ಚಿಕ್ಕಬಳ್ಳಾಪುರದಲ್ಲಿ ಮಹಿಳೆಗೆ ಕೂಲಿ ನೀಡಿ ಕೊರೊನಾ ಲಸಿಕೆ ಹಾಕಿಸಿದ ಅಧಿಕಾರಿಗಳು!
ಗುಡಿಬಂಡೆ ಪಟ್ಟಣ ಪಂಚಾಯತಿ ಮುಖ್ಯಾಧಿಕಾರಿ ರಾಜಶೇಖರ್ ಹಾಗೂ ಸಿಬ್ಬಂದಿ ಲಸಿಕೆ ಪಡೆಯುವಂತೆ ಮಹಿಳೆ ಬಳಿ ಪರಿ ಪರಿಯಾಗಿ ಮನವಿ ಮಾಡುತ್ತಾರೆ.
ಚಿಕ್ಕಬಳ್ಳಾಪುರ: ಮಹಾಮಾರಿ ಕೊರೊನಾ (Coronavirus) ವಿರುದ್ಧ ಹೋರಾಡಲು ಇರುವ ಏಕೈಕ ಅಸ್ತ್ರವೆಂದರೆ ಅದು ಲಸಿಕೆ (Vaccine). ಆದರೆ ಲಸಿಕೆ ಹಾಕಿಸಿಕೊಳ್ಳಲು ಕೆಲ ಜನರು ಹಿಂದೆ ಸರಿಯುತ್ತಿದ್ದಾರೆ. ಯಾವುದೇ ಭಯವಿಲ್ಲದೆ ಲಸಿಕೆ ಹಾಕಿಸಿಕೊಳ್ಳಿ ಅಂತ ಹೇಳಿದರೂ ಕೆಲ ಜನ ನಿರ್ಲಕ್ಷ್ಯ ತೋರುತ್ತಿದ್ದಾರೆ. ಈ ನಡುವೆ ಓರ್ವ ಮಹಿಳೆ, ಲಸಿಕೆ ಹಾಕಿಸಿಕೊಂಡು ವಿಶ್ರಾಂತಿ ಪಡೆದರೆ ಒಂದು ದಿನದ ಕೂಲಿ ಕೈ ತಪ್ಪುತ್ತದೆ ಅಂತ ಅಧಿಕಾರಿಗಳ ಜೊತೆ ವಾದ ಮಾಡಿದ್ದಾಳೆ. ಹೀಗಾಗಿ ಅಧಿಕಾರಿಗಳು ವಾದಕ್ಕಿಳಿದ ಮಹಿಳೆಗೆ ಒಂದು ದಿನದ ಕೂಲಿ ಹಣವನ್ನು ನೀಡಿ ಲಸಿಕೆ ನೀಡಿದ್ದಾರೆ. ಈ ಘಟನೆ ಚಿಕ್ಕಬಳ್ಳಾಪುರ ಜಿಲ್ಲೆಯ ಗುಡಿಬಂಡೆ ಪಟ್ಟಣದ ಇಂದಿರಾ ನಗರದಲ್ಲಿ ನಡೆದಿದೆ.
ಗುಡಿಬಂಡೆ ಪಟ್ಟಣ ಪಂಚಾಯತಿ ಮುಖ್ಯಾಧಿಕಾರಿ ರಾಜಶೇಖರ್ ಹಾಗೂ ಸಿಬ್ಬಂದಿ ಲಸಿಕೆ ಪಡೆಯುವಂತೆ ಮಹಿಳೆ ಬಳಿ ಪರಿ ಪರಿಯಾಗಿ ಮನವಿ ಮಾಡುತ್ತಾರೆ. ಆದರೆ ಮಹಿಳೆ, ಕೊರೊನಾ ಲಸಿಕೆ ಪಡೆದರೆ ಜ್ವರ, ತಲೆನೋವು ಬರುತ್ತೆ ಅಂತ ನಿರಾಕರಿಸುತ್ತಾಳೆ. ಅಲ್ಲದೇ ಲಸಿಕೆ ಪಡೆದರೆ ಒಂದು ದಿನ ವ್ಯರ್ಥವಾಗುತ್ತದೆ. ಹೀಗಾಗಿ ಲಸಿಕೆ ಪಡೆಯಲ್ಲ ಅಂತ ವಾದ ಮಾಡುತ್ತಾಳೆ. ಹೀಗಾಗಿ ಅಧಿಕಾರಿಗಳು ಮಹಿಳೆಗೆ ಒಂದು ದಿನದ ಕೂಲಿ ಹಣ 300 ರೂಪಾಯಿ ನೀಡಿ ಲಸಿಕೆ ನೀಡಿದ್ದಾರೆ.
ಅಕ್ಟೋಬರ್ ಪ್ರಾರಂಭದಲ್ಲಿ ಬಿಡುಗಡೆಯಾಗಲಿದೆ ಜೈಡಸ್ ಕ್ಯಾಡಿಲಾ ಕೊವಿಡ್ 19 ಲಸಿಕೆ ಜೈಡಸ್ ಕ್ಯಾಡಿಲಾದ ಕೊವಿಡ್ 19 ಲಸಿಕೆ ಝೈಕೊವ್-ಡಿ (ZyCov-D) ಅಕ್ಟೋಬರ್ ಪ್ರಾರಂಭದಿಂದ ಬಳಕೆಗೆ ಸಿಗುವ ಸಾಧ್ಯತೆ ಇದೆ ಎಂದು ಮೂಲಗಳು ತಿಳಿಸಿದ್ದಾಗಿ ಎಎನ್ಐ ವರದಿ ಮಾಡಿದೆ. ZyCov-D 12ವರ್ಷ ಮೇಲ್ಪಟ್ಟವರಿಗೆ ನೀಡಲು ಅನುಮತಿ ಪಡೆದ ದೇಶದ ಮೊದಲ ಲಸಿಕೆಯಾಗಿದ್ದು ಸೆಪ್ಟೆಂಬರ್ನಲ್ಲಿಯೇ ಬಳಕೆಗೆ ಸಿಗಲಿದೆ ಎಂದು ಹೇಳಲಾಗಿತ್ತು. ಇದು ಮೂರು ಡೋಸ್ಗಳ, ಜಗತ್ತಿನ ಮೊದಲ ಪ್ಲಾಸ್ಮಿಡ್ ಡಿಎನ್ಎ ಲಸಿಕೆಯಾಗಿದೆ. ಹಾಗೇ, ಈ ಲಸಿಕೆಯ ತುರ್ತು ಬಳಕೆಗೆ ಆಗಸ್ಟ್ 20ರಂದೇ ಭಾರತೀಯ ಔಷಧ ನಿಯಂತ್ರಣಾ ಪ್ರಾಧಿಕಾರ ಅನುಮೋದನೆಯನ್ನೂ ನೀಡಿದೆ. ಇದನ್ನು ಮೊದಲ ಡೋಸ್ ತೆಗೆದುಕೊಂಡ 28 ದಿನಗಳ ಬಳಿಕ ಇನ್ನೊಂದು ಡೋಸ್ ಮತ್ತು ಅದಾದ 28 ದಿನ ಅಂದರೆ ಮೊದಲ ಡೋಸ್ನಿಂದ 56 ದಿನಗಳಾದ ಬಳಿಕ ಮೂರನೇ ಡೋಸ್ ಪಡೆಯಬೇಕು.
ಇದನ್ನೂ ಓದಿ
ಲಾಕ್ಡೌನ್ನಿಂದ ಆರ್ಥಿಕ ಸಂಕಷ್ಟದ ಶಂಕೆ; ಕಿರುತೆರೆ ನಟ ಆತ್ಮಹತ್ಯೆ: ಅನುಮಾನ ಮೂಡಿಸಿದ ಸಾವು
(Authorities have given the woman Rs 300 and vaccinated the corona in Chikkaballapur)