ಆಟೋ ಡ್ರೈವರ್ ಅಕೌಂಟ್‌ನಲ್ಲಿ 29 ಲಕ್ಷ, ಪೌರಕಾರ್ಮಿಕನ ಖಾತೆಯಲ್ಲಿ 34 ಲಕ್ಷ! ಅಮಾಯಕರ ಬ್ಯಾಂಕ್ ಖಾತೆ ಬಳಸಿ ಕೋಟ್ಯಂತರ ರೂ. ವಂಚನೆ

ಕಾಫಿನಾಡು ಚಿಕ್ಕಮಗಳೂರಿನಲ್ಲಿ ಬಡವರ ಹಾಗೂ ದಿನಗೂಲಿ ನೌಕರರ ಬ್ಯಾಂಕ್ ಖಾತೆಗಳನ್ನು ದುರುಪಯೋಗಪಡಿಸಿಕೊಂಡು ಲಕ್ಷಾಂತರ ರೂಪಾಯಿ ಅಕ್ರಮ ವಹಿವಾಟು ನಡೆಸಿರುವ ಸೈಬರ್ ವಂಚನೆ ಜಾಲ ಬೆಳಕಿಗೆ ಬಂದಿದೆ. ಆರು ರಾಜ್ಯಗಳ ಪೊಲೀಸರಿಂದ ನೋಟೀಸ್ ಬಂದ ಬಳಿಕ ಅಂತರರಾಷ್ಟ್ರೀಯ ಮಟ್ಟದ ಲಿಂಕ್ ಶಂಕೆ ವ್ಯಕ್ತವಾಗಿದ್ದು, ಪ್ರಕರಣದ ಪ್ರಮುಖ ಮೂವರು ಆರೋಪಿಗಳನ್ನು ಸೆನ್ ಪೊಲೀಸರು ಹೆಚ್ಚಿನ ತನಿಖೆಗಾಗಿ ಕಸ್ಟಡಿಗೆ ಪಡೆದಿದ್ದಾರೆ.

ಆಟೋ ಡ್ರೈವರ್ ಅಕೌಂಟ್‌ನಲ್ಲಿ 29 ಲಕ್ಷ, ಪೌರಕಾರ್ಮಿಕನ ಖಾತೆಯಲ್ಲಿ 34 ಲಕ್ಷ! ಅಮಾಯಕರ ಬ್ಯಾಂಕ್ ಖಾತೆ ಬಳಸಿ ಕೋಟ್ಯಂತರ ರೂ. ವಂಚನೆ
ಸಾಂದರ್ಭಿಕ ಚಿತ್ರ
Edited By:

Updated on: Jul 18, 2026 | 8:55 AM

ಮುಖ್ಯಾಂಶಗಳು

  • ಚಿಕ್ಕಮಗಳೂರಿನಲ್ಲಿ ಬಡವರ ಬ್ಯಾಂಕ್ ಖಾತೆ ಬಳಸಿ ಲಕ್ಷಾಂತರ ರೂಪಾಯಿ ಅಕ್ರಮ ವಹಿವಾಟು.
  • ಆರು ರಾಜ್ಯಗಳ ಪೊಲೀಸರಿಂದ ನೋಟೀಸ್ ಬಂದಾಗ ಬಯಲಾದ ಬೃಹತ್ ಸೈಬರ್ ವಂಚನೆ.
  • ಪ್ರಮುಖ ಮೂವರು ಆರೋಪಿಗಳು ಸದ್ಯ ಚಿಕ್ಕಮಗಳೂರು ಸೆನ್ ಪೊಲೀಸರ ಕಸ್ಟಡಿಗೆ.

ಚಿಕ್ಕಮಗಳೂರು, ಜುಲೈ 18: ಬಡತನ ಹಾಗೂ ಮುಗ್ಧತೆಯನ್ನು ಬಂಡವಾಳವಾಗಿಸಿಕೊಂಡು, ಸಾಲ ಕೊಡಿಸುವ ಮತ್ತು ಮಾಸಿಕ ಹಣದ ಆಮಿಷ ಒಡ್ಡಿ ಅಮಾಯಕರ ಬ್ಯಾಂಕ್ ಖಾತೆಗಳ ಮೂಲಕ ಕೋಟ್ಯಂತರ ರೂಪಾಯಿ ಅಕ್ರಮ ನಗದು ವಹಿವಾಟು ನಡೆಸಿರುವ ಭೀಕರ ಸೈಬರ್ ವಂಚನೆ ಪ್ರಕರಣವೊಂದು ಕಾಫಿನಾಡು ಚಿಕ್ಕಮಗಳೂರಿನಲ್ಲಿ ಬೆಳಕಿಗೆ ಬಂದಿದೆ. ಕೇವಲ ಒಂದೇ ಒಂದು ತಿಂಗಳ ಅವಧಿಯಲ್ಲಿ ಆಟೋ ಚಾಲಕರು, ಗೃಹಿಣಿಯರು ಹಾಗೂ ಪೌರಕಾರ್ಮಿಕರ ಬ್ಯಾಂಕ್ ಖಾತೆಗಳಲ್ಲಿ ತಲಾ 25 ರಿಂದ 35 ಲಕ್ಷ ರೂಪಾಯಿಗಳಷ್ಟು ಬೃಹತ್ ಮೊತ್ತದ ಹಣ ವರ್ಗಾವಣೆಯಾಗಿದ್ದು, ಆರು ರಾಜ್ಯಗಳ ಸೆನ್ (CEN) ಪೊಲೀಸರಿಂದ ನೋಟೀಸ್ ಜಾರಿಯಾದ ಬಳಿಕ ಈ ವ್ಯವಸ್ಥಿತ ಜಾಲದ ಸ್ಫೋಟಕ ಸತ್ಯ ಬಯಲಾಗಿದೆ.

ಆಮಿಷದ ಬಲೆ

ನಗರದ ಶಂಕರಪುರ ಬಡಾವಣೆಯ ದಿನಗೂಲಿ ನೌಕರರು ಹಾಗೂ ಶ್ರಮಿಕ ವರ್ಗವೇ ಈ ಜಾಲದ ಪ್ರಮುಖ ಬಲಿಪಶುಗಳಾಗಿದ್ದಾರೆ. ಸ್ಥಳೀಯ ಪರಿಚಿತ ಯುವಕರಾದ ರಾಹುಲ್, ಚಿನ್ನ, ಸಂಜಯ್, ಶರತ್, ಅಸ್ಲಂ ಹಾಗೂ ಚೇತನ್ ಎಂಬುವವರು ಬಡ ಕುಟುಂಬಗಳನ್ನು ಸಂಪರ್ಕಿಸಿ, ಬ್ಯಾಂಕ್ ಖಾತೆ ತೆರೆದರೆ ಪ್ರತಿ ತಿಂಗಳು 1,000 ರೂ. ಜಮಾ ಆಗುತ್ತದೆ ಹಾಗೂ ತುರ್ತು ಸಂದರ್ಭಗಳಲ್ಲಿ ಸುಲಭವಾಗಿ ಲೋನ್ ಸಿಗುತ್ತದೆ ಎಂದು ನಂಬಿಸಿ ಆಧಾರ್ ಮತ್ತು ಪಾನ್ ಕಾರ್ಡ್‌ಗಳನ್ನು ಪಡೆದುಕೊಂಡಿದ್ದರು. ಖಾತೆದಾರರಿಗೆ ಮೊಬೈಲ್ ಫೋನ್ ಇಲ್ಲದಿರುವುದನ್ನು ದುರುಪಯೋಗಪಡಿಸಿಕೊಂಡ ಆರೋಪಿಗಳು, ಬ್ಯಾಂಕ್ ಖಾತೆಗೆ ತಮ್ಮದೇ ಮೊಬೈಲ್ ಸಂಖ್ಯೆಗಳನ್ನು ಲಿಂಕ್ ಮಾಡಿದ್ದರು. ಇದರ ಪರಿಣಾಮವಾಗಿ ಪಾಸ್‌ಬುಕ್, ಚೆಕ್‌ಬುಕ್ ಸೇರಿದಂತೆ ಯಾವುದೇ ಒಟಿಪಿ (OTP) ಅಥವಾ ಬ್ಯಾಂಕಿಂಗ್ ವ್ಯವಹಾರದ ಸಂದೇಶಗಳು ಮೂಲ ಖಾತೆದಾರರಿಗೆ ತಿಳಿಯದಂತೆ ಆರೋಪಿಗಳೇ ಸಂಪೂರ್ಣವಾಗಿ ನಿಯಂತ್ರಿಸುತ್ತಿದ್ದರು.

ಖಾತೆದಾರರು ಸಾಲ ಪ್ರಕ್ರಿಯೆ ವಿಳಂಬವಾದಾಗ ಖಾತೆ ರದ್ದುಪಡಿಸುವಂತೆ ಕೋರಿದಾಗ, ಖಾತೆ ಕ್ಯಾನ್ಸಲ್ ಆಗಿದೆ ಎಂದು ಆರೋಪಿಗಳು ಸುಳ್ಳು ಹೇಳಿ ನಂಬಿಸಿದ್ದರು. ಆದರೆ ಮೂರು ವರ್ಷಗಳ ಹಳೆಯ ಖಾತೆಗಳನ್ನು ಸಕ್ರಿಯವಾಗಿಟ್ಟುಕೊಂಡು ಇತ್ತೀಚಿನ ಒಂದೇ ತಿಂಗಳಲ್ಲಿ ಲಕ್ಷಾಂತರ ರೂಪಾಯಿಗಳನ್ನು ವರ್ಗಾಯಿಸಲಾಗಿದೆ. ಸದ್ಯಕ್ಕೆ ಐವರು ಸಂತ್ರಸ್ತರು ಅಧಿಕೃತವಾಗಿ ದೂರು ನೀಡಿದ್ದರೂ, ಶಂಕರಪುರ ಒಂದರಲ್ಲೇ 48ಕ್ಕೂ ಹೆಚ್ಚು ಅಮಾಯಕರ ಖಾತೆಗಳನ್ನು ದುರುಪಯೋಗಪಡಿಸಿಕೊಳ್ಳಲಾಗಿದ್ದು, ವಂಚನೆಯ ಮೊತ್ತ ಕೋಟಿ ದಾಟುವ ಸಾಧ್ಯತೆಯಿದೆ ಎಂದು ಸ್ಥಳೀಯವಾಗಿ ಶಂಕಿಸಲಾಗಿದೆ.

ಕಸ್ಟಡಿಗೆ ಪ್ರಮುಖ ಆರೋಪಿಗಳು; ಸಿಬಿಐ-ಇಡಿ ತನಿಖೆಗೆ ಹೆಚ್ಚಿದ ಒತ್ತಾಯ

ಪ್ರಕರಣಕ್ಕೆ ಸಂಬಂಧಿಸಿದಂತೆ ಈಗಾಗಲೇ 7 ಜನರ ವಿರುದ್ಧ ಎಫ್‌ಐಆರ್ (FIR) ದಾಖಲಾಗಿದ್ದು, 6 ಮಂದಿಯನ್ನು ಪೊಲೀಸರು ಬಂಧಿಸಿ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ್ದರು. ಇದೀಗ ಪ್ರಕರಣದ ತೀವ್ರತೆ ಹಾಗೂ ತನಿಖೆಯ ಅಗತ್ಯತೆಯನ್ನು ಪರಿಗಣಿಸಿ ಚಿಕ್ಕಮಗಳೂರು ಜಿಲ್ಲಾ ನ್ಯಾಯಾಲಯವು ಪ್ರಮುಖ ಆರೋಪಿಗಳಾದ ಅಸ್ಲಾಂ, ರಾಹುಲ್ ಮತ್ತು ಪ್ರಶಾಂತ್‌ನನ್ನು ಮೂರು ದಿನಗಳ ಕಾಲ ಸೆನ್ ಪೊಲೀಸರ ಕಸ್ಟಡಿಗೆ ನೀಡಿದೆ. ಆಟೋ ಚಾಲಕ ಆನಂದ್, ಗೃಹಿಣಿ ಅಶ್ವಿನಿ ಹಾಗೂ ಪೌರಕಾರ್ಮಿಕ ಹನುಮಂತ ಅವರ ಖಾತೆಗಳಲ್ಲಿ ಕ್ರಮವಾಗಿ 29 ಲಕ್ಷ ಮತ್ತು 34 ಲಕ್ಷ ರೂ. ವ್ಯವಹಾರ ನಡೆದಿರುವುದು ಪ್ರಾಥಮಿಕ ತನಿಖೆಯಲ್ಲಿ ದೃಢಪಟ್ಟಿದೆ.

ಈ ಜಾಲವು ಕೇವಲ ಸ್ಥಳೀಯ ಮಟ್ಟದ್ದಾಗಿರದೆ ಅಂತರರಾಷ್ಟ್ರೀಯ ಆಯಾಮಗಳನ್ನು ಹೊಂದಿರುವ ಸಾಧ್ಯತೆಯಿದೆ. ಬಂಧಿತರು ಕೇವಲ ಪಾತ್ರಧಾರಿಗಳಾಗಿದ್ದು, ಇವರ ಹಿಂದೆ ದೊಡ್ಡ ಸೂತ್ರಧಾರಿಗಳು ಇರುವ ಶಂಕೆಯಿರುವುದರಿಂದ ಪ್ರಕರಣವನ್ನು ಸಿಬಿಐ (CBI) ಅಥವಾ ಜಾರಿ ನಿರ್ದೇಶನಾಲಯಕ್ಕೆ (ED) ವಹಿಸಬೇಕು ಎಂದು ಬಿಜೆಪಿ ನಿಯೋಗವು ರಾಜ್ಯಪಾಲರಿಗೆ ದೂರು ನೀಡಲು ಮುಂದಾಗಿದೆ. ಸದ್ಯಕ್ಕೆ ಯಾವುದೇ ಹಣ ಕಾಣದ ಬಡ ಕೂಲಿ ಕಾರ್ಮಿಕರು ಪೊಲೀಸ್ ಠಾಣೆ ಅಲೆಯುವಂತಾಗಿದ್ದು, ಸೆನ್ ಪೊಲೀಸರ ತನಿಖೆಯಿಂದ ಈ ದುಬೈ ಲಿಂಕ್ ಅಥವಾ ಸ್ಥಳೀಯ ಹವಾಲಾ ಜಾಲದ ಸಂಪೂರ್ಣ ಸತ್ಯಾಂಶ ಹೊರಬರಬೇಕಿದೆ.

ಕರ್ನಾಟಕದ ಇನ್ನಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Follow Us