ಚಿಕ್ಕಮಗಳೂರು: 2019ರಲ್ಲಿ ಪ್ರವಾಹ (Flood) ಉಂಟಾಗಿ ಜಿಲ್ಲೆಯ ಮೂಡಿಗೆರೆ ತಾಲೂಕಿನ ಮಲೆಮನೆ ಗ್ರಾಮದ 5 ಮನೆಗಳು ಸಂಪೂರ್ಣ ಕೊಚ್ಚಿ ಹೋಗಿದ್ದವು. ಮೂರು ವರ್ಷ ಕಳೆದರೂ ಸಂತ್ರಸ್ತರಿಗೆ ಪರಿಹಾರ ಸಿಕಿಲ್ಲ.ಬದುಕಿಗೆ ಆಧಾರವಾಗಿದ್ದ ತೋಟ-ಗದ್ದೆಗಳು ನಾಶವಾಗಿದ್ದವು. ಅಂದಿನ ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪ (BS Yediyurappa) ಗ್ರಾಮಕ್ಕೆ ಆಗಮಿಸಿ ಪರಿಹಾರ ನೀಡುವ ಭರವಸೆ ನೀಡಿದ್ದರು. ಆ ಬಳಿಕ ಸಂಬಂಧಪಟ್ಟ ಜನಪ್ರತಿನಿಧಿಗಳು, ಅಧಿಕಾರಿಗಳ ಕಚೇರಿಗಳಿಗೆ ಅಲೆದು ಅಲೆದು ಸಂತ್ರಸ್ತರು ಸುಸ್ತಾಗಿದ್ದಾರೆ. ಸತತ ಮೂರು ವರ್ಷ ಹೋರಾಟ ಮಾಡಿದರೂ ಪರಿಹಾರ ಸಿಕ್ಕಿಲ್ಲ. ಇದೀಗ ರಾಷ್ಟ್ರಪತಿಗೆ ಪತ್ರ ಬರೆದು ದಯಾಮರಣಕ್ಕೆ ಮನವಿ ಮಾಡಿದ್ದಾರೆ.
ಆತ್ಮಹತ್ಯೆಯೊಂದೇ ದಾರಿ:
ಕಚೇರಿಗೆ ಹೋಗಿ ಕೇಳಿದರೆ ಎಲ್ಲೂ ಕೂಡ ಜಾಗ ಸಿಗುತ್ತಿಲ್ಲ. ನಮ್ಮ ಕೈಯಲ್ಲಿ ಏನೂ ಇಲ್ಲ, ಸರ್ಕಾರಕ್ಕೆ ಫೈಲ್ ಕಳುಹಿಸಿದ್ದೇವೆ, ಪ್ರಯತ್ನ ಪಡುತ್ತಿದ್ದೀವಿ. ಈ ರೀತಿಯ ಹಾರಿಕೆ ಉತ್ತರಗಳು ಮಾತ್ರ ಸಿಗುತ್ತಿದೆ ಹೊರತು ಮೂರು ವರ್ಷವಾದರೂ ಸರ್ಕಾರ, ಜಿಲ್ಲಾಡಳಿತ, ಜನಪ್ರತಿನಿಧಿಗಳು, ಅಧಿಕಾರಿಗಳು ಸಂತ್ರಸ್ಥರ ಸಮಸ್ಯೆಗೆ ನ್ಯಾಯಯುತವಾಗಿ ಪರಿಹಾರ ಕೊಡಿಸುವ ಮನಸ್ಸು ಮಾಡುತ್ತ ಇಲ್ಲ. ಇವರ ಜೊತೆ ಭಿಕ್ಷೆ ಬೇಡುವುದಕ್ಕಿಂತ ಸಾಯುವುದೇ ಲೇಸು ಅಂತ ಸಂತ್ರಸ್ತರು ಹೇಳುತ್ತಿದ್ದಾರೆ.
ಪ್ರಕೃತಿಯ ಐಸಿರಿಯನ್ನೇ ಹೊದ್ದು ಮಲಗಿದ್ದ ಮಲೆಮನೆಗೆ ಗುಡ್ಡವೇ ಮುಳುವಾಗಿದ್ದೇಗೆ?
ಬೆಟ್ಟ ಗುಡ್ಡಗಳಿಂದ ಕೂಡಿದ ಪ್ರದೇಶದ ಮಧ್ಯೆ ಹೊದ್ದು ಮಲಗಿರುವ ಮಲೆಮನೆ ಗ್ರಾಮ 2019ರವರೆಗೂ ಅಷ್ಟೊಂದು ಜನರಿಗೆ ಪರಿಚಿತವೆನೂ ಆಗಿರಲಿಲ್ಲ. ಆದರೆ 2019ರ ಮಹಾಮಳೆಯ ಹೊಡೆತಕ್ಕೆ ಸಿಲುಕಿ ಅಕ್ಷರಶಃ ನೀರಿನಲ್ಲಿ ಕೊಚ್ಚಿಹೋಗಿತ್ತು. ನೋಡು ನೋಡುತ್ತಿದ್ದಂತೆ ಮನೆಗಳು ನೆಲಸಮ ಆಗಿದ್ದವು. ಕಷ್ಟಪಟ್ಟು ಬೆವರು ಸುರಿಸಿ ಮಾಡಿದ್ದ ತೋಟ-ಗದ್ದೆಗಳು ನಿರ್ನಾಮ ಆಗಿದ್ದವು. ಕೆಲವೇ ಕೆಲವು ನಿಮಿಷಗಳಲ್ಲಿ ಗುಡ್ಡದ ಭೂತ ಮಲೆಮನೆ ಗ್ರಾಮದ ಒಂದು ದೇವಸ್ಥಾನ ಸೇರಿದಂತೆ ಐದು ಮನೆಗಳನ್ನ ಅಪೋಶನ ಪಡೆದಿತ್ತು. ಆ ಕ್ಷಣಕ್ಕೆ ಅಲ್ಲಿದ್ದ ಜನರ ಜೀವ ಉಳಿದಿದ್ದೇ ಅದೃಷ್ಟ. ನೀರಿನಲ್ಲಿ ಪೇಪರ್ ಬೋಟ್ ತೇಲಿ ಹೋಗುವಂತೆ ಗುಡ್ಡದ ನೀರಿನಲ್ಲಿ ಐದು ಮನೆಗಳು ತೇಲಿ ಹೋದವು.
ಎರಡು ದಿನವಾದರೂ ಮಲೆಮನೆ ವಿಚಾರ ಗೊತ್ತೆ ಆಗಿರಲಿಲ್ಲ:
ಮಲೆಮನೆ ಅನ್ನೋ ಗ್ರಾಮ ಕಾಣೆಯಾಗಿದೆ ಅಂತಾ ಜಿಲ್ಲಾಡಳಿತಕ್ಕೆ ಗೊತ್ತಾಗುವುದಕ್ಕೆ ಎರಡು ದಿನ ಬೇಕಾಯ್ತು. ವಾರಗಟ್ಟಲ್ಲೇ ಕರೆಂಟ್ ಇರಲಿಲ್ಲ, ಬಿರುಗಾಳಿ ಮಳೆಯಿಂದ ಟವರ್ಗಳು ಕೆಲಸ ಮಾಡಲು ನಿಲ್ಲಿಸಿದ ಕಾರಣ ಮೊಬೈಲ್ ನೆಟ್ವರ್ಕ್ ಆಫ್ ಆಗಿದ್ದವು. ಓಡಾಡುವುದಕ್ಕೂ ಆಗುತ್ತಿರಲಿಲ್ಲ. ಎಂತೆಂಥ ಮಳೆಯನ್ನೇ ನೋಡಿ ಮೂಗು ಮುರಿದಿದ್ದ ಮಲೆನಾಡಿಗರು 2019ರ ಮಹಾಮಳೆಗೆ ಅಕ್ಷರಶಃ ಕಂಗಾಲಾಗಿ ಹೋಗಿದ್ದರು.
ಜ್ವಲಂತ ಸಮಸ್ಯೆಯನ್ನ ತೆರೆದಿಟ್ಟಿದ ಟಿವಿ9:
ಮಹಾಮಳೆಗೆ ಮಲೆಮನೆ ಗ್ರಾಮ ನಿರ್ನಾಮ ಆದಾಗ ಆ ಘಟನೆಯನ್ನ ತೋರಿಸುವ ಕೆಲಸವನ್ನ ಟಿವಿ9 ಮಾಡಿತ್ತು. ಸಂತ್ರಸ್ಥರ ಸಂಕಷ್ಟ-ತೊಳಲಾಟವನ್ನ ತೋರಿಸುವ ಮಲೆಮನೆ ಮಾಯ ಎಂಬ ಅರ್ಧಗಂಟೆಯ ವಿಶೇಷ ಕಾರ್ಯಕ್ರಮವನ್ನ ಮಾಡಿ ಸರ್ಕಾರದ ಕಣ್ಣು ತೆರೆಸುವ ಕೆಲಸ ಟಿವಿ9ನಿಂದ ಆಗಿತ್ತು. ಸುದ್ದಿ ಪ್ರಸಾರದ ಬಳಿಕ ಅಂದಿನ ಸಿಎಂ ಬಿಎಸ್ ಯಡಿಯೂರಪ್ಪ ಖುದ್ದು ಸ್ಥಳಕ್ಕೆ ಹೋಗಿ ಮನೆ-ಆಸ್ತಿಯನ್ನ ಕಳೆದುಕೊಂಡಿದ್ದ ಸಂತ್ರಸ್ಥರಿಗೆ ಹೊಸ ಬದುಕನ್ನ ಕಟ್ಟಿಕೊಡುವ ಭರವಸೆ ನೀಡಿದ್ದರು
ಇದೀಗ ಮತ್ತೆ ಮಳೆ ಶುರುವಾಗುತ್ತಿದೆ. ಆದರೆ ಸಂತ್ರಸ್ಥರಿಗೆ ಹೊಸ ಬದುಕು ಸಿಕ್ಕೇ ಇಲ್ಲ. ವಯಸ್ಸಾದ ತಂದೆ-ತಾಯಂದಿರು, ಪುಟ್ಟ ಪುಟ್ಟ ಮಕ್ಕಳನ್ನ ಕಟ್ಟಿಕೊಂಡು ಸದ್ಯ ಊರು ಬಿಟ್ಟಿರುವ ಸಂತ್ರಸ್ಥರು ಬಾಡಿಗೆ ಮನೆಯಲ್ಲಿ ಕಳೆದ ಮೂರು ವರ್ಷಗಳಿಂದ ವಾಸಿಸುತ್ತಿದ್ದಾರೆ. ಹಾಸಿಗೆ ಹಿಡಿದ ತಂದೆ-ತಾಯಿಗೆ ಚಿಕಿತ್ಸೆ ಕೊಡಿಸಲು ಹಣವಿಲ್ಲ. ಆರ್ಥಿಕ ಸಮಸ್ಯೆಯಿಂದ ಮಕ್ಕಳಿಗೆ ಶಿಕ್ಷಣ ಕೊಡಿಸಲು ಸಾಧ್ಯವಾಗುತ್ತಿಲ್ಲ. ಗ್ರಾಮದಲ್ಲಿದ್ದ ತೋಟ-ಗದ್ದೆಗಳು ನಿರ್ನಾಮವಾಗಿದ್ದರಿಂದ ಯಾವುದೇ ಆದಾಯವಿಲ್ಲದೇ ಬಾಡಿಗೆ ಕಟ್ಟೋದಕ್ಕೂ ಹಣವಿಲ್ಲದೇ ಪರದಾಟ ನಡೆಸುತ್ತಿದ್ದಾರೆ.
ವರದಿ: ಪ್ರಶಾಂತ್
ಇದನ್ನೂ ಓದಿ
Covaxin for Children: 6-12 ವರ್ಷದ ಮಕ್ಕಳಿಗೂ ಕೊವ್ಯಾಕ್ಸಿನ್ ಲಸಿಕೆ ನೀಡಲು ಅನುಮತಿ