ವಿಧವೆ ಬಾಳಲ್ಲಿ ವಿಧಿಯಾಟ: ಮದ್ವೆ ಆಗ್ತೀನಿ ಎಂದು ಬಂದವ ಮಹಿಳೆ ಬಾಳಲ್ಲಿ ಚೆಲ್ಲಾಟ
ಗಂಡನನ್ನು ಕಳೆದುಕೊಂಡಿದ್ದ ಮಹಿಳೆ ಮಗಳ ಜೊತೆ ನೆಮ್ಮದಿಯಾಗಿದ್ದಳು. ಆಕೆಗೆ ಬಾಳು ಕೊಡುತ್ತೇನೆಂದು ಆಕೆಯ ಬಾಳಲ್ಲಿ ಬಂದ ಯುವಕನೊರ್ವ, ಪ್ರೀತಿಸಿ ಮದುವೆ ನೊಂದಣಿಯನ್ನು ಮಾಡಿಕೊಂಡಿದ್ದಾನೆ. ನಂಬಿ ಬಂದವಳು 8 ತಿಂಗಳು ಗರ್ಭೀಣಿ ಸಹ ಆಗಿದ್ದಾಳೆ. ಆದರೆ, ಯುವಕ, ಆಕೆಯನ್ನ ಬಿಟ್ಟು ಮತ್ತೊರ್ವ ಯುವತಿಯನ್ನು ಮದುವೆಯಾಗಿದ್ದಾನೆ.

ಚಿಕ್ಕಬಳ್ಳಾಪುರ, (ಆಗಸ್ಟ್ 18): ಗಂಡನನ್ನು ಕಳೆದುಕೊಂಡು ಮಗಳ ಜೊತೆ ಜೀವನ ಮಾಡುತ್ತಿದ್ದ ಮಹಿಳೆಯನ್ನು ಯುವಕನೋರ್ವ ಪ್ರೀತಿಯ ಬಲೆಗೆ ಬೀಳಿಸಿಕೊಂಡು ಬಳಿಕ ಕೈಕೊಟ್ಟಿರುವ ಘಟನೆ ನಡೆದಿದೆ. 34 ವರ್ಷದ ಕೀರ್ತಿಗೆ ಮದುವೆಯಾಗಿ ಒಂದು ಹೆಣ್ಣು ಮಗು ಇತ್ತು, ಆದ್ರೆ 2022ರಲ್ಲಿ ಈಕೆಯ ಗಂಡ ಮೃತಪಟ್ಟಿದ್ದ. ಮಗಳನ್ನು ಸಾಕಲು ಖಾಸಗಿ ಕಂಪನಿಯೊಂದಕ್ಕೆ ಕೆಲಸಕ್ಕೆ ಹೋಗುತ್ತಿದ್ದಳು. ಆಗ ಅಲ್ಲಿ ಪರಿಚಯವಾದ ಚಿಕ್ಕಬಳ್ಳಾಪುರ ಜಿಲ್ಲೆ ಶಿಡ್ಲಘಟ್ಟ ತಾಲೂಕಿನ ಅಂಬಿಗಾನಹಳ್ಳಿ ನಿವಾಸಿ 33 ವರ್ಷದ ಯುವಕ ಸುನಿಲ್, ಬಾಳು ಕೊಡುತ್ತೇನೆಂದು ಪುಸಲಾಯಿಸಿ ರಿಜಿಸ್ಟರ್ ಮ್ಯಾರೇಜ್ ಆಗಿದ್ದ. ಆದ್ರೆ, ಪತ್ನಿ 8 ತಿಂಗಳು ಗರ್ಭಿಣಿ ಎನ್ನುವುದು ಗೊತ್ತಾಗುತ್ತಿದ್ದಂತೆಯೇ ಆಕೆಗೆ ಕೈಕೊಟ್ಟು ಬೇರೊಂದು ಮದುವೆ ಮಾಡಿಕೊಂಡಿದ್ದಾನೆ. ಇದರಿಂದ ಕಂಗಾಲದ ಮಹಿಳೆ ನ್ಯಾಯಕ್ಕಾಗಿ ಅಂಗಲಾಚಿದ್ದಾಳೆ.
ಇನ್ನೂ ವಿಧವೆ ಕೀರ್ತಿಯನ್ನು ದೇವಸ್ಥಾನದಲ್ಲಿ ಮದುವೆಯಾಗಿದ್ದ ಸುನಿಲ್ ಎನ್, ನಂತರ ಚಿಕ್ಕಬಳ್ಳಾಪುರದ ಸಬ್ ರೆಜಿಸ್ಟರ್ ಕಚೇರಿಯಲ್ಲಿ ಮದುವೆ ನೊಂದಣಿ ಮಾಡಿಸಿದ್ದಾನೆ. ಆದ್ರೆ, ಇದಕ್ಕೆ ತಮ್ಮ ಮನೆಯಲ್ಲಿ ವಿರೋಧ ಇದೆ ಎಂದು ನೆಪ ಹೇಳಿ ಬೇರೆ ಯುವತಿಯನ್ನು ಮದುವೆ ಮಾಡಿಕೊಂಡಿದ್ದಾನೆ. ಇದರಿಂದ ಕೆರಳಿದ ಕೀರ್ತಿ, ನ್ಯಾಯ ಕೇಳಲು ಗಂಡ ಸುನಿಲ್ ನ ಅಂಬಿಗಾನಹಳ್ಳಿ ಮನೆಯ ಬಳಿ ಹೋಗಿದ್ದಾಳೆ. ಇದರಿಂದ ಕೋಪಗೊಂಡ ಸುನಿಲ್ ತಂದೆ ತಾಯಿ ಸಂಬಂಧಿಗಳು, ಗರ್ಭೀಣಿಯ ಮೇಲೆ ಹಲ್ಲೆ ಮಾಡಿದ ಆರೋಪ ಕೇಳಿ ಬಂದಿದೆ. ತಕ್ಷಣ 112 ಪೊಲೀಸರು ಸ್ಥಳಕ್ಕೆ ಧಾವಿಸಿ ಗರ್ಭೀಣಿಯನ್ನು ರಕ್ಷಿಸಿ ಚಿಕ್ಕಬಳ್ಳಾಪುರದ ತಾಯಿ ಮತ್ತು ಮಕ್ಕಳ ಆಸ್ಪತ್ರೆಗ ದಾಖಲಿಸಿದ್ದಾರೆ.
ಇದನ್ನೂ ಓದಿ: ಬಾಲಕನ ಮೇಲೆ ಟೀಚರಮ್ಮ ಲೈಂಗಿಕ ದೌರ್ಜನ್ಯ: ಕೇಸ್ ರದ್ದುಗೊಳಿಸುವಂತೆ ಕೇಳಿದ್ದ ಲೇಡಿಗೆ ಕೋರ್ಟ್ ಹೇಳಿದ್ದೇನು ಗೊತ್ತಾ?
ಇನ್ನೂ ಮಗಳ ಜೊತೆ ನೆಮ್ಮದಿಯಾಗಿದ್ದ ವಿಧವೆಯ ಬಾಳಲ್ಲಿ ಸುನಿಲ್ ಎನ್ನುವ ಯುವಕ ಚೆಲ್ಲಾಟವಾಡಿದ್ದು, ಈ ಸಂಬಂಧ ಊ ಹಿಂದೆಯೇ ಚಿಕ್ಕಬಳ್ಳಾಪುರ ಮಹಿಳಾ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿತ್ತು. ಗರ್ಭೀಣಿ ಪತ್ನಿಯನ್ನು ಚೆನ್ನಾಗಿ ನೋಡಿಕೊಳ್ಳುವುದಾಗಿ ಪತ್ರಕ್ಕೆ ಸಹಿ ಮಾಡಿಕೊಟ್ಟಿದ್ದ. ಆದರೂ ಸುನೀಲ್ ಇದೀಗ ಪತ್ನಿಗೆ ಕೈಕೊಟ್ಟಿದ್ದಾನೆ ಎಂಬ ಆರೋಪ ಕೇಳಿಬಂದಿದೆ.
ಗಂಡನನ್ನು ಕಳೆದುಕೊಂಡ ನೋವಿನಲ್ಲೇ ಮಗಳ ಜೊತೆ ಜೀವನ ಮಾಡುತ್ತಿದ್ದ ಕೀರ್ತಿ, ಕಷ್ಟ ಸುಖಕ್ಕೆ ಆಸರೆಯಾಗುತ್ತಾನೆಂದು ನಂಬಿ ಸುನೀಲನ ಹಿಂದೆ ಹೋಗಿ ಇದೀಗ ಕಂಗಾಲಾಗಿದ್ದಾಳೆ.
Published On - 8:58 pm, Mon, 18 August 25




