ಸೊಲ್ಲಾಪುರ-ಮಂಗಳೂರು ಸಂಪರ್ಕಿಸುವ ರಾ.ಹೆದ್ದಾರಿ ಬಂದ್​: ಬದಲಿ ಮಾರ್ಗ ಇಲ್ಲಿದೆ

ಚಿಕ್ಕಮಗಳೂರಿನ ಪಶ್ಚಿಮ ಘಟ್ಟಗಳ ಸಾಲು, ಮಲೆನಾಡು ಭಾಗದಲ್ಲಿ ವರುಣಾರ್ಭಟ ಜೋರಾಗಿದೆ. ಧಾರಾಕಾರವಾಗಿ ಸುರಿಯುತ್ತಿರುವ ಮಳೆಯಿಂದ ಶಿವಮೊಗ್ಗ-ಮಂಗಳೂರು ರಾಷ್ಟ್ರೀಯ ಹೆದ್ದಾರಿ 169 ರಲ್ಲಿ ಗುಡ್ಡ ಕುಸಿತವಾಗಿದ್ದು ಆತಂಕ ಸೃಷ್ಟಿಯಾಗಿದೆ. ಜಲಪಾತಗಳಿಗೆ ಜೀವಕಳೆ ಬಂದಿದ್ದು ಭೋರ್ಗರೆಯುತ್ತಿವೆ. ಮಳೆಯಿಂದಾಗಿ ಪ್ರವಾಸಿ ತಾಣಗಳಲ್ಲಿಯೂ ಸಮಸ್ಯೆ ಉಂಟಾಗಿದೆ. ಕಾಫಿನಾಡಿನ ಜನರು ಮಳೆಯ ಅಬ್ಬರಕ್ಕೆ ಕಂಗಾಲಾಗಿದ್ದಾರೆ.

ಸೊಲ್ಲಾಪುರ-ಮಂಗಳೂರು ಸಂಪರ್ಕಿಸುವ ರಾ.ಹೆದ್ದಾರಿ ಬಂದ್​: ಬದಲಿ ಮಾರ್ಗ ಇಲ್ಲಿದೆ
ಸೊಲ್ಲಾಪುರ-ಮಂಗಳೂರು ಸಂಪರ್ಕಿಸುವ ರಾ.ಹೆ ಬಂದ್
Edited By:

Updated on: Jun 15, 2025 | 9:36 PM

ಚಿಕ್ಕಮಗಳೂರು, ಜೂನ್​ 15: ಕಾಫಿನಾಡು ಚಿಕ್ಕಮಗಳೂರು (Chikkamagaluru) ಜಿಲ್ಲೆಯಾದ್ಯಂತ ಮುಂಗಾರು ಮಳೆಯ (Monsoon Rain) ಆರ್ಭಟ ಜೋರಾಗಿದೆ. ಜಿಲ್ಲೆಯ ಪಶ್ಚಿಮ ಘಟ್ಟಗಳ ಸಾಲು ಮಲೆನಾಡು ಭಾಗದಲ್ಲಿ ಭಾರಿ ಮಳೆಯಾಗುತ್ತಿದ್ದು ರವಿವಾರ (ಜೂ.15) ಜಿಲ್ಲೆಯಾದ್ಯಂತ ರೆಡ್ ಅಲರ್ಟ್ ಘೋಷಣೆ ಮಾಡಲಾಗಿದೆ. ಶನಿವಾರ (ಜೂ.14) ರಾತ್ರಿಯಿಂದ ಜಿಲ್ಲೆಯ ಮಲೆನಾಡಿನ ಆರು ತಾಲೂಕುಗಳಾದ ಚಿಕ್ಕಮಗಳೂರು, ಕೊಪ್ಪ, ಶೃಂಗೇರಿ, ಕಳಸ, ಮೂಡಿಗೆರೆ, ಎನ್​ಆರ್ ಪುರ ತಾಲೂಕಿನಲ್ಲಿ ಭಾರಿ ಮಳೆಯಾಗುತ್ತಿದೆ.

ಧಾರಾಕಾರವಾಗಿ ಸುರಿಯುತ್ತಿರುವ ಮಳೆಯಿಂದ ಸೊಲ್ಲಾಪುರದಿಂದ ಮಂಗಳೂರಿಗೆ ಸಂಪರ್ಕಿಸುವ ರಾಷ್ಟ್ರೀಯ ಹೆದ್ದಾರಿ 169 ರ ಶೃಂಗೇರಿ ತಾಲೂಕಿನ ನೆಮ್ಮಾರು ಬಳಿ ರಸ್ತೆಗೆ ಅಡ್ಡಲಾಗಿ 40 ಅಡಿ ಎತ್ತರದಿಂದ ರಸ್ತೆಗೆ ಅಡ್ಡಲಾಗಿ ಮಣ್ಣು, ಮರ, ಬಂಡೆಗಳು ಬೀಳುತ್ತಿವೆ. ಈ ಹಿನ್ನೆಲೆಯಲ್ಲಿ ಸೋಮವಾರ (ಜೂ.16) ಬೆಳಗ್ಗೆ 8 ಗಂಟೆವರೆಗೆ ವಾಹನ ಸಂಚಾರವನ್ನು ಚಿಕ್ಕಮಗಳೂರು ಜಿಲ್ಲಾಡಳಿತ ನಿಷೇಧಿಸಿದೆ. ಬಿದರಗೋಡು, ಆಗುಂಬೆ, ಉಡುಪಿ ಮಾರ್ಗದಲ್ಲಿ ವಾಹನಗಳು ಸಂಚರಿಸುವಂತೆ ಜಿಲ್ಲಾಡಳಿತ ಸೂಚನೆ ನೀಡಿದೆ.

ನಿರಂತರವಾಗಿ ಸುರಿಯುತ್ತಿರುವ ಮಳೆಗೆ ಕುಸಿದ ಸ್ಥಳದಲ್ಲೇ ಮತ್ತೆ ಮತ್ತೆ ಮಣ್ಣು ಕುಸಿತವಾಗುತ್ತಿದ್ದು ಆತಂಕ ಸೃಷ್ಟಿ ಮಾಡಿದೆ. ಜೆಸಿಬಿ ಮೂಲಕ ರಸ್ತೆಗೆ ಅಡ್ಡಲಾಗಿ ಬಿದ್ದ ಮಣ್ಣು ತೆರವು ಕಾರ್ಯಚರಣೆ ನಡೆಯುತ್ತಿದ್ದು, ಬದಲಿಮಾರ್ಗವಾಗಿ ಬಿದರಗೋಡು, ಆಗುಂಬೆ, ಉಡುಪಿ ಮಾರ್ಗವಾಗಿ ಮಂಗಳೂರಿಗೆ ಸಂಚಾರ ಮಾಡುವಂತೆ ವಾಹನ ಸವಾರರಿಗೆ ಶೃಂಗೇರಿ ಪೊಲೀಸ್ ಇಲಾಖೆ ಸೂಚನೆ ನೀಡಿದೆ.

ಇದನ್ನೂ ಓದಿ
ಚಾರಣಕ್ಕೆ ಹೋಗಿ ಕಾಡಿನಲ್ಲಿ ತಪ್ಪಿಸಿಕೊಂಡ ವಿದ್ಯಾರ್ಥಿಗಳು: ಮುಂದೇನಾಯ್ತು?
ರಾಷ್ಟ್ರೀಯ ಹೆದ್ದಾರಿ 73 ರಲ್ಲಿ ಮರ ರಸ್ತೆಗುರುಳಿ ವಾಹನ ಸಂಚಾರ ಅಸ್ತವ್ಯಸ್ತ
ಚಾರ್ಮಾಡಿ ಹಸಿರು ರಾಶಿಯ ಮೇಲೆ ಮಂಜಿನ ಚಿತ್ತಾರ: ಪ್ರವಾಸಕ್ಕೆ ಸೂಕ್ತ ಸಮಯ
ಈಗಾಗಲೇ ಹತ್ತಕ್ಕೂ ಹೆಚ್ಚು ಕಡೆ ಕುಸಿದಿರುವ ಚಾರ್ಮಾಡಿ ಘಾಟ್

ಚಿಕ್ಕಮಗಳೂರು ಜಿಲ್ಲೆಯ ಪ್ರವಾಸಿತಾಣಗಳಿಗೆ ಹೆಚ್ಚಿನ ಸಂಖ್ಯೆಯಲ್ಲಿ ಪ್ರವಾಸಿಗರು ಆಗಮಿಸುತ್ತಿದ್ದಾರೆ ಚಿಕ್ಕಮಗಳೂರು ತಾಲೂಕಿನ ಚಂದ್ರದ್ರೋಣ ಪರ್ವತದ ಸಾಲಿನಲ್ಲಿ ಇಂದು ಸಾವಿರಾರು ಪ್ರವಾಸಿಗರು ಭೇಟಿ ನೀಡಿದ್ದು ಮುಳ್ಳಯ್ಯನಗಿರಿ ಮಾರ್ಗದ ಸೀತಾಳಯ್ಯನಗಿರಿ ಬಳಿ ಉಂಟಾಗಿದ್ದ ಟ್ರಾಫಿಕ್ ಜಾಮ್​ ನಿಯಂತ್ರಿಸಲು ಪ್ರವಾಸಿ ಮಿತ್ರರು ಸುರಿಯುವ ಮಳೆಯಲ್ಲೇ ಹರಸಾಹಸ ಪಟ್ಟರು. ಮತ್ತೊಂದು ಕಡೆ ಮಳೆ ಅಬ್ಬರಕ್ಕೆ ಚಂದ್ರದ್ರೋಣ ಪರ್ವತದ ಸಾಲಿನ ಮುಳ್ಳಯ್ಯನಗಿರಿಗೆ ಪ್ರವಾಸಕ್ಕೆ ಬಂದಿದ್ದ ದೆಹಲಿ ಮೂಲದ ಪ್ರವಾಸಿಗರಿದ್ದ ಕಾರು ಚಾಲಕನ ನಿಯಂತ್ರಣ ತಪ್ಪಿ ಪಲ್ಟಿಯಾಗಿದೆ. ಪಲ್ಟಿಯಾದ ರಭಸಕ್ಕೆ ಕಾರಿನಲ್ಲಿದ್ದ ಇಬ್ಬರಿಗೆ ಸಣ್ಣಪುಟ್ಟ ಗಾಯವಾಗಿದೆ.

ಇದನ್ನೂ ನೋಡಿ: ಭಾರೀ ಮಳೆ: ಮುಳ್ಳಯ್ಯನಗಿರಿ ತಪ್ಪಲಿನಲ್ಲಿ ಕುಸಿಯುತ್ತಿರುವ ಗುಡ್ಡ, ಹೆಚ್ಚಿದ ಆತಂಕ

ಶೃಂಗೇರಿ ತಾಲೂಕಿನ ಸಿರಿಮನೆ ಜಲಪಾತಕ್ಕೆ ಜೀವಕಳೆ ಬಂದಿದ್ದು ನೂರಾರು ಅಡಿಗಳ ಎತ್ತರದಿಂದ ನೀರು ಕಲ್ಲು ಬಂಡೆಗಳ ಮೇಲೆ ಹಾಲ್ನೊರೆಯಂತೆ ಧುಮ್ಮುಕ್ಕುತ್ತಿದೆ. ಮುಂಗಾರು ಮಳೆ ಅಬ್ಬರ ಕಾಫಿನಾಡಿನಲ್ಲಿ ಜೋರಾಗಿದ್ದು, ವಾಡಿಕೆ ಪ್ರಮಾಣಕ್ಕಿಂತ ಹೆಚ್ಚಿನ ಮಳೆಯಾಗಿದ್ದು ಮಳೆಯ ಆರ್ಭಟಕ್ಕೆ ಕಾಫಿನಾಡಿಗರು ಕಂಗಾಲಾಗಿದ್ದಾರೆ.

ಕರ್ನಾಟಕದ ಇನ್ನಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ