ಮಾದಪ್ಪನ ಸನ್ನಿಧಿಯಲ್ಲಿ ಹೆಚ್ಚಾಯ್ತು ಗಾಂಜಾ ಘಾಟು: ಎಲ್ಲೆಂದರಲ್ಲಿ ಬಿದ್ದಿವೆ ಮದ್ಯದ ಪೌಚ್
ಏಳು ಮಲೆಯ ಒಡೆಯ ‘ಮುದ್ದು ಮಾಯ್ಕಾರ’ ಭಕ್ತರ ಆರಾಧ್ಯ ದೈವ ಮಲೆ ಮಹದೇಶ್ವರನ ಸನ್ನಿಧಿಯಲ್ಲಿ ಗಾಂಜಾ ಘಮಲು ಹೆಚ್ಚಾಗಿದೆ. ಪ್ರಾಧಿಕಾರದ ನಡೆಗೆ ಭಕ್ತರಿಂದ ಆಕ್ಷೇಪ ವ್ಯಕ್ತವಾಗಿದೆ. ಗಾಂಜಾ ಘಾಟು, ಮದ್ಯಪಾನ ಹೆಚ್ಚಾಗಿದೆ ಎಂಬ ಆರೋಪ ಕೇಳಿಬಂದಿದೆ. ಎಲ್ಲೆಂದರಲ್ಲಿ ಗಾಂಜಾ ತ್ಯಾಜ್ಯದ ಜತೆಗೆ, ಎಲ್ಲೆಂದರಲ್ಲಿ ಮದ್ಯದ ಪೌಚ್ ಬಿದ್ದಿರುವುದು ಕಾಣಿಸಿರುವುದು ಭಕ್ತರ ಆಕ್ರೋಶಕ್ಕೆ ಕಾರಣವಾಗಿದೆ.

ಚಾಮರಾಜನಗರ, ಜೂನ್ 23: ಮಾದಪ್ಫನ ಬೆಟ್ಟದಲ್ಲಿ ಗಾಂಜಾ ಘಮಲು ಹೆಚ್ಚಾಗಿದೆ. ಪವಿತ್ರ ಕ್ಷೇತ್ರ ಮಲೆ ಮಹದೇಶ್ವರ ಬೆಟ್ಟವನ್ನು (Male Mahadeshwara Hills) ಅಕ್ರಮಗಳ ತಾಣವಾಗಿ ಕೆಲ ಕಿಡಿಗೇಡಿಗಳು ಪರಿವರ್ತಿಸುತ್ತಿದ್ದಾರೆ. ಮಲೆ ಮಹದೇಶ್ವರ ಬೆಟ್ಟದ ಬಸ್ ನಿಲ್ದಾಣದ ಹಿಂಭಾಗದ ಖಾಲಿ ಜಾಗ ಗಾಂಜಾ ಅಡ್ಡೆಯಾಗಿ ಬದಲಾವಣೆಯಾಗಿದೆ. ಯಾರಿಗೂ ತಿಳಿಯದ ಹಾಗೆ ಗಾಂಜಾ ಸೇದಲೂ ಯುವಕರು ಬಳಸಿಕೊಳ್ಳುತ್ತಿದ್ದಾರೆ. ಇಷ್ಟೆಲ್ಲ ಆದರೂ ಪ್ರಾಧಿಕಾರ ಅಥವಾ ಅಬಕಾರಿ ಇಲಾಖೆ ಆಗಲೀ ತಲೆ ಕೆಡಿಸಿಕೊಂಡಿಲ್ಲ.
ಸಿದ್ದರಾಮಯ್ಯ ಖಡಕ್ ಸೂಚನೆಗೂ ಇಲ್ಲ ಕಿಮ್ಮತ್ತು!
ಗಾಂಜಾ ಅಷ್ಟೇ ಅಲ್ಲದೆ ಮದ್ಯದ ಪೌಚ್ಗಳು ಎಲ್ಲೆಂದರಲ್ಲಿ ಬಿದ್ದಿವೆ. ಮದ್ಯ ಮುಕ್ತ ಮಹದೇಶ್ವರ ಬೆಟ್ಟಕ್ಕೆ ಸೂಚನೆ ನೀಡಿದ್ದ ಸಿಎಂ ಸಿದ್ಧರಾಮಯ್ಯ,ಕ್ಯಾಬಿನೆಟ್ ಮೀಟಿಂಗ್ನಲ್ಲಿಯೂ ಪ್ರಾಧಿಕಾರದ ಕಾರ್ಯದರ್ಶಿಗೆ ಖಡಕ್ ಎಚ್ಚರಿಕೆ ಕೊಟ್ಟಿದ್ದರು. ಆದರೂ ಸಮಸ್ಯೆ ಬಗೆಹರಿದಿಲ್ಲ. ಪ್ರಾಧಿಕಾರದ ಅಧಿಕಾರಿಗಳ ಶಾಮೀಲಿಂದಲೇ ಮದ್ಯ ಸಾಗಾಟ ನಡೆಯುತ್ತಿದೆ ಎಂದು ಸಾರ್ವಜನಿಕರು ಆರೋಪಿಸಿದ್ದಾರೆ.
ಮಲೆ ಮಹದೇಶ್ವರ ಬೆಟ್ಟ ಪಾವಿತ್ರ್ಯ ಕಾಪಾಡುವಲ್ಲಿ ಪ್ರಾಧಿಕಾರದ ಕಾರ್ಯದರ್ಶಿ ರಘು ಕೂಡ ಸಂಪೂರ್ಣ ವಿಫಲರಾಗಿದ್ದಾರೆ. ಪ್ರಾಧಿಕಾರ ಕಾಟಾಚಾರಕ್ಕೆ ಆಡಳಿತ ನಿರ್ವಹಣೆ ಮಾಡುತ್ತಿದೆ ಎಂದು ಸಾರ್ವಜನಿಕರು ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಮಲೆ ಮಹದೇಶ್ವರ ಬೆಟ್ಟ ಇನ್ಮುಂದೆ ಪಾನ ಮುಕ್ತ ಎಂದು ಘೋಷಿಸಿದ್ದ ಸಿಎಂ
ಮುಖ್ಯಮಂತ್ರಿಗಳ ಅಧ್ಯಕ್ಷತೆಯಲ್ಲಿ ಏಪ್ರಿಲ್ 24 ರಂದು ಶ್ರೀ ಮಲೆ ಮಹದೇಶ್ವರಸ್ವಾಮಿ ಕ್ಷೇತ್ರ ಅಭಿವೃದ್ಧಿ ಪ್ರಾಧಿಕಾರದ ಸಭೆ ನಡೆದಿತ್ತು. ಸಭೆಯ ನಂತರ ಮಾತನಾಡಿದ್ದ ಸಿಎಂ ಸಿದ್ದರಾಮಯ್ಯ, ಮಲೆ ಮಹದೇಶ್ವರ ಬೆಟ್ಟ ಇನ್ಮುಂದೆ ಪಾನ ಮುಕ್ತ ಎಂದು ಘೋಷಣೆ ಮಾಡಿದ್ದರು. ಈ ಬಗ್ಗೆ ಜಿಲ್ಲಾ ಮಟ್ಟದ ಅಧಿಕಾರಿಗಳಿಗೆ ಮತ್ತು ಪ್ರಾಧಿಕಾರದ ಅಧಿಕಾರಿಗಳಿಗೆ ಸಿಎಂ ಸಿದ್ದರಾಮಯ್ಯ ಮಹತ್ವದ ಸೂಚನೆ ಕೂಡ ಕೊಟ್ಟಿದ್ದರು. ಅದಾಗಿ ಒಂದು ತಿಂಗಳು ಆಗಿದೆಯಷ್ಟೆ, ಇದೀಗ ಬೆಟ್ಟದಲ್ಲಿ ಎಲ್ಲೆಂದರಲ್ಲಿ ಮದ್ಯದ ಪೌಚ್ ಕಾಣಿಸುತ್ತಿದೆ.
ಇದನ್ನೂ ಓದಿ: ಮಲೆ ಮಹದೇಶ್ವರ ಬೆಟ್ಟ ಇನ್ಮುಂದೆ ಪಾನ ಮುಕ್ತ: ಸಿಎಂ ಸಿದ್ದರಾಮಯ್ಯ ಘೋಷಣೆ
ಒಟ್ಟಿನಲ್ಲಿ ಮಾದಪ್ಪನ ಬೆಟ್ಟವನ್ನು ಪ್ಲಾಸ್ಟಿಕ್ ಮುಕ್ತ ಮಾಡುವ ಕೆಲಸದಲ್ಲಿ ಪ್ರಾಧಿಕಾರ ಬ್ಯುಸಿಯಾಗಿದೆ. ಆ ಭರದಲ್ಲಿ ಮದ್ಯ ಮುಕ್ತ, ಗಾಂಜಾ ಮುಕ್ತ ಮಾಡಲೂ ವಿಫಲವಾಗಿದೆ ಎಂಬ ಚರ್ಚೆ ನಡೆಯುತ್ತಿದೆ. ಇನ್ನು ಮುಂದೆಯಾದರೂ ಜಾಗದ ಪಾವಿತ್ರ್ಯತೆ ಕಾಪಾಡಲಿ ಎಂದು ಭಕ್ತರು ಆಗ್ರಹಿಸಿದ್ದಾರೆ.
ಕರ್ನಾಟಕದ ಇನ್ನಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 10:14 am, Mon, 23 June 25







