AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಚಿಕ್ಕಮಗಳೂರು: ಗಣೇಶ್ ಮರ್ಡರ್​​ ಕೇಸ್​​ನಲ್ಲಿ ಬಜರಂಗದಳ ಕಾರ್ಯಕರ್ತ ಅರೆಸ್ಟ್​​

ಚಿಕ್ಕಮಗಳೂರು ಸಖರಾಯಪಟ್ಟಣದಲ್ಲಿ ಕಾಂಗ್ರೆಸ್ ಕಾರ್ಯಕರ್ತ ಗಣೇಶ್ ಹತ್ಯೆ ಪ್ರಕರಣದಲ್ಲಿ ಬಜರಂಗ ದಳ ಕಾರ್ಯಕರ್ತ ಬಂಧನಕ್ಕೊಳಗಾಗಿದ್ದಾನೆ. ದತ್ತ ಜಯಂತಿ ಬ್ಯಾನರ್ ವಿಚಾರವಾಗಿ ನಡೆದ ಗಲಾಟೆ ಕೊಲೆಯಲ್ಲಿ ಅಂತ್ಯಗೊಂಡಿತ್ತು. ತಲೆಮರೆಸಿಕೊಂಡಿರುವ ಇತರ ಮೂವರು ಆರೋಪಿಗಳಿಗಾಗಿ ಶೋಧ ಮುಂದುವರೆದಿದೆ. ಯಾವುದೇ ಅಹಿತಕರ ಘಟನೆ ನಡೆಯದಂತೆ ಸಖರಾಯಪಟ್ಟಣದಲ್ಲಿ ಬಿಗಿ ಪೊಲೀಸ್ ಬಂದೋಬಸ್ತ್ ನಿಯೋಜಿಸಲಾಗಿದೆ.

ಚಿಕ್ಕಮಗಳೂರು: ಗಣೇಶ್ ಮರ್ಡರ್​​ ಕೇಸ್​​ನಲ್ಲಿ ಬಜರಂಗದಳ ಕಾರ್ಯಕರ್ತ ಅರೆಸ್ಟ್​​
ಬ್ಯಾನರ್​​ ವಿಚಾರಕ್ಕೆ ನಡೆದ ಗಲಾಟೆ ಕೊಲೆಯಲ್ಲಿ ಅಂತ್ಯ
ಅಶ್ವಿತ್ ಮಾವಿನಗುಣಿ, ಚಿಕ್ಕಮಗಳೂರು
| Edited By: |

Updated on:Dec 07, 2025 | 10:44 AM

Share

ಚಿಕ್ಕಮಗಳೂರು, ಡಿಸೆಂಬರ್​​ 07: ಸಖರಾಯಪಟ್ಟಣದಲ್ಲಿ ಕಾಂಗ್ರೆಸ್ ಕಾರ್ಯಕರ್ತ ಗಣೇಶ್​ ಕೊಲೆ ಕೇಸ್​​ನಲ್ಲಿ ಬಜರಂಗ ದಳ ಕಾರ್ಯಕರ್ತ ಭಾಗಿಯಾಗಿರೋದು ಪತ್ತೆಯಾಗಿದ್ದು, ಮಿಥುನ್​​ ಎಂಬಾತನನ್ನು ವಶಕ್ಕೆ ಪಡೆದು ಪೊಲೀಸರು ವಿಚಾರಣೆ ನಡೆಸಿದ್ದರು. ಪ್ರಕರಣದಲ್ಲಿ ಮಿಥುನ್ ಪಾತ್ರ ಇರೋದು ದೃಢಪಟ್ಟ ಹಿನ್ನೆಲೆ ಆತನನ್ನು ಬಂಧಿಸಲಾಗಿದ್ದು, ಚಿಕ್ಕಮಗಳೂರು ನಗರದ ನ್ಯಾಯಾಧೀಶರ ನಿವಾಸದಲ್ಲಿ ಹಾಜರುಪಡಿಸಲಾಗಿದೆ. ಆರೋಪಿ ಮಿಥುನ್​​ನನ್ನು​ ನ್ಯಾಯಾಂಗ ವಶಕ್ಕೆ ನೀಡಿ ನ್ಯಾಯಾಧೀಶರು ಆದೇಶಿಸಿದ್ದಾರೆ.

ಗಣೇಶ್ ಹತ್ಯೆಯಲ್ಲಿ‌ A6 ಆಗಿರುವ ಮಿಥುನ್‌ A1 ಸಂಜಯ್ ಸ್ನೇಹಿತನಾಗಿದ್ದು, RSS ಮತ್ತು ಬಜರಂಗದಳದಲ್ಲಿ‌ ಸಕ್ರಿಯ ಕಾರ್ಯಕರ್ತ ಎಂಬುದು ಗೊತ್ತಾಗಿದೆ. ಪ್ರಕರಣ ಸಂಬಂಧ A1 ಸಂಜಯ್ ಮತ್ತು A3 ನಾಗಭೂಷಣ್​​ನನ್ನು ಪೊಲೀಸರು ಈಗಾಗಲೇ ಬಂಧಿಸಿದ್ದು, A2 ನಿತಿನ್, A4 ದರ್ಶನ್ ಹಾಗೂ ಅಜಯ್​​​​ಗಾಗಿ ಹುಡುಕಾಟ ಮುಂದುವರಿದಿದೆ. ಗಣೇಶ್ ಹತ್ಯೆ ಬಳಿಕ ಈ ಮೂವರು ಆರೋಪಿಗಳು ‌ತಲೆಮರೆಸಿಕೊಂಡಿದ್ದಾರೆ.

ಇದನ್ನೂ ಓದಿ: ದತ್ತ ಜಯಂತಿ ಬ್ಯಾನರ್ ತೆರವು ವಿಚಾರವಾಗಿ ಗಲಾಟೆ, ಸಖರಾಯಪಟ್ಟಣದಲ್ಲಿ ಕಾಂಗ್ರೆಸ್ ಕಾರ್ಯಕರ್ತನ ಬರ್ಬರ ಹತ್ಯೆ

ಡಿ.5ರಂದು ರಾತ್ರಿ ಚಿಕ್ಕಮಗಳೂರು ಜಿಲ್ಲೆಯ ಕಡೂರು ತಾಲೂಕಿನ ಸಖರಾಯಪಟ್ಟಣದಲ್ಲಿ ದತ್ತ ಜಯಂತಿ ಬ್ಯಾನರ್ ತೆರವು ವಿಚಾರವಾಗಿ ನಡೆದ ಗಲಾಟೆಯಲ್ಲಿ ಕಾಂಗ್ರೆಸ್​ ಕಾರ್ಯಕರ್ತ ಗಣೇಶ್(40)ಅವರನ್ನು ಕೊಲೆ ಮಾಡಲಾಗಿತ್ತು. ಮಚ್ಚಿನಿಂದ ಹಲ್ಲೆ ಮಾಡಿದ್ದ ದುಷ್ಕರ್ಮಿಗಳು ಬರ್ಬರವಾಗಿ ಸಖರಾಯಪಟ್ಟಣ ಗ್ರಾಮ ಪಂಚಾಯಿತಿ ಸದಸ್ಯ ಗಣೇಶರನ್ನು ಕೊಂದಿದ್ದರು. ಸಖರಾಯಪಟ್ಟಣ ‌ಬಳಿಯ ಕಲ್ಮರಡಿ‌ ಮಠದ ‌ ರಸ್ತೆಯಲ್ಲಿ ಘಟನೆ ನಡೆದಿತ್ತು. ಕಿರಿದಾದ ರಸ್ತೆಯಲ್ಲಿ ಕಾರಿನಲ್ಲಿ ಗಣೇಶ್​​ ‌ತೆರಳುತ್ತಿದ್ದಾಗ ಬೈಕ್​​ನಲ್ಲಿ ಅಡ್ಡಗಟ್ಟಿದ್ದ ಹಂತಕರ ತಂಡ ಅವರ ಮೇಲೆ ಮಚ್ಚಿನಿಂದ ದಾಳಿ ಮಾಡಿತ್ತು. ಬಳಿಕ ಮಚ್ಚನ್ನು ಅಲ್ಲೇ ಬಿಸಾಡಿ ಹಂತಕರು ತೆರಳಿದ್ದರು. ಘಟನೆ ಬಳಿಕ ಆರೋಪಿಗಳ ಪತ್ತೆಗೆ ಚಿಕ್ಕಮಗಳೂರು ಎಸ್​​​ಪಿ ವಿಕ್ರಮ್ ನೇತೃತ್ವದಲ್ಲಿ 4 ತಂಡ ರಚಿಸಿ ಸೋಧ ನಡೆಸಲಾಗಿತ್ತು.

ಸಖರಾಯಪಟ್ಟಣದಲ್ಲಿ ಬಿಗಿ ಬಂದೋಬಸ್ತ್​​

ಗಣೇಶ್ ಗೌಡ ಹತ್ಯೆ ಪ್ರಕರಣದ ಬೆನ್ನಲ್ಲೇ ಯಾವುದೇ ಅಹಿತಕರ ಘಟನೆಗಳು ಸಂಭವಿಸದಂತೆ ಚಿಕ್ಕಮಗಳೂರು ಪೊಲೀಸರು  ಮುಂಜಾಗ್ರತಾ ಕ್ರಮ ಕೈಗೊಂಡಿದ್ದಾರೆ. ಸಖರಾಯಪಟ್ಟಣದಾದ್ಯಂತ ವ್ಯಾಪಕ ಪೊಲೀಸ್ ಬಂದೋಬಸ್ತ್ ಮಾಡಲಾಗಿದೆ. ಕಾನೂನು ಮತ್ತು ಸುವ್ಯವಸ್ಥೆಯನ್ನು ಕಾಪಾಡಲು ಹಾಗೂ ಸಾರ್ವಜನಿಕರಲ್ಲಿ ವಿಶ್ವಾಸ ಮೂಡಿಸುವ ನಿಟ್ಟಿನಲ್ಲಿ ಅಗತ್ಯ ಕ್ರಮ ಕೈಗೊಳ್ಳಲಾಗಿದೆ. ಪ್ರಮುಖ ರಸ್ತೆಗಳಲ್ಲಿ ಮತ್ತು ಜನನಿಬಿಡ ಪ್ರದೇಶಗಳಲ್ಲಿ ಹೆಚ್ಚುವರಿ ಪೊಲೀಸರನ್ನು ನಿಯೋಜಿಸಲಾಗಿದೆ.

ಮತ್ತಷ್ಟು ಸುದ್ದಿ ಓದಲು ಇಲ್ಲಿ ಕ್ಲಿಕ್​ ಮಾಡಿ.

Published On - 10:42 am, Sun, 7 December 25