
ಚಿಕ್ಕಮಗಳೂರು, ಅಕ್ಟೋಬರ್ 9: ವಾಹನಗಳನ್ನು ಭೌತಿಕವಾಗಿ ಪರಿಶೀಲಿಸದೇ ಫಿಟ್‌ನೆಸ್ ಸರ್ಟಿಫಿಕೇಟ್ (FC) ನೀಡಿರುವ ಆರೋಪ ಚಿಕ್ಕಮಗಳೂರು ಪ್ರಾದೇಶಿಕ ಸಾರಿಗೆ ಕಚೇರಿಯಲ್ಲಿ ಕೇಳಿಬಂದಿದೆ. 2023ರಿಂದ 2025ರವರೆಗೆ 13,600ಕ್ಕೂ ಹೆಚ್ಚು ವಾಹನಗಳಿಗೆ ನಿಯಮ ಉಲ್ಲಂಘಿಸಿ ಎಫ್‌ಸಿ ನೀಡಲಾಗಿದೆ ಎಂಬ ಗಂಭೀರ ಆರೋಪದ ಹಿನ್ನೆಲೆಯಲ್ಲಿ ಮೋಟಾರು ವಾಹನ ನಿರೀಕ್ಷಕ ಜಗದೀಶ್ ವಿರುದ್ಧ ಪೊಲೀಸರು ಎಫ್‌ಐಆರ್ ದಾಖಲಿಸಿದ್ದಾರೆ.
ಚಿಕ್ಕಮಗಳೂರು ಪ್ರಾದೇಶಿಕ ಸಾರಿಗೆ ಅಧಿಕಾರಿ (ಪ್ರಭಾರ) ರಾಕೇಶ್ ಕುಮಾರ್ ನೀಡಿದ ದೂರಿನ ಆಧಾರದಲ್ಲಿ ಚಿಕ್ಕಮಗಳೂರು ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಗೋವಾ, ಮಹಾರಾಷ್ಟ್ರ, ಹರಿಯಾಣ ಮತ್ತು ಪಂಜಾಬ್ ಸೇರಿದಂತೆ ಹೊರರಾಜ್ಯಗಳಲ್ಲಿ ನೋಂದಣಿಯಾಗಿರುವ ವಾಹನಗಳಿಗೆ ಸೂಕ್ತ ಪರಿಶೀಲನೆ ನಡೆಸದೆ ಎಫ್‌ಸಿ ನೀಡಲಾಗಿದೆ ಎಂದು ದೂರಿನಲ್ಲಿ ಆರೋಪಿಸಲಾಗಿದೆ.
ದೂರಿನ ಪ್ರಕಾರ, ಜಗದೀಶ್ ಅವರು 2023ರ ಏಪ್ರಿಲ್ 1ರಿಂದ 2025ರ ಜುಲೈ 5ರವರೆಗೆ ಚಿಕ್ಕಮಗಳೂರು ಆರ್‌ಟಿಒ ಕಚೇರಿಯಲ್ಲಿ ಮೋಟಾರು ವಾಹನ ನಿರೀಕ್ಷಕರಾಗಿ ಕರ್ತವ್ಯ ನಿರ್ವಹಿಸಿದ್ದರು. ಈ ಅವಧಿಯಲ್ಲಿ ಹೊರರಾಜ್ಯಗಳ ವಾಹನಗಳು ಮಾತ್ರವಲ್ಲದೆ, ಕರ್ನಾಟಕದ ವಿವಿಧ ಸಾರಿಗೆ ಕಚೇರಿಗಳಲ್ಲಿ ನೋಂದಣಿಯಾದ ವಾಹನಗಳು ಮತ್ತು ಬಸ್‌ಗಳಿಗೂ ಭೌತಿಕ ತಪಾಸಣೆ ನಡೆಸದೆ ಅರ್ಹತಾ ಪ್ರಮಾಣಪತ್ರ ನವೀಕರಿಸಲಾಗಿದೆ ಎಂದು ಆರೋಪಿಸಲಾಗಿದೆ.
ವಾಹನಗಳನ್ನು ಪರಿಶೀಲನೆಗೆ ಹಾಜರುಪಡಿಸದಿದ್ದರೂ ಎಫ್‌ಸಿ ನೀಡಿರುವುದು ಹಾಗೂ ಈ ಮೂಲಕ ಅಧಿಕಾರ ದುರ್ಬಳಕೆ ಮಾಡಿಕೊಂಡು ಸರ್ಕಾರಕ್ಕೆ ವಂಚಿಸಲಾಗಿದೆ ಎಂಬ ಆರೋಪವೂ ದೂರಿನಲ್ಲಿದೆ.
ಎರಡೇ ದಿನಗಳಲ್ಲಿ 4,000ಕ್ಕೂ ಹೆಚ್ಚು ಹೊರರಾಜ್ಯದ ವಾಹನಗಳಿಗೆ ಎಫ್‌ಸಿ ನೀಡಲಾಗಿದೆ ಎಂಬ ಆರೋಪವೂ ಕೇಳಿಬಂದಿದೆ. ಒಂದೇ ಲಾಗಿನ್ ಬಳಸಿ ಹೆಚ್ಚಿನ ಸಂಖ್ಯೆಯ ವಾಹನಗಳಿಗೆ ಪ್ರಮಾಣಪತ್ರ ನೀಡಿರುವ ಕುರಿತು ಅನುಮಾನ ವ್ಯಕ್ತವಾಗಿದೆ. ಈ ಪ್ರಕರಣದಲ್ಲಿ ಒಟ್ಟು 13,600ಕ್ಕೂ ಹೆಚ್ಚು ವಾಹನಗಳಿಗೆ ನಿಯಮಬಾಹಿರವಾಗಿ ಎಫ್‌ಸಿ ನೀಡಿರುವ ಆರೋಪದ ಬಗ್ಗೆ ತನಿಖೆ ನಡೆಯಬೇಕಿದೆ.
ಈ ಅಕ್ರಮದ ಕುರಿತು ಲೋಕಾಯುಕ್ತದಲ್ಲಿ ದೂರು ದಾಖಲಾಗಿದ್ದು, ತನಿಖೆ ಚುರುಕುಗೊಂಡಿದೆ. ಇದರ ಬೆನ್ನಲ್ಲೇ ಚಿಕ್ಕಮಗಳೂರು ಪ್ರಾದೇಶಿಕ ಸಾರಿಗೆ ಅಧಿಕಾರಿ ರಾಕೇಶ್ ಕುಮಾರ್ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ. ಭಾರತೀಯ ನ್ಯಾಯ ಸಂಹಿತೆಯ (BNS) ಸೆಕ್ಷನ್ 336(2), 336(3) ಮತ್ತು 340(2) ಅಡಿಯಲ್ಲಿ ಪೊಲೀಸರು ಎಫ್‌ಐಆರ್ ದಾಖಲಿಸಿದ್ದಾರೆ.
ಪ್ರಕರಣದಲ್ಲಿ ವಾಹನಗಳ ತಪಾಸಣೆ, ಎಫ್‌ಸಿ ನವೀಕರಣ ಮತ್ತು ಪ್ರಮಾಣಪತ್ರ ನೀಡುವ ಪ್ರಕ್ರಿಯೆಯಲ್ಲಿ ನಿಯಮ ಉಲ್ಲಂಘನೆಯಾಗಿದೆಯೇ ಎಂಬುದನ್ನು ತನಿಖೆಯಿಂದ ಸ್ಪಷ್ಟಪಡಿಸಬೇಕಿದೆ.
ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ