ಕಾಫಿನಾಡಿನಲ್ಲಿ ಮಾನವ-ಪ್ರಾಣಿಗಳ ಸಂಘರ್ಷ: ಸಚಿವ ಈಶ್ವರ್ ಖಂಡ್ರೆ ನೇತೃತ್ವದಲ್ಲಿ ಸಭೆ‌; ಹೇಳಿದ್ದಿಷ್ಟು

ಮಲೆನಾಡಿನಲ್ಲಿ ಹೆಚ್ಚುತ್ತಿರುವ ಕಾಡಾನೆ ಹಾವಳಿ ಮತ್ತು ಸಾವುಗಳ ಬೆನ್ನಲ್ಲೇ, ಇಂದು ಸಚಿವ ಈಶ್ವರ್ ಖಂಡ್ರೆ ಚಿಕ್ಕಮಗಳೂರಿನ ಬಾಳೆಹೊನ್ನೂರಿನಲ್ಲಿ ಸಭೆ ನಡೆಸಿದರು. ಆನೆ ಕಾರ್ಯಪಡೆ ರಚನೆ, ರೈಲ್ವೆ ಬ್ಯಾರಿಕೇಡ್ ನಿರ್ಮಾಣ ಸೇರಿದಂತೆ ಮಾನವ-ಪ್ರಾಣಿ ಸಂಘರ್ಷ ತಗ್ಗಿಸಲು ಶಾಶ್ವತ ಪರಿಹಾರ ಸೂಚಿಸಿದ್ದಾರೆ. ದುರ್ಘಟನೆ ತಡೆಯಲು ಸಾರ್ವಜನಿಕರ ಸಹಕಾರವನ್ನು ಕೋರಿದ್ದಾರೆ.

ಕಾಫಿನಾಡಿನಲ್ಲಿ ಮಾನವ-ಪ್ರಾಣಿಗಳ ಸಂಘರ್ಷ: ಸಚಿವ ಈಶ್ವರ್ ಖಂಡ್ರೆ ನೇತೃತ್ವದಲ್ಲಿ ಸಭೆ‌; ಹೇಳಿದ್ದಿಷ್ಟು
ಸಚಿವ ಈಶ್ವರ್ ಖಂಡ್ರೆ
Image Credit source: tv9 kannada
Edited By:

Updated on: Feb 28, 2026 | 9:02 PM

ಚಿಕ್ಕಮಗಳೂರು, ಫೆಬ್ರವರಿ 28: ಕಾಫಿನಾಡಿನಲ್ಲಿ ಮಾನವ ಕಾಡು ಪ್ರಾಣಿಗಳ ಸಂಘರ್ಷ ಮಿತಿ ಮೀರಿದೆ. ಕಾಡಾನೆಗಳ ದಾಳಿಗೆ ರೈತರು, ಕಾರ್ಮಿಕರು ಬಲಿ ಆಗುತ್ತಿದ್ದರೆ, ಕಾಡು, ಕೋಣದ ದಾಳಿ ಆತಂಕ ಸೃಷ್ಟಿ ಮಾಡಿದೆ. 7 ದಿನಗಳಲ್ಲಿ ಕಾಡಾನೆ (Wild elephant) ದಾಳಿಗೆ ಇಬ್ಬರು ಬಲಿಯಾಗಿದ್ದು, ಸ್ಥಳೀಯರ ಆಕ್ರೋಶಕ್ಕೆ ಕಾರಣವಾಗಿತ್ತು. ಪ್ರತಿಭಟನೆ ನಡೆಸಿದವರ ಮೇಲೆ ಪೊಲೀಸರ ಲಾಠಿಚಾರ್ಜ್ ಕಿಚ್ಚು ಹೆಚ್ಚಿಸಿದ್ದು, ಎಲ್ಲದರ ಮಧ್ಯೆ ಇಂದು ಸಚಿವ ಈಶ್ವರ್ ಖಂಡ್ರೆ (Eshwara Khandre) ಸಭೆ ಮಾಡಿದ್ದಾರೆ.

ಕಾಫಿನಾಡು ಚಿಕ್ಕಮಗಳೂರು ಜಿಲ್ಲೆಯ ಮಲೆನಾಡು ಭಾಗದಲ್ಲಿ ಕಾಡಾನೆ, ಕಾಡುಕೋಣ ಆತಂಕ ಸೃಷ್ಟಿ ಮಾಡಿದ್ದರೆ, ಬಯಲುಸೀಮೆ ಭಾಗದಲ್ಲಿ ಚಿರತೆ ಉಪಟಳ ಜನರನ್ನ ಕಂಗಾಲು ಮಾಡಿದೆ. ಹಾಸನದಿಂದ ಬೇಲೂರು ಸಕಲೇಶಪುರ ಮಾರ್ಗವಾಗಿ ಚಿಕ್ಕಮಗಳೂರು ‌ಜಿಲ್ಲೆಯ ಮೂಡಿಗೆರೆ ತಾಲೂಕಿಗೆ 30ಕ್ಕೂ ಹೆಚ್ಚು ಕಾಡಾನೆಗಳು ಎಂಟ್ರಿ ಕೊಟ್ಟಿವೆ. ಬೀಟಮ್ಮ ಗ್ಯಾಂಗ್, ಭುವನೇಶ್ವರಿ ಗ್ಯಾಂಗ್ ಉಪಟಳ ನೀಡುತ್ತಿದ್ದರೆ ಕಾಫಿತೋಟ, ಊರುಗಳಲ್ಲೇ ಕಾಡಾನೆಗಳು ಓಡಾಟ ನಡೆಸುತ್ತಿವೆ. ಜಿಲ್ಲೆಯಲ್ಲೇ ಸಂಚಾರ ಮಾಡುತ್ತಿರುವ ಕಾಡಾನೆಗಳ ಜೊತೆ ಹಾಸನದಿಂದ ಬಂದ ಕಾಡಾನೆಗಳು ಹೊಸ ತಲೆನೋವು ಉಂಟುಮಾಡಿವೆ.

ಇದನ್ನೂ ಓದಿ: ಗೋಣಿಬೀಡು ಬಳಿ ಕಾಫಿತೋಟದಲ್ಲಿ ಬೀಡುಬಿಟ್ಟ ಕಾಡಾನೆ ಭೀಮ

ಇನ್ನು ಶೃಂಗೇರಿ ವಿಧಾನಸಭಾ ಕ್ಷೇತ್ರದಲ್ಲಿ 13 ಮಂದಿ ಕಾಡು ಪ್ರಾಣಿಗಳ ದಾಳಿಗೆ ಬಲಿಯಾಗಿದ್ದಾರೆ. ಇದಲ್ಲದೆ ಗಾಯಗೊಂಡವರು ಹಲವರು. ಕಳೆದ ಭಾನುವಾರ ಕಾರ್ಮಿಕ ಮಹಿಳೆಯನ್ನ ಕಾಡಾನೆ ಬಲಿ ಪಡೆದಿತ್ತು. ಚಿಕ್ಕಮಗಳೂರು ತಾಲೂಕಿನ ಪುರಗ್ರಾಮದಲ್ಲಿ ಒಂದೇ ಸ್ಥಳದಲ್ಲಿ ಇಬ್ಬರು ಕಾಡಾನೆಗೆ ಬಲಿಯಾಗಿದ್ದರು. ಮಹಿಳೆ ಬಲಿಯಾಗುತ್ತಿದ್ದಂತೆ ಅಕ್ಷರಶಃ ಮಲೆನಾಡೇ ಕೊತಕೊತ ಅನ್ನೋ ಸ್ಥಿತಿಗೆ ತಲುಪಿತ್ತು. ಅರಣ್ಯ ಸಚಿವರೇ ಬರುವಂತೆ ಪಟ್ಟು ಹಿಡಿದಿದ್ದರು. ಶಾಶ್ವತ ಪರಿಹಾರಕ್ಕೆ ಆಗ್ರಹಿಸಿದ್ದರು. ಪ್ರತಿಭಟನೆ ಸ್ವರೂಪ ಬದಲಾಗಿ ಕಡಬಗೆರೆ ಪಟ್ಟಣದಲ್ಲಿ ಲಾಠಿಚಾರ್ಜ್ ನಡೆಸಿದ್ದರು. ಇದು ಭಾರೀ ಆಕ್ರೋಶಕ್ಕೆ ಕಾರಣವಾಗಿತ್ತು.

ಮತ್ತೊಂದು ಕಾಡಾನೆ ಸೆರೆಗೆ ಅನುಮತಿ 

ಇಂದು ಸಚಿವ ಈಶ್ವರ್ ಖಂಡ್ರೆ ಮಾತ್ರವಲ್ಲದೆ ಇಡೀ ರಾಜ್ಯದ ಹಿರಿಯ ಅರಣ್ಯ ಇಲಾಖೆಯ ಅಧಿಕಾರಿಗಳೊಂದಿಗೆ ಭೇಟಿ ನೀಡಿದ್ದಾರೆ. ಬಾಳೆಹೊನ್ನೂರಿನ ಕಡ್ಲೇಮಕ್ಕಿಯಲ್ಲಿ ರೈತರು, ಕಾಫಿ ಬೆಳೆಗಾರರು ಸ್ಥಳೀಯರ ಸಮ್ಮುಖದಲ್ಲಿ ಸಂವಾದ ನಡೆಸಿದರು. ಇದಲ್ಲದೆ ಬಾಳೆಹೊನ್ನೂರಿನಲ್ಲಿ ಉಪಟಳ ನೀಡುತ್ತಿರುವ ಮತ್ತೊಂದು ಕಾಡಾನೆ ಸೆರೆಗೂ ಅನುಮತಿ ನೀಡಿದ್ದಾರೆ.

ಬಾಳೆಹೊನ್ನೂರಿನ ನಾರಾಯಣ ಗುರು ಭವನದಲ್ಲಿ ನಡೆದ ಸಂವಾದದಲ್ಲಿ ಸಾಲು ಸಾಲು ಮನವಿ ಮಾಡಲಾಗಿದೆ. ಕಾಡಾನೆ ಹಾವಳಿ ಹೆಚ್ಚಾಗಲು ಕೆಲವು ಯೋಜನೆಯೂ ಕಾರಣ ಅನ್ನೋ ಆರೋಪವೂ ಕೇಳಿಬಂದಿದೆ. ಭದ್ರಾ ನದಿಯ ಹಿನ್ನೀರು ಕಡಿಮೆಯಾದಾಗ ಕಾಡಾನೆಗಳು ನದಿ ದಾಟಿ ಬರುತ್ತವೆ ಎಂದು ಸ್ಥಳೀಯರು ಸಚಿವರಿಗೆ ಮಾಹಿತಿ ನೀಡಿದ್ದು, ಶಾಶ್ವತ ಪರಿಹಾರಕ್ಕೆ ಆಗ್ರಹಿಸಿದರು.

ಇದಲ್ಲದೆ ಸೆಕ್ಷನ್ 4, ಒತ್ತುವರಿ ತೆರವು, ಕಾಡಿಗೆ ಬೆಂಕಿ ಬಿದ್ದರೆ ಕ್ರಮವಿಲ್ಲ. ವನ್ಯಮೃಗಗಳಿಂದ ಮಾನವರು ಸಾವನ್ನಪ್ಪಿದರೆ ಪರಿಹಾರ ಹೆಚ್ಚಿಸುವಂತೆ ಆಗ್ರಹಿಸಿದರು. ಇನ್ನೂ ಕಾಡಾನೆ ಉಪಟಳ ತಪ್ಪಿಸಲು ಇನ್ನಷ್ಟು ETF ಸಿಬ್ಬಂದಿಗಳ ನೇಮಕಾತಿಗೂ ಸ್ಥಳೀಯರು ಆಗ್ರಹಿಸಿದರು.

ಅರಣ್ಯ ಸಚಿವ ಈಶ್ವರ್ ಖಂಡ್ರೆ ಹೇಳಿದ್ದಿಷ್ಟು 

ಸಭೆ ಬಳಿಕ ಮಾಧ್ಯಮದವರೊಂದಿಗೆ ಮಾತನಾಡಿದ ಅರಣ್ಯ ಸಚಿವ ಈಶ್ವರ್ ಖಂಡ್ರೆ, ಆನೆ ಕಾರ್ಯಪಡೆಗೆ ಬೇಡಿಕೆ ಇದೆ, ಸೂಚನೆಯನ್ನ ನೀಡಿದ್ದೇನೆ. ಮಾ.2ರಂದು 32 ಸಿಬ್ಬಂದಿಯ ಆನೆ ಕಾರ್ಯಪಡೆ ಪ್ರಾರಂಭ ಮಾಡುತ್ತೇವೆ. ಆನೆ ಹಾವಳಿ ತಪ್ಪಿಸಲು ಸಿಎಂರಿಂದ ರೈಲ್ವೆ ಬ್ಯಾರಿಕ್ಯಾಡ್ ಅನುಮೋದನೆ ಪಡೆಯಲು ಪ್ರಯತ್ನ ಮಾಡುತ್ತೇನೆ. ಸೆಕ್ಷನ್ 4 ಬಗ್ಗೆ ಶಾಶ್ವತ‌ ಪರಿಹಾರಕ್ಕೆ ಅಧಿಕಾರಿಗಳಿಗೆ ಸೂಚಿಸಲಾಗಿದೆ. ಮಾನವ ಮತ್ತು ಪ್ರಾಣಿ ಸಂಘರ್ಷ ಕಡಿಮೆಯಾಗಬೇಕು, ದುರ್ಘಟನೆಯಾಗದಂತೆ ತಡೆಯಲು ಸಾರ್ವಜನಿಕರು ಸಹಕರಿಸಬೇಕು ಎಂದಿದ್ದಾರೆ.

ಇದನ್ನೂ ಓದಿ: ಕಿಲ್ಲರ್ ಕಾಡಾನೆ ಸೆರೆಯಾದರೂ ಮುಂದುವರಿದ ಆತಂಕ; ಚಿಕ್ಕಮಗಳೂರಿನ 12 ಗ್ರಾಮಗಳಿಗೆ ಗ್ರಾಮಗಳಲ್ಲಿ ನಿಷೇಧಾಜ್ಞೆ !

ಒಟ್ಟಾರೆ ಸಚಿವ ಈಶ್ವರ್ ಖಂಡ್ರೆ ಜಿಲ್ಲೆಗೆ ಭೇಟಿ ನೀಡಿ ಸ್ಥಳೀಯರ ಸಮಸ್ಯೆ ಆಲಿಸಿದ್ದಾರೆ. ಆದರೆ ಬಿಜೆಪಿ ಮತ್ತು ಜೆಡಿಎಸ್ ನಾಯಕರುಗಳು ಸಭೆಗೆ ಗೈರಾಗಿದ್ದರು. ಈ ಸಭೆ ಪರಿಹಾರದ ಸಭೆಯಾಗುತ್ತೋ, ಮುಂದೇ ರಾಜಕೀಯ ಏಟು ಎದುರೇಟಿನ ವೇದಿಕೆಯಾಗುತ್ತೋ ಎನ್ನುವ ಅನುಮಾನವೂ ಶುರುವಾಗಿದೆ. ಒಟ್ಟಿನಲ್ಲಿ ಕಾಫಿನಾಡಿನಲ್ಲಿ ಸೃಷ್ಟಿಯಾಗಿರುವ ಕಾಡು ಪ್ರಾಣಿಗಳು ಮತ್ತು ಮಾನವ ನಡುವಿನ ಸಂಘರ್ಷ ಅಂತ್ಯವಾಗಬೇಕಿದೆ.

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.

Follow Us