸತಿ ಖಾತೆಗೆ ಒಂದು ರೂಪಾಯಿ ಅನುದಾನವನ್ನೂ ಬಿಡುಗಡೆ ಮಾಡಿರಲಿಲ್ಲ. ಈ ಕುರಿತು ಪ್ರಶ್ನಿಸಿದರೆ ಸೋಮಣ್ಣ ಅಸಹಾಯಕತೆ ತೋಡಿಕೊಳ್ಳುತ್ತಾರೆ. ಗಡಿ ಜಿಲ್ಲೆಯಿಂದಲೇ ನಮ್ಮ ದಿಗ್ವಿಜಯ ಯಾತ್ರೆ ಆರಂಭವಾಗಲಿ ಎಂದು ಕರೆ ನೀಡಿದರು.
ಚಾಮರಾಜನಗರದಲ್ಲಿ ಕಾಂಗ್ರೆಸ್ನಿಂದ ಜನಜಾಗೃತಿ ಸಮಾವೇಶ ಆರಂಭಿಸುತ್ತಿದ್ದೇವೆ. ಚಾಮರಾಜನಗರಕ್ಕೆ ಬಂದ ಮೇಲೆಯೇ ನನ್ನ ಮುಖ್ಯಮಂತ್ರಿ ಸ್ಥಾನ ಗಟ್ಟಿಯಾಯಿತು. ಈ ಮೊದಲು ಚಾಮರಾಜನಗರಕ್ಕೆ ಶಾಪಗ್ರಸ್ಥ ಜಿಲ್ಲೆ ಎಂಬ ಹಣೆಪಟ್ಟಿ ಕಟ್ಟಿದ್ದರು. ಆದರೆ ನಾನು ಯಾವುದನ್ನೂ ಲೆಕ್ಕಿಸದೆ ಜಿಲ್ಲೆಗೆ ಭೇಟಿ ನೀಡಿದೆ. ಅಧಿಕಾರ ಹೋಗುವ ಭೀತಿಯಿಂದ ಅಂದಿನ ಶಾಸಕ ವಾಟಾಳ್ ಜೆ.ಎಚ್.ಪಟೇಲ್‌ರನ್ನ ಮಹದೇಶ್ವರ ಬೆಟ್ಟಕ್ಕೆ ಕರೆದೊಯ್ದರು. ಚಾಮರಾಜನಗರ ನೂತನ ಜಿಲ್ಲೆಯನ್ನು ಘೋಷಣೆ ಮಾಡಿದ್ದರು. ನಾನು ಮತ್ತು ಬಿ.ರಾಚಯ್ಯ ಚಾಮರಾಜನಗರಕ್ಕೆ ಬಂದು ಘೋಷಣೆ ಮಾಡಿದ್ದೆವು. ಜೆ.ಎಚ್.ಪಟೇಲ್ ಕೂಡ ಮೌಢ್ಯವನ್ನು ನಂಬಿದ್ದರು ಎಂದರು.
ಚಾಮರಾಜನಗರದ ಆಮ್ಲಜನಕ ದುರಂತದ ವೇಳೆ ಸರ್ಕಾರದ ಸುಳ್ಳನ್ನು ನಾವೇ ಬಯಲು ಮಾಡಿದ್ದು. ಆಕ್ಸಿಜನ್ ಇಲ್ಲದೆ ಕೇವಲ ಮೂವರು ಮೃತಪಟ್ಟಿದ್ದಾರೆ ಎಂದು ಸುಳ್ಳು ಹೇಳಲಾಗಿತ್ತು. ಅಧಿಕಾರಿಗಳ ಜತೆ ಸಭೆ ನಡೆಸಿದಾಗ 36 ಜನ ಎಂದು ನಂತರ ಗೊತ್ತಾಯಿತು. ಆ 36 ಜನರ ಸಾವಿಗೆ ಬಿಜೆಪಿ ಸರ್ಕಾರವೇ ಕಾರಣ. ಇದನ್ನು ಜಿಲ್ಲಾಧಿಕಾರಿ, ಡಿಹೆಚ್‌ಒ ಒಪ್ಪಿಕೊಂಡಿದ್ದಾರೆ. ಆದರೆ ಡಾ.ಸುಧಾಕರ್, ಸುರೇಶ್ ಕುಮಾರ್ ಸುಳ್ಳು ಹೇಳಿ ಜನರ ದಿಕ್ಕುತಪ್ಪಿಸುವ ಕೆಲಸ ಮಾಡಿದರು ಎಂದು ದೂರಿದರು.
ಮೇಕೆದಾಟು ಪಾದಯಾತ್ರೆ ಹಿನ್ನೆಲೆಯಲ್ಲಿ ಚಾಮರಾಜನಗರದಲ್ಲಿ ಆಯೋಜಿಸಿದ್ದ ಜನಜಾಗೃತಿ ಸಮಾವೇಶಕ್ಕೆ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಕೆಪಿಸಿ. ಅಧ್ಯಕ್ಷ ಡಿ.ಕೆ.ಶಿವಕುಮಾರ್ ಒಂದೇ ಕಾರಿನಲ್ಲಿ ಬಂದರು.
ಇದನ್ನೂ ಓದಿ: ಮೇಕೆದಾಟು ಯೋಜನೆ ಜಾರಿಗೆ ಆಗ್ರಹಿಸಿ ಪಾದಯಾತ್ರೆಗೆ ಕಾಂಗ್ರೆಸ್ ಭರದ ಸಿದ್ಧತೆ: ಕಾಂಗ್ರೆಸ್ ರಾಜಕೀಯ ಮಾಡುತ್ತಿದೆ ಎಂದ ಎಸ್ ಮುನಿಸ್ವಾಮಿ
ಇದನ್ನೂ ಓದಿ: ಮೇಕೆದಾಟು ಪಾದಯಾತ್ರೆ ಹಿನ್ನೆಲೆ; ಕಾಂಗ್ರೆಸ್ ಹೊಣೆಗೇಡಿತನದ ಬಗ್ಗೆ ಸ್ಫೋಟಕ ಮಾಹಿತಿ ಕೊಡಲಿದ್ದೇನೆ, ಕಾಯಿರಿ: ಗೋವಿಂದ ಕಾರಜೋಳ