8 ಮಂದಿಯ ಆಹುತಿ ತೆಗೆದುಕೊಂಡ ಅಪಘಾತಕ್ಕೆ ಚಿಂತಾಮಣಿ ಆರ್ಟಿಒ -ಜೀಪ್ ಮಾಲಿಕ ಕಾರಣ: ಸಂಸದ ಮುನಿಸ್ವಾಮಿ ಕಿಡಿಕಿಡಿ
ಅಪಘಾತಕ್ಕೀಡಾದ ಜೀಪ್ಗೆ ಎಪ್.ಸಿ, ಜೀವವಿಮೆ ಇದೆ ಆದ್ರೆ ಚಾಲಕನಿಗೆ ಡಿ.ಎಲ್. ಇರುವ ಬಗ್ಗೆ ಮಾಹಿತಿ ಇಲ್ಲ. 8 ಜನರ ಸಾಗಾಟಕ್ಕೆ ಇರುವ ಜೀಪ್ನಲ್ಲಿ 17 ಜನರನ್ನು ಕೂರಿಸಿಕೊಂಡು ಹೋಗಿದ್ದಾನೆ. ಇದು ಮಾಲೀಕನ ತಪ್ಪು. ಜೀಪ್ ಕೋಲಾರ ಸಾರಿಗೆ ಇಲಾಖೆಯಲ್ಲಿ ನೊಂದಣಿ ಆಗಿದೆ.
ಚಿಕ್ಕಬಳ್ಳಾಪುರ: ಸೆಪ್ಟೆಂಬರ್ 12 ಭಾನುವಾರ ಮಧ್ಯಾಹ್ನ 3 ಗಂಟೆ ಸುಮಾರಿಗೆ ಕೋಲಾರ ಜಿಲ್ಲೆ ಶ್ರೀನಿವಾಸಪುರ ತಾಲೂಕಿನ ರಾಯಲ್ಪಾಡಿನಿಂದ ಚಿಂತಾಮಣಿ ನಗರಕ್ಕೆ ಹೋಗಲು 17 ಜನ ಜೀಪ್ ಹತ್ತಿದ್ರು. ಜೀಪ್ ಮಾಲೀಕ ಫುಲ್ ಖುಷಿಯಿಂದ ವಾಹನ ಚಾಲನೆ ಮಾಡ್ಕೊಂಡು ಹೋಗುತ್ತಿದ್ದ. ಆದ್ರೆ, ಚಿಂತಾಮಣಿ ತಾಲೂಕಿನ ಮರಿನಾಯಕನಹಳ್ಳಿ ಗೇಟ್ ಬಳಿ ಯಾರು ಊಹೆ ಮಾಡಲಾಗದ ದುರಂತ ನಡೆದುಬಿಟ್ಟಿದೆ. ಬೆಂಗಳೂರು ರಸ್ತೆಯಿಂದ ಮದನಪಲ್ಲಿ ಕಡೆಗೆ ವೇಗವಾಗಿ ಮುನ್ನುಗ್ಗುತ್ತಿದ್ದ ಲಾರಿಯೊಂದು, ಓವರ್ಟೇಕ್ ಮಾಡಲು ಹೋಗಿ, ಏಕಾಏಕಿ ಜೀಪ್ಗೆ ಡಿಕ್ಕಿ ಹೊಡೆದಿದೆ. ಇದ್ರಿಂದ ಸ್ಥಳದಲ್ಲೇ 6 ಜನ ಮೃತಪಟ್ಟಿದ್ರೆ, ಕೋಲಾರದ ಆರ್.ಎಲ್.ಜಾಲಪ್ಪ ಆಸ್ಪತ್ರೆಗೆ ಸಾಗಿಸುವ ಮಾರ್ಗ ಮಧ್ಯೆ ಮತ್ತಿಬ್ಬರು ಕೊನೆಯುಸಿರೆಳದಿದ್ರು. ಇಷ್ಟೇ ಅಲ್ಲ, 9 ಜನರಿಗೆ ಗಂಭೀರವಾಗಿ ಗಾಯವಾಗಿದೆ. ಈ ಘಟನೆ ನಿನ್ನೆ ಜನರಲ್ಲಿ ಆತಂಕವನ್ನುಂಟು ಮಾಡಿತ್ತು.
ಸ್ವಂತ ಬಳಕೆಗೆ ಜೀಪ್ ಖರೀದಿಸಿ ಪ್ರಯಾಣಿಕರ ಸಾಗಾಟ ಇನ್ನು ಘಟನೆಯಲ್ಲಿ ಚಿಂತಾಮಣಿಯ ನಾರಾಯಣಸ್ವಾಮಿ, ಮುನಿರತ್ನಮ್ಮ, ಜೀಪ್ ಚಾಲಕ ರಮೇಶ್, ಆಂಧ್ರ ಮೂಲದ ವೆಂಕಟಲಕ್ಷ್ಮಮ್ಮ, ಕಿತ್ತಗನೂರು ಗ್ರಾಮದ ಮುನಿಕೃಷ್ಣಪ್ಪ, ಶ್ರೀನಿವಾಸಪುರ ಮೂಲದ ನಿಖಿಲ್ ಮೃತರಾಗಿದ್ದಾರೆ. ಜೀಪ್ ಚಾಲಕ ಹಾಗೂ ಮಾಲೀಕನಾಗಿದ್ದ ರಮೇಶ್ ಕೂಡ ಅಪಘಾತದಲ್ಲಿ ಮೃತಪಟ್ಟಿದ್ದಾರೆ. ಆದರೆ ಇವರು ಸ್ವಂತ ಬಳಕೆಗೆ ಜೀಪ್ ಖರೀದಿ ಮಾಡಿ ಪ್ರಯಾಣಿಕರನ್ನು ಸಾಗಾಟ ಮಾಡುತ್ತಿದ್ದರು ಎಂದು ಟಿವಿ9 ಗೆ ಸಹಾಯಕ ಸಾರಿಗೆ ಅಧಿಕಾರಿ ಕುಮಾರಸ್ವಾಮಿ ತಿಳಿಸಿದ್ದಾರೆ.
ನಿನ್ನೆ ಅಪಘಾತಕ್ಕೀಡಾದ ಜೀಪ್ಗೆ ಎಫ್ಸಿ ಜೀವವಿಮೆ ಇದೆ ಆದ್ರೆ ಚಾಲಕನಿಗೆ ಡಿ.ಎಲ್. ಇರುವ ಬಗ್ಗೆ ಮಾಹಿತಿ ಇಲ್ಲ. 8 ಜನರ ಸಾಗಾಟಕ್ಕೆ ಇರುವ ಜೀಪ್ನಲ್ಲಿ 17 ಜನರನ್ನು ಕೂರಿಸಿಕೊಂಡು ಹೋಗಿದ್ದಾನೆ. ಇದು ಮಾಲೀಕನ ತಪ್ಪು. ಜೀಪ್ ಕೋಲಾರ ಸಾರಿಗೆ ಇಲಾಖೆಯಲ್ಲಿ ನೊಂದಣಿ ಆಗಿದೆ. ಸಾರಿಗೆ ಇಲಾಖೆಯಲ್ಲಿ ಸಿಬ್ಬಂದಿ ಅಧಿಕಾರಿಗಳ ಕೊರತೆಯಿದೆ ಎಂದು ಚಿಂತಾಮಣಿಯ ಆಸ್ಪತ್ರೆ ಬಳಿ ಸಹಾಯಕ ಸಾರಿಗೆ ಅಧಿಕಾರಿ ಕುಮಾರಸ್ವಾಮಿ ಹೇಳಿದ್ರು.
8 ಜನರನ್ನು ಬಲಿ ಪಡೆದ ಜೀಪ್ ದಾಖಲೆಗಳು ಟಿವಿ9ಗೆ ಲಭ್ಯವಾಗಿದೆ. ಕೆ.ಎ 07 ಎಂ2017 ಸಂಖ್ಯೆ ನೊಂದಣಿಯ ಜೀಪ್ ಇದಾಗಿದ್ದು ಕೋಲಾರ ಸಾರಿಗೆ ಇಲಾಖೆಯಲ್ಲಿ ಜೂನ್ 25 2007ರಂದು ನೊಂದಣಿಯಾಗಿತ್ತು. ಘಟನೆಯಲ್ಲಿ ಮೃತಪಟ್ಟ ರಮೇಶ ಹೆಸರಲ್ಲಿ ಸ್ವಂತ ಬಳಕೆಗೆ ಮಾತ್ರ ಈ ಜೀಪ್ ನೊಂದಣಿಯಾಗಿತ್ತು. ಆದ್ರೆ ಮೃತ ರಮೇಶ್ ಅಕ್ರಮವಾಗಿ ಪ್ರಯಾಣಿಕರನ್ನು ಸಾಗಿಸುತ್ತಿದ್ದ ಎಂಬುವುದು ತಿಳಿದು ಬಂದಿದೆ. ಯೂನಿಟೆಡ್ ಇಂಡಿಯಾ ಜೀವವೀಮಾ ಕಂಪನಿಯಲ್ಲಿ ಥರ್ಡ್ ಪಾರ್ಟಿ ಜೀವ ವಿಮೆಯಿದೆ. ಜನವರಿ 27ರ ವರೆಗೂ ಜೀವವೀಮೆ ಇದೆ.
ಇನ್ನು ಮತ್ತೊಂದೆಡೆ ಸಂಸದ ಮುನಿಸ್ವಾಮಿ ಸಾರಿಗೆ ಇಲಾಖೆ ಅಧಿಕಾರಿಗಳ ವಿರುದ್ದ ಕೆಂಡಾಮಂಡಲರಾಗಿದ್ದಾರೆ. ಕೆಲಸ ಮಾಡದ ಸಾರಿಗೆ ಅಧಿಕಾರಿಗಳು ಕರ್ತವ್ಯದಲ್ಲಿ ಇರಲು ನಾಲಾಯಕ್, ಅನ್ ಫಿಟ್. ರಸ್ತೆ ಅಪಘಾತ ಪ್ರಕರಣ ಹಾಗೂ ಅಧಿಕಾರಿಗಳ ನಿರ್ಲಕ್ಷ್ಯವನ್ನು ಸರ್ಕಾರದ ಗಮನಕ್ಕೆ ತರುತ್ತೇನೆ. ಸಾರಿಗೆ ಇಲಾಖೆ ಸಚಿವರ ಜೊತೆ ಮಾತನಾಡುತ್ತೇನೆ ಎಂದರು.
ಇದನ್ನೂ ಓದಿ: ಜೀಪ್ ಹಾಗೂ ಕ್ಯಾಂಟರ್ ನಡುವೆ ಭೀಕರ ಅಪಘಾತ; 8 ಮಂದಿ ದುರ್ಮರಣ
Published On - 12:05 pm, Mon, 13 September 21