ಚಿಕ್ಕಬಳ್ಳಾಪುರದಲ್ಲೂ ಭುಗಿಲೆದ್ದ ಕಾಂಗ್ರೆಸ್ ಭಿನ್ನಮತ: ಸಾಮೂಹಿಕ ರಾಜೀನಾಮೆ ಎಚ್ಚರಿಕೆ

| Updated By: Ganapathi Sharma

Updated on: Mar 28, 2024 | 9:14 AM

ಕೋಲಾರದ ಬಂಡಾಯ ಶಮನಗೊಳಿಸಲು ಅಖಾಡಕ್ಕಿಳಿದಿರುವ ಸಿಎಂ ಸಿದ್ದರಾಮಯ್ಯ ಹಾಗೂ ಡಿಸಿಎಂ ಡಿಕೆ ಶಿವಕುಮಾರ್​ಗೆ ಇದೀಗ ಹೊಸ ತಲೆಬಿಸಿ ಎದುರಾಗಿದೆ. ಅತ್ತ ಚಿಕ್ಕಬಳ್ಳಾಪುರದಲ್ಲಿ ಟಿಕೆಟ್ ಘೋಷಣೆಗೂ ಮುನ್ನವೇ ಬಂಡಾಯ ಭುಗಿಲೆದ್ದಿದ್ದು, ರಕ್ಷಾ ರಾಮಯ್ಯಗೆ ಟಿಕೆಟ್ ನೀಡಿದರೆ ಸಾಮೂಹಿಕ ರಾಜೀನಾಮೆ ನೀಡುವುದಾಗಿ ಸ್ಥಳೀಯ ಮುಖಂಡರು ಎಚ್ಚರಿಕೆ ನೀಡಿದ್ದಾರೆ.

ಚಿಕ್ಕಬಳ್ಳಾಪುರದಲ್ಲೂ ಭುಗಿಲೆದ್ದ ಕಾಂಗ್ರೆಸ್ ಭಿನ್ನಮತ: ಸಾಮೂಹಿಕ ರಾಜೀನಾಮೆ ಎಚ್ಚರಿಕೆ
ಸ್ಥಳೀಯ ನಾಯಕರು ಶಿಪಾರಸ್ಸು ಮಾಡಿರುವ ದಾಖಲೆಯ ಪ್ರತಿ ಮತ್ತು ಕಾಂಗ್ರೆಸ್ ಧ್ವಜ
Follow us on

ಚಿಕ್ಕಬಳ್ಳಾಪುರ, ಮಾರ್ಚ್​ 28: ಲೋಕಸಭೆ ಚುನಾವಣೆ (Lok Sabha Elections) ಸಮೀಪಿಸುತ್ತಿದ್ದಂತೆಯೇ ಕರ್ನಾಟಕದಲ್ಲಿ ಆಡಳಿತಾರೂಢ ಕಾಂಗ್ರೆಸ್​​ಗೆ (Congress) ಬಂಡಾಯದ ಬಿಸಿ ಜೋರಾಗಿ ತಟ್ಟುತ್ತಿದೆ. ಒಂದೆಡೆ ಕೋಲಾರದಲ್ಲಿ ಸಚಿವ ಕೆಹೆಚ್​ ಮುನಿಯಪ್ಪ ಸಂಬಂಧಿಕರಿಗೆ ಟಿಕೆಟ್ ನೀಡುವುದನ್ನು ವಿರೋಧಿಸಿ ಐವರು ಶಾಸಕರು ರಾಜೀನಾಮೆ ನೀಡಲು ಮುಂದಾಗಿದ್ದರೆ ಇದೀಗ ಚಿಕ್ಕಬಳ್ಳಾಪುರದಲ್ಲಿ (Chikkaballapur) ಅಂಥದ್ದೇ ಆತಂಕ ಎದುರಾಗಿದೆ. ಚಿಕ್ಕಬಳ್ಳಾಪುರದಲ್ಲಿ ಅಭ್ಯರ್ಥಿ ಘೋಷಣೆಗೂ ಮುನ್ನವೇ ಕಾಂಗ್ರೆಸ್​ ಹೈಕಮಾಂಡ್ ವಿರುದ್ಧ ಆಕ್ರೋಶ ವ್ಯಕ್ತವಾಗಿದ್ದು, ಲೋಕಸಭಾ ಕ್ಷೇತ್ರದ ಸಚಿವರು, ಶಾಸಕರು, ಪರಿಷತ್ ಸದಸ್ಯರು, ಡಿಸಿಸಿ ಅದ್ಯಕ್ಷರ ಅಭಿಪ್ರಾಯ ಕಡೆಗಣಿಸಿರುವ ಆರೋಪ ಕೇಳಿಬಂದಿದೆ.

ಕ್ಷೇತ್ರದ ಮುಖಂಡರ ಅಬಿಪ್ರಾಯ ಕಡೆಗಣಿಸಿ ರಕ್ಷಾ ರಾಮಯ್ಯಗೆ ಟಿಕೆಟ್ ನೀಡುವ ಹುನ್ನಾರ ನಡೆಯುತ್ತಿದೆ. ಒಂದು ವೇಳೆ ಅವರಿಗೆ ಟಿಕೆಟ್ ಘೋಷಣೆಯಾದರೆ ಕೋಲಾರದ ರೀತಿಯಲ್ಲೇ ನಾವೂ ಸಹ ಸಾಮೂಹಿಕವಾಗಿ ರಾಜೀನಾಮೆ ನೀಡಬೇಕಾಗುತ್ತದೆ ಎಂದು ಚಿಕ್ಕಬಳ್ಳಾಪುರದ ಕಾಂಗ್ರೆಸ್ ನಾಯಕರು ಎಚ್ಚರಿಕೆ ನೀಡಿದ್ದಾರೆ.

ಈ ಮಧ್ಯೆ, ಕೆಪಿಸಿಸಿ ಅದ್ಯಕ್ಷರು ಹಾಗೂ ಉಪ ಮುಖ್ಯಮಂತ್ರಿ ಡಿಕೆ ಶಿವಕುಮಾರ್ ಸೇರಿದಂತೆ ಹೈಕಮಾಂಡ್​ಗೆ ಸ್ಥಳೀಯ ನಾಯಕರು ಶಿಪಾರಸ್ಸು ಮಾಡಿರುವ ದಾಖಲೆಗಳು ‘ಟಿವಿ9’ಗೆ ಲಭ್ಯವಾಗಿದೆ.

ರಕ್ಷಾ ರಾಮಯ್ಯ ಬದಲು ಮಾಜಿ ಮುಖ್ಯಮಂತ್ರಿ ವೀರಪ್ಪ ಮೊಯಿಲಿ ಅಥವಾ ಮಾಜಿ ಸಚಿವ ಎನ್ಎಚ್ ಶಿವಶಂಕರ ರೆಡ್ಡಿಗೆ ಟಿಕೆಟ್ ನೀಡುವಂತೆ ಕ್ಷೇತ್ರದ ಸಚಿವರು ಕಾಂಗ್ರೆಸ್ ಶಾಸಕರು, ಪರಿಷತ್ ಸದಸ್ಯರು, ಡಿಸಿಸಿ ಅದ್ಯಕ್ಷರು ಒತ್ತಾಯಿಸಿದ್ದಾರೆ. ಕ್ಷೇತ್ರಕ್ಕೆ ಸಂಬಂಧವಿಲ್ಲದವರಿಗೆ ಟಿಕೆಟ್ ನೀಡಿದರೆ ಬಂಡಾಯದ ಎಚ್ಚರಿಕೆಯನ್ನೂ ಅವರು ನೀಡಿದ್ದಾರೆ.

ಮೊಯಿಲಿ, ಶಿವಶಂಕರ ರೆಡ್ಡಿ ಹೆಸರು ಶಿಫಾರಸು

ಸಚಿವ ಕೆಎಚ್ ಮುನಿಯಪ್ಪ, ಶಾಸಕರಾದ ಎಸ್ಎನ್ ಸುಬ್ಬಾರೆಡ್ಡಿ, ಶರತ್ ಬಚ್ಚೇಗೌಡ, ಪುಟ್ಟಸ್ವಾಮಿ ಗೌಡ, ಪ್ರದೀಪ್ ಈಶ್ವರ್, ಎನ್.ಶ್ರೀನಿವಾಸಯ್ಯ, ಎಂಎಲ್​​ಸಿ ಎಸ್ ರವಿ, ಡಿಸಿಸಿ ಅದ್ಯಕ್ಷರಆದ ಕೆಎನ್ ಕೇಶವರೆಡ್ಡಿ, ಸಿಆರ್ ಗೌಡ, ಮಾಜಿ ಶಾಸಕರಾದ ಎನ್ಎಚ್ ಶಿವಶಂಕರ ರೆಡ್ಡಿ, ಟಿ ವೆಂಕಟರಮಣಯ್ಯ ಇವರು ಮೊಯಿಲಿ ಹಾಗೂ ಶಿವಶಂಕರ ರೆಡ್ಡಿ ಹೆಸರು ಶಿಪಾರಸ್ಸು ಮಾಡಿರುವುದು ‘ಟಿವಿ9’ಗೆ ದೊರೆತ ದಾಖಲೆಗಳಿಂದ ತಿಳಿದುಬಂದಿದೆ.

ಇದನ್ನೂ ಓದಿ: ಕೋಲಾರ ಕಾಂಗ್ರೆಸ್​ನಲ್ಲಿ ಕೋಲಾಹಲ: ಟಿಕೆಟ್‌ ಕಗ್ಗಂಟು ಬಿಡಿಸಲು ಅಖಾಡಕ್ಕಿಳಿದ ಸಿಎಂ, ಡಿಸಿಎಂ!

ಈ ಬೆಳವಣಿಗೆ ಈಗ ಸಿಎಂ ಸಿದ್ದರಾಮಯ್ಯ ಮತ್ತು ಡಿಸಿಎಂ ಡಿಕೆ ಶಿವಕುಮಾರ್​​ಗೆ ಹೊಸ ತಲೆನೋವು ತಂದೊಡ್ಡುವ ಎಲ್ಲ ಸಾಧ್ಯತೆ ಇದೆ. ಒಂದೆಡೆ, ಕೋಲಾರದಲ್ಲಿ ಭುಗಿಲೆದ್ದಿರುವ ಭಿನ್ನಮತದ ಬೆಂಕಿಯನ್ನು ನಂದಿಸಲು ಅವರು ಯತ್ನಿಸುತ್ತಿದ್ದರೆ ಇದೀಗ ಚಿಕ್ಕಬಳ್ಳಾಪುರದಲ್ಲಿ ಅಂಥದ್ದೇ ಸಮಸ್ಯೆ ಸೃಷ್ಟಿಯಾಗುವ ಎಲ್ಲ ಸಾಧ್ಯತೆ ಗೋಚರಿಸಿದೆ.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 9:13 am, Thu, 28 March 24