
ಚಿಕ್ಕಬಳ್ಳಾಪುರ, ಫೆಬ್ರವರಿ 02: ಜಿಲ್ಲೆಯ ಗುಡಿಬಂಡೆ ತಾಲೂಕಿನ ಬೀಚಗಾನಹಳ್ಳಿ ಕ್ರಾಸ್ ಬಳಿ ಹೆಲಿಕಾಪ್ಟರ್ (Helicopter survey) ಮೂಲಕ ಬಂಗಾರ ಸೇರಿದಂತೆ ಭೂಗರ್ಭದಲ್ಲಿರುವ ನಿಧಿ-ನಿಕ್ಷೇಪಗಳ ಶೋಧಕಾರ್ಯ ನಡೆಯುತ್ತಿದೆ. ಇದರಿಂದ ಸ್ಥಳೀಯರಲ್ಲಿ ಕುತೂಹಲ ಹೆಚ್ಚಾಗಿದೆ. ಭಾರತೀಯ ಭೂ ವೈಜ್ಞಾನಿಕ ಸರ್ವೇಕ್ಷಣಾ ಇಲಾಖೆ (ಜಿಎಸ್‌ಐ) ವತಿಯಿಂದ ಈ ಏರಿಯಲ್ ಸರ್ವೆ ನಡೆಸಲಾಗುತ್ತಿದೆ. ಹೆಲಿಕಾಪ್ಟರ್ ಹಾಗೂ ಅತ್ಯಾಧುನಿಕ ವೈಜ್ಞಾನಿಕ ಸಲಕರಣೆಗಳನ್ನು ಬಳಸಿ ಭೂಗರ್ಭದ ಖನಿಜ ಸಂಪತ್ತಿನ ಕುರಿತು ಸಮಗ್ರ ಶೋಧ ಕಾರ್ಯ ಕೈಗೊಳ್ಳಲಾಗಿದೆ.
ಕೆ.ಜಿ.ಎಫ್. ಗೋಲ್ಡ್ ಮೈನಿಂಗ್ ಬೆಟ್ಟದ ಸಾಲಿಗೆ ಹೊಂದಿಕೊಂಡಿರುವ ಚಿಕ್ಕಬಳ್ಳಾಪುರ ಜಿಲ್ಲೆಯಲ್ಲಿ ಈ ಶೋಧಕಾರ್ಯಕ್ಕೆ ಹೆಚ್ಚಿನ ಮಹತ್ವ ನೀಡಲಾಗಿದೆ. ಬೀಚಗಾನಹಳ್ಳಿ ಕ್ರಾಸ್ ಪ್ರದೇಶದಲ್ಲಿ ಹೆಲಿಕಾಪ್ಟರ್ ಲ್ಯಾಂಡಿಂಗ್ ಹಾಗೂ ಟೇಕಾಫ್ ಸಹಿತವಾಗಿ ಏರಿಯಲ್ ಸರ್ವೆ ನಡೆಸಲು ಚಿಕ್ಕಬಳ್ಳಾಪುರ ಜಿಲ್ಲಾಡಳಿತದಿಂದ ಅಗತ್ಯ ಅನುಮತಿ ಪಡೆಯಲಾಗಿದೆ.
ಈ ಹಿಂದೆ ಕೂಡ ಜಿಲ್ಲೆಯಲ್ಲಿ ಬಂಗಾರದ ಕಣಗಳು ಪತ್ತೆಯಾಗಿತ್ತು. ಬಾಗೇಪಲ್ಲಿ ಹಾಗೂ ಗುಡಿಬಂಡೆ ತಾಲೂಕಿನ ಕೆಲ ರೈತರ ಜಮೀನುಗಳ ಮಣ್ಣಿನಲ್ಲೇ ಬಂಗಾರದ ಕಣಗಳು ಕಂಡುಬಂದಿದ್ದವು. ಇದೇ ಹಿನ್ನೆಲೆಯಲ್ಲೇ ಇದೀಗ ಹೆಲಿಕಾಪ್ಟರ್ ಮೂಲಕ ಭೂಗರ್ಭ ನಿಧಿ-ನಿಕ್ಷೇಪಗಳ ಶೋಧಕಾರ್ಯ ಕೈಗೊಳ್ಳಲಾಗಿದೆ ಎನ್ನಲಾಗಿದೆ.
ಈ ಬಗ್ಗೆ ಟಿವಿ9ಗೆ ಚಿಕ್ಕಬಳ್ಳಾಪುರ ಜಿಲ್ಲಾಧಿಕಾರಿ ಜಿ.ಪ್ರಭು ಪ್ರತಿಕ್ರಿಯಿಸಿದ್ದು, ಜಿಲ್ಲೆಯಲ್ಲಿ 2019-2020ರಲ್ಲಿ ಸರ್ವೆ ಕಾರ್ಯ ನಡೆದಿತ್ತು. ಆ ಸರ್ವೆ ಆಧರಿಸಿ ಈಗ ಆಳ ಅಧ್ಯಯನ ನಡೆದಿದೆ. ಭಾರತೀಯ ಭೂವೈಜ್ಞಾನಿಕ ಸರ್ವೇಕ್ಷಣಾ ಇಲಾಖೆಯ ಭೌಗೋಳಿಕ ಮಾಹಿತಿ ವ್ಯವಸ್ಥೆ ವಿಭಾಗ ಹಾಗೂ ರಿಮೋಟ್ ಸೆನ್ಸಿಂಗ್ ವಿಭಾಗದಿಂದ ಸರ್ವೆ ನಡೆಯುತ್ತಿದೆ ಎಂದರು.
ಇದನ್ನೂ ಓದಿ: ಗುಡಿಬಂಡೆ ಬಳಿ ಇದೆಯಾ ಚಿನ್ನದ ನಿಕ್ಷೇಪ? ಹೆಲಿಕಾಪ್ಟರ್ ಮೂಲಕ ನಡೆಯಿತು ಶೋಧಕಾರ್ಯ
ಮೂಲ ಲೋಹಗಳು ಸೇರಿದಂತೆ ಚಿನ್ನ, ಬೆಳ್ಳಿ, ತಾಮ್ರ, ಕಬ್ಬಿಣ ಸೇರಿದಂತೆ ಲೋಹಗಳ ಇರುವಿಕೆಯ ಬಗ್ಗೆ ಸರ್ವೆ ಮಾಡಲಾಗುತ್ತಿದ್ದು, ಮೇ 31ರವರೆಗೂ ಸರ್ವೆ ನಡೆಯುತ್ತೆ. ಚಿಕ್ಕಬಳ್ಳಾಪುರ ಜಿಲ್ಲೆಯ ಎಲ್ಲ ತಾಲೂಕುಗಳಲ್ಲಿ ಸರ್ವೆ ನಡೆಯಲಿದ್ದು, ಹೆಲಿಕಾಪ್ಟರ್ ತೀರ ಕೆಳ ಹಂತದಲ್ಲಿ ಸಂಚಾರ ಮಾಡಲಿದೆ. ಹೀಗಾಗಿ ಸಾರ್ವಜನಿಕರು ಭಯ ಬೀಳದಂತೆ ಜಿಲ್ಲಾಧಿಕಾರಿ ಮನವಿ ಮಾಡಿದ್ದಾರೆ.
ಇನ್ನು ಚಿಕ್ಕಬಳ್ಳಾಪುರ ಎಸ್ಪಿ ಕುಶಲ್ ಚೌಕ್ಸೆ ಮಾತನಾಡಿದ್ದು, ಸುಮಾರು 15 ದಿನಗಳ ಹಿಂದೆಯೇ ಭಾರತೀಯ ಭೂ ವೈಜ್ಞಾನಿಕ ಸರ್ವೇಕ್ಷಣಾ ಇಲಾಖೆ ಜಿಲ್ಲಾಡಳಿತ ಹಾಗೂ ಸಂಬಂಧಪಟ್ಟ ಅಧಿಕಾರಿಗಳಿಂದ ಅನುಮತಿ ನೀಡಲಾಗಿದೆ ಎಂದು ಹೇಳಿದ್ದಾರೆ. ಮತ್ತೊಂದೆಡೆ ಹೆಲಿಕಾಪ್ಟರ್ ಹಾರಾಟ ಮತ್ತು ಶೋಧ ಕಾರ್ಯ ನೋಡಲು ಸ್ಥಳೀಯ ಗ್ರಾಮಸ್ಥರು ಹೆಚ್ಚಿನ ಸಂಖ್ಯೆಯಲ್ಲಿ ಸೇರುತ್ತಿದ್ದಾರೆ.
ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.
Published On - 7:06 pm, Mon, 2 February 26