ಉತ್ತರ ಭಾರತದಲ್ಲಿ ಮಹಾಮಳೆ ಎಫೆಕ್ಟ್, ನೆಲಕಚ್ಚಿದ ಟೊಮೆಟೊ ಬೆಲೆ -ಕಷ್ಟಪಟ್ಟು ಬೆಳೆದ ಟೊಮೆಟೊ ತಿಪ್ಪೆಗೆ ಸುರಿದು ರೈತರು ಆಕ್ರೋಶ

Tomato growers: ಮಳೆಗೆ ಒದ್ದೆಯಾಗಿರುವ ಟೊಮೆಟೊ ಹಣ್ಣುಗಳನ್ನು ಸಾವಿರಾರು ಕಿ.ಮೀ. ಗಟ್ಟಲೆ ಸಾಗಾಟ ಮಾಡುವಷ್ಟರಲ್ಲಿ ಟೊಮೆಟೊ ಕೊಳೆತುಹೋಗುತ್ತೆ. ಹಾಕಿದ ಬಂಡವಾಳ ಸಿಗಲ್ಲ. ಮಾರುಕಟ್ಟೆ ಜಾಗದಲ್ಲಿ ವಿತರಣೆ ಮಾಡಲೂ ಆಗುವುದಿಲ್ಲ. ಮಳೆ ನಿಲ್ಲುವವರೆಗೂ ಟೊಮೆಟೊ ಸಹವಾಸವೇ ಬೇಡವೆಂದು ಮಾರುಕಟ್ಟೆದಾರರು ಕೈಚಲ್ಲಿದ್ದಾರೆ. ಇತ್ತ ಟೊಮೆಟೊ ಬೆಳೆದು ಬೆಲೆ ಇಲ್ಲದೇ ರೈತರು ಸಂಕಷ್ಟಕ್ಕೆ ಸಿಲುಕಿರುವುದು ಮಾತ್ರ ದುರಂತವೇ ಸರಿ.

ಉತ್ತರ ಭಾರತದಲ್ಲಿ ಮಹಾಮಳೆ ಎಫೆಕ್ಟ್, ನೆಲಕಚ್ಚಿದ ಟೊಮೆಟೊ ಬೆಲೆ -ಕಷ್ಟಪಟ್ಟು ಬೆಳೆದ ಟೊಮೆಟೊ ತಿಪ್ಪೆಗೆ ಸುರಿದು ರೈತರು ಆಕ್ರೋಶ
ಉತ್ತರ ಭಾರತದಲ್ಲಿ ಮಹಾಮಳೆ ಎಫೆಕ್ಟ್, ನೆಲಕಚ್ಚಿದ ಟೊಮಟೋ ಬೆಲೆ -ಕಷ್ಟಪಟ್ಟು ಬೆಳೆದ ಟೊಮಟೋ ತಿಪ್ಪೆಗೆ ಸುರಿದು ರೈತರು ಆಕ್ರೋಶ
Follow us
TV9 Web
| Updated By: ಸಾಧು ಶ್ರೀನಾಥ್​

Updated on: Jul 09, 2022 | 3:54 PM

ರಾಜ್ಯದ ಕರಾವಳಿ ಸೇರಿದಂತೆ ಉತ್ತರ ಭಾರತದ ವಿವಿಧ ರಾಜ್ಯಗಳಲ್ಲಿ ಮಹಾಮಳೆಯಾಗುತ್ತಿದ್ದು ಕೆಲವೆಡೆ ಜಲಪ್ರಳಯವಾಗುತ್ತಿದೆ. ಈ ಹಿನ್ನೆಲೆಯಲ್ಲಿ ಇತ್ತ ಬಯಲುಸೀಮೆಯ ಬರದನಾಡು ಎಂದೇ ಖ್ಯಾತಿಯಾಗಿರುವ ಅವಳಿ ಜಿಲ್ಲೆಗಳಲ್ಲಿ ಅದರ ಕೆಟ್ಟ ಪರಿಣಾಮ ಬೀರಿದೆ. ಇದರಿಂದ ರೈತರು ಅಯ್ಯೋ ಮಳೆರಾಯ, ನಮ್ಮ ಮೇಲೆ ಕರುಣೆ ತೋರಿ ಉತ್ತರ ಭಾರತದಲ್ಲಿ ಮಳೆ ನಿಲ್ಲಲೆಂದು ಪ್ರಾರ್ಥಿಸುತ್ತಿದ್ದಾರೆ. ಅಷ್ಟಕ್ಕೂ ಅದ್ಯಾಕೆ ಅಲ್ಲಿ ಮಳೆ ಬಿದ್ದರೆ, ಇಲ್ಲಿ ಏನು ತೊಂದರೆ ಅಂತೀರಾ? ಈ ವರದಿ ನೋಡಿ..

ಹಗಲೂ ರಾತ್ರಿ ಕಷ್ಟಪಟ್ಟು ಲಕ್ಷಾಂತರ ರೂಪಾಯಿ ಸಾಲ ಸೋಲ ಮಾಡಿ ಬೆಳೆದಿದ್ದ ಆಪಲ್ ರೀತಿಯ ಟೊಮೆಟೊ ಹಣ್ಣುಗಳನ್ನು ಚಿಕ್ಕಬಳ್ಳಾಪುರದಲ್ಲಿ ಟ್ರ್ಯಾಕ್ಟರಿಗೆ ತುಂಬಿ ತಿಪ್ಪೆಗೆ ಬಿಸಾಡುತ್ತಿದ್ದಾರೆ. ಹೌದು ಕೋಲಾರ-ಚಿಕ್ಕಬಳ್ಳಾಪುರ ಅವಳಿ ಜಿಲ್ಲೆಗಳೆಂದರೆ ಹೂವು, ಹಣ್ಣು, ತರಕಾರಿಗೆ ವರ್ಲ್ಡ್​ ಫೇಮಸ್! ಅದರಲ್ಲಿಯೂ ಟೊಮೆಟೊ ಬೆಳೆಗೆ ಖ್ಯಾತಿ. ತರಹೆವಾರಿ ಕಲರ್ ಕಲರ್, ಉತ್ತಮ ಗುಣಮಟ್ಟದ ಟೊಮೆಟೊ ಬೆಳೆ ಕಲರವ ಇಲ್ಲಿ ಹೆಚ್ಚು. ಇದರಿಂದ ಕೋಲಾರ, ಚಿಕ್ಕಬಳ್ಳಾಪುರದಲ್ಲಿ ಬೆಳೆಯುವ ಟೊಮೆಟೋವನ್ನು ಉತ್ತರ ಭಾರತ ಸೇರಿದಂತೆ ನೆರೆ ದೇಶಗಳಿಗೆ ರಫ್ತು ಮಾಡಲಾಗುತ್ತೆ. ಆದರೆ ಈಗ ಉತ್ತರ ಭಾರತದ ವಿವಿಧ ರಾಜ್ಯಗಳಲ್ಲಿ ಮಹಾಮಳೆ ಸುರಿದು, ಜಲಪ್ರವಾಹವಾಗುತ್ತಿರುವ ಹಿನ್ನೆಲೆಯಲ್ಲಿ ಕೋಲಾರ, ಚಿಕ್ಕಬಳ್ಳಾಪುರದ ಟೊಮೆಟೋಗೆ ಬೇಡಿಕೆ ಕುಸಿದಿದೆ. ಇದರಿಂದ ಟೊಮೆಟೊ ಬೆಲೆ ದಿಢೀರನೇ ನೆಲ ಕಚ್ಚಿದೆ.

15 ಕೆ.ಜಿ.ಯ ಒಂದು ಟೊಮೆಟೊ ಬಾಕ್ಸ್​​ಗೆ ವಾರದ ಹಿಂದೆ 350 ರಿಂದ 500 ರೂಪಾಯಿಗಳ ಬೆಲೆ ಇತ್ತು. ಆದರೆ ಕಳೆದ 2-3 ದಿನಗಳಿಂದ ಇದ್ದಕ್ಕಿದ್ದಂತೆ 15 ಕೆಜಿಯ ಟೊಮೆಟೊ ಬಾಕ್ಸ್​​ ಬೆಲೆ ಕೇವಲ 30 ರಿಂದ 70 ರೂಪಾಯಿಗೆ ಕುಸಿದಿದೆ. ಒಂದು ಎಕರೆಯಲ್ಲಿ ಟೊಮೆಟೊ ಬೆಳೆಯಲು 90 ಸಾವಿರ ರೂಪಾಯಿ ವೆಚ್ಚವಾಗುತ್ತದೆ.

ಗೊಬ್ಬರ, ಔಷಧಿ, ಕೂಲಿಯಾಳು ವೆಚ್ಚಕ್ಕಾಗಿ ರೈತರು ಸಾಲ ಮಾಡಿರುತ್ತಾರೆ. ಆದರೆ ಈಗ ದೊರೆಯುವ ಬೆಲೆ ಟೊಮೆಟೊ ಕೀಳುವ ಕೂಲಿಯಾಳುಗಳಿಗೂ ಸಾಲಲ್ಲ. ಆದರೂ ಕಷ್ಟಪಟ್ಟು ಬೆಳೆದ ಟೊಮೆಟೋವನ್ನು ತೋಟದಲ್ಲಿ ಹಾಳು ಮಾಡದೇ ಮಾರುಕಟ್ಟೆಗೆ ತಂದರೆ ಕೈಗೆ ಬಂದ ತುತ್ತು ಬಾಯಿಗೆ ಬಂದಿಲ್ಲ. ಇದರಿಂದ ರಾಜ್ಯ ಸರ್ಕಾರ ಟೊಮೆಟೊ ಬೆಳೆಗೆ ಬೆಂಬಲ ಬೆಲೆ ನೀಡಬೇಕೆಂದು ರೈತರು ಒತ್ತಾಯ ಮಾಡಿದ್ದಾರೆ.

ರಾಜ್ಯದ ಕರಾವಳಿ ಸೇರಿದಂತೆ, ಉತ್ತರ ಭಾರತದ ಕೆಲವು ರಾಜ್ಯಗಳಲ್ಲಿ ಜಲಪ್ರವಾಹ ಹಾಗೂ ನಿರಂತರ ಮಳೆಯಾಗುತ್ತಿರುವ ಹಿನ್ನೆಲೆ ದೊಡ್ಡ ದೊಡ್ಡ ಟೊಮೆಟೊ ವರ್ತಕರು ಟೊಮೆಟೋವನ್ನು ಕೊಂಡುಕೊಳ್ಳುತ್ತಿಲ್ಲ. ಮೊದಲೇ ತುಂತುರು ಮಳೆಗೆ ಒದ್ದೆಯಾಗಿರುವ ಟೊಮೆಟೊ ಹಣ್ಣುಗಳನ್ನು ಸಾವಿರಾರು ಕಿ.ಮೀ. ಗಟ್ಟಲೆ ಸಾಗಾಟ ಮಾಡುವಷ್ಟರಲ್ಲಿ ಟೊಮೆಟೊ ಕೊಳೆತುಹೋಗುತ್ತೆ. ಹಾಕಿದ ಬಂಡವಾಳ ಸಿಗಲ್ಲ. ಮಾರುಕಟ್ಟೆ ಜಾಗದಲ್ಲಿ ವಿತರಣೆ ಮಾಡಲೂ ಆಗುವುದಿಲ್ಲ. ಮಳೆ ನಿಲ್ಲುವವರೆಗೂ ಟೊಮೆಟೊ ಸಹವಾಸವೇ ಬೇಡವೆಂದು ಮಾರುಕಟ್ಟೆದಾರರು ಕೈಚಲ್ಲಿದ್ದಾರೆ. ಇತ್ತ ಟೊಮೆಟೊ ಬೆಳೆದು ಬೆಲೆ ಇಲ್ಲದೇ ರೈತರು ಸಂಕಷ್ಟಕ್ಕೆ ಸಿಲುಕಿರುವುದು ಮಾತ್ರ ದುರಂತವೇ ಸರಿ.

-ಭೀಮಪ್ಪ ಪಾಟೀಲ್, ಟಿವಿ9, ಚಿಕ್ಕಬಳ್ಳಾಪುರ