ಬೀದಿನಾಯಿಗಳ ದಾಳಿಗೆ ಬೆಚ್ಚಿಬಿದ್ದ ಸೂರ್ಯನಗರ ಜನ: ಅಧಿಕಾರಿಗಳ ದಿವ್ಯ ನಿರ್ಲಕ್ಷ್ಯಕ್ಕೆ ಕಿಡಿ

ಬೆಂಗಳೂರು ಹೊರವಲಯದ ಆನೇಕಲ್ ಚಂದಾಪುರ ಸಮೀಪದ ಸೂರ್ಯನಗರದಲ್ಲಿ ಬೀದಿ ನಾಯಿಗಳ ಹಾವಳಿ ತೀವ್ರವಾಗಿದೆ. ಮಕ್ಕಳು, ಪಾದಚಾರಿಗಳು, ಬೈಕ್ ಸವಾರರ ಮೇಲೆ ನಿತ್ಯ ದಾಳಿ ನಡೆಯುತ್ತಿದೆ. ಪುರಸಭೆ ಅಧಿಕಾರಿಗಳು ದಿವ್ಯ ನಿರ್ಲಕ್ಷ್ಯ ವಹಿಸಿದ್ದು, ನಿವಾಸಿಗಳು ಆಸ್ಪತ್ರೆಗೆ ಅಲೆಯುವಂತಾಗಿದೆ. ಸಾವು ನೋವು ಸಂಭವಿಸುವ ಮುನ್ನ ಕರ್ನಾಟಕ ಗೃಹ ಮಂಡಳಿ ಮತ್ತು ಚಂದಾಪುರ ಪುರಸಭೆ ತಕ್ಷಣ ಕ್ರಮ ಕೈಗೊಳ್ಳಬೇಕೆಂದು ಸ್ಥಳೀಯರು ಆಗ್ರಹಿಸಿದ್ದಾರೆ.

ಬೀದಿನಾಯಿಗಳ ದಾಳಿಗೆ ಬೆಚ್ಚಿಬಿದ್ದ ಸೂರ್ಯನಗರ ಜನ: ಅಧಿಕಾರಿಗಳ ದಿವ್ಯ ನಿರ್ಲಕ್ಷ್ಯಕ್ಕೆ ಕಿಡಿ
ಸಾಂದರ್ಭಿಕ ಚಿತ್ರ
Image Credit source: ndtv.com
Edited By:

Updated on: Apr 01, 2026 | 6:56 AM

ಆನೇಕಲ್​​, ಏಪ್ರಿಲ್​​ 01: ಬೆಂಗಳೂರು ಹೊರವಲಯ ಆನೇಕಲ್ ತಾಲ್ಲೂಕಿನ ಚಂದಾಪುರ ಸಮೀಪದ ಸೂರ್ಯನಗರದಲ್ಲಿ ಬೀದಿ ನಾಯಿಗಳ ಹಾವಳಿ ಮಿತಿ ಮೀರಿದ್ದು, ಶ್ವಾನಗಳ ಕಾಟಕ್ಕೆ ಸ್ಥಳೀಯ ನಿವಾಸಿಗಳು ಹೈರಾಣಾಗಿದ್ದಾರೆ. ಗುಂಪು ಗುಂಪಾಗಿ ರಸ್ತೆಗಳಲ್ಲಿ ಬೀಡುಬಿಟ್ಟಿರುವ ರಕ್ಕಸ ಬೀದಿನಾಯಿಗಳು ಮನೆ ಮುಂದೆ ಆಟವಾಡುವ ಮಕ್ಕಳು, ವಾಕಿಂಗ್ ಮಾಡುವ ಮಹಿಳೆಯರು ಸೇರಿದಂತೆ ಪಾದಚಾರಿಗಳ ಮೇಲೆ ದಾಳಿ ನಡೆಸುತ್ತಿವೆ. ಬೈಕ್ ಸವಾರರನ್ನೂ ಅಡ್ಡಗಟ್ಟಿ ಅಟ್ಯಾಕ್​​ ಮಾಡುತ್ತಿವೆ. ದಿನನಿತ್ಯ ಇವುಗಳ ದಾಳಿಯಿಂದ ಸಾರ್ವಜನಿಕರು ಆಸ್ಪತ್ರೆಗೆ ಅಲೆದಾಡುವಂತಾಗಿದೆ. ಆದರೆ ಪುರಸಭೆ ಅಧಿಕಾರಿಗಳು ಮಾತ್ರ ಈ ಬಗ್ಗೆ ದಿವ್ಯ ನಿರ್ಲಕ್ಷ್ಯ ವಹಿಸಿದ್ದು, ಬೀದಿ ನಾಯಿಗಳ ಹಾವಳಿ ನಿಯಂತ್ರಣಕ್ಕೆ ಅಗತ್ಯ ಕ್ರಮ ಕೈಗೊಳ್ಳುತ್ತಿಲ್ಲ ಎಂಬ ಆರೋಪ ಕೇಳಿಬಂದಿದೆ.

ಬೀದಿ ನಾಯಿಗಳ ಉಪಟಳದಿಂದ ಕಂಗೆಟ್ಟಿರುವ ಸ್ಥಳೀಯ ನಿವಾಸಿಗಳು ಪುರಸಭೆ ಅಧಿಕಾರಿಗಳು, ಸೂರ್ಯನಗರ ಪೊಲೀಸ್ ಠಾಣೆ ಸೇರಿದಂತೆ ಸ್ಥಳೀಯ ಜನಪ್ರತಿನಿಧಿಗಳಿಗೆ ಈ ಬಗ್ಗೆ ದೂರು ನೀಡಿದರೂ ಯಾವುದೇ ಪ್ರಯೋಜನ ಆಗಿಲ್ಲ. ನಿತ್ಯ ಬೆಳಗ್ಗೆ ಮತ್ತು ಸಂಜೆ ಬೀದಿ ನಾಯಿಗಳು ಸಿಕ್ಕಸಿಕ್ಕವರ ಮೇಲೆ ಡೆಡ್ಲಿ ದಾಳಿ ನಡೆಸುತ್ತಿವೆ. ಇವುಗಳನ್ನು ಹಿಡಿದು ಬೇರೆಡೆ ಸ್ಥಳಾಂತರ ಮಾಡುವಂತೆ ದೂರು ನೀಡಿದರೆ ಕೆಲವರು ಪ್ರಾಣಿ ದಯಾ ಸಂಘದ ಹೆಸರಿನಲ್ಲಿ ನಮಗೆ ಧಮ್ಕಿ ಹಾಕುತ್ತಿದ್ದಾರೆ. ಹೀಗಾಗಿ ಬೀದಿ ನಾಯಿಗಳ ಹಾವಳಿಯಿಂದ ನೆಮ್ಮದಿ ಇಲ್ಲದಂತಾಗಿದೆ. ಆದ್ರೆ ಚಂದಾಪುರ ಪುರಸಭೆ ಅಧಿಕಾರಿಗಳು ಮಾತ್ರ ಬೀದಿ ನಾಯಿಗಳಿಗೆ ಸಂತಾನ ಹರಣ ಚಿಕಿತ್ಸೆ ಮಾಡಲಾಗಿದೆ. ರೇಬೀಸ್ ವ್ಯಾಕ್ಸಿನೇಷನ್‌ ಮಾಡಲಾಗಿದೆ. ಮುಂದಿನ ದಿನಗಳಲ್ಲಿ ಬೀದಿನಾಯಿಗಳ ಹಾವಳಿ ನಿಯಂತ್ರಣ ಮಾಡುವುದಾಗಿ ಹೇಳಿಕೊಂಡು ಸಮಯ ಕಳೆಯುತ್ತಿದ್ದಾರೆ ಎಂಬುದು ಇಲ್ಲಿನ ನಿವಾಸಿಗಳ ಆರೋಪ.

ಇದನ್ನೂ ಓದಿ: ಬೀದಿ ನಾಯಿ, ಸಾಕು ನಾಯಿಗಳಿಗಾಗಿ ವಿಶೇಷ ಪೂಜೆ! ಅಪಾರ್ಟ್ಮೆಂಟ್ ನಿವಾಸಿಗಳಿಂದ ಕಾಲಭೈರವ, ದತ್ತಾತ್ರೇಯ ಪೂಜೆ

ಸೂರ್ಯನಗರ ಕರ್ನಾಟಕ ಗೃಹ ಮಂಡಳಿ ನಿರ್ಮಾಣ ಮಾಡಿರುವ ಪ್ರತಿಷ್ಠಿತ ಬಡಾವಣೆಯಾಗಿದ್ದು, ಇಲ್ಲಿ ಮೂಲ ಸೌಕರ್ಯ ಸೇರಿದಂತೆ ಸುರಕ್ಷತೆ ದೃಷ್ಟಿಯಿಂದ ಜನ ನೆಲೆಸಿದ್ದರು. ಆದ್ರೆ ಕಳೆದ ಹಲವು ದಿನಗಳಿಂದ ಬೀದಿ ನಾಯಿಗಳ ಕಾಟಕ್ಕೆ ನಿವಾಸಿಗಳು ಹೈರಾಣಾಗಿದ್ದು, ಅಧಿಕಾರಿಗಳ ಬೇಜವಾಬ್ದಾರಿಗೆ ಕಂಗಾಲಾಗಿದ್ದಾರೆ. ಬಡಾವಣೆ ಬೀದಿನಾಯಿಗಳ ಅಡ್ಡೆಯಾಗಿ ಮಾರ್ಪಾಡಾಗಿರುವ ಕಾರಣ, ಸಾವು ನೋವು ಸಂಭವಿಸುವ ಮುನ್ನ ಕರ್ನಾಟಕ ಗೃಹ ಮಂಡಳಿ ಮತ್ತು ಚಂದಾಪುರ ಪುರಸಭೆ ಅಧಿಕಾರಿಗಳು ಬೀದಿ ನಾಯಿಗಳ ಹಾವಳಿಗೆ ಬ್ರೇಕ್ ಹಾಕಬೇಕು ಎಂಬ ಒತ್ತಾಯ ಕೇಳಿಬಂದಿದೆ.

ಮತ್ತಷ್ಟು ಸುದ್ದಿ ಓದಲು ಇಲ್ಲಿ ಕ್ಲಿಕ್​​ ಮಾಡಿ.

Published On - 6:53 am, Wed, 1 April 26

Follow Us