ಚಿಕ್ಕಬಳ್ಳಾಪುರ : ಕೊರೊನಾ ಲಸಿಕೆ ತೆಗೆದುಕೊಳ್ಳದೇ ಇರುವವರಿಗೆ ಪಡಿತರ ನಿಲ್ಲಿಸಿ ಎಂದು ಚಿಕ್ಕಬಳ್ಳಾಪುರ ಜಿಲ್ಲೆಯ ಚಿಂತಾಮಣಿ ತಹಶೀಲ್ದಾರ್ ಹನುಮಂತರಾಯಪ್ಪ ಆದೇಶ ಮಾಡಿದ್ದಾರೆ. ಲಸಿಕೆ ಪಡೆಯದಿದ್ದರೆ ಪಡಿತರ ನಿಲ್ಲಿಸಿ ಎನ್ನುವ ಆದೇಶ ಇಡೀ ರಾಜ್ಯದಲ್ಲಿ ಇದೇ ಮೊದಲು ಎನ್ನಲಾಗಿದ್ದು, ತಹಶೀಲ್ದಾರ್ ಅವರ ಈ ಆದೇಶ ಪಡಿತರದಾರಿಗೆ ಗಾಬರಿಯನ್ನ ಉಂಟು ಮಾಡಿ, ಸಾರ್ವಜನಿಕ ವಲಯದಲ್ಲಿ ಪರ ವಿರೋಧದ ಚರ್ಚೆಗೆ ಗ್ರಾಸವಾಗಿದೆ.
ಪ್ರಜ್ಞಾವಂತರ ವಲಯದಲ್ಲಿ ಈ ಬಗ್ಗೆ ಚರ್ಚೆ ಶುರುವಾಗಿದ್ದು ಸಾರ್ವಜನಿಕರ ಮನವೊಲಿಸಿ ಸ್ವಯಂಪ್ರೇರಣೆಯಿಂದ ಲಸಿಕೆ ಹಾಕಿಸಿಕೊಳ್ಳುವಂತೆ ಮಾಡುವಲ್ಲಿ ವಿಫಲವಾಗಿರುವ ಜಿಲ್ಲಾಡಳಿತ ತಮ್ಮ ಲೋಪ ದೋಷಗಳನ್ನು ಮುಚ್ಚಿಕೊಳ್ಳಲು ಪಡಿತರ ನಿಲ್ಲಿಸುವ ಬೆದರಿಕೆಯೊಡ್ಡುವ ಮೂಲಕ ಲಸಿಕೆ ಮೊರೆ ಹೋಗಿರುವುದು ಸರಿಯಲ್ಲ ಎನ್ನುತ್ತಿದ್ದಾರೆ.
ಇದಕ್ಕೆ ತದ್ವಿರುದ್ಧವಾಗಿ ಮತ್ತೊಂದು ಗುಂಪು ಕೊರೊನಾ ಲಸಿಕೆ ಹಾಕಿಸಿಕೊಳ್ಳಿ ಎಂದರೂ ಹಾಕಿಕೊಳ್ಳದ ಜನಕ್ಕೆ ಈ ರೀತಿಯಲ್ಲದೆ ಬೇರೆ ಇನ್ಯಾವ ರೀತಿಯಲ್ಲಿ ತಿಳಿಹೇಳಲು ಸಾಧ್ಯ. ತಹಶೀಲ್ದಾರ್ ಸರಿಯಾಗಿಯೇ ಹೇಳಿದ್ದಾರೆ. ಕೆಟ್ಟ ಮೇಲೆ ಬುದ್ದಿ ಬಂತು ಎನ್ನುವ ನಾಣ್ಣುಡಿಯಂತೆ ಗ್ರಾಮೀಣ ಪ್ರದೇಶದ ಜನ ಈಗಲಾದರೂ ಲಸಿಕೆ ಹಾಕಿಸಿಕೊಳ್ಳಲು ಮುಂದಾದರೆ ಮೂರನೇ ಅಲೆಯಿಂದ ಜೀವ ಉಳಿಸಿಕೊಳ್ಳಲು ನೆರವಾಗುತ್ತದೆ ಎಂದು ವಾದಿಸಿದ್ದಾರೆ.
ತಹಶೀಲ್ದಾರ್ ಹೊರಡಿಸಿದ ಆದೇಶದಲ್ಲಿ ಏನಿದೆ?
ತಾಲ್ಲೂಕು ನ್ಯಾಯಬೆಲೆ ಅಂಗಡಿ ಮಾಲೀಕರ ಸಭೆಯಲ್ಲಿ ತೆಗೆದುಕೊಂಡ ತೀರ್ಮಾನದಂತೆ ಆಗಸ್ಟ್ ಮತ್ತು ಸೆಪ್ಟಂಬರ್ ತಿಂಗಳಲ್ಲಿ ಕೊವಿಡ್ ವ್ಯಾಕ್ಸಿನ್ ಪಡೆಯದವರಿಗೆ ಪಡಿತರ ವಿತರಣೆ ನಿಲ್ಲಿಸುವ ಬಗ್ಗೆ ಆದೇಶ ಪತ್ರದಲ್ಲಿ ತಿಳಿಸಲಾಗಿದೆ.
1. ಈ ಸಂಬಂಧ ನ್ಯಾಯಬೆಲೆ ಅಂಗಡಿಯ ವ್ಯಾಪ್ತಿಯಲ್ಲಿ ಕೊರೊನಾ ಲಸಿಕೆ ಖಾತರಿ ಬಗ್ಗೆ ಡಂಗೂರ ಸಾರಿಸಿ ಪ್ರಚಾರ ಮಾಡಿಸಬೇಕು.
2. ಆಗಸ್ಟ್ ಮತ್ತು ಸೆಪ್ಟಂಬರ್ ತಿಂಗಳ ಪಡಿತರ ಪಡೆಯಬೇಕಾದರೆ ಮೊದಲ ಅಥವಾ ಸಮಯ ಆಗಿದ್ದರೆ ಎರಡನೇ ಡೋಸ್ ಪಡೆದ ಬಗ್ಗೆ ಪ್ರಮಾಣ ಪತ್ರ ತಂದು ತೋರಿಸಬೇಕು.
3. ಎರಡನೇ ಡೋಸ್ ಪಡೆಯಲು ಇನ್ನೂ ಕಾಲಾವಕಾಶವಿದೆಯೇ ಅಥವಾ ಇಲ್ಲವೆ? ಎಂಬ ಬಗ್ಗೆ ಪರಿಶೀಲಿಸಬೇಕು. ಅವಧಿ ಮೀರಿದ್ದಲ್ಲಿ ಲಸಿಕೆ ಪಡೆದ ನಂತರವಷ್ಟೇ ಪಡಿತರ ವಿತರಿಸಲು ಕ್ರಮ ತೆಗೆದುಕೊಳ್ಳಬೇಕು.
4. ವ್ಯಾಕ್ಸಿನ್ ಪಡೆದಿರುವ ಪ್ರಮಾಣ ಪತ್ರವನ್ನು ಪ್ರಾಥಮಿಕ ಆರೋಗ್ಯ ಕೇಂದ್ರದಿಂದ ಪಡೆದು ತರಲು ತಿಳಿಸಬೇಕು.
5. 2 ನೇ ಡೋಸ್ ಲಸಿಕೆ ಪಡೆದ ಬಗ್ಗೆ ಮೊಬೈಲ್ ಸಂದೇಶ ಪರಿಶೀಲಿಸಿ ಪರಿಗಣಿಸುವುದು.
6. ಲಸಿಕೆ ಪಡೆಯದವರ ಮಾಹಿತಿಯನ್ನ ಆಶಾಕಾರ್ಯಕರ್ತೆಯರಿದಿಂದ ಪಡೆದುಕೊಳ್ಳುವುದು.
7. ಕೊರೊನಾ ಲಸಿಕೆ ಪಡೆಯದವರಿಗೆ ಪಡಿತರ ವಿತರಿಸುವುದಿಲ್ಲ ಎಂಬ ಬಗ್ಗೆ ಸೂಚನಾ ಫಲಕದಲ್ಲಿ ಪ್ರಕಟಿಸಬೇಕು ಎಂದು ತಿಳಿಸಲಾಗಿದೆ.
ಈ ಬಗ್ಗೆ ಮಾತನಾಡಿದ ತಹಶೀಲ್ದಾರ್ ಹನುಮಂತರಾಯಪ್ಪ, ನಾನು ಪಡಿತರ ನಿಲ್ಲಿಸಿ ಎಂದು ಹೇಳಿಲ್ಲ. ಮೊದಲ ಹಂತದ ಲಸಿಕೆ ಅಭಿಯಾನದಲ್ಲಿ ತಾಲ್ಲೂಕು ಮೊದಲ ಸ್ಥಾನದಲ್ಲಿತ್ತು. ಈ ಬಾರಿಯೂ ಕೂಡ ಅದೇ ಸ್ಥಾನ ಪಡೆಯುವ ಹಂಬಲದಲ್ಲಿ ಹೀಗೆ ಹೇಳಿದ್ದೇನೆ. ತಾಲೂಕಿನಲ್ಲಿ ಮೊದಲ ಡೋಸ್ ಲಸಿಕೆ ಪಡೆದವರು ಶೇ. 60 ರಷ್ಟಿದ್ದರೆ ಎರಡನೇ ಡೋಸ್ ಲಸಿಕೆ ಪಡೆದವರು ಶೇ 4೦ ರಷ್ಟಿದ್ದಾರೆ. ಕೊರೋನಾ ಸಂಪೂರ್ಣವಾಗಿ ದೂರವಾಗಿಲ್ಲದಿದ್ದರೂ ಜನತೆ ಮುಖಗವಸು ಧರಿಸದೆ, ದೈಹಿಕ ಅಂತರ ಕಾಪಾಡದೆ ಬೇಕಾಬಿಟ್ಟಿ ಓಡಾಡುತ್ತಾರೆ. ದಂಡವನ್ನು ವಿಧಿಸಿದರೂ ಎಚ್ಚರಿಕೆ ವಹಿಸುತ್ತಿಲ್ಲ. ಹೀಗಾಗಿ ಅವರಿಗೆ ಅರಿವು ಮೂಡಿಸುವ ಉದ್ದೇಶದಿಂದ ಹೇಳಿದ್ದೇನೆ ವಿನಃ ಪಡಿತರವನ್ನ ಖಡಾಖಂಡಿತವಾಗಿ ನಿಲ್ಲಿಸಿಲ್ಲ, ವಿತರಣೆ ಮಾಡಲಾಗುತ್ತಿದೆ ಅಂತ ತಿಳಿಸಿದ್ದಾರೆ.
ಇದೇ ವಿಚಾರವಾಗಿ ಮಾತನಾಡಿರುವ ಜಿಲ್ಲಾ ಆಹಾರ ಪೂರೈಕೆ ನಾಗರೀಕ ಸರಬರಾಜು ಇಲಾಖೆ ಉಪನಿದೇರ್ಶಕಿ ಸವಿತಾ, ಜನತೆ ಲಸಿಕೆ ಪಡೆಯಲಿ ಎನ್ನುವ ಒಳ್ಳೆಯ ಸದುದ್ದೇಶದಿಂದ ಈ ರೀತಿ ಜ್ಞಾಪನಾ ಪತ್ರ ಹೊರಡಿಸಿದೆ ವಿನಃ ದುರುದ್ದೇಶದಿಂದ ಆದೇಶ ಮಾಡಿಲ್ಲ ಎಂದಿದ್ದಾರೆ.
ಪಡಿತರ ಯಾಕೆ ನಿಲ್ಲಿಸಬಾರದು?
ಪಡಿತರ ಪಡೆಯುವುದು ಪ್ರತಿಯೊಬ್ಬ ನಾಗರೀಕರ ಹಕ್ಕಾಗಿದ್ದು ನಿಲ್ಲಿಸಲು ಬರುವುದಿಲ್ಲ .ಏಕೆಂದರೆ ರಾಷ್ಟ್ರೀಯ ಆಹಾರ ಭದ್ರತಾ ಕಾಯ್ದೆಯ ಅಡಿಯಲ್ಲಿ ಉಚಿತ ಪಡಿತರ ವಿತರಣೆ ಆಗುತ್ತಿರುವುದರಿಂದ ಯಾವುದೇ ಕಾರಣಕ್ಕೂ ಆಹಾರವನ್ನು ನಿಲ್ಲಿಸಲು ಬರುವುದಿಲ್ಲ.
ಇದನ್ನೂ ಓದಿ:
Covid-19: ಕೋವಿಶೀಲ್ಡ್ ಲಸಿಕೆಯ ಡೋಸ್ಗಳ ನಡುವೆ ಅಂತರ ತಗ್ಗಿಸುವ ಪ್ರಸ್ತಾಪವಿಲ್ಲ; ಕೇಂದ್ರ ಸರ್ಕಾರ ಸ್ಪಷ್ಟನೆ
ರಾಯಚೂರು: ಕೊವಿಡ್ ಲಸಿಕೆ ನಿರಾಕರಿಸಿದವರಿಗೆ ಪಡಿತರ ಕಟ್!
(Chikkaballapur Tahsildar orders to stop Ration for people who do not take corona Vaccine)