ಮಗಳ ಮದುವೆ ಮಾಡಲು ದೇವಸ್ಥಾನದಲ್ಲಿನ ದೇವಿಯ ಚಿನ್ನಾಭರಣಗಳನ್ನು ಕದ್ದ ತಾಯಿ

ಚಿಕ್ಕಬಳ್ಳಾಪುರದ ಶಿಡ್ಲಘಟ್ಟ ತಾಲೂಕಿನ ಚೌಡೇಶ್ವರಿ ದೇವಾಲಯದ ಆಭರಣಗಳ ಕಳ್ಳತನ ಪ್ರಕರಣದಲ್ಲಿ ಅಚ್ಚರಿ ಅಂಶ ಬಯಲಾಗಿದೆ. ಮಗಳ ಮದುವೆ ಖರ್ಚಿಗಾಗಿ ತಾಯಿ ಕಳ್ಳತನದ ಹಾದಿ ಹಿಡಿದ್ದಾಳೆ. ಲತಾಳ ಮಗಳ ಪ್ರಿಯಕರ ಕೂಡ ಈ ಪ್ರಕರಣದಲ್ಲಿ ಭಾಗಿಯಾಗಿದ್ದಾನೆ. ಪೊಲೀಸರು ಆರೋಪಿಗಳನ್ನು ಬಂಧಿಸಿ ಆಭರಣಗಳನ್ನು ವಶಪಡಿಸಿಕೊಂಡಿದ್ದಾರೆ.

ಮಗಳ ಮದುವೆ ಮಾಡಲು  ದೇವಸ್ಥಾನದಲ್ಲಿನ ದೇವಿಯ ಚಿನ್ನಾಭರಣಗಳನ್ನು ಕದ್ದ ತಾಯಿ
ದೇವಿಯ ಚಿನ್ನಾಭರಣ ಕದ್ದ ಆರೋಪಿಗಳು
Edited By:

Updated on: Aug 04, 2025 | 9:38 PM

ಚಿಕ್ಕಬಳ್ಳಾಪುರ, ಆಗಸ್ಟ್​ 04: ಚಿಕ್ಕಬಳ್ಳಾಪುರ (Chikkaballapur) ಜಿಲ್ಲೆಯ ಶಿಡ್ಲಘಟ್ಟ ತಾಲೂಕಿನ ಹಿರಿಯಲಚೇನಹಳ್ಳಿ ಗ್ರಾಮದಲ್ಲಿ ಚೌಡೇಶ್ವರಿ ದೇವಾಲಯವಿದೆ. ಈ ದೇವಾಲಯದಲ್ಲಿ ಜುಲೈ 23 ರಂದು ಚೌಡೇಶ್ವರಿ ದೇವಿಗೆ ಸೇರಿದ ಬೆಳ್ಳಿ ಮುಖವಾಡ, ಮೂಗುತಿ, ಮಾಂಗಲ್ಯದ ಬೊಟ್ಟಗಳು, ಕಾಲು ಚೈನುಗಳು ಸೇರಿದಂತೆ ಆಭರಣಗಳನ್ನು ಕಳ್ಳತನ ಮಾಡಲಾಗಿತ್ತು. ಕಳ್ಳತನಕ್ಕೆ ಸಂಬಂಧಿಸಿದಂತೆ ದಿಬ್ಬೂರಹಳ್ಳಿ ಠಾಣೆ ಪೊಲೀಸರು ಪ್ರಕರಣ ದಾಕಲಿಸಿಕೊಂಡು ತನಿಖೆ ನಡೆಸಿದ್ದು, ಅಚ್ಚರಿ ಅಂಶ ಬಯಲಾಗಿದೆ.

ದೇವನಹಳ್ಳಿ ತಾಲೂಕಿನ ವಿಜಯಪುರ ಮೂಲದ ಲತಾ ಎಂಬುವರು ಮಗಳ ಮದುವೆಯ ಖರ್ಚು ವೆಚ್ಚಕ್ಕಾಗಿ ದೇವಿಯ ಚಿನ್ನಾಭರಣಗಳನ್ನು ಕಳ್ಳತನ ಮಾಡಿದ್ದು ಬಯಲಾಗಿದೆ. ಲತಾಗೆ ಐದು ಜನ ಮಕ್ಕಳು. ನಾಲ್ವರು ಹೆಣ್ಣುಮಕ್ಕಳು ಮತ್ತು ಓರ್ವ ಗಂಡುಮಗ ಇದ್ದಾನೆ. ಮಕ್ಕಳು ಮದುವೆ ವಯಸ್ಸಿಗೆ ಬಂದಿದ್ದಾರೆ. ಲತಾ ತನ್ನ ಎರಡನೇ ಮಗಳ ಮದುವೆಗಾಗಿ ಕಳ್ಳತನದ ದಾರಿ ಹಿಡಿದ್ದಾಳೆ. ಲತಾ ತನ್ನ ಮೂರನೇ ಮಗಳ ಪ್ರಿಯಕರ ಚಿಕ್ಕಬಳ್ಳಾಪುರ ತಾಲೂಕಿನ ಕೇಶವಾರ ಗ್ರಾಮದ ನವೀನ್ ಕುಮಾರ್ ಜೊತೆ ಸೇರಿಕೊಂಡು ಕಳ್ಳತನದ ಪ್ಲಾನ್​ ಮಾಡಿದ್ದಾಳೆ.

ನಂತರ, ಆರೋಪಿಗಳು ಚೌಡೇಶ್ವರಿ ದೇವಾಲಯದ ಅರ್ಚಕ ಚಿಕ್ಕಮಲ್ಲೇಶಪ್ಪನಿಗೆ ಗಾಳ ಹಾಕಿದ್ದಾರೆ. ಚೌಡೇಶ್ವರಿ ದೇವಿಯ ಅರ್ಚಕ ಚಿಕ್ಕಮಲ್ಲೇಶಪ್ಪ ಮದ್ಯ ವಸನಿಯಾಗಿದ್ದು, ಆತನಿಗೆ ಹಣದ ಆಮಿಷ ಒಡ್ಡಿ ದೇವಸ್ಥಾನದಲ್ಲಿದ್ದ ಎಲ್ಲ ಬೆಳ್ಳಿ ಚಿನ್ನದ ಆಭರಣಗಳನ್ನು ಕಳ್ಳತನ ಮಾಡಿದ್ದಾರೆ.

ಇದನ್ನೂ ಓದಿ: ಮದ್ವೆಯಾಗಲು ನಿರಾಕರಿಸಿದ ಸೊಸೆ ಮೇಲೆ ಆ್ಯಸಿಡ್ ಎರಚಿ ತಾನೂ ಆತ್ಮಹತ್ಯೆಗೆ ಯತ್ನಿಸಿದ ಸೋದರ ಮಾವ‌

ಚೌಡೇಶ್ವರಿ ದೇವಿಯ ಮುಖವಾಡ, ಮೂಗುತಿ, ಮಾಂಗಲ್ಯದ ಬೊಟ್ಟಗಳು, ಕಾಲು ಚೈನುಗಳು ಸೇರಿದಂತೆ ವಿವಿಧ ಆಭರಣಗಳನ್ನು ಕಳ್ಳತನ ಮಾಡಿದ್ದಾರೆ. ಕಳ್ಳತನ ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸಿದ ದಿಬ್ಬೂರಹಳ್ಳಿ ಠಾಣೆ ಪೊಲೀಸರು ದೇವಸ್ಥಾನದ ಅರ್ಚಕನ ಚಿಕ್ಕಮಲ್ಲೇಶಪ್ಪನನ್ನು ವಿಚಾರಣೆಗೆ ಒಳಪಡಿಸಿದಾಗ ಸತ್ಯ ಬಾಯಿಬಿಟ್ಟಿದ್ದಾನೆ. ತಾನೂ ಕೂಡ ಕಳ್ಳತನದಲ್ಲಿ ಭಾಗಿಯಾಗಿದ್ದಾಗಿ ಒಪ್ಪಿಕೊಂಡಿದ್ದಾನೆ. ಪೊಲೀಸರು ಉಳಿದ ಆರೋಪಿಗಳನ್ನು ಬಂಧಿಸಿ ಕಳ್ಳತನದ ಮಾಲನ್ನು ಜಪ್ತಿ ಮಾಡಿದ್ದಾರೆ.

ಒಟ್ಟಿನಲ್ಲಿ ಮಗಳ ಮದುವೆಯ ಖರ್ಚು ವೆಚ್ಚ ಸರಿದೂಗಿಸಲು ಅಡ್ಡದಾರಿ ಹಿಡಿದ ಲತಾ, ಈಕೆಗೆ ಸಾಥ್ ನೀಡಿದ ಅರ್ಚಕ ಚಿಕ್ಕಮಲ್ಲೇಶಪ್ಪ, ಆರೋಪಿ ಲತಾ ಮಗಳ ಪ್ರೇಮಿ ನವೀನ್ ಕುಮಾರ್ ಈಗ ಪೊಲೀಸರ ಅತಿಥಿಯಾಗಿದ್ದಾರೆ.

ಕರ್ನಾಟಕದ ಇನ್ನಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 9:37 pm, Mon, 4 August 25