Awais Ahmed: ಅಮೆರಿಕಾದಿಂದ ಹಾರಿದಳು ಶಕುಂತಲಾ! ಇತ್ತ ಕಾಫಿನಾಡಿನ ಯುವಕನ ಸಾಧನೆಗೆ ಎಲ್ಲರೂ ಫಿದಾ

Awais Ahmed: ಅಮೆರಿಕಾದಿಂದ ಹಾರಿದಳು ಶಕುಂತಲಾ! ಇತ್ತ ಕಾಫಿನಾಡಿನ ಯುವಕನ ಸಾಧನೆಗೆ ಎಲ್ಲರೂ ಫಿದಾ
ಅಮೆರಿಕಾದಿಂದ ಹಾರಿದಳು ಶಕುಂತಲಾ! ಇತ್ತ ಕಾಫಿನಾಡಿನ ಯುವಕನ ಸಾಧನೆಗೆ ಎಲ್ಲರೂ ಫಿದಾ!

ಅವೆಜ್ ಅಹಮದ್​ ಸಂಶೋಧನೆಯ ಉಪಗ್ರಹ ಬೇರೆಲ್ಲಕ್ಕಿಂತ ಶೇ 50ಕ್ಕಿಂತ ಹೆಚ್ಚು ವೇಗವಾಗಿ ಡೇಟಾ ಬಿಡುಗಡೆಗೊಳಿಸುತ್ತೆ. ಅವೇಜ್ ತಯಾರಿಸಿರೋ ಉಪಗ್ರಹ ಭೂಮಿಯ ಚಲನವಲನದ ಫೋಟೋ, ಕೃಷಿ ಪ್ರಗತಿ, ಹವಾಮಾನದ ಮಾಹಿತಿ ಸೇರಿದಂತೆ ವಿವಿಧ ರೀತಿಯ ಮಾಹಿತಿ ರವಾನಿಸುತ್ತೆ. ಮುಂದಿನ ಡಿಜಿಟಲ್ ಯುಗದಲ್ಲಿ ಈ ಉಪಗ್ರಹಗಳ ಅಗತ್ಯ ಹೆಚ್ಚಾಗುತ್ತದೆ ಅನ್ನೋದು ಅವೇಜ್ ಅಹ್ಮದ್ ತಂಡದ ನಿರೀಕ್ಷೆ.

TV9kannada Web Team

| Edited By: sadhu srinath

Apr 07, 2022 | 8:59 PM

ಚಿಕ್ಕಮಗಳೂರು: ಆತ ಎಲ್ಲರಂತೆಯೇ ಸಾಮಾನ್ಯರಲ್ಲಿ ಸಾಮಾನ್ಯರಂತೆ ಓದ್ಕೊಂಡ್.. ಓಡಾಡ್ಕೊಂಡ್ ಇದ್ದ ಯುವಕ. ಆದರೆ ತನ್ನಲ್ಲಿದ್ದ ಅಸಾಮಾನ್ಯ ನಾಲೆಡ್ಜನ್ನ ಹಂಗೆ ಹರಿದು ಹಂಚಿಹೋಗಲು ಬಿಡ್ಲಿಲ್ಲ (Aldur in Chikkamagalur). ಪರಿಣಾಮ ಇವತ್ತು ಅಮೆರಿಕಾಕ್ಕೆ ಹೋಗಿ ಉಪಗ್ರಹವೊಂದನ್ನ ಲಾಂಚ್ ಮಾಡಿ ತಾನು ಏನೆಂಬುದನ್ನ ಸಾಬೀತು ಮಾಡಿದ್ದಾನೆ (Awais Ahmed). ಮುಂದಿನ ದಿನಗಳಲ್ಲಿ ಡಿಜಿಟಲ್ ಕ್ಷೇತ್ರದಲ್ಲಿ ಹೊಸ ಮೈಲಿಗಲ್ಲು ಸ್ಥಾಪಿಸಲು ಈ ಉಪಗ್ರಹ ನೆರವಾಗಲಿದೆ. ದೇಶವೇ ಹೆಮ್ಮೆ ಪಡುವ ಮಗನ ಸಾಧನೆ ಕಂಡು ಅತ್ತ ಕಾಫಿನಾಡಿನಲ್ಲಿ ಪೋಷಕರು ಭಾವುಕರಾಗಿದ್ದಾರೆ (private satellite shakuntala).

ಕಾಫಿನಾಡಿನ ಯುವಕನಿಂದ ಅಮೆರಿಕಾದಲ್ಲಿ ಹಾರಿತ್ತು ಉಪಗ್ರಹ! ಜೀವನದಲ್ಲಿ ಎಲ್ಲರಿಗೂ ಒಂದು ಕನಸು ಇರುತ್ತೆ.! ಓದ್ಬೇಕು, ಓದಿ ಒಂದು ಡಿಗ್ರಿನೋ.. ಮಾಸ್ಟರ್ ಡಿಗ್ರಿನೋ ಅಥವಾ ಇನ್ಯಾವ್ದೋ ಪದವಿಯನ್ನೋ ಪಡೀಬೇಕು ಅನ್ನೋ ಹಂಬನವಿರುತ್ತೆ.! ಚೆನ್ನಾಗಿ ಸ್ಕೋರ್ ಮಾಡಿ ಸರ್ಕಾರಿ ಕೆಲ್ಸಕ್ಕೆ ಸೇರ್ಕೋಬೇಕು.. ! ತಪ್ಪಿದ್ರೆ ಒಳ್ಳೆ ಸ್ಯಾಲರಿ ಸಿಗೋ ಪ್ರೆವೇಟ್ ಜಾಬ್ ಆದ್ರೂ ಪರ್ವಾಗಿಲ್ಲ ಅನ್ನೋ ಸಹಜ ಆಕಾಂಕ್ಷೆ ಬಹುತೇಕ ಯುವಜನರಿಗೆ ಇರುತ್ತೆ. ! ಆದ್ರೆ ಇಲ್ಲೊಬ್ಬ ಯುವಕ ಇದಕ್ಕೆ ತದ್ವಿರುದ್ದ, ಆತನ ವಯಸ್ಸಿನ್ನೂ 24. ಚಿಕ್ಕಮಗಳೂರು ತಾಲೂಕಿನ ಆಲ್ದೂರಿನ ಈ ಯುವಕ ಇದೀಗ ಇಡೀ ದೇಶವೇ ಹೆಮ್ಮೆ ಪಡುವಂತಹ ಸಾಧನೆ ಮಾಡಿದ್ದಾನೆ. ಸಾಮಾನ್ಯವಾಗಿ ಅಲ್ಲಿ ಇಲ್ಲಿ ರೆಸ್ಯೂಮ್ ಇಡ್ಕೊಂಡ್ ಈ ವಯಸ್ಸಲ್ಲಿ ಅಮೆರಿಕದ ಸ್ಪೇಸ್ ಏಕ್ಸ್ ನಿಂದ ಉಪಗ್ರಹವೊಂದನ್ನ ಬಾಹ್ಯಾಕಾಶಕ್ಕೆ ಯಶಸ್ವಿಯಾಗಿ ಹಾರಿಸಿ ಹೊಸ ಮೈಲುಗಲ್ಲನ್ನ ಸಾಧಿಸಿದ್ದಾನೆ.

ಬಾಹ್ಯಕಾಶಕ್ಕೆ ಹಾರಿರೋ ಉಪಗ್ರಹದ ವಿಶೇಷತೆ ಏನು? ಬೇರೆ ಎಲ್ಲಾ ಉಪಗ್ರಹಗಳು ಯಾವ ರೀತಿ ಡೇಟಾವನ್ನ ಬಿಡುಗಡೆ ಮಾಡುತ್ತವೆಯೋ ಅವೆಜ್ ಅಹಮದ್​ ಅವರ ಸಂಶೋಧನೆಯ ಉಪಗ್ರಹ ಬೇರೆಲ್ಲಕ್ಕಿಂತ ಶೇಕಡ 50ಕ್ಕಿಂತ ಹೆಚ್ಚು ವೇಗವಾಗಿ ಡೇಟಾವನ್ನ ಬಿಡುಗಡೆಗೊಳಿಸುತ್ತೆ. ಅವೇಜ್ ತಯಾರಿಸಿರೋ ಉಪಗ್ರಹ ಭೂಮಿಯ ಚಲನವಲನದ ಫೋಟೋ, ಕೃಷಿ ಪ್ರಗತಿ, ಹವಾಮಾನದ ಮಾಹಿತಿ ಸೇರಿದಂತೆ ವಿವಿಧ ರೀತಿಯ ಮಾಹಿತಿ ರವಾನಿಸುತ್ತೆ. ಸದ್ಯ ಎಲ್ಲವೂ ಡಿಜಿಟಲೀಕರಣ ಆಗ್ತಿದ್ದು, ಮುಂದಿನ ಡಿಜಿಟಲ್ ಯುಗದಲ್ಲಿ ಈ ಉಪಗ್ರಹಗಳ ಅಗತ್ಯತೆ ಹೆಚ್ಚಾಗಿ ಉಪಯೋಗಕ್ಕೆ ಬರುತ್ತೆ ಅನ್ನೋದು ಅವೇಜ್ ಅಹ್ಮದ್ ತಂಡದ ನಿರೀಕ್ಷೆ.

ಉಪಗ್ರಹಕ್ಕೆ ಶಕುಂತಲಾ ನಾಮಕರಣ ಮಾಡಿದ್ದು ಯಾಕೆ.? ಕಾಫಿನಾಡಿನ ಯುವಕ ಅವೇಜ್ ಅಹ್ಮದ್ ಹಾಗೂ ತಂಡ ಹಾರಿಸಿರೋ ಉಪಗ್ರಹಕ್ಕೆ ಶಕುಂತಲಾ ಎಂದು ನಾಮಕರಣ ಮಾಡಲಾಗಿದೆ. ಸಾಮಾನ್ಯವಾಗಿ ಸರ್ಕಾರಿ ಸ್ವಾಮ್ಯದ ಬಾಹ್ಯಾಕಾಶ ಸಂಸ್ಥೆಗಳು ಉಡಾವಣೆ ಮಾಡುವ ಉಪಗ್ರಹಗಳಿಗೆ ಈ ರೀತಿಯ ಹೆಸರಿಡೋದು ತೀರಾ ಅಪರೂಪ. ಆದರೆ ಇದು ಖಾಸಗಿ ಉಪಗ್ರಹವಾಗಿದ್ದರಿಂದ ದೊಡ್ಡ ಮಟ್ಟದಲ್ಲಿ ಆರ್ಥಿಕ ನೆರವು ಕೂಡ ಬೇಕಾಗಿರುವುದರಿಂದ ಹಣಕಾಸಿನ ನೆರವು ಅತ್ಯಗತ್ಯ. ಸದ್ಯ ಅವೇಜ್ ಅಹ್ಮದ್ ತಂಡ ಉಡಾವಣೆ ಮಾಡಿರೋ ಉಪಗ್ರಹಕ್ಕೆ ನಾಗಪುರದ ಉದ್ಯಮಿಯೊಬ್ಬರು ಆರ್ಥಿಕ ನೆರವನ್ನ ನೀಡಿದ್ದಾರೆ. ಆ ಉದ್ಯಮಿಯ ತಾಯಿಯ ಹೆಸರು ಶಕುಂತಲಾ ಆಗಿದ್ದರಿಂದ ಅದೇ ಹೆಸರನ್ನ ಉಪಗ್ರಹಕ್ಕೆ ನಾಮಕರಣ ಮಾಡುವಂತೆ ಕೇಳಿಕೊಂಡಿದ್ದರಿಂದ ಆ ಹೆಸರನ್ನ ಉಪಗ್ರಹಕ್ಕೆ ಇಡಲಾಗಿದೆ.

ಬಾನಂಗಳದಲ್ಲಿ ಹಾರಿದ ಉಪಗ್ರಹ, ಕೇಕ್ ಕತ್ತರಿಸಿ ತವರಲ್ಲಿ ಸಂಭ್ರಮ.! ಕಣ್ಣ ಮುಂದೆ ಆಡಿ ಬೆಳೆದ ಹುಡುಗನ ಸಾಧನೆ ಕಂಡು ಆಲ್ದೂರಿನ ಜನ ಸಂತೋಷಗೊಂಡಿದ್ದು ತಮ್ಮ ಮಕ್ಕಳೇ ಸಾಧಿಸಿದಷ್ಟು ಸಂತೋಷ ಪಡ್ತಿದ್ದಾರೆ. ಸಾಮಾನ್ಯವಾಗಿ ಹದಿಹರೆಯ ವಯಸ್ಸಿನಲ್ಲಿ ಓದಿನ ಬಗ್ಗೆ ಏಕಾಗ್ರತೆ ವಹಿಸುವವರು ತೀರಾ ಕಡಿಮೆ. ಆದ್ರಲ್ಲೂ ಯಾವುದೋ ಒಂದು ಸರ್ಕಾರಿ ಕೆಲ್ಸನೋ, ಫ್ರೈವೇಟ್ ಜಾಬೋ ಸಿಕ್ಕಿದ್ರೆ ಸಾಕೆನ್ನುವ ಈ ಸಮಯದಲ್ಲಿ ಅವೇಜ್ ಆಹ್ಮದ್ ನಂತಹ ಯುವಕ ಎಲ್ಲರಿಗೂ ಮಾದರಿಯಾಗಿದ್ದಾನೆ. ಪ್ರತಿಯೊಬ್ಬರು ಹುಬ್ಬೇರಿಸುವ ರೀತಿಯಲ್ಲಿ ಸಾಧನೆ ಮಾಡಿ ದೇಶವೇ ಹೆಮ್ಮೆಪಡುವಂತಹ ಸಾಧನೆ ಮಾಡಿದ್ದಾನೆ. ಟಿವಿ9 ಜೊತೆ ಮಗನ ಸಾಧನೆಯನ್ನ ಹಂಚಿಕೊಂಡ ಪೋಷಕರು, ಆತನ ಕನಸು ನನಸಾಗಿರುವುದಕ್ಕೆ ತುಂಬಾನೇ ಸಂತಸವಾಗಿದೆ ಅಂತಾ ಭಾವುಕರಾದರು.

ಸ್ಯಾಟ್ಲೈಟ್ ಯುವಕ ಬೆಳೆದು ಬಂದ ದಾರಿ.! ಅವೇಜ್ ಅಹ್ಮದ್ ತಂದೆ ನದೀಮ್ ಅಹಮದ್, ಆಲ್ದೂರಿನಲ್ಲೇ ಮೆಡಿಕಲ್ ಸ್ಟೋರ್ ಇಟ್ಟುಕೊಂಡಿದ್ರೆ, ಆಲ್ದೂರಿನ ಗಲ್ಲಿ-ಗಲ್ಲಿಯಲ್ಲಿ ಓಡಾಡ್ಕೊಂಡು ಬೆಳೆದ ಈ ಯುವಕ ಇಂದು ಜಗತ್ತನ್ನೇ ಭಾರತದತ್ತ ತಿರುಗುವಂತೆ ಮಾಡಿದ್ದಾನೆ. ಆಲ್ದೂರಿನ ರೋಸ್ ಬಡ್, ಅಕ್ಷರ್ ಪಬ್ಲಿಕ್ ಸ್ಕೂಲ್ನಲ್ಲಿ ಪ್ರಾಥಮಿಕ ಶಿಕ್ಷಣ, ಪೂರ್ಣಪ್ರಜ್ಞಾ ಶಾಲೆಯಲ್ಲಿ ಫ್ರೌಢಶಿಕ್ಷಣ ಮುಗಿಸಿ, ಸಿಇಟಿಯಲ್ಲಿ 477ನೇ ಱಂಕ್ ಪಡೆದು ಬೆಂಗಳೂರಿನ ಆರ್ ವಿ ಕಾಲೇಜಿನಲ್ಲಿ ವಿದ್ಯಾಭ್ಯಾಸ ಮುಂದುವರಿಸಿದ್ರು. ಆ ಬಳಿಕ

ಬಿಟ್ಸ್​ ಪಿಲಾನಿ (Birla Institute of Technology & Science-BITS), ಗೋವಾ ಯುನಿವರ್ಸಿಟಿಯಲ್ಲಿ ಓದಿದ ಈ ಯುವಕ ವಿದೇಶದಲ್ಲಿ ಅನೇಕ ಕಂಪನಿಗಳು ಕೈ ಬೀಸಿ ಕರೆದ್ರೂ, ತಾನು ಹುಟ್ಟಿ ಬೆಳೆದ ನಾಡಿನಲ್ಲೇ ಏನಾದ್ರೂ ಸಾಧಿಸಬೇಕು ಅಂತಾ ಅತ್ತ ಮುಖನೂ ಕೂಡ ಹಾಕದೇ ಬೆಂಗಳೂರಿನಲ್ಲಿ ಏರೋಸ್ಪೆಸ್ ಪಿಕ್ಸಲ್ ಅನ್ನೋ ಉಪಗ್ರಹ ತಯಾರಿಕಾ ಕಂಪೆನಿಯನ್ನ ತೆರೆದಿದ್ದಾರೆ.

ಕಾಫಿನಾಡಿನ ಯುವಕನ ಸಾಧನೆಗೆ ಪ್ರಧಾನಿ ಶ್ಲಾಘನೆ.! ಈ ಹಿಂದೆಯೇ ತನ್ನ ಮೊದಲ ಉಪಗ್ರಹವನ್ನ ರಷ್ಯಾದಿಂದ ಉಡಾವಣೆ ಮಾಡಲು ಸಿದ್ದತೆ ಮಾಡಿಕೊಳ್ಳಲಾಗಿತ್ತು. ಪ್ರಧಾನಿ ನರೇಂದ್ರ ಮೋದಿ ಜೊತೆ ಮಾತುಕತೆ ನಡೆಸಿದ ಅವೇಜ್ ಅಹ್ಮದ್, ತನ್ನ ಕನಸಿನ ಯೋಜನೆಯನ್ನ ದೇಶದ ದೊರೆಯ ಮುಂದೆ ಬಿಚ್ಚಿಟ್ಟಿದ್ದ. ಯುವಕನ ಯೋಜನಗೆಳ ಬಗ್ಗೆ ಶ್ಲಾಘನೆ ವ್ಯಕ್ತಪಡಿಸಿದ ಪ್ರಧಾನಿ, ಮೊದಲ ಉಪಗ್ರಹವನ್ನ ನಮ್ಮ ದೇಶದ ಬಾಹ್ಯಾಕಾಶ ಉಡಾವಣೆ ಕೇಂದ್ರವಾಗಿರುವ ಇಸ್ರೋದಿಂದಲೇ ಹಾರಿಸುವಂತೆ ಸಲಹೆ ನೀಡಿದ್ರು. ಅದರಂತೆಯೇ ಇಸ್ರೋದಿಂದಲೇ ಬಾಹ್ಯಾಕಾಶ ಸೇರಲು ಮೊದಲ ಉಪಗ್ರಹ ರೆಡಿಯಾಗಿದ್ದು, ಆದರೆ ಸಮಯ ಮಾತ್ರ ಇನ್ನೂ ನಿಗದಿಯಾಗಿಲ್ಲ. ಈ ಮಧ್ಯೆಯಲ್ಲಿ ಅವೇಜ್ ಅಹ್ಮದ್ ಅವರು ಎರಡನೇ ಉಪಗ್ರಹವನ್ನ ಅಮೆರಿಕದಿಂದ ಯಶಸ್ವಿ ಉಡಾವಣೆ ಮಾಡಿ ಸೈ ಅನ್ನಿಸಿಕೊಂಡಿರೋದು ನಿಜಕ್ಕೂ ದೇಶಕ್ಕೆ ಹೆಮ್ಮೆ ಪಡುವಂತಹ ವಿಚಾರ.

ಬಾಹ್ಯಕಾಶದ ಯುವಕನಿಗೆ ಕಾಫಿನಾಡಿನ ಮಂದಿ ಬಹುಪರಾಕ್.! ಇಲ್ಲೇ ಹುಟ್ಟಿ ಇಲ್ಲೇ ಬೆಳೆದಿದ್ದೇವೆ. ಏನೇ ಮಾಡಿದರೂ ಇಲ್ಲಿಂದಲೇ ಮಾಡಬೇಕೆಂಬುದು ಅವೇಜ್ ಅಹಮದ್ ಅಂತರಾಳವಾಗಿತ್ತು. ವಿದೇಶದಲ್ಲಿ ಸಿಕ್ಕ ಕೆಲಸವನ್ನೂ ತ್ಯಜಿಸಿ ಬೆಂಗಳೂರಲ್ಲಿ ಕಂಪನಿ ತೆರದು ತನ್ನ ಎಳೆಯ ವಯಸ್ಸಿನಲ್ಲಿಯೇ ಇಂದು ವಿಶ್ವವೇ ಭಾರತದತ್ತ ತಿರುಗಿ ನೋಡುವಂತೆ ಮಾಡಿದ್ದಾನೆ. ಆದ್ರೂ ಅನಿವಾರ್ಯವಾಗಿ ಮೊದಲ ಉಪಗ್ರಹ ಉಡಾವಣೆ ವಿಳಂಬವಾಗುತ್ತಿರುವ ಹಿನ್ನೆಲೆಯಲ್ಲಿ ಎರಡನೇ ಉಪಗ್ರಹ ಶಕುಂತಲಾ ಇದೀಗ ಅಮೆರಿಕದಿಂದ ಯಶಸ್ವಿ ಉಡಾವಣೆಯಾಗಿದೆ. ಎರಡರಿಂದ ಮೂರು ವರ್ಷದಲ್ಲಿ ಸುಮಾರು 30ಕ್ಕೂ ಹೆಚ್ಚು ಖಾಸಗಿ ಉಪಗ್ರಹಗಳು ಉಡಾವಣೆ ಮಾಡುವ ಯೋಜನೆಯನ್ನ ಅವೇಜ್ ಹಾಗೂ ತಂಡ ಹಾಕಿಕೊಂಡಿದೆ. ಹೊಸ ಮೈಲುಗಲ್ಲನ್ನ ಸ್ಥಾಪಿಸಲು ಹೊರಟಿರುವ ತಂಡದ ಹಿಂದೆ ಕನ್ನಡಿಗನ, ಅದರಲ್ಲೂ ಕಾಫಿನಾಡಿನ ಯುವಕನ ಸಾರಥ್ಯವಿರಲಿದೆ ಅನ್ನೋದು ಕನ್ನಡಿಗರ ಗರ್ವ ತರುವ ವಿಚಾರ. ಹಾಗಾಗೀ ಕಾಫಿನಾಡಿನ ಎಲ್ಲೆಲ್ಲೂ ಇದೀಗ ಬಾಹ್ಯಕಾಶದ ಹುಡುಗನ ಸಾಧನೆ ಬಗ್ಗೆಯೇ ಮಾತುಕತೆ ಜೋರಾಗಿದೆ. -ಪ್ರಶಾಂತ್, ಟಿವಿ9 ಚಿಕ್ಕಮಗಳೂರು

Follow us on

Related Stories

Most Read Stories

Click on your DTH Provider to Add TV9 Kannada