ಬೆಂಗಳೂರು, ಆಗಸ್ಟ್ 24: ಭಾರತದ ಮಹತ್ವಾಕಾಂಕ್ಷೆಯ ಚಂದ್ರಯಾನ -3 ಯೋಜನೆಯ (Chandrayaan-3 Mission) ವಿಕ್ರಮ್ ಲ್ಯಾಂಡರ್ ಚಂದ್ರನ ದಕ್ಷಿಣ ಧ್ರುವದ ಬಳಿ ಯಶಸ್ವಿಯಾಗಿ ಇಳಿದ ಒಂದು ದಿನದ ನಂತರ, ಎಲ್ಲವೂ ಸಾಮಾನ್ಯವಾಗಿ ಕಾರ್ಯನಿರ್ವಹಿಸುತ್ತಿವೆ ಎಂದು ಭಾರತೀಯ ಬಾಹ್ಯಾಕಾಶ ಸಂಸೋಧನಾ ಸಂಸ್ಥೆ ಇಸ್ರೋ (ISRO) ತಿಳಿಸಿದೆ. ಚಂದ್ರಯಾನ -3 ರ ಅಡಿಯಲ್ಲಿ ಸಂಶೋಧನೆ ಪೂರ್ವನಿಗದಿಯಂತೆಯೇ ಸಾಗುತ್ತಿದೆ. ಅಲ್ಲದೆ, ಪ್ರಗ್ಯಾನ್ ರೋವರ್ (Pragyan rover) ಚಂದ್ರನ ಅನ್ವೇಷಣೆಯನ್ನು ಪ್ರಾರಂಭಿಸಿದೆ ಎಂದು ಇಸ್ರೋ ಟ್ವೀಟ್ ಮೂಲಕ ತಿಳಿಸಿದೆ.
ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆಯ ಚಂದ್ರಯಾನ-3 ರ ಬಾಹ್ಯಾಕಾಶ ನೌಕೆಯ ವಿಕ್ರಂ ಲ್ಯಾಂಡರ್ ಬುಧವಾರ ಸಂಜೆ ಚಂದ್ರನ ಮೇಲ್ಮೈಯಲ್ಲಿ ಲ್ಯಾಂಡಿಂಗ್ ಮಾಡಿ ಇತಿಹಾಸವನ್ನು ಬರೆದಿದೆ. ವಿಕ್ರಮ್ ಲ್ಯಾಂಡರ್ ಸಂಜೆ 6.04ಕ್ಕೆ ಸಾಫ್ಟ್ ಲ್ಯಾಂಡಿಂಗ್ ಮಾಡಿತು. ಈ ಕಾರ್ಯಾಚರಣೆಯ ಯಶಸ್ಸಿನೊಂದಿಗೆ, ಚಂದ್ರನ ದಕ್ಷಿಣ ಧ್ರುವದ ಬಳಿ ಬಾಹ್ಯಾಕಾಶ ನೌಕೆಯನ್ನು ಇಳಿಸಿದ ಮೊದಲ ದೇಶ ಎಂಬ ಹೆಗ್ಗಳಿಕೆಗೆ ಭಾರತ ಪಾತ್ರವಾಗಿದೆ. ಇಷ್ಟೇ ಅಲ್ಲದೆ, ಯುನೈಟೆಡ್ ಸ್ಟೇಟ್ಸ್, ಸೋವಿಯತ್ ಒಕ್ಕೂಟ ಮತ್ತು ಚೀನಾ ನಂತರ ಚಂದ್ರನ ಮೇಲೆ ಸಾಫ್ಟ್ ಲ್ಯಾಂಡಿಂಗ್ ಅನ್ನು ಪೂರ್ಣಗೊಳಿಸಿದ ದೇಶವಾಗಿ ಭಾರತ ಹೊರಹೊಮ್ಮಿದೆ.
ಲ್ಯಾಂಡಿಂಗ್ ಆದ ಒಂದು ದಿನದ ನಂತರ ಇದೀಗ, ಎಲ್ಲಾ ವ್ಯವಸ್ಥೆಗಳು ಸಹಜವಾಗಿವೆ ಮತ್ತು ಎಲ್ಲಾ ಚಟುವಟಿಕೆಗಳು ಪೂರ್ವನಿಗದಿಯಂತೆಯೇ ನಡೆಯುತ್ತಿವೆ ಎಂದು ಇಸ್ರೋ ದೃಢಪಡಿಸಿದೆ.
Chandrayaan-3 Mission:
All activities are on schedule.
All systems are normal.🔸Lander Module payloads ILSA, RAMBHA and ChaSTE are turned ON today.
🔸Rover mobility operations have commenced.
🔸SHAPE payload on the Propulsion Module was turned ON on Sunday.
— ISRO (@isro) August 24, 2023
ಈ ಮಧ್ಯೆ, ಇಸ್ರೋ ವಿಜ್ಞಾನಿಗಳ ಸಾಧನೆಗೆ ವಿಶ್ವದಾದ್ಯಂತ ಮೆಚ್ಚುಗೆ ವ್ಯಕ್ತವಾಗುತ್ತಿದೆ. ಕರ್ನಾಟಕ ಮುಖ್ಯಮಂತ್ರಿ ಸಿದ್ದರಾಮಯ್ಯ, ಉಪ ಮುಖ್ಯಮಂತ್ರಿ ಡಿಕೆ ಶಿವಕುಮಾರ್ ಅವರು ಬೆಂಗಳೂರಿನ ಪೀಣ್ಯದಲ್ಲಿರುವ ಇಸ್ರೋ ಪ್ರಧಾನ ಕಚೇರಿಗೆ ಭೇಟಿ ನೀಡಿ ವಿಜ್ಞಾನಿಗಳಿಗೆ ಅಭಿನಂದನೆ ಸಲ್ಲಿಸಿದ್ದಾರೆ.
ಇದನ್ನೂ ಓದಿ: ಚಂದ್ರನ ಮೇಲ್ಮೈಯಲ್ಲಿ ಚಂದ್ರಯಾನ- 3ಗೆ ಏನೆಲ್ಲ ಅಪಾಯಗಳಿವೆ ಎಂದು ವಿವರಿಸಿದ ಇಸ್ರೋ ಮುಖ್ಯಸ್ಥ
ಪ್ರಧಾನಿ ನರೇಂದ್ರ ಮೋದಿ ಅವರೂ ಶನಿವಾರ ಬೆಂಗಳೂರಿಗೆ ಆಗಮಿಸಲಿದ್ದು, ಇಸ್ರೋ ವಿಜ್ಞಾನಿಗಳನ್ನು ಅಭಿನಂದಿಸಲಿದ್ದಾರೆ. 2019ರಲ್ಲಿ ಚಂದ್ರಯಾನ 2ರ ಸಾಫ್ಟ್ ಲ್ಯಾಂಡಿಂಗ್ ಪ್ರಯತ್ನದ ವೇಳೆಯೂ ಪ್ರಧಾನಿ ಮೋದಿ ಇಸ್ರೋ ಪ್ರಧಾನ ಕಚೇರಿಯಲ್ಲಿದ್ದರು. ದುರದೃಷ್ಟವಶಾತ್, ಆ ಪ್ರಯತ್ನ ಫಲಿಸಿರಲಿಲ್ಲ.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ