ಆಂಧ್ರದಲ್ಲಿ ಭೀಕರ ಅಪಘಾತ: ತಿಮ್ಮಪ್ಪನ ದರ್ಶನಕ್ಕೆ ಹೋಗಿ ಬರುತ್ತಿದ್ದ ಚಿಕ್ಕಬಳ್ಳಾಪುರದ ಮೂವರು ಸಾವು
ತಿರುಪತಿ ತಿಮ್ಮಪ್ಪನ ದರ್ಶನ ಪಡೆದುಕೊಂಡು ವಾಪಸ್ ಬರುತ್ತಿದ್ದ ವೇಳೆ ಟಿಟಿ ವಾಹನವೊಂದು ಆಂಧ್ರಪ್ರದೇಶದ ಚಿತ್ತೂರು ಜಿಲ್ಲೆಯ ಮದನಪಲ್ಲಿ ಬಳಿ ಅಪಘಾತಕ್ಕೀಡಾದ ಘಟನೆ ಸಂಭವಿಸಿದೆ. ಅಪಘಾತದಲ್ಲಿ ಚಿಕ್ಕಬಳ್ಳಾಪುರ ಜಿಲ್ಲೆಯ ಮೂವರು ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ. ಎಂಟು ಜನರು ಗಾಯಗೊಂಡಿದ್ದಾರೆ. ಅಪಘಾತಕ್ಕೆ ನಿಖರ ಮಾಹಿತಿ ತಿಳಿದುಬಂದಿಲ್ಲ.

ಚಿಕ್ಕಬಳ್ಳಾಪುರ, ಜೂನ್ 30: ತಿಮ್ಮಪ್ಪನ ದರ್ಶನಕ್ಕೆ ಹೋಗಿ ಹಿಂದಿರುಗುತ್ತಿದ್ದಾಗ ಆಂಧ್ರದ ಚಿತ್ತೂರು ಜಿಲ್ಲೆಯ ಮದನಪಲ್ಲಿ ಬಳಿ ಭೀಕರ ಟಿಟಿ ವಾಹನ ಅಪಘಾತ (accident) ಸಂಭವಿಸಿರುವ ಘಟನೆ ನಡೆದಿದೆ. ಪರಿಣಾಮ ಕರ್ನಾಟಕದ ಮೂವರು ಸ್ಥಳದಲ್ಲೇ ದುರ್ಮರಣ (death) ಹೊಂದಿದ್ದಾರೆ. ಮೇಘರ್ಷ(17), ಚರಣ್(17) ಮತ್ತು ಶ್ರಾವಣಿ ಮೃತರು. 8 ಜನರಿಗೆ ಗಾಯಗಳಾಗಿವೆ. ಮೃತರನ್ನು ಜಿಲ್ಲೆಯ ಬಾಗೇಪಲ್ಲಿ ತಾಲೂಕಿನ ಹೊಸಹುಡ್ಯಾ ಗ್ರಾಮದವರು ಎಂದು ಗುರುತಿಸಲಾಗಿದೆ.
ಕುರಬಲಕೋಟ ಪೊಲೀಸರ ಪ್ರಕಾರ, ಮೃತರು ಮತ್ತು ಗಾಯಗೊಂಡವರನ್ನು ಕರ್ನಾಟಕದ ಚಿಕ್ಕಬಳ್ಳಾಪುರ ಜಿಲ್ಲೆಯ ಬಾಗೇಪಲ್ಲಿಯವರಾಗಿದ್ದು, ತಿಮ್ಮಪ್ಪನ ದರ್ಶನ ಪಡೆದು ಹಿಂದಿರುಗುತ್ತಿದ್ದರು. ಅವರು ಪ್ರಯಾಣಿಸುತ್ತಿದ್ದ ಟಿಟಿ ವಾಹನಕ್ಕೆ ಅಪರಿಚಿತ ವಾಹನ ಒಂದು ಡಿಕ್ಕಿ ಹೊಡೆದು ದುರಂತ ಸಂಭವಿಸಿದೆ. ತೀವ್ರ ಡಿಕ್ಕಿ ಹೊಡೆದ ಪರಿಣಾಮ ಮೂವರು ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ ಎಂದು ತಿಳಿಸಿದ್ದಾರೆ.
ಇದನ್ನೂ ಓದಿ: ಚಿಕ್ಕಬಳ್ಳಾಪುರ: ಲಂಡನ್ನಲ್ಲಿ ಕೆಲಸ ಕೊಡಿಸುವುದಾಗಿ ಕರೆದುಕೊಂಡು ಹೋಗಿ ಕೊಂದೆ ಬಿಟ್ಟರು
ಪೊಲೀಸರೊಂದಿಗೆ ಗ್ರಾಮಸ್ಥರು ಸ್ಥಳಕ್ಕೆ ಧಾವಿಸಿ ರಕ್ಷಣಾ ಕಾರ್ಯಾಚರಣೆ ನಡೆಸಿದರು. ಎಲ್ಲಾ ಗಾಯಾಳುಗಳನ್ನು ಮದನಪಲ್ಲಿಯ ಸರ್ಕಾರಿ ಜಿಲ್ಲಾಸ್ಪತ್ರೆಗೆ ಸ್ಥಳಾಂತರಿಸಿದ್ದಾರೆ. ಆರು ಮಂದಿ ಗಾಯಾಳುಗಳ ಸ್ಥಿತಿ ಗಂಭೀರವಾಗಿದೆ ಎಂದು ಕರ್ತವ್ಯ ನಿರತ ವೈದ್ಯರು ಪೊಲೀಸರಿಗೆ ಮಾಹಿತಿ ನೀಡಿದ್ದು, ಅವರನ್ನು ಬೆಂಗಳೂರಿನ ಕಾರ್ಪೊರೇಟ್ ಆಸ್ಪತ್ರೆಗೆ ಸ್ಥಳಾಂತರಿಸಲು ಕ್ರಮಕೈಗೊಳ್ಳಲಾಗಿದೆ.
ಅಪಘಾತದಲ್ಲಿ ಮೃತಪಟ್ಟವರಿಗೆ ಆಂಧ್ರ ಸಚಿವರಾದ ಬಿ.ಸಿ. ಜನಾರ್ದನ ರೆಡ್ಡಿ ಮತ್ತು ಮಂಡಿಪಲ್ಲಿ ರಾಮ್ ಪ್ರಸಾದ್ ರೆಡ್ಡಿ ಅವರು ಸಂತಾಪ ಸೂಚಿಸಿದ್ದಾರೆ. ಗಾಯಾಳುಗಳಿಗೆ ಅಗತ್ಯವಿರುವ ಎಲ್ಲಾ ವೈದ್ಯಕೀಯ ಸೌಲಭ್ಯ ಒದಗಿಸುವಂತೆ ಸಚಿವರು ಮದನಪಲ್ಲಿಯ ಆಸ್ಪತ್ರೆ ಅಧಿಕಾರಿಗಳಿಗೆ ಸೂಚನೆ ನೀಡಿದ್ದಾರೆ.
ದೇವಸ್ಥಾನಕ್ಕೆ ಹೋಗುತ್ತಿದ್ದ ಮಹಿಳೆ ಅಪಘಾತದಲ್ಲಿ ಬಲಿ
ದೇವಸ್ಥಾನಕ್ಕೆ ಹೋಗುತ್ತಿದ್ದ ಮಹಿಳೆ ಅಪಘಾತದಲ್ಲಿ ಸಾವನ್ನಪ್ಪಿರುವಂತಹ ಘಟನೆ ನಾಯಂಡಹಳ್ಳಿ ರಿಂಗ್ ರಸ್ತೆಯಲ್ಲಿ ನಡೆದಿದೆ. ಬಸವೇಶ್ವರ ನಗರ ಬಿಡಿಎ ನಿವಾಸಿ ರೇಣುಕಾ(52) ಮೃತ ಮಹಿಳೆ. ಖಾಸಗಿ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದರು.
ಇದನ್ನೂ ಓದಿ: ಬೆಂಗಳೂರಿನಲ್ಲಿ ಮಹಿಳೆಯ ಭಯಾನಕ ಕೊಲೆ: ಶವವನ್ನ ಮೂಟೆಕಟ್ಟಿ ಕಸದ ಲಾರಿಯಲ್ಲಿಟ್ಟು ಪರಾರಿ
ನಿನ್ನೆ ಮಗಳು ಮತ್ತು ಮೊಮ್ಮಗನ ಜೊತೆ ಬೈಕ್ನಲ್ಲಿ ಬಂಡೆ ಮಹಾಕಾಳಿ ದೇಗುಲಕ್ಕೆ ತೆರಳುವಾಗ ಘಟನೆ ಸಂಭವಿಸಿದೆ. ಮಗಳು ಕುಸುಮಾ ಬೈಕ್ ಓಡಿಸುತ್ತಿದ್ದರು. ನೈಸ್ ರಸ್ತೆ ಎಂಟ್ರಿ ಬಳಿ ಬೈಕ್ಗೆ ಹಿಂಬದಿಯಿಂದ ಸಿಮೆಂಟ್ ಲಾರಿ ಡಿಕ್ಕಿ ಹೊಡೆದಿದೆ.
ಮತ್ತಷ್ಟು ಮಾಹಿತಿ ಅಪ್ಡೇಟ್ ಆಗಲಿದೆ.
Published On - 11:25 am, Mon, 30 June 25