ಚಿಕ್ಕಬಳ್ಳಾಪುರದಲ್ಲಿ ನೈತಿಕ ಪೊಲೀಸ್ ಗಿರಿ: ಮುಸ್ಲಿಂ ಯುವತಿಯಿಂದ ದೂರು ದಾಖಲು, ಇಬ್ಬರು ಅರೆಸ್ಟ್

ಚಿಕ್ಕಬಳ್ಳಾಪುರದಲ್ಲಿ ಹಿಂದೂ ಯುವಕ ಮತ್ತು ಮುಸ್ಲಿಂ ಯುವತಿ ಹೊಟೇಲ್​ಗೆ ಹೋಗಿದ್ದಕ್ಕೆ ಮುಸ್ಲಿಂ ಯುವಕರ ತಂಡ ನೈತಿಕ ಪೊಲೀಸ್ ಗಿರಿ ನಡೆಸಿತ್ತು. ಘಟನೆ ಸಂಬಂಧ ನೊಂದ ಯುವತಿ ನೀಡಿದ ದೂರಿನ ಅನ್ವಯ ಪೊಲೀಸರು ಇಬ್ಬರು ಆರೋಪಿಗಳನ್ನು ಬಂಧಿಸಿದ್ದಾರೆ.

ಚಿಕ್ಕಬಳ್ಳಾಪುರದಲ್ಲಿ ನೈತಿಕ ಪೊಲೀಸ್ ಗಿರಿ: ಮುಸ್ಲಿಂ ಯುವತಿಯಿಂದ ದೂರು ದಾಖಲು, ಇಬ್ಬರು ಅರೆಸ್ಟ್
ನೈತಿಕ ಪೊಲೀಸ್ ಗಿರಿ ನಡೆಸಿದ ಯುವಕರನ್ನು ತರಾಟೆಗೆ ತೆಗೆದುಕೊಂಡ ಮುಸ್ಲಿಂ ಯುವತಿ (ಎಡ ಚಿತ್ರ) ಮತ್ತು ಹೊಟೇಲ್​ಗೆ ನುಗ್ಗಿ ಜೋಡಿಯನ್ನು ಪ್ರಶ್ನಿಸುತ್ತಿರುವ ಮುಸ್ಲಿಂ ಯುವಕ (ಬಲ ಚಿತ್ರ)
Follow us
Rakesh Nayak Manchi
| Updated By: ಆಯೇಷಾ ಬಾನು

Updated on:May 26, 2023 | 10:24 AM

ಚಿಕ್ಕಬಳ್ಳಾಪುರ: ನೈತಿಕ ಪೊಲೀಸ್ ಗಿರಿ (Moral Policing) ವಿರುದ್ಧ ಕಠಿಣ ಕ್ರಮ ಕೈಗೊಳ್ಳುವ ಬಗ್ಗೆ ಸಿಎಂ ಸಿದ್ದರಾಮಯ್ಯ (Siddaramaiah) ಅವರು ಎಚ್ಚರಿಕೆ ನೀಡಿದ ಬೆನ್ನಲ್ಲೇ ಚಿಕ್ಕಬಳ್ಳಾಪುರ (Chikkaballapur) ನಗರದ ಗೋಪಿಕಾ ಚಾಟ್ಸ್ ಬಳಿ ನಿನ್ನೆ (ಮೇ 24) ಹಿಂದೂ ಯುವಕ ಮತ್ತು ಮುಸ್ಲಿಂ ಯುವತಿ ಹೊಟೇಲ್​ಗೆ ಹೋಗಿದ್ದಕ್ಕೆ ಮುಸ್ಲಿಂ ಯುವಕರ ತಂಡ ನೈತಿಕ ಪೊಲೀಸ್ ಗಿರಿ ನಡೆಸಿತ್ತು. ಪ್ರಕರಣ ಸಂಬಂಧ ನೊಂದ ಯುವತಿ ನೀಡಿದ ದೂರಿನ ಅನ್ವಯ ಪೊಲೀಸರು ಇಬ್ಬರು ಆರೋಪಿಗಳನ್ನು ಬಂಧಿಸಿದ್ದಾರೆ. ನಗರದ ನಕ್ಕಲಕುಂಟೆ ನಿವಾಸಿಗಳಾದ ವಾಯಿದ್ (20) ಹಾಗೂ ಸದ್ದಾಂ (21) ಬಂಧಿತ ಆರೋಪಿಗಳು. ಮತ್ತೊಬ್ಬ ಆರೋಪಿ ಇಮ್ರಾನ್​ಗಾಗಿ ಶೋಧ ಕಾರ್ಯ ನಡೆಯುತ್ತಿದೆ.

ಮುಸ್ಲಿಂ ಯುವತಿ ಮತ್ತು ಹಿಂದೂ ಯುವಕ ಜೊತೆಯಾಗಿ ಹೊಟೇಲ್​ಗೆ ಹೋಗಿದ್ದಾರೆ. ಈ ವೇಳೆ ಆಗಮಿಸಿದ ಮುಸ್ಲಿಂ ಯುವಕರ ತಂಡ ಹೊಟೇಲ್ ಟೇಬಲ್ ಬಳಿ ಬಂದು ವಾರ್ನ್ ಮಾಡಿದ್ದಾರೆ, ನಂತರ ಜೋಡಿ ಹೊರಬರುವುದನ್ನೇ ಕಾಯುತ್ತಿದ್ದ ತಂಡ, ಇಬ್ಬರು ಹೊರಬರುತ್ತಿದ್ದಂತೆ ಪ್ರಶ್ನಿಸಿ ಹಲ್ಲೆಗೆ ಯತ್ನ ನಡೆಸಿದೆ. ಮುಸ್ಲಿಂ ಧರ್ಮದಲ್ಲಿ ಹುಟ್ಟಿ ಹಿಂದೂ ಯುವಕನ ಜೊತೆ ಹೋಗುತ್ತೀಯಾ ಎಂದು ಯುವತಿಯನ್ನು ಪ್ರಶ್ನಿಸಿದ್ದಾರೆ. ಅಲ್ಲದೆ, ಯುವಕನನ್ನು ಎಳೆದಾಡಿ ಹಲ್ಲೆಗೆ ಯತ್ನಿಸಿದ್ದಾರೆ.

ದುಷ್ಕರ್ಮಿಗಳ ಕೃತ್ಯಕ್ಕೆ ಕುಪಿತಗೊಂಡ ಮುಸ್ಲಿಂ ಯುವತಿ ಪ್ರತಿರೋಧ ಒಡ್ಡಿದ್ದಾಗ ಆಕೆಯನ್ನು ಅವಮಾನಿಸಲು ಯತ್ನಿಸಿದ್ದಾರೆ. ಈ ವೇಳೆ ಕೆಟ್ಟದಾಗಿ ಬೈದರೆ ಸರಿ ಇರಲ್ಲಾ ಅಂತ ಯುವತಿ ತರಾಟೆಗೆ ತೆಗೆದುಕೊಂಡಿದ್ದಾಳೆ. ಅಲ್ಲದೆ, ಹಿಂದೂ ಯುವಕನಿಗೆ ಅವಾಚ್ಯ ಶಬ್ದಗಳಿಂದ ನಿಂದನೆ ಮಾಡಿದ್ದಾರೆ. ಚಿಕ್ಕಬಳ್ಳಾಫುರ ನಗರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದ ಮುಸ್ಲಿಂ ಯುವಕರ ದೌರ್ಜನ್ಯದ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದೆ.

ಇದನ್ನೂ ಓದಿ: Chikkaballapur News: ಮಳಮಾಚನಹಳ್ಳಿ ಬ್ಯಾಟರಾಯಸ್ವಾಮಿ ದೇಗುಲದ ಗರ್ಭಗುಡಿಯಲ್ಲಿ ರಕ್ತ, ಮಾಂಸ ಸುರಿದು ವಿಕೃತಿ

ಆರಂಭದಲ್ಲಿ ಯುವಕರ ದೌರ್ಜನ್ಯದ ಬಗ್ಗೆ ಪ್ರಶ್ನಿಸಿದ್ದ ಯುವತಿಗೆ ಬಲವಂತವಾಗಿ ಕ್ಷಮಾಪಣೆ ಕೇಳಿಸಿದ್ದಾರೆ. ವಿಡಿಯೋದಲ್ಲಿ ಇರುವಂತೆ, ನನ್ನಿಂದ ತಪ್ಪಾಯಿತು, ಇನ್ನು ಮುಂದೆ ಹೀಗೆ ಮಾಡಲ್ಲ ಎಂದು ಯುವತಿ ಹೇಳಿದ್ದಾಳೆ. ಇದೇ ವೇಳೆ ಯುವಕನೊಬ್ಬ ಅಲ್ಲಿದ್ದವರೆಲ್ಲ ನನ್ನ ಅಣ್ಣತಮ್ಮಂದಿರು ಎಂದು ಹೇಳುವಂತೆ ಬಲವಂತ ಮಾಡಿರುವುದು ಕೇಳಿಸಿದೆ. ಅದೇ ರೀತಿ ಯುವತಿ ಕೂಡ ಹೇಳುವುದನ್ನು ನೋಡಬಹುದು.

ಮೇ 23ರಂದು ಹಿರಿಯ ಪೊಲೀಸರ ಜೊತೆ ಸಭೆ ನಡೆಸಿದ ಸಿಎಂ ಸಿದ್ದರಾಮಯ್ಯ ಅವರು ನೈತಿಕ ಪೊಲೀಸ್ ಗಿರಿ ವಿರುದ್ಧ ಕ್ರಮಕ್ಕೆ ಸೂಚನೆ ನೀಡಿದ್ದರು. ಒಂದು ವೇಳೆ ಕ್ರಮ ಕೈಗೊಳ್ಳದಿದ್ದರೆ ಆಯಾ ವಿಭಾಗದ ಡಿಸಿಪಿ ಹಾಗೂ ಎಸ್​ಪಿ ಅವರನ್ನೇ ಹೊಣೆಗಾರರನ್ನಾಗಿ ಮಾಡಲಾಗುವುದು ಎಂದು ಎಚ್ಚರಿಸಿದ್ದರು. ಇದಾದ ಮರುದಿನವೇ ಚಿಕ್ಕಬಳ್ಳಾಪುರದಲ್ಲಿ ಮುಸ್ಲಿಂ ಯುವಕರಿಂದ ನೈತಿಕ ಪೊಲೀಸ್ ಗಿರಿ ನಡೆದಿದೆ.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 5:27 pm, Thu, 25 May 23