ಸ್ವಾವಲಂಬಿ ಯೋಜನೆ: ಖಾಸಗಿ ಜಮೀನಿನಲ್ಲಿ ಪೋಡಿ, ಭೂ ಪರಿವರ್ತನೆಗೆ ಸ್ವಯಂ ನಕ್ಷೆ ತಯಾರಿಸಿಕೊಳ್ಳಲು ಅವಕಾಶ
ಸಾರ್ವಜನಿಕರು ತಮ್ಮ ಸ್ವಂತ ಖಾಸಗಿ ಭೂಮಿಯಲ್ಲಿ 11E, ಫೋಡಿ ಮತ್ತು ಭೂ ಪರಿವರ್ತನೆಗಾಗಿ ತಾವೇ ನಕ್ಷೆ ತಯಾರಿಸಿಕೊಳ್ಳಲು ಅವಕಾಶ ಕಲ್ಪಿಸುವ ಯೋಜನೆಯನ್ನು ರಾಜ್ಯ ಸರ್ಕಾರ ಆರಂಭಿಸಿದೆ.
ಬೆಂಗಳೂರು: ಸಾರ್ವಜನಿಕರು ತಮ್ಮ ಸ್ವಂತ ಖಾಸಗಿ ಭೂಮಿಯಲ್ಲಿ 11E, ಫೋಡಿ ಮತ್ತು ಭೂ ಪರಿವರ್ತನೆಗಾಗಿ ತಾವೇ ನಕ್ಷೆ ತಯಾರಿಸಿಕೊಳ್ಳಲು ಅವಕಾಶ ಕಲ್ಪಿಸುವ ಯೋಜನೆಯನ್ನು ರಾಜ್ಯ ಸರ್ಕಾರ ಆರಂಭಿಸಿದೆ. ‘ಸ್ವಾವಲಂಬಿ’ ಹೆಸರಿನ ಈ ಯೋಜನೆಯನ್ವಯ ನಾಗರಿಕರು ತಮ್ಮ ಗುರುತು ದೃಢೀಕರಿಸುವ ಮೂಲಕ ತಮ್ಮ ನಿವೇಶನದ ನಕ್ಷೆಗಾಗಿ ಆನ್‌ಲೈನ್ ಅಥವಾ AJSKನಲ್ಲಿ ಅರ್ಜಿ ಸಲ್ಲಿಸಬಹುದಾಗಿದೆ.
‘11ಇ, ಪೋಡಿ, ಭೂ ಪರಿವರ್ತನೆ, ಹದ್ದುಬಸ್ತ್ ಮತ್ತು ಇತರ ನಕ್ಷೆಗಳನ್ನು ಪಡೆಯಲು ಇನ್ನು ಮುಂದೆ ಸರ್ವೆ ಕಚೇರಿಗಳಿಗೆ ಅಲೆದಾಡುವ ಅಗತ್ಯ ಇಲ್ಲ. ಅರ್ಜಿ ಸಲ್ಲಿಸಿದವರು ಆನ್‌ಲೈನ್ ಮೂಲಕ ಪಡೆದುಕೊಳ್ಳಬಹುದು’ ಎಂದು ಸರ್ವೆ ಸೆಟ್ಲ್‌ಮೆಂಟ್ ಮತ್ತು ಭೂ ದಾಖಲೆಗಳ (ಎಸ್‌ಎಸ್‌ಎಲ್ಆರ್) ಆಯುಕ್ತ ಮುನೀಶ್ ಮೌದ್ಗಿಲ್ ತಿಳಿಸಿದ್ದಾರೆ. ‘ಈ ನಕ್ಷೆಗಳಿಗೆ ಅರ್ಜಿ ಸಲ್ಲಿಸುವ ಸಂದರ್ಭದಲ್ಲಿಯೇ ಶುಲ್ಕ ಪಾವತಿಸುವುದರಿಂದ ಆನ್‌ಲೈನ್ ನಕ್ಷೆಗಳನ್ನು ಮುದ್ರಿಸಿಕೊಳ್ಳಲು ಮತ್ತೆ ಹೆಚ್ಚುವರಿಯಾಗಿ ಯಾವುದೇ ಶುಲ್ಕ ಪಾವತಿಸುವ ಅಗತ್ಯ ಇಲ್ಲ’ ಎಂದೂ ಅವರು ಸ್ಪಷ್ಟಪಡಿಸಿದ್ದಾರೆ.
‘ಅರ್ಜಿ ಸಲ್ಲಿಸಿದ ಬಳಿಕ, ನಕ್ಷೆಯನ್ನು ಅನುಮೋದಿಸಿದ ತಕ್ಷಣ ವೆಬ್‌ಸೈಟ್ ಲಿಂಕ್‌ನಲ್ಲಿ (http://103.138.196.154/service19/Report/ApplicationDetails) ಅದನ್ನು ಮುದ್ರಿಸಲು ಲಭ್ಯವಿರುತ್ತದೆ. ಅದೇ ಲಿಂಕ್‌ನಲ್ಲಿ ಅರ್ಜಿದಾರರು ತಮ್ಮ ಅರ್ಜಿಯ ಸ್ಥಿತಿಯನ್ನೂ ತಿಳಿದುಕೊಳ್ಳಬಹುದು‘ ಎಂದಿದ್ದಾರೆ.
ಈ ಪ್ರಕ್ರಿಯೆ ಹೇಗೆ ಕೆಲಸ ಮಾಡುತ್ತದೆ?
ಅರ್ಜಿ ಸಲ್ಲಿಸಿದ ನಾಗರಿಕನ ಸ್ವತ್ತು ಈ ಸರ್ವೆ ನಂಬರ್ನಲ್ಲಿ ಇದೆಯೇ? ಅದು ಖಾಸಗಿ ಸ್ವತ್ತಾಗಿದೆಯೇ ಎಂದು ಸರ್ವೆ ಇಲಾಖೆಯು ಪರಿಶೀಲಿಸುತ್ತದೆ. ನಂತರ ನಿರ್ದಿಷ್ಟು ಸರ್ವೆ ನಂಬರ್ನಲ್ಲಿ ಅಸ್ತಿತ್ವದಲ್ಲಿರುವ ನಕ್ಷೆಯನ್ನು ಸಹಿ ಮಾಡಿದ ನಾಗರಿಕರಿಗೆ ಆನ್‌ಲೈನ್ ಮೂಲಕ ಕಳಿಸಲಾಗುವುದು.
ನಾಗರಿಕರು ಅಸ್ತಿತ್ವದಲ್ಲಿರುವ ಸಹಿ ಮಾಡಿದ ಸ್ಕೆಚ್ ಅನ್ನು ಸ್ವತಃ ಡೌನ್‌ಲೋಡ್ ಮಾಡಿಕೊಳ್ಳಬಹುದು ಅಥವಾ ನಾಡ ಕಚೇರಿಯಿಂದ ತೆಗೆದುಕೊಳ್ಳಬಹುದು. ಅದನ್ನು ಅವರ ಅಗತ್ಯಕ್ಕೆ ಅನುಗುಣವಾಗಿ 11E, ಫೋಡಿ ಅಥವಾ ಭೂ ಪರಿವರ್ತನೆಗೆ ಬಳಸಬಹುದು. ಈ ಪ್ರಕ್ರಿಯೆಗಾಗಿ ಅವರು ಯಾರ ಸಹಾಯ ಬೇಕಾದರೂ ತೆಗೆದುಕೊಳ್ಳಬಹುದು.
ನಂತರ ನಾಗರಿಕರು ತಮ್ಮ ಸ್ವಂತ ಸಹಿಯೊಂದಿಗೆ ಸ್ವಯಂ ವಿಭಜಿತ ನಕ್ಷೆಯನ್ನು ಅಪ್‌ಲೋಡ್ ಮಾಡಬೇಕು. ಸರ್ವೆ ಇಲಾಖೆಯು ಸ್ಕೆಚ್ ಅನ್ನು ಪರಿಶೀಲಿಸಿ, ಅದು ನಿಯಮಗಳಿಗೆ ಅನುಗುಣವಾಗಿರುವುದು ದೃಢಪಡಿಸಿಕೊಳ್ಳುತ್ತದೆ. ಅದರ ಮೇಲೆ ಸರ್ವೇ ಇಲಾಖೆಯು ಯಾವುದೇ ಆಕ್ಷೇಪಣೆ ಸಲ್ಲಿಸದಿದ್ದರೆ ಕಂದಾಯ ಇಲಾಖೆ ಅದನ್ನು ಅನುಮೋದಿಸುತ್ತದೆ.
ಅನುಮೋದಿತ ನಕ್ಷೆಯನ್ನು ಸರ್ವೆ ಇಲಾಖೆಯಿಂದ ಆನ್‌ಲೈನ್‌ನಲ್ಲಿ ಬಿಡುಗಡೆ ಮಾಡಲಾಗುತ್ತದೆ. ಇದು ನಾಡ ಕಚೇರಿ ಅಥವಾ ಇತರ ಸರ್ಕಾರಿ ಕೌಂಟರ್‌ಗಳಲ್ಲಿಯೂ ಸಹ ಲಭ್ಯವಿರುತ್ತದೆ. ನಾಗರಿಕರು ಅದನ್ನು ಮುದ್ರಿಸಿಕೊಂಡು ನೋಂದಣಿ ಸೇರಿದಂತೆ ಇತರ ಅಗತ್ಯ ಉದ್ದೇಶಗಳಿಗಾಗಿ ಬಳಸಿಕೊಳ್ಳಬಹುದು.
ಇದನ್ನೂ ಓದಿ: ಮುನೀಶ್ ಮೌದ್ಗೀಲ್ ಅವರಿಗೆ ಬಾಂಬೆ ಐಐಟಿ ಪುರಸ್ಕಾರ: ಪರಿಣಾಮಕಾರಿ ಆಡಳಿತಕ್ಕೆ ತಂತ್ರಜ್ಞಾನದ ಮೆರುಗು ಕೊಟ್ಟ ಸಾಧಕ
ಇದನ್ನೂ ಓದಿ: ಕರ್ನಾಟಕಕ್ಕೆ ಮತ್ತೊಂದು ಹೆಮ್ಮೆ; ಕೊವಿಡ್ ವಾರ್ ರೂಂ ಮುಖ್ಯಸ್ಥ ಐಎಎಸ್ ಅಧಿಕಾರಿ ಮೌನೀಶ್ ಮೌದ್ಗಿಲ್ಗೆ ರಾಷ್ಟ್ರ ಪ್ರಶಸ್ತಿ
Published On - 2:31 pm, Tue, 26 April 22