ನರ್ಸ್​​ಗೆ ಸೈಬರ್​ ವಂಚಕರಿಂದ ಮಕ್ಮಲ್​​ ಟೋಪಿ: ಕಳೆದುಕೊಂಡಿದ್ದು ಬರೋಬ್ಬರಿ 12 ಲಕ್ಷ

ಪಾರ್ಟ್-ಟೈಂ ಕೆಲಸ ಹುಡುಕಲು ಹೋಗಿ ನರ್ಸ್​​ ಒಬ್ಬರು ಆನ್​ಲೈನ್​​ ವಂಚನೆಗೆ ಒಳಗಾಗಿ ಲಕ್ಷ ಲಕ್ಷ ಹಣ ಕಳೆದುಕೊಂಡಿರುವ ಘಟನೆ ಚಿಕ್ಕಬಳ್ಳಾಪುರದಲ್ಲಿ ನಡೆದಿದೆ. ವಂಚಕರು ತೋರಿಸಿದ ಇನ್ವೆಸ್ಟ್​​ಮೆಂಟ್​​ ಆಸೆಗೆ ಬಲಿಯಾಗಿ ಮೈಮೇಲಿದ್ದ ಬಂಗಾರವನ್ನೂ ಅಡ ಇಟ್ಟು ಹಣ ಕಟ್ಟಿ ಮಹಿಳೆ ಯಾಮಾರಿದ್ದಾರೆ. ಸೈಬರ್​​ ವಂಚನೆಗಳ ಬಗ್ಗೆ ಪೊಲೀಸರು ಜಾಗೃತಿ ಮೂಡಿಸುತ್ತಿದ್ದರೂ ವಿದ್ಯಾವಂತರೇ ಇಂತಹ ಜಾಲಕ್ಕೆ ಸಿಕ್ಕಿ ಹಣ ಕಳೆದುಕೊಳ್ಳುತ್ತಿರೋದು ನಿಜಕ್ಕೂ ದುರ್ದೈವ.

ನರ್ಸ್​​ಗೆ ಸೈಬರ್​ ವಂಚಕರಿಂದ ಮಕ್ಮಲ್​​ ಟೋಪಿ: ಕಳೆದುಕೊಂಡಿದ್ದು ಬರೋಬ್ಬರಿ 12 ಲಕ್ಷ
ಸಾಂದರ್ಭಿಕ ಚಿತ್ರ
Edited By:

Updated on: Jan 02, 2026 | 6:33 PM

ಚಿಕ್ಕಬಳ್ಳಾಪುರ, ಜನವರಿ 02: ಪಾರ್ಟ್​​ ಟೈಂ ಕೆಲಸಕ್ಕಾಗಿ ಅಂತರ್ಜಾಲದಲ್ಲಿ ಹುಡುಕಾಟ ನಡೆಸುತ್ತಿದ್ದ ನರ್ಸ್​​ ಒಬ್ಬರು ಆನ್​​ಲೈನ್​​ ವಂಚನೆಗೆ ಒಳಗಾಗಿ ಬರೋಬ್ಬರಿ 12 ಲಕ್ಷ ರೂಪಾಯಿ ಕಳೆದುಕೊಂಡಿರುವ ಘಟನೆ ಚಿಕ್ಕಬಳ್ಳಾಪುರದಲ್ಲಿ ನಡೆದಿದೆ. ತಾನು ಮೋಸ ಹೋಗಿದ್ದು ಅರಿವಾದ ಬಳಿಕ ಚಿಕ್ಕಬಳ್ಳಾಪುರ ಸೈಬರ್ ಕ್ರೈಮ್ ಪೊಲೀಸ್ ಠಾಣೆಯಲ್ಲಿ ಆಕೆ ದೂರು ದಾಖಲಿಸಿದ್ದಾಳೆ.

ಸರ್ಕಾರಿ ಆಸ್ಪತ್ರೆಯೊಂದರಲ್ಲಿ ನರ್ಸ್ ಆಗಿ ಕೆಲಸ ಮಾಡ್ತಿದ್ದ ಭಾರತಿ ಎನ್ನುವ ಮಹಿಳೆ ಮನೆಯಲ್ಲಿ ಆರ್ಥಿಕವಾಗಿ ಸಮಸ್ಯೆ ಇದ್ದ ಹಿನ್ನೆಲೆ ಪಾರ್ಟ್​​ ಟೈಂ ಕೆಲಸಕ್ಕಾಗಿ ಹುಡುಕಾಟ ನಡೆಸುತ್ತಿದ್ದರು. ಈ ವೇಳೆ ಇನ್ಸ್ಟಾಗ್ರಾಮ್​​ ಲಿಂಕೊಂದು ಅವರ ಕಣ್ಣಿಗೆ ಬಿದ್ದಿದ್ದು, ಅದರ ಮೇಲೆ ಕ್ಲಿಕ್​​ ಮಾಡಿದ್ದರು. ಆ ಬಳಿಕ ಅವರಿಗೆ ಕಾಲ್​​ ಬಂದಿದ್ದು, ಟೆಲಿಗ್ರಾಮ್​​ ಗ್ರೂಪ್​​ ಒಂದಕ್ಕೆ ಭಾರತಿ ಅವರನ್ನು ಸೇರಿಸಿದ್ದರು. ಬಳಿಕ ಹಣದಾಸೆ ತೋರಿಸಿ ಇನ್ವೆಸ್ಟ್​​ ಮಾಡುವಂತೆ ಆರೋಪಿಗಳು ತಿಳಿಸಿದ್ದರು. ಅವರನ್ನು ನಂಬಿ ಹೇಳಿದಂತೆಲ್ಲ ಭಾರತಿ ಮಾಡಿದ್ದರು. ಅಂತಿಮವಾಗಿ ನಿಮ್ಮ ಖಾತೆಯಲ್ಲಿ 15 ಲಕ್ಷ ಹಣವಿದೆ ಎಂದಿದ್ದ ಆರೋಪಿಗಳು, ಅದನ್ನು ವಿತ್​​ ಡ್ರಾ ಮಾಡಲು ಅಂತ ನಾನಾ ಕಾರಣ ಹೇಳಿ ಬರೋಬ್ಬರಿ 12 ಲಕ್ಷ ರೂಪಾಯಿಯನ್ನು ತಮ್ಮ ಖಾತೆಗೆ ಹಾಕಿಸಿಕೊಂಡು ವಂಚಿಸಿದ್ದಾರೆ ಎನ್ನಲಾಗಿದೆ.

ಇದನ್ನೂ ಓದಿ: ಶೃಂಗೇರಿ ವ್ಯಕ್ತಿಗೆ ಕೋಟ್ಯಂತರ ರೂ ವಂಚನೆ;  ಷೇರು ಮಾರ್ಕೆಟ್ ಬಗ್ಗೆ ಇರಲಿ ಎಚ್ಚರಿಕೆ

ಇನ್ನು ಹಣ ಸಿಗುವ ನಂಬಿಕೆಯಿಂದ ನರ್ಸ್​​ ಭಾರತಿ ತನ್ನ ಮೈಮೇಲೆ ಇದ್ದ ಚಿನ್ನಾಭರಣಗಳನ್ನು ಸಹ ಬ್ಯಾಂಕ್​​ನಲ್ಲಿ ಅಡ ಇಟ್ಟು ಹಣ ಕಟ್ಟಿದ್ದಾರೆ. ಆದ್ರೂ ವಂಚಕರು ಹೇಳಿದ್ದ ಆ 15 ಲಕ್ಷ ರೂ. ಮಾತ್ರ ಕೈ ಸೇರಿಲ್ಲ. ಅಂತಿಮವಾಗಿ ತಾನು ಮೋಸ ಹೋದ ಬಗ್ಗೆ ಭಾರತಿಗೆ ಅರಿವಾಗಿದ್ದು, ಈ ಬಗ್ಗೆ ಚಿಕ್ಕಬಳ್ಳಾಪುರ ಸೈಬರ್ ಕ್ರೈಮ್ ಪೊಲೀಸ್ ಠಾಣೆಯಲ್ಲಿ ದೂರು ದಾಖಲು ಮಾಡಿದ್ದಾರೆ. ಇತ್ತೀಚೆಗೆ ಹೆಚ್ಚುತ್ತಿರುವ ಸೈಬರ್​​ ವಂಚನೆಗಳ ಬಗ್ಗೆ ಪೊಲೀಸರು ಜಾಗೃತಿ ಮೂಡಿಸುತ್ತಿದ್ದರೂ ವಿದ್ಯಾವಂತರೇ ಇಂತಹ ಜಾಲಕ್ಕೆ ಸಿಕ್ಕಿ ಹಣ ಕಳೆದುಕೊಳ್ಳುತ್ತಿರೋದು ನಿಜಕ್ಕೂ ದುರ್ದೈವ.

ಮತ್ತಷ್ಟು ಸುದ್ದಿ ಓದಲು ಇಲ್ಲಿ ಕ್ಲಿಕ್​​ ಮಾಡಿ.