ಶಾಂತಿಯಿಂದಿದ್ದ ಗ್ರಾಮದಲ್ಲಿ ಮಾಟ-ಮಂತ್ರದ ಛಾಯೆ, ದಿನೇ ದಿನೇ ಹೆಚ್ಚಾಗುತ್ತಿದೆ ಗ್ರಾಮಸ್ಥರಲ್ಲಿ ಆತಂಕ
50 ಮನೆಗಳಿರುವ ಗ್ರಾಮದಲ್ಲಿ ಅಶಾಂತಿಯ ಕಾರ್ಮೋಡ ಆವರಿಸಿದೆ. ಇಲ್ಲಿನ ಸುಮಾರು 15 ಮನೆಗಳಲ್ಲಿ ಮಾಟ-ಮಂತ್ರದ ಕುರುಹುಗಳು ಸಿಕ್ಕಿವೆ. ತಾಮ್ರದ ಕಟ್ಟಿನೊಳಗಿರುವ "ಭಯಾನಕ ವಸ್ತುಗಳು" ಜನರನ್ನು ಬೆಚ್ಚಿಬೀಳಿಸಿವೆ.
ಚಿಕ್ಕಮಗಳೂರು: ಅದು ಶಾಂತಿ-ನೆಮ್ಮದಿಯಿಂದ ಇದ್ದ ಊರು. ಆದ್ರೆ ಇದೀಗ ಅಲ್ಲಿ ಒಬ್ಬರನ್ನ ನೋಡಿದ್ರೆ ಮತ್ತೊಬ್ಬರಿಗೆ ಆಗಲ್ಲ. ಕಳೆದ ಒಂದು ವರ್ಷದಿಂದ ಕಣ್ಣೀರು ಹಾಕದೇ ದಿನಗಳೇ ಇಲ್ಲ ಅಂತಾ ಒಬ್ರು ಹೇಳಿದ್ರೆ, ಮತ್ತೊಬ್ಬರು ಒಂದು ವೇಳೆ ನಾನ್ ಸತ್ರೇ ಇಂತವರೇ ಕಾರಣ ಅಂತಾ ಲಿಸ್ಟೇ ಬರ್ದು ಇಟ್ಟಿದ್ದಾರೆ. ದೇವಸ್ಥಾನಕ್ಕೆ ಹೋಗಿ ಆಣೆ ಪ್ರಮಾಣ ಮಾಡಿದ್ದು ಆಗಿದೆ, ಪೊಲೀಸ್ ಠಾಣೆಯ ಮೆಟ್ಟಿಲು ತುಳಿದೂ ಆಗಿದೆ. ಆದ್ರೂ ಆ ಊರಲ್ಲಿ ಸಮಸ್ಯೆ ಮಾತ್ರ ಇನ್ನೂ ಜೀವಂತವಾಗಿದೆ..
ಚಿಕ್ಕಮಗಳೂರು ಜಿಲ್ಲೆ ಕಡೂರು ತಾಲೂಕಿನ ಸಿಂಗಟಕೆರೆ ಸಮೀಪದ ಎಂ.ಬಿ ಕಾಲೋನಿಯಲ್ಲಿ ಜನರೆಲ್ಲಾ ಮಾತಾಡ್ತಿರೋದು, ತಲೆಕೆಡಿಸಿಕೊಂಡಿರುವುದು ಗ್ರಾಮದ ಅನೇಕರ ಮನೆಗಳಲ್ಲಿ ಸಿಗುತ್ತಿರೋ ಅದೊಂದು ಭಯಾನಕ ವಸ್ತು ಬಗ್ಗೆ. ತಾಮ್ರದ ಹಾಳೆಯ ಒಳಗೆ ಇರೋ ವಸ್ತುಗಳು ಜನರನ್ನ ಕಣ್ಣು ಮುಚ್ಚಿ ನಿದ್ದೆ ಮಾಡಲು ಬಿಡ್ತಿಲ್ಲ. ಒಂದಲ್ಲ.. ಎರಡಲ್ಲ.. ಬರೋಬ್ಬರಿ 15ಕ್ಕೂ ಹೆಚ್ಚು ಮನೆಗಳಲ್ಲಿ ಭಯಾನಕ ವಸ್ತು ಸಿಕ್ಕಿವೆ. ಭಯಬೀಳಿಸುವ ರೀತಿಯಲ್ಲಿ ದೊರೆತ ವಸ್ತುಗಳ ಬಗ್ಗೆ ಜನರಿಗೆ ಚಿಂತೆ ಕಾಡತೊಡಗಿದೆ. ಈ ವಸ್ತುಗಳು ಇಲ್ಲಿ ಬಂದಿದಾದ್ರೂ ಹೇಗೆ? ಯಾರು ಮಾಡಿಸಿದ್ದು ಅನ್ನೋದ್ರಾ ಬಗ್ಗೆ ಟಾಕ್ ವಾರ್ ಬಹಳ ಜೋರಾಗಿದೆ.
ತಾಮ್ರದ ಕಟ್ಟಿನೊಳಗಿರುತ್ತೆ ಭಯಾನಕ ಬೆಚ್ಚಿ ಬೀಳಿಸುವ ವಸ್ತುಗಳು ತಾಮ್ರದ ಹಾಳೆಯ ಒಳಗೆ ಹುಲಿ ಹಲ್ಲಂತೆ, ಹುಲಿ ಚರ್ಮವಂತೆ, ಇವುಗಳ ಮಧ್ಯೆ ರಕ್ತ ಬೂತಾಳಿ ಮರದ ತುಂಡು, ತಾಮ್ರದಲ್ಲಿ ಮಾಡಿದ ಮನುಷ್ಯನ ಚಿತ್ರ, ಹಂದಿ ರಕ್ತ, ತಲೆ ಕೂದಲು.. ಒಂದಾ ಎರಡಾ.. ಅಬ್ಬಬ್ಬಾ..! ಈ ತರಹದ ಭಯಾನಕ ವಸ್ತುವಿನ ಪೊಟ್ಟಣ(ಕಟ್ಟು) ಈ ಊರಿನ ಅನೇಕ ಮಂದಿಯ ಮನೆಗಳಲ್ಲಿ ದೊರೆತಿದೆ. ಅಂದಾಗೆ ಇದನ್ನ ಈ ಊರಿನ ಜನರು ಮಾಟ ಮಾಡಿಸಿದ್ದಾರೆ ಅಂತಾ ನಂಬಿದ್ದಾರೆ. ಈ ಊರಿನಲ್ಲಿ ಒಟ್ಟು 50 ಮನೆಗಳಿದ್ದು ಕಳೆದ ಎರಡು ವರ್ಷದಲ್ಲಿ 15ಕ್ಕಿಂತ ಹೆಚ್ಚು ಮನೆಗಳಲ್ಲಿ ಈ ಮಾಟ ಅನ್ನೋ ಭಯಾನಕ ವಸ್ತು ಸಿಕ್ಕಿದೆಯಂತೆ. ಹೀಗೆ ಒಬ್ಬರ ಮನೆಯಾದ ಬಳಿಕ ಮತ್ತೊಬ್ಬರ ಮನೆಗಳಲ್ಲಿ ಈ ಮಾಟದ ವಸ್ತುಗಳು ಸಿಗುತ್ತಿರುವುದು ಜನರ ಆತಂಕಕ್ಕೆ ಕಾರಣವಾಗಿದೆ.
ಮಾಟ ತೆಗೆಸಲು ಜ್ಯೋತಿಷಿಗೆ ಆಹ್ವಾನ ಮಾಟದ ವಸ್ತುಗಳು ಸಿಕ್ಕಿ ಜನರು ಜ್ಯೋತಿಷಿಯನ್ನು ಕರೆಸಿ ಸಮಸ್ಯೆ ಪರಿಹಾರಕ್ಕೆ ಮುಂದಾಗಿದ್ದಾರೆ. ಆದ್ರೆ ಆ ಜ್ಯೋತಿಷಿ ಗ್ರಾಮಕ್ಕೆ ಬಂದು ಹುಡುಕಿ ಮಾಟ ತೆಗೆದು, ಇಂತವರೇ ಮಾಡಿದ್ದು ಅಂತಾ ಹೇಳುತ್ತಾನೆ. ಅಲ್ಲಿಗೆ ಶುರುವಾಯಿತು ನೋಡಿ, ಅಣ್ಣ ತಮ್ಮಂದಿರಂತೆ ಇದ್ದ ಜನರ ನಡುವೆ ಕಲಹ. ಅವರನ್ನ ಕಂಡರೆ ಇವರಿಗೆ ಆಗಲ್ಲ, ಇವರನ್ನ ಕಂಡರೆ ಅವರಿಗೆ ಆಗಲ್ಲ ಈ ವಿಚಾರ ಸ್ವಲ್ಪ ತಣ್ಣಗಾಯಿತು ಅನ್ನುವಷ್ಟರಲ್ಲಿ ಮತ್ತೊಬ್ಬರ ಮನೆಗೆ ಮಾಟ ಮಾಡಿಸಿದ್ದಾರೆ ಅಂತಾ ಆ ಜ್ಯೋತಿಷಿ ಹೇಳುತ್ತಾನೆ. ಮಾಟವನ್ನ ತೆಗೆಯಲು ಮತ್ತೆ ಜ್ಯೋತಿಷಿಗೆ ಗ್ರಾಮಕ್ಕೆ ಆಹ್ವಾನ ನೀಡಲಾಗುತ್ತದೆ. ಅದೇನೋ ಜಾದು ಮಾಡಿ ಮಾಟ ತೆಗೆಯುವ ಜ್ಯೋತಿಷಿ, ಮತ್ತೆ ಕೂಡಿ ಬಾಳುತ್ತಿದ್ದ ಜನರ ಮಧ್ಯೆ ಜಗಳ ತಂದಿಟ್ಟು ಹೋಗುತ್ತಾನೆ. ನೀವು ಉದ್ದಾರ ಆಗಬಾರದು ಅಂತಾ ಇಂತವರು ನಿಮಗೆ ಮಾಟ ಮಾಡಿಸಿದ್ದಾರೆ ಅಂತಾ ಬೊಟ್ಟು ಮಾಡಿ ತೋರಿಸುತ್ತಾನೆ. ಹೀಗೆ ಅವರ ಮೇಲೆ ಇವರಿಗೆ, ಇವರ ಮೇಲೆ ಅವರಿಗೆ ಎತ್ತಿ ಕಟ್ಟಿ ಜನರ ನೆಮ್ಮದಿಯನ್ನೇ ಹಾಳು ಮಾಡಿದ್ದಾನೆ.
ದೇವಸ್ಥಾನದಲ್ಲಿ ಆಣೆ ಪ್ರಮಾಣ, ಮಕ್ಕಳ ಮೇಲೂ ಆಣೆ..! ಜ್ಯೋತಿಷಿಯ ಮಾತನ್ನ ನಂಬಿ ಒಬ್ಬೊರ ಮೇಲೆ ಮತ್ತೊಬ್ಬರು ಕೆಂಡ ಕಾರಿ ದ್ವೇಷ ಸಾಧಿಸುತ್ತಲೇ ಬರುತ್ತಿದ್ದಾರೆ ಎಂ.ಬಿ ಕಾಲೋನಿಯ ಜನರು. ನೀವೇ ನಮಗೆ ಮಾಟ ಮಾಡಿಸಿದ್ದು ಅಂತಾ ಜ್ಯೋತಿಷಿ ಹೇಳಿದ್ದಾರೆ ಎಂದು ಗ್ರಾಮದ ಜನರ ನಡುವೆ ಹೊಡೆದಾಟ ನಡೆದಿದೆ. ಆದ್ರೆ ಆ ಆರೋಪ ಹೊತ್ತವರು ದೇವಸ್ಥಾನದಲ್ಲಿ ನಿಂತು ನಾವು ಮಾಟ ಮಾಡಿಲ್ಲ ಅಂತಾ ಪ್ರಮಾಣ ಮಾಡಿದ್ದಾರೆ. ಮಕ್ಕಳ ಮೇಲೂ ಆಣೆ ಮಾಡಿ ನಾವು ಯಾವುದೇ ಮನೆಹಾಳ ಕೆಲಸವನ್ನ ಮಾಡಿಲ್ಲ ಅಂತಾ ಪ್ರತಿಜ್ಞೆ ಮಾಡಿದ್ದಾರೆ. ಆದ್ರೂ ಊರಲ್ಲಿ ಕೆಲ ಬಲಾಢ್ಯರು, ಅಮಾಯಕರ ಮೇಲೆ ಗೂಬೆ ಕೂರಿಸಿ ಗಂಡ-ಹೆಂಡತಿ ನಡುವೆ, ತಂದೆ-ಮಕ್ಕಳ ನಡುವೆ, ಅಣ್ಣ-ತಮ್ಮಂದಿರ ನಡುವೆ ಜಗಳ ತಂದಿಟ್ಟಿದ್ದಾರೆ. ದೇವಸ್ಥಾನದಲ್ಲೂ ಆಣೆ ಪ್ರಮಾಣ ಮಾಡಿಯಾಯ್ತು, ಮಕ್ಕಳ ಮೇಲೂ ಆಣೆ ಮಾಡಿದ್ದಾಯ್ತು. ಆದ್ರೂ ನಮ್ಮ ಮೇಲೆ ಗೂಬೆ ಕೂರಿಸುವುದು ಎಷ್ಟು ಸರಿ ಅಂತಾ ನೊಂದ ಜನರು ಅಳಲು ತೋಡಿಕೊಂಡಿದ್ದಾರೆ.
ಡೈರಿಯಲ್ಲಿ ಭವಿಷ್ಯದ ಡೆತ್ ನೋಟ್ ಬರೆದಿಟ್ಟ ವ್ಯಕ್ತಿ ಬಾಣಾವಾರ ಸಮೀಪದ ರಘು ಎನ್ನೋ ಜ್ಯೋತಿಷಿ ಈ ಊರಿಗೆ ಬಂದು ನೆಮ್ಮದಿಯಾಗಿದ್ದ ಜನರ ಮಧ್ಯೆ ಬೆಂಕಿ ಹಚ್ಚಿಸಿದ್ದಾನೆ. ದೇವಸ್ಥಾನದಲ್ಲಿ ಆಣೆ ಪ್ರಮಾಣ ಮಾಡಿದ್ಮೇಲೆ ಸಿಂಗಟಕೆರೆ ಪೊಲೀಸ್ ಠಾಣೆಯನ್ನೂ ಈ ಊರಿನ ಗ್ರಾಮಸ್ಥರು ಹತ್ತಿದ್ದಾರೆ. ಮತ್ತೊಮ್ಮೆ ಊರಿಗೆ ಆ ಜ್ಯೋತಿಷಿಯನ್ನ ಕರೆತಂದ್ರೆ ಆತನನ್ನ ಅರೆಸ್ಟ್ ಮಾಡುವುದಾಗಿ ಹೇಳಿ ಪೊಲೀಸರು ಗ್ರಾಮಸ್ಥರನ್ನ ಕಳುಹಿಸಿದ್ದಾರೆ. ಊರಿಗೆ ಬಂದ ಜ್ಯೋತಿಷಿ ಸಿಕ್ಕ ಸಿಕ್ಕವರ ಮೇಲೆ ಗೂಬೆ ಕೂರಿಸುತ್ತಿರುವುದು ಅಮಾಯಕ ಜನರನ್ನ ಮಾನಸಿಕವಾಗಿ ಕುಗ್ಗಿಸಿದೆ. ಅದೆಷ್ಟರ ಮಟ್ಟಿಗೆ ಅಂದ್ರೆ ಇದೇ ಊರಿನ ಮೂರ್ತಿ ಅನ್ನೋ ವ್ಯಕ್ತಿ ಒಂದ್ವೇಳೆ ನಾನು ಸತ್ತರೇ ಇಂಥವರೇ ಕಾರಣವೆಂದು ಏಳೆಂಟು ಜನರ ಹೆಸರನ್ನ ಡೈರಿಯಲ್ಲಿ ಬರೆದಿಟ್ಟಿದ್ದಾರೆ. ಇನ್ನೂ ನನ್ನ ತವರು ಮನೆಯವರೇ ನಮ್ಮ ಮನೆಗೆ ಮಾಟ ಮಾಡಿದ್ದಾರೆ ಅಂತಾ ನನಗೂ-ನನ್ನ ಸಹೋದರನಿಗೂ ತಂದಿಟ್ಟು ನಮ್ಮ ನೆಮ್ಮದಿಯನ್ನೇ ಹಾಳು ಮಾಡಿದ್ದಾರೆ. ನನ್ನ ಪತಿ ಕೂಡ ಆ ಜ್ಯೋತಿಷಿ ಮಾತು ನಂಬಿಕೊಂಡು ನನ್ನ ತವರು ಮನೆಯವರ ಜೊತೆ ಮಾತು ಬಿಟ್ಟಿದ್ದಾರೆ. ಜೊತೆಗೆ ನನ್ನ ಹಾಗೂ ಪತಿಯ ನಡುವೆ ಕಲಹಕ್ಕೂ ಕಾರಣವಾಗಿದೆ, ಕಳೆದ ಎರಡು ವರ್ಷದಿಂದ ನಾನು ಕಣ್ಣೀರು ಹಾಕದೇ ದಿನವೇ ಇಲ್ಲ ಅಂತಾ ಗ್ರಾಮದ ಗೌರಮ್ಮ ಎಂಬುವವರು ಅಳಲು ತೋಡಿಕೊಂಡಿದ್ದಾರೆ.
ಮಾಟ ಕೀಳಲು 10 ಸಾವಿರ ಚಾರ್ಜ್ ಮಾಡುವ ಜ್ಯೋತಿಷಿ ಒಂದು ಮನೆಗೆ ಬಂದು ಮಾಟ ಕಿತ್ತರೇ 10 ಸಾವಿರ ರೂಪಾಯಿ ಆ ಜ್ಯೋತಿಷಿ ವಸೂಲಿ ಮಾಡ್ತಾನಂತೆ. ಕಳೆದ ಎರಡು ವರ್ಷದಲ್ಲಿ ಲಕ್ಷಾಂತರ ರೂಪಾಯಿ ಹಣವನ್ನ ಮಾಟ ತೆಗೆಯುವ ಜ್ಯೋತಿಷಿಗೆ ಗ್ರಾಮದ ಮಂದಿ ಕೊಟ್ಟಿದ್ದಾರೆ. ಹಣವನ್ನ ಕಳೆದುಕೊಂಡು, ಮಾನಸಿಕ ನೆಮ್ಮದಿಯನ್ನೂ ಜನರು ಕಳೆದುಕೊಂಡಿದ್ದಾರೆ. ನಮ್ಮ ಊರಿನ ಮುನಿಯ ಎನ್ನುವವರು ತಮ್ಮೆಲ್ಲರ ಮೇಲೆ ಆರೋಪ ಹೊರಿಸುತ್ತಿದ್ದು, ನಾವೆಲ್ಲರೂ ಮಾನಸಿಕವಾಗಿ ತುಂಬಾನೇ ಕುಗ್ಗಿ ಹೋಗಿದ್ದೇವೆ ಅಂತಾ ಜನರು ಅಳಲು ತೋಡಿಕೊಂಡಿದ್ದಾರೆ. ಆದ್ರೆ ಮುನಿಯ ಎಂಬ ವ್ಯಕ್ತಿ ತಾನು ಯಾರ ಮೇಲೂ ಆರೋಪ ಹೊರಿಸಿಲ್ಲ ಅಂತಾ ಹೇಳಿದ್ದಾರೆ. ಜ್ಯೋತಿಷಿ ಹಣ ಮಾಡುವ ಉದ್ದೇಶದಿಂದಲೇ ಗ್ರಾಮದ ಕೆಲವರನ್ನ ಬಳಸಿಕೊಂಡು ಈ ರೀತಿ ಮಾಡುತ್ತಿದ್ದಾರೆ ಅನ್ನೋದು ಗ್ರಾಮದ ಬಹುತೇಕರ ಅಭಿಪ್ರಾಯ. ಮಾಟ ಕೀಳಕ್ಕೆ ಬರುವ ಜ್ಯೋತಿಷಿಯ ನಡೆ ಕೂಡ ಅನೇಕ ಬಾರಿ ಅನುಮಾನಕ್ಕೆ ಎಡೆಮಾಡಿಕೊಟ್ಟಿದೆ. ನಾನು ಮಾಟ ಕೀಳಕ್ಕೆ ಬರುವಾಗ ಜಾಸ್ತಿ ಜನರು ಇರಬಾರದು ಅಂತಾ ಆತ ಹೇಳಿದ್ದಾಗಿ ಗ್ರಾಮಸ್ಥರು ಹೇಳಿದ್ದಾರೆ.. ಅಲ್ಲದೇ ಹೀಗೆ ಮಾಟ ಕೀಳುವಾಗ ತಾನೇ ಅದನ್ನ ಇಟ್ಟು ಜನರಿಗೆ ಭಯ ಬೀಳಿಸುತ್ತಿದ್ದಾನೆ ಜೊತೆಗೆ ಜನರ ನಡುವೆಯೇ ಮನಸ್ತಾಪಕ್ಕೆ ಕಾರಣವಾಗಿದ್ದಾನೆ ಅಂತಲೂ ಜನರು ಹೇಳಿದ್ದಾರೆ. ಒಟ್ಟಿನಲ್ಲಿ ಜ್ಯೋತಿಷಿ ಹಣದಾಸೆಗೆ ತುಂಬಾ ಅನ್ಯೋನ್ಯವಾಗಿದ್ದ ಗ್ರಾಮದಲ್ಲಿ ಇದೀಗ ಮಾಟ ಮಂತ್ರದ ಆಟದಿಂದಾಗಿ ನೆಮ್ಮದಿಯೇ ಇಲ್ಲದಂತಾಗಿರೋದು ನಿಜಕ್ಕೂ ವಿಪರ್ಯಾಸ.
ವರದಿ: ಪ್ರಶಾಂತ್
ಇದನ್ನೂ ಓದಿ: ಮಕ್ಕಳಿಬ್ಬರಿಗೆ ವಿಷವುಣಿಸಿ ಆತ್ಮಹತ್ಯೆಗೆ ಯತ್ನಿಸಿದ ತಂದೆ, ಮಾಟ-ಮಂತ್ರಕ್ಕೆ ಬಲಿಯಾದವ ಮುಗ್ಧ ಹೆಣ್ಣು ಮಕ್ಕಳು?
Published On - 11:00 am, Sun, 3 October 21