ಚಿಕ್ಕಬಳ್ಳಾಪುರ: ಚಿಕ್ಕಬಳ್ಳಾಪುರ ತಾಲೂಕಿನ ಮುದ್ದೇನಹಳ್ಳಿಯಲ್ಲಿನ ಸತ್ಯಸಾಯಿ ಆಶ್ರಮದ ಆವರಣದಲ್ಲಿ ಇಂದು 400 ಹಾಸಿಗೆಗಳ ಮಲ್ಟಿ ಸ್ಪೆಷಾಲಿಟಿ ಆಸ್ಪತ್ರೆ (Multi Speciality Hospital)ನಿರ್ಮಾಣ ಕಾಮಗಾರಿಗೆ ಕೇಂದ್ರ ಗೃಹ ಸಚಿವ ಅಮಿತ್ ಶಾ ಶಿಲಾನ್ಯಾಸ ಮಾಡಿದ್ದಾರೆ. ಈ ವೇಳೆ ವೇದಿಕೆಯಲ್ಲಿ 4 ವರ್ಷದ ಇಂಚರಾ ಎಂಬ ಚಿಕ್ಕ ಬಾಲಕಿಯೊಬ್ಬಳನ್ನು ಎತ್ತಿಕೊಂಡು ಟೇಬಲ್ ಮೇಲೆ ನಿಲ್ಲಿಸಿ ಆಕೆಗೆ ಗೊಂಬೆಯನ್ನು ನೀಡಿದ್ದಾರೆ. ಈ ವಿಡಿಯೋ ಎಲ್ಲೆಡೆ ಹರಿದಾಡುತ್ತಿದೆ. ಆ ಬಾಲಕಿಯೊಂದಿಗೆ ಮಾತನಾಡಿದ ಅಮಿತ್ ಶಾಗೆ ಆಕೆ ಕೈ ಮುಗಿದು ನಮಸ್ಕರಿಸಿದ್ದಾಳೆ. ಆಕೆಗೆ ಗೊಂಬೆಯನ್ನು ಕೊಟ್ಟ ಬಳಿಕ ಅಮಿತ್ ಶಾ (Amit Shah) ಅವರೇ ಆಕೆಯನ್ನು ಟೇಬಲ್ನಿಂದ ಕೆಳಗಿಸಿ ಕಳುಹಿಸಿಕೊಟ್ಟಿದ್ದಾರೆ.
ಮುದ್ದೇನಹಳ್ಳಿಯ ಸತ್ಯ ಸಾಯಿ ಗ್ರಾಮದಲ್ಲಿ ಆಸ್ಪತ್ರೆ ನಿರ್ಮಾಣಕ್ಕೆ ಶಿಲಾನ್ಯಾಸ ಮಾಡಿದ ಅಮಿತ್ ಶಾ ಹೋಮ ಕುಂಡಕ್ಕೆ ಪುಷ್ಪಾರ್ಚನೆ ಮಾಡಿದ್ದಾರೆ. ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರ ಜೊತೆಗೆ ಸಿಎಂ ಬಸವರಾಜ ಬೊಮ್ಮಾಯಿ, ಕೇಂದ್ರ ಸಚಿವ ಪ್ರಲ್ಹಾದ್ ಜೋಶಿ, ಕರ್ನಾಟಕ ರಾಜ್ಯ ಬಿಜೆಪಿ ಘಟಕದ ಉಸ್ತುವರಿ ಅರುಣ್ ಸಿಂಗ್, ಬೆಂಗಳೂರು ಗ್ರಾಮಾಂತರ ಜಿಲ್ಲಾ ಉಸ್ತುವಾರಿ ಸಚಿವ ಎಂಟಿಬಿ ನಾಗರಾಜ್, ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವ ಡಾ.ಕೆ ಸುಧಾಕರ್ ಭಾಗಿಯಾಗಿದ್ದರು.
ಈ ಕಾರ್ಯಕ್ರಮದಲ್ಲಿ ಮಾತನಾಡಿದ ಅಮಿತ್ ಶಾ, ಆಯುಷ್ಮಾನ್ ಭಾರತ್ ಯೋಜನೆ ಮೂಲಕ ದೇಶದ ಜನರಿಗೆ ಬಹುರೂಪದ ಮೆಡಿಕಲ್ ಸೌಲಭ್ಯ ಸಿಗುವಂತೆ ಮಾಡಿದ್ದೇವೆ. ಎಲ್ಲ ತಾಲೂಕುಗಳಲ್ಲಿ ಜನೌಷಧ ಕೇಂದ್ರವನ್ನೂ ಕೂಡ ಪ್ರಾರಂಬಿಸಿ ಕಡಿಮೆ ಬೆಲೆಗೆ ಔಷಧ ಸಿಗುವಂತಾಗಿದೆ. ವೆಲ್ ನೆಸ್ ಸೆಂಟರ್ ಗಳು ಹಾಗೂ ಯೋಗವನ್ನು ಜೋಡಿಸುವ ಮೂಲಕ ರೋಗ ನಿಯಂತ್ರಣ ಸಾಧ್ಯವಾಗಿದೆ. ಭಾರತೀಯ ಸಂಸ್ಕೃತಿಗೆ ಹೆಚ್ಚಿನ ಮಹತ್ವ ನೀಡುವ ಮೂಲಕ ಭಾರತಕ್ಕೆ ಗೌರವ ಹೆಚ್ಚುವ ಕೆಲಸವನ್ನು ನರೇಂದ್ರ ಮೋದಿ ಮಾಡಿದ್ದಾರೆ. ಕರ್ನಾಟಕ ಸರ್ಕಾರ ಮೂರೂ ಕೊರೋನಾ ಅಲೆಯನ್ನು ಸಮರ್ಥವಾಗಿ ನಿಭಾಯಿಸಿದೆ. ಸಿಎಂ ಬಸವರಾಜ ಬೊಮ್ಮಾಯಿಯವರ ತ್ವರಿತ ಕೆಲಸದಿಂದ ವ್ಯಾಕ್ಸಿನೇಷನ್ನಲ್ಲಿ ಸಾಧನೆ ಮಾಡಲು ಸಾಧ್ಯವಾಗಿದೆ ಎಂದು ಹೇಳಿದ್ದಾರೆ.
ಕೇವಲ ಏಳು ವರ್ಷಗಳಲ್ಲಿ 500ಕ್ಕೂ ಹೆಚ್ಚು ಮೆಡಿಕಲ್ ಕಾಲೇಜ್ ಪ್ರಾರಂಭ ಮಾಡಿದ್ದೇವೆ. 89,000ಕ್ಕೂ ಹೆಚ್ಚು ಮೆಡಿಕಲ್ ವಿದ್ಯಾರ್ಥಿಗಳು ಪ್ರತಿವರ್ಷ ಅಧ್ಯಯನ ಮಾಡುತ್ತಿದ್ದಾರೆ. ಬಹುದೊಡ್ಡ ಮೆಡಿಕಲ್ ಎಜುಕೇಷನ್ ಸೌಕರ್ಯ ಒದಗಿಸುವ ಕೆಲಸ ಮೋದಿ ಸರಕಾರ ಮಾಡಿದೆ. ಇದೀಗ ಚಿಕ್ಕಬಳ್ಳಾಪುರದಲ್ಲಿ 400 ಬೆಡ್ಗಳ ಹಾಸ್ಪಿಟಲ್ ಗೆ ಶಂಕುಸ್ಥಾಪನೆ ಮಾಡಿದ್ದೇನೆ. ಉಚಿತ ಆಸ್ಪತ್ರೆ ನಡೆಸುವುದಕ್ಕೆ ಅನೇಕ ಕಷ್ಟಗಳು ಎದುರಾಗುತ್ತವೆ. ಮೆಡಿಕಲ್ ಕಾಲೇಜನ್ನು ಉಚಿತವಾಗಿ ನಡೆಸುವ ನಿರ್ಧಾರ ಮಾಡಲಾಗಿದೆ. ಇದು ಪ್ರಪಂಚದ ಮೊದಲ ಉಚಿತ ಮೆಡಿಕಲ್ ಕಾಲೇಜ್ ಆಗಲಿದೆ. ಅನೇಕ ಸಂತ ಮಹಾತ್ಮರು ಸೇವೆಯಿಂದಲೇ ದೇಶವನ್ನು ಯುಗ ಯುಗಗಳಿಂದ ಮುನ್ನಡೆಸಿದ್ದಾರೆ. ಪರಿವರ್ತನೆ ಹಾಗೂ ಆಧುನಿಕತೆಯ ಮೂಲಕ ಸೇವೆಯನ್ನು ನಡೆಸಲಾಗುತ್ತಿದೆ. ನಮ್ಮದು ಒಂದು ಪರಂಪರೆ ಇದೆ. ವೇದ ಉಪನಿಷತ್ತಿನಲ್ಲಿ ಇಡೀ ಜಗತ್ತಿನ ಸಮಸ್ಯೆಗಳಿಗೆ ಪರಿಹಾರ ಇದೆ ಎನ್ನುವುದು ನನ್ನ ಅಭಿಪ್ರಾಯ ಎಂದು ಅಮಿತ್ ಶಾ ಹೇಳಿದ್ದಾರೆ.
ಇದನ್ನೂ ಓದಿ: ಡಾ. ಶಿವಕುಮಾರ ಸ್ವಾಮೀಜಿ ಜಯಂತೋತ್ಸವ: ಮಠಕ್ಕೆ ಆಗಮಿಸಿ, ಸ್ವಾಮೀಜಿ ಗದ್ದುಗೆಗೆ ಪೂಜೆ ಸಲ್ಲಿಸಿದ ಅಮಿತ್ ಶಾ
ಡಾ. ಶಿವಕುಮಾರ ಸ್ವಾಮೀಜಿ ಆಧುನಿಕ ಬಸವಣ್ಣ: ಸಿದ್ದಗಂಗಾ ಮಠದಲ್ಲಿ ಅಮಿತ್ ಶಾ ಹೇಳಿಕೆ