
ಚಿಕ್ಕಮಗಳೂರು, ಜುಲೈ 16: ಚಿಕ್ಕಮಗಳೂರು (Chikmagalur) ಜಿಲ್ಲೆಯ ಹಕ್ಕಿಪಿಕ್ಕಿ ಕಾಲೋನಿಯ ಯುವತಿಯೊಬ್ಬಳನ್ನು ಹಣಕ್ಕಾಗಿ ಪೋಷಕರೇ ಪಶ್ಚಿಮ ಆಫ್ರಿಕಾದ ಸೆನೆಗಲ್ ದೇಶದಲ್ಲಿ ವೇಶ್ಯಾವಾಟಿಕೆ ದಂಧೆಗೆ ಮಾರಾಟ ಮಾಡಿದ್ದಾರೆ ಎಂಬ ಗಂಭೀರ ಆರೋಪ ಕೇಳಿಬಂದಿದೆ. ಈ ಸಂಬಂಧ ಕರ್ನಾಟಕ ಹಕ್ಕಿಪಿಕ್ಕಿ ಬುಡಕಟ್ಟು ಸಂಘವು ಚಿಕ್ಕಮಗಳೂರು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗೆ ದೂರು ಸಲ್ಲಿಸಿ, ಆರೋಪಿಗಳ ವಿರುದ್ಧ ಕಾನೂನು ಕ್ರಮ ಕೈಗೊಳ್ಳುವಂತೆ ಆಗ್ರಹಿಸಿದೆ.
ಚಿಕ್ಕಮಗಳೂರು ತಾಲೂಕಿನ ಮಲ್ಲೇನಹಳ್ಳಿ ಸಮೀಪದ ಹಕ್ಕಿಪಿಕ್ಕಿ ಕಾಲೋನಿಯ ನಿವಾಸಿಗಳಾದ ಕ್ರಾಂತಿ ಹಾಗೂ ರಾಜಶೇಖರ್ ಅವರ ಪುತ್ರಿ ನಂದಿತಾ (20) ನಾಲ್ಕು ತಿಂಗಳ ಹಿಂದೆ ಕುಟುಂಬದೊಂದಿಗೆ ಗಿಡಮೂಲಿಕೆ ವ್ಯಾಪಾರದ ನೆಪದಲ್ಲಿ ಪಶ್ಚಿಮ ಆಫ್ರಿಕಾದ ಸೆನೆಗಲ್ ದೇಶಕ್ಕೆ ತೆರಳಿದ್ದರು.
ಸುಮಾರು 10 ದಿನಗಳ ಹಿಂದೆ ನಂದಿತಾಳನ್ನು 7 ಲಕ್ಷ ರೂಪಾಯಿಗೆ ವೇಶ್ಯಾವಾಟಿಕೆ ದಂಧೆಗೆ ಮಾರಾಟ ಮಾಡಲಾಗಿದೆ ಎಂಬ ಆರೋಪ ಕೇಳಿಬಂದಿದೆ. ಬಳಿಕ ನಂದಿತಾ ಕಷ್ಟಪಟ್ಟು ಪರಿಚಯದವರನ್ನು ಸಂಪರ್ಕಿಸಿ, ತನ್ನನ್ನು ಪೋಷಕರೇ ಹಣಕ್ಕಾಗಿ ಮಾರಾಟ ಮಾಡಿದ್ದಾರೆ ಎಂದು ಮಾಹಿತಿ ನೀಡಿದ್ದಳು ಎನ್ನಲಾಗಿದೆ. ನಡೆದಿರುವ ಅನ್ಯಾಯವನ್ನು ವಿವರಿಸಿ ವಿಡಿಯೋ ಸಂದೇಶವನ್ನೂ ರವಾನಿಸಿದ್ದಳು ಎಂದು ಮೂಲಗಳು ತಿಳಿಸಿವೆ.
ಈ ಮಾಹಿತಿ ಭಾರತೀಯ ರಾಯಭಾರ ಕಚೇರಿ (Indian Embassy) ಗಮನಕ್ಕೆ ಬಂದ ಬಳಿಕ, ಸ್ಥಳೀಯರ ಸಹಕಾರ ಮತ್ತು ಸೆನೆಗಲ್ ಪೊಲೀಸರ ನೆರವಿನಿಂದ ಯುವತಿಯನ್ನು ಸುರಕ್ಷಿತವಾಗಿ ರಕ್ಷಿಸಲಾಗಿದೆ ಎಂದು ವರದಿಯಾಗಿದೆ. ಇದೇ ವೇಳೆ, ಮಗಳನ್ನು ಭಾರತಕ್ಕೆ ಕಳುಹಿಸಲಾಗಿದೆ ಎಂದು ಹೇಳಿ ಪೋಷಕರು ಸಂಬಂಧಿಕರಿಗೆ ಬೇರೆ ಕಥೆ ಹೇಳಿದ್ದರು ಎಂಬ ಆರೋಪವೂ ಕೇಳಿಬಂದಿದೆ. ಯುವತಿಯ ರಕ್ಷಣೆಯಾದ ವಿಷಯ ತಿಳಿದ ಬಳಿಕ ಪೋಷಕರು ಭಾರತಕ್ಕೆ ಮರಳಿರುವುದಾಗಿ ತಿಳಿದುಬಂದಿದೆ.
ಕರ್ನಾಟಕ ಹಕ್ಕಿಪಿಕ್ಕಿ ಬುಡಕಟ್ಟು ಸಂಘವು ಜುಲೈ 15ರಂದು ಚಿಕ್ಕಮಗಳೂರು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಜಿತೇಂದ್ರ ಕುಮಾರ್ ದಯ್ಮಾ ಅವರಿಗೆ ಪತ್ರ ಬರೆದು ಕ್ರಮಕ್ಕೆ ಆಗ್ರಹಿಸಿದೆ. ಗಿಡಮೂಲಿಕೆ ವ್ಯಾಪಾರದ ಹೆಸರಿನಲ್ಲಿ ಕ್ರಾಂತಿ ಹಾಗೂ ರಾಜಶೇಖರ್ ತಮ್ಮ ಮಗಳನ್ನು ಆಫ್ರಿಕಾದ ಸೆನೆಗಲ್ ದೇಶದಲ್ಲಿ ಮಾರಾಟ ಮಾಡಿದ್ದಾರೆ ಎಂದು ಪತ್ರದಲ್ಲಿ ಆರೋಪಿಸಲಾಗಿದ್ದು, ಈ ಘಟನೆ ಹಕ್ಕಿಪಿಕ್ಕಿ ಸಮುದಾಯಕ್ಕೆ ಕಪ್ಪು ಚುಕ್ಕೆ. ಸಮಾಜದ ಗೌರವಕ್ಕೆ ಧಕ್ಕೆ ಉಂಟುಮಾಡಿದೆ ಎಂದು ಸಂಘ ಹೇಳಿದೆ. ಇಂತಹ ಕೃತ್ಯ ಎಸಗಿರುವ ಆರೋಪಿಗಳ ವಿರುದ್ಧ ಭಾರತೀಯ ನ್ಯಾಯ ಸಂಹಿತೆ (ಬಿಎನ್‌ಎಸ್) ಸೇರಿದಂತೆ ಅನ್ವಯವಾಗುವ ಕಾನೂನುಗಳಡಿ ಕಠಿಣ ಕ್ರಮ ಕೈಗೊಳ್ಳಬೇಕು ಎಂದು ಮನವಿ ಮಾಡಲಾಗಿದೆ.
ಇದನ್ನೂ ಓದಿ: ಅರ್ಧ ಶತಕ ಕಳೆದರೂ ಈ ಜನಾಂಗಕ್ಕೆ ಸಿಕ್ಕಿಲ್ಲ ಸೂರು! ಮೂಲಭೂತ ಹಕ್ಕುಗಳಿಲ್ಲದೆ ಗುಡಿಸಲಲ್ಲಿ ಬದುಕುತ್ತಿದೆ ಹಕ್ಕಿಪಿಕ್ಕಿ ಸಮುದಾಯ
ಪ್ರಕರಣದ ಸಂಪೂರ್ಣ ತನಿಖೆ ನಡೆಸಿ ಸತ್ಯಾಂಶವನ್ನು ಹೊರತಂದು, ತಪ್ಪಿತಸ್ಥರ ವಿರುದ್ಧ ಕಾನೂನು ಕ್ರಮ ಜರುಗಿಸುವಂತೆ ಸಂಘವು ಪೊಲೀಸ್ ಇಲಾಖೆಯನ್ನು ಒತ್ತಾಯಿಸಿದೆ.
ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ