
ಚಾಮರಾಜನಗರ, ಆಗಸ್ಟ್ 24: ಹನೂರು ಅರಣ್ಯ ಪ್ರದೇಶದಲ್ಲಿ ಅರಣ್ಯ ಸಿಬ್ಬಂದಿಯಿಂದ ನಡೆದ ಮೂವರ ಎನ್‌ಕೌಂಟರ್ ಪ್ರಕರಣಕ್ಕೆ (shootout case) ಸಂಬಂಧಿಸಿದಂತೆ ಮಹತ್ವದ ಬೆಳವಣಿಗೆ ನಡೆದಿದ್ದು, ಮೃತರ ಮರಣೋತ್ತರ ಪರೀಕ್ಷೆ ಮತ್ತು ವಿಧಿವಿಜ್ಞಾನ ಪ್ರಯೋಗಾಲಯದ (FSL) ವರದಿ ಟಿವಿ9ಗೆ ಲಭ್ಯವಾಗಿದೆ. ಆ ಮೂಲಕ ಗುಂಡಿನ ಚಕಮಕಿಯ ಹಿಂದಿನ ನೈಜ ಸ್ಥಿತಿಗತಿ ಸೇರಿದಂತೆ ಹಲವು ಕುತೂಹಲಕಾರಿ ಸಂಗತಿಗಳು ಬಯಲಾಗಿದೆ.
ಮೈಸೂರಿನ ಕೆಆರ್ ಆಸ್ಪತ್ರೆಯಲ್ಲಿ ಮೃತ ಅಂತೋನಿಸ್ವಾಮಿ, ಪೀಟರ್ ಮತ್ತು ಕುಮಾರ್ ದೇಹಗಳ ಮರಣೋತ್ತರ ಪರೀಕ್ಷೆ ನಡೆಸಲಾಗಿತ್ತು. ವರದಿಯಲ್ಲಿ ಮೃತರ ದೇಹದ ಯಾವ ಭಾಗಗಳಿಗೆ ಗುಂಡುಗಳು ತಗುಲಿವೆ ಹಾಗೂ ಎಷ್ಟು ಇಂಚು ಆಳಕ್ಕೆ ನುಗ್ಗಿವೆ ಎಂಬ ಸೂಕ್ಷ್ಮ ವಿವರಗಳನ್ನು ಸ್ಪಷ್ಟವಾಗಿ ದಾಖಲಿಸಲಾಗಿದೆ. ಮೂವರ ಎದೆ, ಹೊಟ್ಟೆ ಹಾಗೂ ತೊಡೆಯ ಭಾಗಕ್ಕೆ ಗುಂಡೇಟುಗಳು ಬಿದ್ದಿರುವುದು ಪರೀಕ್ಷೆಯಲ್ಲಿ ದೃಢಪಟ್ಟಿದೆ.
ಇನ್ನೊಂದೆಡೆ, ಎಫ್‌ಎಸ್‌ಎಲ್ ವರದಿಯಲ್ಲಿ ಮತ್ತಷ್ಟು ಗಂಭೀರ ಅಂಶಗಳು ಹೊರಬಂದಿವೆ. ಮೃತ ಅಂತೋನಿಸ್ವಾಮಿ ಮತ್ತು ಪೀಟರ್ ಅವರ ಒಳ ಉಡುಪುಗಳಲ್ಲಿ ಗನ್ ಪೌಡರ್‌ನ ಪ್ರೈಮರ್ ಅಂಶಗಳು ಪತ್ತೆಯಾಗಿವೆ. ಇನ್ನು ಈ ಘಟನೆಯಲ್ಲಿ ಅತ್ಯಂತ ಹತ್ತಿರದಿಂದಲೇ ಗುಂಡಿನ ಚಕಮಕಿ ನಡೆದಿರುವುದು ಎಫ್‌ಎಸ್‌ಎಲ್ ವರದಿಯಲ್ಲಿ ಉಲ್ಲೇಖಿಸಲಾಗಿದೆ.
ಇನ್ನು ಪ್ರಕರಣದ ತನಿಖೆಯನ್ನು ಪೊಲೀಸರು ತೀವ್ರಗೊಳಿಸಿದ್ದು, ಘಟನೆಯ ದಿನ ಸ್ಥಳದಲ್ಲಿದ್ದ ಹೊಳೆಮುರಿದಟ್ಟಿ ಹಾಗೂ ಬೇಟೆಗಾರರ ಗುಡ್ಡದ ಆ್ಯಂಟಿ ಪೋಚಿಂಗ್ ಕ್ಯಾಂಪ್‌ನ ಒಟ್ಟು 12 ಮಂದಿ ಅರಣ್ಯ ಸಿಬ್ಬಂದಿಯನ್ನು ವಿಚಾರಣೆಗೆ ಒಳಪಡಿಸಿ ಮಾಹಿತಿ ಸಂಗ್ರಹಿಸಿದ್ದಾರೆ. ಇದರ ಜೊತೆಗೆ ಪ್ರಕರಣದ ಏಕೈಕ ಪ್ರತ್ಯಕ್ಷದರ್ಶಿಯಾದ ಮಹಿಮ್‌ದಾಸ್‌ನ ಹೇಳಿಕೆಯನ್ನೂ ತನಿಖಾಧಿಕಾರಿಗಳು ದಾಖಲಿಸಿಕೊಂಡಿದ್ದಾರೆ.
ಇದನ್ನೂ ಓದಿ: ಬೇಟೆಗಾರರ ಅಟ್ಟಹಾಸಕ್ಕೆ ಕಳ್ಳ ಬೇಟೆ ತಡೆ ಶಿಬಿರ ಧ್ವಂಸ: ಶೂಟೌಟ್ ಪ್ರಕರಣದ ಗ್ರೌಂಡ್ ರಿಪೋರ್ಟ್
ವಿಶೇಷವೆಂದರೆ, ಅರಣ್ಯ ಇಲಾಖೆಯ ಪಾಲಿಗೆ ನಾಲ್ಕನೇ ಆರೋಪಿಯಾಗಿರುವ ಇದೇ ಮಹಿಮ್‌ದಾಸ್, ಪೊಲೀಸರ ಕೊಲೆ ತನಿಖೆಯಲ್ಲಿ ಪ್ರಮುಖ ಪ್ರತ್ಯಕ್ಷದರ್ಶಿಯಾಗಿದ್ದು, ಆತನ ಹೇಳಿಕೆ ಹಾಗೂ 12 ಮಂದಿ ಅರಣ್ಯ ಸಿಬ್ಬಂದಿ ನೀಡಿದ ವಿವರಗಳನ್ನು ತಾಳೆ ಹಾಕಿ ಘಟನೆಯ ನೈಜ ಸತ್ಯಾಸತ್ಯತೆ ಬಯಲಿಗೆಳೆಯಲು ಪೊಲೀಸರು ಮುಂದಾಗಿದ್ದಾರೆ.
ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.