ನಾಯಿ ಬೊಗಳಿದ ವಿಚಾರಕ್ಕಾಗಿ ದಂಪತಿ ಮೇಲೆ ಆಸಿಡ್ ದಾಳಿ ಮಾಡಿದ ಪಕ್ಕದ ಮನೆಯವರು, ಏನಿದರ ಒಳಸುಳಿ?
ಜಸ್ಟ್ ನಾಯಿ ಬೊಗಳಿದ ವಿಚಾರವಾಗಿ ಆರಂಭವಾದ ಗಲಾಟೆ ಆಸಿಡ್ ದಾಳಿ ವರೆಗೂ ಹೋಗಿದೆ. ಈ ಎರಡು ಕುಟುಂಬದ ನಡುವೆ ನಿತ್ಯ ನಡೆಯುತ್ತಿದ್ದ ಗಲಾಟೆ ಈ ಮಟ್ಟಕ್ಕೆ ಬಂದು ತಲುಪುತ್ತೆ ಅಂತ ಗ್ರಾಮಸ್ಥರು ಅಂದುಕೊಂಡಿರಲಿಲ್ಲ. ನಮ್ಮ ಊರಿನಲ್ಲಿ ಇಂತಹ ಘಟನೆ ನಡೆದು ಹೋಯಿತಲ್ಲ ಅಂತ ಗ್ರಾಮಸ್ಥರು ಆತಂಕಗೊಂಡಿದ್ದಾರೆ.
ಅಕ್ಕಪಕ್ಕದ ಮನೆಯವರ ನಡುವೆ ಹಳೆಯ ದ್ವೇಷ, ನಿತ್ಯವೂ ಕಿರಿಕ್, ಬೆಳಗ್ಗೆ ಆರಂಭವಾಗುವ ಈ ಎರಡು ಮನೆಯವರ ಗಲಾಟೆ ಸೂರ್ಯ ಮುಳುಗಿ ಕತ್ತಲಾದ್ರೂ ಗಲಾಟೆ ತಂಟೆ ಮುಗಿಯುತ್ತಿರಲಿಲ್ಲ. ಮನಸ್ತಾಪ ಮಿತಿಮೀರಿ ಆಸಿಡ್ ದಾಳಿ (Acid attack) ನಡೆಸುವರೆಗೂ ಬಂದು ತಲುಪಿದ್ದು ಜಸ್ಟ್ ಒಂದು ಸಾಕುನಾಯಿ ವಿಷಯಕ್ಕೆ. ಆದರೆ ಇಲ್ಲಿ ಹಳೆಯ ದ್ವೇಷ, ಆಸ್ತಿಗಾಗಿ ಕಿರಿಕ್, ಸೂರ್ಯ ಹುಟ್ಟಿ ಮುಳುಗುವವರೆಗೂ ಎರಡೂ ಮನೆಯವರ ಗಲಾಟೆ ಮನೆ ಮಾಡಿದೆ. ಏನಿದು ನಾಯಿಗಾಗಿ ಆಸಿಡ್ ದಾಳಿ ಅಂತೀರಾ ಈ ಸ್ಟೋರಿ ನೋಡಿ. ಜಸ್ಟ್ ಒಂದು ಸಾಕು ನಾಯಿ ಬೊಗಳಿದಕ್ಕೆ ನಡೆಯಬಾರದ್ದು ನಡೆದೇ ಹೋಗಿದೆ. ನಾಯಿ ಬೊಗಳಿದಕ್ಕೆ (Barking Dog) ಆರಂಭವಾದ ಗಲಾಟೆ ಆಸಿಡ್ ಹಾಕುವ ವರೆಗೂ ಬಂದು ತಲುಪಿದ್ದು ಇಡೀ ಮಲೆನಾಡನ್ನ ಬೆಚ್ಚಿ ಬೀಳಿಸಿದೆ. ಚಿಕ್ಕಮಗಳೂರು ಜಿಲ್ಲೆಯ N.R. ಪುರ ತಾಲೂಕಿನ (NR Pura taluk in Chikmagalur) ಹಾಳ್ ಕರಗುಂದ ಗ್ರಾಮ. ಸುತ್ತ ಕಾಡು ಅಡಿಕೆ ತೋಟ. ಒಂಟಿ ಮನೆಗಳೆ ಹೆಚ್ಚಿರುವ ಗ್ರಾಮವದು.
ಹಾಳ್ ಕರಗುಂದ ಗ್ರಾಮದ ಹೊರ ವಲಯದಲ್ಲಿ ಜೇಮ್ಸ್ ಮತ್ತು ಸುಂದರಾಜ್ ಅವರ ಮನೆಗಳಿವೆ . ಈ ಎರಡು ಕುಟುಂಬಗಳ ನಡುವೆ ಹಳೆಯ ದ್ವೇಷ ಮನೆಯ ಪಕ್ಕದ ಜಮೀನಿನ ವಿಚಾರವಾಗಿ ನಿತ್ಯವೂ ಗಲಾಟೆ ನಡೆದಿತ್ತು. ವರ್ಷ ಪೂರ್ತಿ ಗಲಾಟೆ. ಈ ಎರಡು ಕುಟುಂಬದ ಗಲಾಟೆ ಬಗ್ಗೆ ಊರಿನವರು ಇದು ಮಾಮೂಲಿ ಅಂತ ಅಷ್ಟಾಗಿ ತಲೆ ಕೆಡಿಸಿಕೊಳ್ಳುತ್ತಿರಲಿಲ್ಲ. ಬಡಗಿ ಕೆಲಸ ಮಾಡುತ್ತಿದ್ದ ಸುಂದರ್ ರಾಜ್ ಮದುವೆಯಾಗಿ ಹೆಂಡತಿಯಿಂದ ದೂರವಾಗಿ ತಾಯಿ ಜೊತೆ ವಾಸವಾಗಿದ್ದ. ಜೇಮ್ಸ್ ತನ್ನ ಅಡಿಕೆ ತೋಟದಲ್ಲಿ ಕೆಲಸ ಮಾಡಿಕೊಂಡಿದ್ದ. ಆದ್ರೆ ಜೇಮ್ಸ್ ಮತ್ತು ಸುಂದರ್ ರಾಜ್ ನಡುವೆ ಮುಗಿಯದ ಗಲಾಟೆ. ಈ ಹಳೆ ಆಸ್ತಿ ವಿಚಾರದ ಗಲಾಟೆ ಒಂದು ವಾರದಿಂದ ಮಿತಿಮೀರಿದ್ದು ಇದೆ ಗಲಾಟೆ ಜೇಮ್ಸ್ ಜೈಲು ಸೇರಿದ್ರೆ ಸುಂದರ್ ರಾಜ್ ಆಸ್ಪತ್ರೆ ಸೇರುವಂತೆ ಮಾಡಿದೆ.
ಅವತ್ತು ಡಿಸೆಂಬರ್ 3 ನೇ ತಾರೀಕು… ಬೆಳಗ್ಗೆಯಿಂದ ಎರಡೂ ಕುಟುಂಬದ ಜಗಳ ಆರಂಭವಾಗಿತ್ತು. ಸಂಜೆ 7 ಗಂಟೆಯ ಸಮಯ ಸುಂದರ್ ರಾಜ್ ಸಾಕಿದ್ದ ನಾಯಿ ಬೊಗಳಲು ಶುರು ಮಾಡಿತ್ತು. ಬೊಗಳಿದ ನಾಯಿಗೆ ಮನಸೋಇಚ್ಛೆ ಬೈಯಲು ಆರಂಭ ಮಾಡಿದ್ದ, ಈ ಬೈಗುಳಗನ್ನ ಕೇಳಿದ ಜೇಮ್ಸ್ ಮತ್ತು ಪತ್ನಿ ಮರಿಯಮ್ಮ ಮನೆಯಿಂದ ಹೊರ ಬಂದಿದ್ರು.
ನಾಯಿ ಹೆಸರಿನಲ್ಲಿ ತಮಗೆ ಬೈಯುತ್ತಿದ್ದಾನೆ ಎಂದು ಜೇಮ್ಸ್ ದಂಪತಿ ಸುಂದರ್ ರಾಜು ಜೊತೆ ಜಗಳಕ್ಕೆ ನಿಂತಿದ್ರು. ಇದೆ ಜಗಳ ಪರಸ್ಪರ ಬೈದಾಡಿಕೊಂಡು ಕೈ ಕೈ ಮಿಲಾಯಿಸಿದರು. ಯಾವಾಗ ಜೇಮ್ಸ್ ಮತ್ತು ಸುಂದರ್ ರಾಜು ನಡುವೆ ಹೊಡೆದಾಟ ಆರಂಭವಾಯಿತೋ ಮನೆ ಒಳಗೆ ಹೋಗಿದ ಮರಿಯಮ್ಮ ಏಕಾಏಕಿ ಹೊರಬಂದವಳೇ ಸುಂದರ್ ರಾಜು ಮೇಲೆ ಆಸಿಡ್ ಹಾಕಿಯೇ ಬಿಟ್ಳು. ಆಸಿಡ್ ಮುಖಕ್ಕೆ ಬೀಳುತ್ತಿದ್ದಂತೆ ನೋವು ತಾಳಲಾರದೆ ನೆಲಕ್ಕೆ ಬಿದ್ದು ಒದ್ದಾಡ ತೊಡಗಿದ್ದ. ಎಡ ಭಾಗಕ್ಕೆ ಬಿದ್ದ ಆಸಿಡ್ ಸುಂದರ್ ರಾಜುವಿನ ಕಣ್ಣು ಸೇರಿತ್ತು. ಇದಾದಮೇಲೆ ಇನ್ನು ಅಲ್ಲಿಯೇ ಇದ್ರೆ ಸರಿಹೋಗಲ್ಲ ಅಂತ ಗಂಡ ಹೆಂಡತಿ ಎಸ್ಕೇಪ್ ಆಗಿದಾರೆ.
ಆಸಿಡ್ ದಾಳಿಗೆ ಒಳಗಾಗಿದ್ದ ಸುಂದರ್ ರಾಜ್ ನನ್ನ N.R. ಪುರ ತಾಲೂಕು ಆಸ್ಪತ್ರೆಗೆ ದಾಖಲಿಸಿ, ನಂತರ ಹೆಚ್ಚಿನ ಚಿಕಿತ್ಸೆ ಗಾಗಿ ಶಿವಮೊಗ್ಗದ ಮೆಗ್ಗಾನ್ ನಲ್ಲಿ ದಾಖಲಿಸಿ ಎರಡು ದಿನ ಚಿಕಿತ್ಸೆ ನೀಡಿ ಇನ್ನೂ ಹೆಚ್ಚಿನ ಚಿಕಿತ್ಸೆಗಾಗಿ ಬೆಂಗಳೂರಿನ ಮಿಂಟೋ ಆಸ್ಪತ್ರೆಗೆ ದಾಖಲು ಮಾಡಲಾಗಿದೆ. ಸುಂದರ್ ರಾಜ್ ಮುಖ, ಎಡಗಣ್ಣು, ಕೆನ್ನೆ ಆಸಿಡ್ ದಾಳಿಗೆ ಸುಟ್ಟು ಹೋಗಿದೆ ಎಂದು ವೈದ್ಯರು ಹೇಳಿದ್ದಾರೆ. ಈ ಆಸಿಡ್ ದಾಳಿಯಿಂದ ಆತಂಕಗೊಂಡಿರುವ ಸುಂದರ್ ರಾಜ್ ತಾಯಿ N.R. ಪುರ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದಾರೆ. ಜೇಮ್ಸ್ ಮರಿಯಮ್ಮ ವಿರುದ್ಧ ಪ್ರಕರಣ ದಾಖಲಿಸಿಕೊಂಡಿರುವ N.R. ಪೊಲೀಸರು ಜೇಮ್ಸ್ ಬಂಧಿಸಿ ಜೈಲಿಗೆ ಬಿಟ್ಟು ಬಂದಿದ್ದಾರೆ. ಇನ್ನೂ ಮರಿಯಮ್ಮ ತಲೆ ಮರೆಸಿಕೊಂಡಿದ್ದು, ಪೊಲೀಸರು ಬಂಧನಕ್ಕೆ ಬಲೆಬಿಸಿದ್ದಾರೆ. ಅದೇನೆ ಇರಲಿ ಶಾಂತವಾಗಿರುವ ಮಲೆನಾಡಿನಲ್ಲಿ ಜಸ್ಟ್ ಸಾಕು ನಾಯಿ ವಿಚಾರಕ್ಕೆ ಇಂತಹ ಘಟನೆ ನಡೆದಿದ್ದು ದುರಂತವೇ ಸರಿ.
ಆಸಿಡ್ ದಾಳಿ ಕುರಿತಾದ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ