ಏಪ್ರಿಲ್ 20ಕ್ಕೆ ಚಿಕ್ಕಬಳ್ಳಾಪುರಕ್ಕೆ ಪ್ರಧಾನಿ ಮೋದಿ ಭೇಟಿ: NH 44 ಬಂದ್, ಮಾರ್ಗ ಬದಲಾವಣೆ ಇಲ್ಲಿದೆ
ಲೋಕಸಭೆ ಚುನಾವಣೆಗೆ ದಿನಾಂಕ ಘೋಷಣೆಯಾದ ಬಳಿಕ ಪ್ರಧಾನಿ ಮೋದಿಯವರು 3ನೇ ಬಾರಿಗೆ ಕರ್ನಾಟಕಕ್ಕೆ ಆಗಮಿಸುತ್ತಿದ್ದಾರೆ. ಪ್ರಧಾನಿ ಮೋದಿ ಶನಿವಾರ ಏಪ್ರಿಲ್ 20 ರಂದು ಚಿಕ್ಕಬಳ್ಳಾಪುರ ಮತ್ತು ಬೆಂಗಳೂರು ನಗರಗಳಿಗೆ ಭೇಟಿ ನೀಡಲಿದ್ದು, ಪ್ರಚಾರ ಸಭೆಯಲ್ಲಿ ಭಾಗವಹಿಸಲಿದ್ದಾರೆ. ಚಿಕ್ಕಬಳ್ಳಾಪುರಕ್ಕೆ ಪ್ರಧಾನಿ ಮೋದಿ ಆಗಮಿಸುತ್ತಿರುವ ಹಿನ್ನೆಲೆಯಲ್ಲಿ ಎನ್ಹೆಚ್ 44 ಅನ್ನು ಬಂದ್ ಮಾಡಲಾಗಿದೆ.
ಚಿಕ್ಕಬಳ್ಳಾಫುರ, ಏಪ್ರಿಲ್ 19: ಲೋಕಸಭೆ ಚುನಾವಣೆ (Lok Sabha Election) ಹಿನ್ನೆಲೆಯಲ್ಲಿ ಪ್ರಧಾನಿ ನರೇಂದ್ರ ಮೋದಿ (Narendra Modi) ಅಭ್ಯರ್ಥಿಗಳ ಪರ ಪ್ರಚಾರಕ್ಕಾಗಿ ಏಪ್ರಿಲ್ 20 ರಂದು ಕರ್ನಾಟಕಕ್ಕೆ ಆಗಮಿಸುತ್ತಿದ್ದಾರೆ. ಚಿಕ್ಕಬಳ್ಳಾಪುರ (Chikkaballapur) ಹಾಗೂ ಬೆಂಗಳೂರಿನಲ್ಲಿ ಸಾವರ್ಜನಿಕ ಸಮಾವೇಶದಲ್ಲಿ ಭಾಗವಹಿಸಲಿದ್ದಾರೆ. ಪ್ರಧಾನಿ ನರೇಂದ್ರ ಮೋದಿ ಆಗಮಿಸುತ್ತಿರುವ ಹಿನ್ನೆಲೆಯಲ್ಲಿ ಶನಿವಾರದಂದು ಚಿಕ್ಕಬಳ್ಳಾಫುರದ (ಬೆಂಗಳೂರು-ಹೈದರಾಬಾದ್) NH 44 ಬೈಪಾಸ್ ಅನ್ನು ಬಂದ್ ಮಾಡಲಾಗುತ್ತಿದೆ.
ಹೈದರಾಬಾದ್ ಅಥವಾ ಬೆಂಗಳೂರಿಗೆ ಹೋಗುವ ಪ್ರಯಾಣಿಕರು ಚದಲಪುರ, ಚೊಕ್ಕಹಳ್ಳಿ ಮುಖಾಂತರ ಚಿಕ್ಕಬಳ್ಳಾಪುರ ನಗರದ ಒಳಗೆ ಪ್ರವೇಶಿಸಿ, ನಂತರ ಚಿಕ್ಕಬಳ್ಳಾಪುರ ಹೊರಗೆ ವಾಪಸಂದ್ರ ಬ್ರಿಡ್ಜ್ ಮೂಲಕ ರಾಷ್ಟ್ರೀಯ ಹೆದ್ದಾರಿ 44ಅನ್ನು ಕೂಡಬಹುದು. ವಾಹನ ಸವಾರರು ಯಾವುದೇ ಕಾರಣಕ್ಕೂ ಚಿಕ್ಕಬಳ್ಳಾಪುರ ಬಳಿ ಇರುವ ಬೈಪಾಸ್ ಮೇಲೆ ಜಿಲ್ಲಾಡಳಿತ ಸೂಚನೆ ನೀಡಿದೆ.
ಮೋದಿ ಕಾರ್ಯಕ್ರಮ ವೇಳಾಪಟ್ಟಿ
ಚಿಕ್ಕಬಳ್ಳಾಪುರದಲ್ಲಿ ಸಂಜೆ 4 ಗಂಟೆಗೆ ಬಹಿರಂಗ ಸಾರ್ವಜನಿಕ ಸಮಾವೇಶದಲ್ಲಿ ಪಾಲ್ಗೊಳ್ಳಲಿರುವ ಪ್ರಧಾನಿ, ಪಕ್ಷದ ಅಭ್ಯರ್ಥಿ ಡಾ. ಕೆ ಸುಧಾಕರ್ ಪರ ಮತ ಯಾಚನೆ ಮಾಡಲಿದ್ದಾರೆ. ಬಳಿಕ ಬೆಂಗಳೂರಿಗೆ ಭೇಟಿ ನೀಡಲಿದ್ದಾರೆ. ಬೆಂಗಳೂರಿನ ಅರಮನೆ ಮೈದಾನದಲ್ಲಿ ಸಂಜೆ 6 ಗಂಟೆಗೆ ನಡೆಯಲಿರುವ ಬಹಿರಂಗ ಸಾರ್ವಜನಿಕ ಸಮಾವೇಶದಲ್ಲಿ ಭಾಗವಹಿಸಿ ಪಕ್ಷದ ಅಭ್ಯರ್ಥಿಗಳ ಪರ ಮತ ಯಾಚನೆ ಮಾಡಲಿದ್ದಾರೆ.
ಇದನ್ನೂ ಓದಿ: ಲೋಕಸಭಾ ಚುನಾವಣೆ 2024: ಬಿಜೆಪಿ-ಎನ್ಡಿಎ ಅಭ್ಯರ್ಥಿಗಳಿಗೆ ಪತ್ರ ಬರೆದ ಪ್ರಧಾನಿ ಮೋದಿ
ಮೈಸೂರು, ಮಂಗಳೂರು ಭೇಟಿ
ಭಾನುವಾರ ಮೈಸೂರಿಗೆ ಭೇಟಿ ನೀಡಿದ್ದ ಪ್ರಧಾನಿ ಮೋದಿ ಜೆಡಿಎಸ್ ಬಿಜೆಪಿ ಮೈತ್ರಿ ವಿಜಯ ಸಂಕಲ್ಪ ಸಮಾವೇಶದಲ್ಲಿ ಭಾಗವಹಿಸಿ ಪಕ್ಷದ ಅಭ್ಯರ್ಥಿ ಯದುವೀರ್ ಒಡೆಯರ್ ಪರ ಮತಯಾಚನೆ ಮಾಡಿದ್ದರು. ಅಲ್ಲದೆ, ಚಾಮರಾಜನಗರ ಸೇರಿದಂತೆ ಇತರ ಕ್ಷೇತ್ರಗಳ ಪಕ್ಷದ ಅಭ್ಯರ್ಥಿಗಳನ್ನು ಬೆಂಬಲಿಸುವಂತೆ ಮತದಾರರಲ್ಲಿ ಮನವಿ ಮಾಡಿದ್ದರು.
ಬಳಿಕ ಮಂಗಳೂರಿಗೆ ತೆರಳಿದ್ದ ಮೋದಿ, ಪಕ್ಷದ ದಕ್ಷಿಣ ಕನ್ನಡ ಅಭ್ಯರ್ಥಿ ಬ್ರಿಜೇಶ್ ಚೌಟ ಹಾಗೂ ಉಡುಪಿ ಚಿಕ್ಕಮಗಳೂರು ಲೋಕಸಭಾ ಕ್ಷೇತ್ರದ ಅಭ್ಯರ್ಥಿ ಕೋಟ ಶ್ರೀನಿವಾಸ ಪೂಜಾರಿ ಜೊತೆ ರೋಡ್ ಶೋ ನಡೆಸಿದ್ದರು.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ