ಪರಿಸ್ಥಿತಿ ಕೈ ಮೀರುವ ಮುನ್ನ ನೆಮ್ಮಾರು ತೂಗು ಸೇತುವೆಗೆ ಕಲ್ಪಿಸಬೇಕಿದೆ ಭದ್ರತೆ
ನೆಮ್ಮಾರು ತೂಗು ಸೇತುವೆ ಸುಮಾರು 20 ವರ್ಷಗಳಷ್ಟು ಹಳೆಯದ್ದು. ಅದನ್ನ ಕಟ್ಟಿ ಹೋದ ಸರ್ಕಾರ, ಜನಪ್ರತಿನಿಧಿಗಳು ಈಗ ಹೇಗಿದೆ ಅಂತ ತಿರುಗಿಯೂ ನೋಡಿಲ್ಲ. ಶಿಥಿಲಿಗೊಂಡಿರುವ ಈ ತೂಗು ಸೇತುವೆ ಮೇಲೆ ನಡೆಯಲು ಜನರು ಭಯಪಡುತ್ತಿದ್ದಾರೆ. ಇನ್ನಾದರೂ ಸರ್ಕಾರ ಎಚ್ಚೆತ್ತುಕೊಳ್ಳುವುದೇ?
ಚಿಕ್ಕಮಗಳೂರು: ಜಿಲ್ಲೆಯ ಶೃಂಗೇರಿ ತಾಲೂಕಿನ ನೆಮ್ಮಾರು ಗ್ರಾಮದಲ್ಲಿರುವ ತೂಗು ಸೇತುವೆ ಸುಂಕದಮಕ್ಕಿ ಹಾಗೂ ಹೆಡದಾಳು ಗ್ರಾಮದ ನೂರಾರು ಕುಟುಂಬಗಳಿಗೆ ಆಧಾರವಾಗಿದೆ. ಸುಮಾರು 150ಕ್ಕೂ ಹೆಚ್ಚು ಕುಟುಂಬಗಳಿಗೆ ಬೇರೆ ಮಾರ್ಗ ಇದ್ದರೂ 12 ಕಿ.ಮೀ. ಸುತ್ತಿ ಬರಬೇಕು. ಹಾಗಾಗಿ 20 ವರ್ಷಗಳ ಹಿಂದೆ ಸರ್ಕಾರವೇ ತೂಗುಸೇತುವೆ ನಿರ್ಮಿಸಿ ಕೊಟ್ಟಿತ್ತು. ವಿಪರ್ಯಾಸ ಎಂದರೆ, ಸೇತುವೆ ನಿರ್ಮಿಸಿದ ನಂತರ ಅಧಿಕಾರಿಗಳಾಗಳಿ, ಜನಪ್ರತಿನಿಧಿಗಳಾಗಲಿ ಆ ಸೇತುವೆ ಈಗ ಹೇಗಿದೆ ಎಂದು ತಿರುಗಿಯೂ ನೋಡಿಲ್ಲ. ಸರಿಯಾದ ನಿರ್ವಹಣೆ ಇಲ್ಲದೆ ಶಿಥಿಲಗೊಂಡಿರುವ ಈ ಸೇತುವೆ ತನ್ನ ಸಾಮರ್ಥ್ಯವನ್ನ ಕಳೆದುಕೊಂಡಿದೆ. ಸೇತುವೆಗೆ ಹಾಕಿರುವ ಗ್ರಿಲ್ಗಳು ಕಿತ್ತು ಬಂದಿವೆ. ಸೇತುವೆಯ ಫುಟ್ ಪಾತ್ ಹಾಗೂ ತಡೆಗೋಡೆಗೆ ಹಾಕಿರುವ ಗ್ರಿಲ್ಗಳ ಜಾಯಿಂಟ್ ಕೂಡ ಬಿರುಕು ಬಿಟ್ಟಿದ್ದು, ಕೊಂಚ ಮೈಮರೆತರೂ ಕಾಲು ಕೆಳಗೆ ಹೋಗುತ್ತದೆ. ಹಣೆಬರಹ ತೀರಾ ಕೆಟ್ಟಿದ್ದರೆ ತುಂಗಾನದಿ ಪಾಲಾದರೂ ಆಶ್ಚರ್ಯ ಇಲ್ಲ. ಹಾಗಾಗಿ ಸರ್ಕಾರ ಕೂಡಲೇ ಇತ್ತ ಗಮನ ಹರಿಸಿ ಸೇತುವೆಗೆ ಬಣ್ಣ ಹೊಡೆದು, ಗ್ರೀಸ್ ಹಾಕಿ ಬಂದೋಬಸ್ತ್ ಮಾಡಬೇಕೆಂದು ವಿದ್ಯಾರ್ಥಿಗಳು ಮನವಿ ಮಾಡಿಕೊಳ್ಳುತ್ತಿದ್ದಾರೆ.
ಸೇತುವೆ ಸ್ಥಿತಿ ಬಗ್ಗೆ ಸ್ಥಳೀಯರು ಹಲವು ಬಾರಿ ಅಧಿಕಾರಿಗಳ ಗಮನಕ್ಕೆ ತಂದಿದ್ದಾರೆ. ಆದರೆ ಸ್ಥಳಕ್ಕೆ ಬಂದು ಹೋಗುವ ಅಧಿಕಾರಿಗಳ ಕಥೆ ಬಂದ ಪುಟ್ಟ ಹೋದ ಪುಟ್ಟ ಎಂಬಂತಾಗಿದೆ. ಒಂದು ವೇಳೆ ಈ ಸೇತುವೆ ಹಾಳಾದರೆ ಈ ಭಾಗದ ಜನ ಸಣ್ಣ ಕೆಲಸಕ್ಕೂ ಹೆದ್ದಾರಿಗೆ ಬರಬೇಕೆಂದರೆ ಕನಿಷ್ಠ 12 ಕಿ.ಮೀ. ಸುತ್ತಿ ಬಳಸಿ ಬರಬೇಕು. ಮಳೆಗಾಲದಲ್ಲಿ ಅಷ್ಟೊಂದು ದೂರ ಕ್ರಮಿಸುವುದು ಅಸಾಧ್ಯದ ಮಾತು. ಮಕ್ಕಳು ಶಾಲಾ-ಕಾಲೇಜಿಗೆ ಹೋಗಲು ಕೂಡ ಸಾಧ್ಯವಿಲ್ಲ. ನಿತ್ಯ 25 ಕಿ.ಮೀ. ನಡೆದು ಹೋಗಬೇಕಾಗುತ್ತದೆ. ಈ ಸೇತುವೆ ನಿರ್ಮಾಣವಾದಗಿನಿಂದಲೂ ಒಂದೇ ಒಂದು ಬಾರಿ ಮಾತ್ರ ಬಣ್ಣ ಮತ್ತು ಗ್ರೀಸ್ ಹಚ್ಚಲಾಗಿದೆ. ಮೊದಲೆಲ್ಲಾ 4-5 ಜನ ಓಡಾಡಿದರೂ ಏನೂ ಆಗದ ಸೇತುವೆ ಈಗ ಒಬ್ಬಿಬ್ಬರು ಓಡಾಡಿದರೆ ತೂಗಾಡುತ್ತದೆ. ಹೀಗಾಗಿ ಸೇತುವೆಯಲ್ಲಿ ನಡೆದುಕೊಂಡು ಹೋಗಲು ಭಯವಾಗುತ್ತದೆ ಎಂದು ಸ್ಥಳೀಯರು ಹೇಳುತ್ತಿದ್ದಾರೆ.
ಸದ್ಯ ಗುಜರಾತ್ನಲ್ಲಿ ಆಗಿರುವ ಅನಾಹುತವನ್ನ ನೆನೆದು ದೇಶವೇ ಮರುಗುತ್ತಿದೆ. ಇಂತಹ ಅನಾಹುತಗಳು ಎಲ್ಲೂ ನಡೆಯದಿರಲಿ ಅಂತ ಬೇಡಿಕೊಳ್ಳುತ್ತಿದ್ದಾರೆ. ಈ ಮಧ್ಯೆ ತುಕ್ಕು ಹಿಡಿದಿರುವ ಈ ರೀತಿಯ ಸೇತುವೆಗಳು ಜನರಲ್ಲಿ ಆತಂಕವನ್ನು ಹುಟ್ಟಿಸಿವೆ. ಒಟ್ಟಾರೆಯಾಗಿ ಸರ್ಕಾರ ಬಡಜನರಿಗೆಂದು ತೂಗು ಸೇತುವೆಯನ್ನು ಏನೋ ನಿರ್ಮಿಸಿ ಕೊಟ್ಟಿದೆ. ಆದರೆ ಅದರ ನಿರ್ವಹಣೆ ಮಾಡುವವರು ಯಾರು ಎಂಬಂತಾಗಿದೆ. ಇದರಿಂದಾಗಿ ಈ ಸೇತುವೆ ಸಂಪೂರ್ಣ ಶಿಥಿಲಾವಸ್ಥೆ ತಲುಪಿದೆ. ಕಂಬಿ ಕಿತ್ತು ಹೋಗಿವೆ, ಇಂಟರ್ ಲಿಂಕ್ ಹೋಗಿವೆ, ತೂಗುಸೇತುವೆ ಸಂಪೂರ್ಣ ತೂಗಾಡುತ್ತಿದೆ. ಪರಿಸ್ಥಿತಿ ಕೈಮೀರಿ ಹೋದ ನಂತರ ಅಯ್ಯೋ ದೇವರೇ ಎನ್ನುವ ಬದಲು ಈಗಲೇ ಸರ್ಕಾರ ಎಚ್ಚೆತ್ತು ರಾಜ್ಯದಲ್ಲಿ ಶಿಥಲಗೊಂಡಿರುವ ತೂಗು ಸೇತುವೆಗಳನ್ನು ದುರಸ್ತಿಗೊಳಿಸಬೇಕಿದೆ.
ವರದಿ: ಪ್ರಶಾಂತ್, ಟಿವಿ9 ಚಿಕ್ಕಮಗಳೂರು
ಮತ್ತಷ್ಟು ರಾಜ್ಯದ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ