ಚಿಕ್ಕಬಳ್ಳಾಪುರ ನಗರಸಭೆಯಲ್ಲಿ 100 ಕೋಟಿ ಭೂ ಹಗರಣ: ಕೆರೆ, ರಾಜಕಾಲುವೆ ಜಾಗಕ್ಕೂ ನಕಲಿ ದಾಖಲೆ ಸೃಷ್ಟಿಸಿ ಗೋಲ್‌ಮಾಲ್

ಚಿಕ್ಕಬಳ್ಳಾಪುರದಲ್ಲಿ ರೂ 100 ಕೋಟಿ ಮೌಲ್ಯದ 24 ಎಕರೆ ಸರ್ಕಾರಿ ಬಿ-ಖರಾಬು ಜಮೀನು, ರೈಲ್ವೆ ಭೂಮಿ ಮತ್ತು ಕೆರೆಯಂಗಳಕ್ಕೆ ನಕಲಿ ದಾಖಲೆಗಳ ಮೂಲಕ ಖಾಸಗಿ ವ್ಯಕ್ತಿಗೆ ಅಕ್ರಮವಾಗಿ ಇ-ಖಾತೆ ಮಾಡಿರುವ ಗಂಭೀರ ಆರೋಪ ಕೇಳಿಬಂದಿದೆ. ಪೌರಾಯುಕ್ತ ಮನ್ಸೂರ್ ಅಲಿ ಸೇರಿ ಅಧಿಕಾರಿಗಳ ವಿರುದ್ಧ ದೂರು ದಾಖಲಾಗಿದ್ದು, ರಿಯಲ್ ಎಸ್ಟೇಟ್ ಕೈವಾಡ ಶಂಕಿಸಲಾಗಿದೆ.

ಚಿಕ್ಕಬಳ್ಳಾಪುರ ನಗರಸಭೆಯಲ್ಲಿ 100 ಕೋಟಿ ಭೂ ಹಗರಣ: ಕೆರೆ, ರಾಜಕಾಲುವೆ ಜಾಗಕ್ಕೂ ನಕಲಿ ದಾಖಲೆ ಸೃಷ್ಟಿಸಿ ಗೋಲ್‌ಮಾಲ್
ಭೂ ಹಗರಣ
Image Credit source: tv9 kannada
Edited By:

Updated on: Sep 03, 2026 | 6:22 PM

ಚಿಕ್ಕಬಳ್ಳಾಪುರ, ಸೆಪ್ಟೆಂಬರ್​ 03: ಕರ್ತವ್ಯಲೋಪ ಹಾಗೂ ಅಕ್ರಮ ಖಾತೆಗಳ ವಿವಾದಗಳಿಗೆ ಪದೇಪದೇ ಸುದ್ದಿಯಾಗುತ್ತಿದ್ದ ಚಿಕ್ಕಬಳ್ಳಾಪುರ ನಗರಸಭೆಯಲ್ಲಿ ಮತ್ತೊಂದು ಭಾರೀ ಭ್ರಷ್ಟಾಚಾರದ ಜಾಲ ಬಯಲಾಗಿದೆ. ನಗರಸಭೆ ವ್ಯಾಪ್ತಿಗೇ ಸೇರದ, ಸುಮಾರು 100 ಕೋಟಿ ರೂಪಾಯಿ ಮೌಲ್ಯದ 24 ಎಕರೆ ಸರ್ಕಾರಿ ಬಿ-ಖರಾಬು ಜಮೀನಿಗೆ ನಕಲಿ ದಾಖಲೆ ಸೃಷ್ಟಿಸಿ, ಬೆಂಗಳೂರು ಮೂಲದ ಖಾಸಗಿ ವ್ಯಕ್ತಿಯೊಬ್ಬರಿಗೆ ಅಕ್ರಮವಾಗಿ ಇ-ಖಾತೆ ಮಾಡಿಕೊಟ್ಟಿರುವ ಗಂಭೀರ ಆರೋಪ ಕೇಳಿಬಂದಿದೆ.

ಕೆರೆಯಂಗಳ, ರೈಲ್ವೆ ಆಸ್ತಿಗೂ ನಕಲಿ ದಾಖಲೆ!

ಚಿಕ್ಕಬಳ್ಳಾಪುರ ತಾಲೂಕಿನ ಅಣಕನೂರು ಗ್ರಾಮದ ಸರ್ವೆ ನಂಬರ್ 109ರಲ್ಲಿರುವ ಜಾಗವು ರೈಲ್ವೆ ಇಲಾಖೆ, ಕೆರೆಯಂಗಳ, ರಾಜಕಾಲುವೆ ಹಾಗೂ ಸರ್ಕಾರಿ ಬಿ-ಖರಾಬು ಜಮೀನನ್ನು ಒಳಗೊಂಡಿದೆ. ಇದು ನಗರಸಭೆಯ ಗಡಿಯಲ್ಲೇ ಬಾರದಿದ್ದರೂ, ಅಕ್ರಮವಾಗಿ ನಕಲಿ ದಾಖಲೆ ಸೃಷ್ಟಿಸಿ ಖಾಸಗಿ ವ್ಯಕ್ತಿಗೆ ಧಾರೆ ಎರೆಯಲಾಗಿದೆ.

ಇದನ್ನೂ ಓದಿ: ರವಿಶಂಕರ್ ಗುರೂಜಿ ವಿರುದ್ಧದ ಭೂ ಕಬಳಿಕೆ ಪ್ರಕರಣ ರದ್ದು: ಹೈ ಕೋರ್ಟ್ ಮಹತ್ವದ ತೀರ್ಪು!

ಈ ಬೃಹತ್ ಹಗರಣದ ಸಂಪೂರ್ಣ ದಾಖಲೆಗಳನ್ನು ಕಲೆಹಾಕಿರುವ ನಗರಸಭೆಯ ಮಾಜಿ ಸದಸ್ಯ ಹಾಗೂ ಸಾಮಾಜಿಕ ಕಾರ್ಯಕರ್ತ ಅಮೀರ್ ಮೊಹಮ್ಮದ್ ಸಾಧಿಕ್, ನೇರವಾಗಿ ಜಿಲ್ಲಾಧಿಕಾರಿಗಳಿಗೆ ದೂರು ನೀಡಿ ಸಮಗ್ರ ತನಿಖೆಗೆ ಆಗ್ರಹಿಸಿದ್ದಾರೆ.

ಪೌರಾಯುಕ್ತ ಹಾಗೂ ಸಿಬ್ಬಂದಿ ಮೇಲೆ ನೇರ ಆರೋಪ

ನಗರಸಭೆಯ ಹಾಲಿ ಪೌರಾಯುಕ್ತ ಮನ್ಸೂರ್ ಅಲಿ ನೇತೃತ್ವದಲ್ಲೇ ಈ ಅಕ್ರಮ ನಡೆದಿದೆ ಎಂಬ ಆಪಾದನೆ ವ್ಯಕ್ತವಾಗಿದೆ. ಕಚೇರಿಯ ವ್ಯವಸ್ಥಾಪಕಿ ಸಿ.ಆರ್. ವೀಣಾ, ವಿಷಯ ನಿರ್ವಾಹಕಿ ನೀಲಾಂಬರಿ, ಕಂದಾಯ ನಿರೀಕ್ಷಕ ವಿ.ಆರ್. ವೆಂಕಟೇಶ ಹಾಗೂ ಕಂಪ್ಯೂಟರ್ ಆಪರೇಟರ್ ರಾಘವೇಂದ್ರ ಸೇರಿ ಈ ಜಾಲ ಹೆಣೆಯಲಾಗಿದೆ ಎನ್ನಲಾಗಿದೆ.

ಯಾವುದೇ ಭೂ ಪರಿವರ್ತನೆ (ಸಿಎಲ್ ಯು), ನಗರಾಭಿವೃದ್ಧಿ ಇಲಾಖೆಯ ಅಧಿಕೃತ ಅನುಮೋದನೆ, ನಕ್ಷೆ ಅಥವಾ ಮಾಲೀಕತ್ವದ ಪ್ರಾಥಮಿಕ ದಾಖಲೆಗಳೇ ಇಲ್ಲದಿದ್ದರೂ ಕಣ್ಣುಮುಚ್ಚಿ ಇ-ಖಾತೆ ಸೃಷ್ಟಿಸಿಕೊಟ್ಟಿರುವುದು ಹಲವು ಸಂಶಯಗಳಿಗೆ ಎಡೆಮಾಡಿಕೊಟ್ಟಿದೆ.

‘ಕಣ್ತಪ್ಪಿನಿಂದ ಆಗಿದೆ’ ಎಂದ ಪೌರಾಯುಕ್ತ; ಕಠಿಣ ಕ್ರಮಕ್ಕೆ ಸಾರ್ವಜನಿಕರ ಆಗ್ರಹ

ಇನ್ನು ಹಗರಣದ ಕುರಿತು ಸ್ಪಷ್ಟನೆ ನೀಡಿರುವ ಪೌರಾಯುಕ್ತ ಮನ್ಸೂರ್ ಅಲಿ, ‘ಅರ್ಜಿ ಬಂದಾಗ ಕಣ್ತಪ್ಪಿನಿಂದ ಈ ಎಡವಟ್ಟಾಗಿದೆ. ಈಗ ಅದಕ್ಕೆ ಪಶ್ಚಾತ್ತಾಪವಾಗಿದ್ದು, ಖಾತೆಯನ್ನು ಕ್ಯಾನ್ಸಲ್ ಮಾಡಲು ಹಿರಿಯ ಅಧಿಕಾರಿಗಳಿಗೆ ಈಗಾಗಲೇ ವರದಿ ಸಲ್ಲಿಸಲಾಗಿದೆ’ ಎಂದು ಸಮರ್ಥಿಸಿಕೊಂಡಿದ್ದಾರೆ. ಆದರೆ, ಸಾರ್ವಜನಿಕರ ಆಸ್ತಿಯಾದ ಕೆರೆಯಂಗಳ, ರಾಜಕಾಲುವೆಯನ್ನೇ ನುಂಗಿ ಹಾಕಲು ಯತ್ನಿಸಿದ ಅಧಿಕಾರಿಗಳ ಈ ಬೇಜವಾಬ್ದಾರಿಯ ಹಿಂದೆ ರಿಯಲ್ ಎಸ್ಟೇಟ್ ಕುಳಗಳ ಪ್ರಭಾವ ಇರುವುದು ಮೇಲ್ನೋಟಕ್ಕೆ ಸ್ಪಷ್ಟವಾಗುತ್ತಿದ್ದು, ತಪ್ಪಿತಸ್ಥ ಅಧಿಕಾರಿಗಳ ವಿರುದ್ಧ ತಕ್ಷಣವೇ ಕ್ರಿಮಿನಲ್ ಪ್ರಕರಣ ದಾಖಲಿಸಿ ಶಿಸ್ತುಕ್ರಮ ಕೈಗೊಳ್ಳಬೇಕು ಎಂಬ ಆಕ್ರೋಶ ಸಾರ್ವಜನಿಕ ವಲಯದಲ್ಲಿ ಕೇಳಿಬಂದಿದೆ.

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.

Loading...
Unable to load recommendations.
Follow Us