ಚಿಕ್ಕಬಳ್ಳಾಪುರ: ಹೆತ್ತವರು ಕಾಲು ಹಿಡಿದರೂ ಪ್ರಿಯಕರನನ್ನು ಬಿಡದ ಮಗಳು, ಮದುವೆ ಬಳಿಕ ಎಸ್​ಪಿ ಕಚೇರಿಯಲ್ಲೇ ಒಂದಾದ ಪ್ರೇಮಿಗಳು!

ಜಾತಿ ಭೇದ ಮತ್ತು ಪೋಷಕರ ವಿರೋಧದ ನಡುವೆ ಯುವತಿಯೊಬ್ಬಳು ಇನ್‌ಸ್ಟಾಗ್ರಾಮ್‌ ಪರಿಚಯದ ಪ್ರಿಯಕರನನ್ನು ಮದುವೆಯಾಗಿ, ನಂತರ ರಕ್ಷಣೆ ಕೋರಿ ಎಸ್‌ಪಿ ಕಚೇರಿಗೆ ಬಂದ ವಿದ್ಯಮಾನ ಚಿಕ್ಕಬಳ್ಳಾಪುರದಲ್ಲಿ ನಡೆದಿದೆ. ಪೋಷಕರು ಪೊಲೀಸ್ ಠಾಣೆಗೆ ಬಂದು ಕಾಲು ಹಿಡಿದರೂ ಯುವತಿ ಪ್ರಿಯಕರನ ಜೊತೆ ತೆರಳಿದ್ದಾಳೆ. ಚಿಕ್ಕಬಳ್ಳಾಪುರ ಪೊಲೀಸ್ ಠಾಣೆ ಹೈಡ್ರಾಮಾಕ್ಕೆ ಸಾಕ್ಷಿಯಾಗಿದೆ.

ಚಿಕ್ಕಬಳ್ಳಾಪುರ: ಹೆತ್ತವರು ಕಾಲು ಹಿಡಿದರೂ ಪ್ರಿಯಕರನನ್ನು ಬಿಡದ ಮಗಳು, ಮದುವೆ ಬಳಿಕ ಎಸ್​ಪಿ ಕಚೇರಿಯಲ್ಲೇ ಒಂದಾದ ಪ್ರೇಮಿಗಳು!
ಚಿಕ್ಕಬಳ್ಳಾಪುರ: ಮದುವೆ ಬಳಿಕ ಎಸ್​ಪಿ ಕಚೇರಿಯಲ್ಲೇ ಒಂದಾದ ಪ್ರೇಮಿಗಳು
Updated By: Ganapathi Sharma

Updated on: Nov 28, 2025 | 7:19 AM

ಚಿಕ್ಕಬಳ್ಳಾಪುರ, ನವೆಂಬರ್ 28: ಜಾತಿ ಭೇದ ಮತ್ತು ಕುಟುಂಬದ ವಿರೋಧಗಳ ನಡುವೆಯೂ 19 ವರ್ಷದ ವಿದ್ಯಾರ್ಥಿನಿ ಪ್ರಿಯಕರನೊಂದಿಗೆ ದೇವಾಲಯದಲ್ಲೇ ಮದುವೆಯಾಗಿ, ನಂತರ ನೇರವಾಗಿ ಚಿಕ್ಕಬಳ್ಳಾಪುರ (Chikkaballapur) ಎಸ್‌ಪಿ ಕಚೇರಿಗೆ ಭೇಟಿ ನೀಡಿ ರಕ್ಷಣೆ ಕೇಳಿದ ವಿದ್ಯಮಾನ ನಡೆದಿದೆ. ವಿಷಯ ಗೊತ್ತಾಗಿ ಚಿಕ್ಕಬಳ್ಳಾಪುರ ಠಾಣೆಗೆ ಬಂದ ಯುವತಿಯ ಹೆತ್ತವರು ಪರಿಪರಿಯಾಗಿ ಆಕೆಯ ಕಾಲು ಹಿಡಿದು ಬೇಡಿದರೂ ಅವರ ಜತೆಗೆ ಹೋಗದೆ ಪ್ರಿಯಕರನ ಜತೆಯೇ ಆಕೆ ತೆರಳಿದ್ದಾರೆ. ಇದರಿಂದಾಗಿ ಚಿಕ್ಕಬಳ್ಳಾಪುರ ಠಾಣೆಯಲ್ಲಿ ಹೈಡ್ರಾಮಾವೇ ನಡೆದಿದೆ.

ಇನ್​ಸ್ಟಾಗ್ರಾಂನಲ್ಲಿ ಹುಟ್ಟಿದ ಪ್ರೀತಿ!

ಹೊಸಕೋಟೆ ತಾಲೂಕಿನ ಚೀಮಂಡಹಳ್ಳಿ ಮೂಲದ ಜಯಶ್ರೀ ಎಂ ಬೆಂಗಳೂರಿನ ಪ್ರತಿಷ್ಠಿತ ಖಾಸಗಿ ಕಾಲೇಜಿನಲ್ಲಿ ಪ್ರಥಮ ವರ್ಷದ ಪದವಿ ವ್ಯಾಸಂಗ ಮಾಡುತ್ತಿದ್ದಾಳೆ. ಚಿಕ್ಕಬಳ್ಳಾಪುರ ಜಿಲ್ಲೆಯ ಬಂಡಹಳ್ಳಿ ನಿವಾಸಿ ಅನಿಲ್ ಕುಮಾರ್, ಸಣ್ಣಪುಟ್ಟ ಕೆಲಸಗಳನ್ನು ಮಾಡಿಕೊಂಡು ಬದುಕುತ್ತಿರುವ ಯುವಕ. ಹೊಸಕೋಟೆಗೆ ಆಗಾಗ್ಗೆ ಹೋಗಿ ಬರುತ್ತಿದ್ದ ಅವನನ್ನು ಜಯಶ್ರೀ ನೋಡಿದ್ದಾಳೆ. ನಂತರ ಇವರಿಬ್ಬರ ನಡುವೆ ಪರಿಚಯವಾಗಿದೆ. ಬಳಿಕ ಇನ್​ಸ್ಟಾಗ್ರಾಂನಲ್ಲಿ ಸ್ನೇಹಿತರಾಗಿ, ಸ್ನೇಹ ಪ್ರೀತಿಗೆ ತಿರುಗಿದೆ.

ಪ್ರೇಮದ ಮಾಹಿತಿ ತಿಳಿದ ವಿದ್ಯಾರ್ಥಿನಿಯ ಮನೆಯಲ್ಲಿ ಮದುವೆಗೆ ಒತ್ತಾಯ ಮಾಡಿದ್ದಾರೆ. ಆಕೆಗೆ ಬೇರೆ ಹುಡುಗನನ್ನು ನೋಡಿ ಮದುವೆ ಮಾಡಿಸುವ ಯತ್ನ ನಡೆದಿದೆ. ಆದರೆ, ಜಯಶ್ರೀ ತೀವ್ರ ವಿರೋಧ ವ್ಯಕ್ತಪಡಿಸಿ, ಮನೆಯವರಿಗೆ ಯಾವುದೇ ಮಾಹಿತಿಯನ್ನೂ ತಿಳಿಸದೆ ನೇರವಾಗಿ ಪ್ರಿಯಕರನ ಮನೆಗೆ ಹೋಗಿ ಅಲ್ಲಿ ಆಶ್ರಯ ಪಡೆದಿದ್ದಾಳೆ. ನಂತರ ಇಬ್ಬರೂ ಹತ್ತಿರದ ದೇವಸ್ಥಾನದಲ್ಲಿ ಮದುವೆ ಮಾಡಿಕೊಂಡಿದ್ದಾರೆ.

ಮಗಳು ನಾಪತ್ತೆಯಾಗಿದ್ದಾಳೆಂದು ದೂರು ನೀಡಿದ ಪೋಷಕರು

ಮಗಳು ಕಾಣೆಯಾದ ಹಿನ್ನೆಲೆಯಲ್ಲಿ ಜಯಶ್ರೀಯ ಪೋಷಕರು ಹೊಸಕೋಟೆ ಪೊಲೀಸ್ ಠಾಣೆಯಲ್ಲಿ ಮಿಸ್ಸಿಂಗ್ ದೂರು ದಾಖಲಿಸಿದ್ದರು. ಇದೇ ವೇಳೆ ಮದುವೆ ಮಾಡಿಕೊಂಡಿದ್ದ ಜೋಡಿ ಹನಿಮೂನ್‌ಗೆ ಹೋಗಿಬಂದು, ನಂತರ ತನ್ನ ಜೀವ ಭಯವಿದೆ ಎಂದು ಹೇಳಿ ಚಿಕ್ಕಬಳ್ಳಾಪುರ ಎಸ್‌ಪಿ ಕುಶಲ್ ಚೌಕ್ಸೆ ಬಳಿ ರಕ್ಷಣೆ ಕೋರಿದ್ದಾರೆ. ಅಷ್ಟರಲ್ಲಿ, ಚಿಕ್ಕಬಳ್ಳಾಪುರ ಪೊಲೀಸರು ಹೊಸಕೋಟೆ ಪೊಲೀಸ್ ಠಾಣೆಗೆ ಮಾಹಿತಿ ರವಾನಿಸಿದ್ದಾರೆ.

ಚಿಕ್ಕಬಳ್ಳಾಪುರ ಎಸ್ಪಿ ಕಚೇರಿಯಲ್ಲೇ ಡ್ರಾಮಾ: ಪೋಷಕರ ಕಣ್ಣೀರು

ಮಗಳು ಚಿಕ್ಕಬಳ್ಳಾಪುರ ಪೊಲೀಸ್ ಠಾಣೆಯಲ್ಲಿರುವ ಮಾಹಿತಿ ತಿಳಿದ ತಕ್ಷಣ ಜಯಶ್ರೀಯ ಪೋಷಕರು ಕೂಡ ಎಸ್‌ಪಿ ಕಚೇರಿಗೆ ಆಗಮಿಸಿದ್ದಾರೆ. ಮಗಳನ್ನು ಮನೆಗೆ ಕರೆದುಕೊಂಡು ಹೋಗಲು ಪರಿ–ಪರಿಯಾಗಿ ಬೇಡಿಕೊಂಡಿದ್ದಾರೆ. ‘‘ಮಗಳೇ, ವಾಪಸ್ ಬಾ, ನಾವೇ ನಿನಗಾಗಿ ಮದುವೆ ಮಾಡುತ್ತೇವೆ’’ ಎಂದು ಕಾಲು ಹಿಡಿದು ವಿನಂತಿಸಿದ್ದಾರೆ. ಆದರೆ ಜಯಶ್ರೀ, ‘‘ನಾನು ವಯಸ್ಕಳು, ನನ್ನ ಇಚ್ಛೆಯಂತೆ ನಾನು ಪ್ರೀತಿಸಿದವನ ಜೊತೆ ಹೋಗುತ್ತೇನೆ’’ ಎಂದು ಖಂಡತುಂಡವಾಗಿ ಹೇಳಿದ್ದಾಳೆ. ನಂತರ ಪೋಷಕರನ್ನು ಕಡೆಗಣಿಸಿ, ಅನಿಲ್ ಜೊತೆ ಹೊರಟು ಹೋಗಿದ್ದಾಳೆ. ಅನಿಲ್ ಕೂಡ ತನ್ನ ಜೀವಕ್ಕೆ ಅಪಾಯವಿದೆ ಎಂದು ಪೊಲೀಸರಿಗೆ ತಿಳಿಸಿದ್ದು, ರಕ್ಷಣೆಗಾಗಿ ಮನವಿ ಮಾಡಿದ್ದಾನೆ.

ಇದನ್ನೂ ಓದಿ: ಕುಡಿದ ಮತ್ತಿನಲ್ಲಿ ಪ್ರೇಯಸಿಯನ್ನು ಕೊಂದು, ಆಕೆಯ ಶವವನ್ನು ಕಾರಲ್ಲೇ ಬಿಟ್ಟು ಮಲಗಿದ ಆಸಾಮಿ!

ಒಟ್ಟಿನಲ್ಲಿ, ಜಾತಿ ಭೇದದಿಂದ ಮಗಳ ಪ್ರೀತಿಸಿದವನನ್ನು ಒಪ್ಪದ ಕುಟುಂಬದವರು ಬೇರೆ ಮದುವೆ ಮಾಡಲು ಮುಂದಾದ ಕಾರಣ ಆಕೆ ಮನೆಬಿಟ್ಟು ಹೋಗಿ ಪ್ರೀತಿಸಿದವನ ಮದುವೆಯಾಗುವಂತಾಗಿದೆ. ಪೋಷಕರು ಕಣ್ಣೀರಿನಲ್ಲಿ ಕೈತೊಳೆಯುವಂತಾಗಿದೆ.

ಕರ್ನಾಟಕದ ಇನ್ನಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ