ಚನ್ನಪಟ್ಟಣ ಬೈ ಎಲೆಕ್ಷನ್​ ಯಾವಾಗ: ಸ್ಫೋಟಕ ಸುಳಿವು ಕೊಟ್ಟ ಕುಮಾರಸ್ವಾಮಿ

| Updated By: ಗಂಗಾಧರ​ ಬ. ಸಾಬೋಜಿ

Updated on: Oct 10, 2024 | 5:23 PM

ಚನ್ನಪಟ್ಟಣ ಉಪಚುನಾವಣೆ ಹಿನ್ನೆಲೆ ಕೇಂದ್ರ ಸಚಿವ ಹೆಚ್​ಡಿ ಕುಮಾರಸ್ವಾಮಿ ನೇತೃತ್ವದಲ್ಲಿ ಇಂದು ರಾಮನಗರ ಜಿಲ್ಲೆಯ ಕನಕಪುರ ತಾಲೂಕಿನಲ್ಲಿರುವ ದೇವಾಲಯದಲ್ಲಿ ಜೆಡಿಎಸ್ ಸಭೆ ಮಾಡಲಾಗಿದೆ. ಈ ವೇಳೆ ಚನ್ನಪಟ್ಟಣ ಬೈ ಎಲೆಕ್ಷನ್​ ಯಾವಾಗ ಎಂಬ ಬಗ್ಗೆ ಹೆಚ್​ಡಿ ಕುಮಾರಸ್ವಾಮಿ ಸ್ಫೋಟಕ ಸುಳಿವು ನೀಡಿದ್ದಾರೆ.

ಚನ್ನಪಟ್ಟಣ ಬೈ ಎಲೆಕ್ಷನ್​ ಯಾವಾಗ: ಸ್ಫೋಟಕ ಸುಳಿವು ಕೊಟ್ಟ ಕುಮಾರಸ್ವಾಮಿ
ಚನ್ನಪಟ್ಟಣ ಬೈ ಎಲೆಕ್ಷನ್​ ಯಾವಾಗ: ಸ್ಫೋಟಕ ಸುಳಿವು ಕೊಟ್ಟ ಕುಮಾರಸ್ವಾಮಿ
Follow us on

ರಾಮನಗರ, ಅಕ್ಟೋಬರ್​ 10: ಇನ್ನೊಂದು ವಾರದಲ್ಲಿ ಬೈಎಲೆಕ್ಷನ್​ ದಿನಾಂಕ ಘೋಷಣೆ ಆಗುತ್ತೆ ಎಂದು ಕೇಂದ್ರ ಸಚಿವ ಹೆಚ್​ಡಿ ಕುಮಾರಸ್ವಾಮಿ (HD Kumaraswamy) ಹೇಳಿದ್ದಾರೆ. ಆ ಮೂಲಕ ಚನ್ನಪಟ್ಟಣ ಬೈಎಲೆಕ್ಷನ್​ ಯಾವಾಗ ಎಂಬ ಪ್ರಶ್ನೆಗೆ ಸುಳಿವು ಕೊಟ್ಟಿದ್ದಾರೆ. ಜಿಲ್ಲೆಯ ಉಪಚುನಾವಣೆ ಹಿನ್ನೆಲೆ ಚನ್ನಪಟ್ಟಣದಲ್ಲಿ ನಡೆದ ಜೆಡಿಎಸ್​ ಸಭೆಯಲ್ಲಿ​ ಮಾತನಾಡಿದ ಅವರು, ಕಾರ್ಯಕರ್ತರು, ಜನರ ನಾಡಿಮಿಡಿತ ಅರ್ಥ ಮಾಡಿಕೊಳ್ಳಬೇಕು. ಎಲ್ಲರ ಅಭಿಪ್ರಾಯ ಕ್ರೋಢೀಕರಿಸಿ ಬಿಜೆಪಿ ವರಿಷ್ಠರ ಜೊತೆ ಚರ್ಚೆ ಮಾಡಿ ಅಭ್ಯರ್ಥಿ ಯಾರಾಗಬೇಕು ಎಂದು ತೀರ್ಮಾನ ಮಾಡುತ್ತೇವೆ ಎಂದು ಹೇಳಿದ್ದಾರೆ.

ಇದು ಜನತಾದಳದ ಭದ್ರಕೋಟೆ

ನಾವು ಕಳೆದ ಎರಡು ಚುನಾವಣೆಯನ್ನ ನಿರಂತರವಾಗಿ ಈ ಕ್ಷೇತ್ರದಿಂದ ಗೆದ್ದಿದ್ದೇವೆ. ಈ ಕ್ಷೇತ್ರದ ಕಾರ್ಯಕರ್ತರ ವಿಶ್ವಾಸಕ್ಕೆ ತೆಗೆದುಕೊಳ್ಳದೇ ನಾನು ಯಾವುದೇ ನಿರ್ಣಯ ಮಾಡಲ್ಲ. 2013ರಲ್ಲೂ ಕೇವಲ 3 ಸಾವಿರ ಮತಗಳಲ್ಲಿ ಸೋತಿದ್ದೇವೆ. 2018, 23ರಲ್ಲಿ ನಿರಂತರವಾಗಿ ಗೆದ್ದಿದ್ದೇವೆ. ಮೊದಲಿನಿಂದಲೂ ಇದು ಜನತಾದಳದ ಭದ್ರಕೋಟೆ ಎಂದಿದ್ದಾರೆ.

ಇದನ್ನೂ ಓದಿ: ಚನ್ನಪಟ್ಟಣ ಕ್ಷೇತ್ರದ ಟಿಕೆಟ್ ಯೋಗೇಶ್ವರ್​ಗೆ ನೀಡುವಂತೆ ವರಿಷ್ಠರಿಗೆ ಬಿಜೆಪಿ ಕಾರ್ಯಕರ್ತರ ಆಗ್ರಹ

ನಮ್ಮಲ್ಲಿನ ಕೆಲವೊಂದಷ್ಟು ತಿಕ್ಕಾಟಕ್ಕೆ ಸ್ವಲ್ಪ ವೀಕ್ ಆಗಿದೆ. ಈಗ ಕಾರ್ಯಕರ್ತರು ಬಲಾಡ್ಯವಾಗಿ ಸಂಘಟನೆ ಮಾಡುತ್ತಿದ್ದಾರೆ. ಅದರಿಂದ ಅವರ ವಿಶ್ವಾಸ ಇಲ್ಲದೇ ಏನು ತೀರ್ಮಾನ ಮಾಡಲ್ಲ. ಅವರ ಪಕ್ಷದಲ್ಲಿ ಅವರು ಏನೇ ಚರ್ಚೆ ಮಾಡಿಕೊಂಡರೂ ಅದು ಅವರ ಸಂಘಟನೆ ವಿಚಾರ. ಅದನ್ನ ತಪ್ಪು ಅಂತ ನಾವು ಹೇಳಲ್ಲ ಎಂದರು.

ಈಗ ಏಕೆ ತನಿಖೆ? ಹೆಚ್​ಡಿ ಕುಮಾರಸ್ವಾಮಿ ಪ್ರಶ್ನೆ

ಕೋವಿಡ್ ಹಗರಣ ತನಿಖೆಗೆ ಎಸ್ಐಟಿ ರಚನೆ ವಿಚಾರವಾಗಿ ಪ್ರತಿಕ್ರಿಯಿಸಿದ್ದು, ಈ ಭಜನೆ ಒಂದುವರೆ ವರ್ಷದಿಂದ ನಡೆಯುತ್ತಿದೆ. ಇವರುಗಳು ವಿರೋಧ ಪಕ್ಷದಲ್ಲಿ ಕೆಲಸ ಮಾಡುವಾಗ ದೊಡ್ಡ ಮಟ್ಟದಲ್ಲಿ ಚರ್ಚೆ ಮಾಡಿದರು. ಪಿಎಸಿಎಲ್ ಚೇರ್ಮನ್ ಅವರ ಪಕ್ಷದವರೇ ಇದ್ದಾರೆ. ಇಲ್ಲಿಯವರೆಗೆ ಯಾವುದೇ ರೀತಿಯ ತನಿಖೆ ಮಾಡಿಲ್ಲ. ಈಗ ಏಕೆ ಕೊಟ್ಟಿದ್ದೀರಿ ಎಂದು ಪ್ರಶ್ನಿಸಿದ್ದಾರೆ.

ನಿಮಗೆ ನಿಜಕ್ಕೂ ರಾಜ್ಯದ ತೆರಿಗೆ ಹಣ ಲೂಟಿ ಬಗ್ಗೆ ಮಾಹಿತಿ ಇದ್ದರೆ ಯಾವಾಗಲೋ ತನಿಖೆ ಆಗಬೇಕಿತ್ತು. ಈಗ ನಿಮ್ಮ ಪರಿಸ್ಥಿತಿಗಳ ರಕ್ಷಣೆ ಪಡೆಯಲು ಈ ರೀತಿಯ ಬೆಳವಣಿಗೆ ಪ್ರಾರಂಭ ಮಾಡಿದ್ದೀರಿ. ಇದು ಯಾವುದೇ ರೀತಿಯಲ್ಲಿ ಫಲ ನೀಡಲ್ಲ ಎಂದು ವಾಗ್ದಾಳಿ ಮಾಡಿದ್ದಾರೆ.

ಇದನ್ನೂ ಓದಿ: ಬೆಂಗಳೂರು ಗ್ರಾಮಾಂತರದಿಂದ ಯೋಗೇಶ್ವರ್ ಲೋಕಸಭೆಗೆ ಸ್ಪರ್ಧಿಸಲಿ ಅಂತ ಹೇಳಿದ್ದೆ: ಕುಮಾರಸ್ವಾಮಿ

ಕಾಂಗ್ರೆಸ್ ಸರ್ಕಾರದಿಂದ ದ್ವೇಷದ ರಾಜಕಾರಣ ವಿಚಾರವಾಗಿ ಮಾತನಾಡಿದ್ದು, ಇದು ಸೇಡಿನ ರಾಜಕಾರಣ ಅಲ್ಲದೇ ಮತ್ತೇನು? ಪಾಪ ಪದೇ ಪದೇ ಕುಮಾರಸ್ವಾಮಿ ಮೇಲೆ ಎಫ್ಐಆರ್ ಇಲ್ವಾ ಅಂತಾರೆ. ಕುಮಾರಸ್ವಾಮಿ ಯಾಕೆ ರಾಜಿನಾಮೆ ಕೊಟ್ಟಿಲ್ಲ ಅಂತ ಕೇಳುತ್ತಾರೆ. ಕುಮಾರಸ್ವಾಮಿ ಮೇಲಿನ ಎಫ್ಐಆರ್​ಗೆ ಬೇಲ್ ಪಡೆದಿದ್ದೇನೆ. ನಾನು ನನ್ನ ಮೇಲೆ ತನಿಖೆ ಮಾಡಬೇಡಿ ಅಂತ ಹೇಳಿದ್ದೀನಾ? ತನಿಖೆ ಮಾಡಲು ಎಷ್ಟು ವರ್ಷ ಬೇಕು. 12 ವರ್ಷಗಳಿಂದ ತನಿಖೆ ಮಾಡಬೇಕಾ ಎಂದು ಕಿಡಿಕಾರಿದ್ದಾರೆ.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.