ಚಿಕ್ಕಮಗಳೂರು ಎಸ್​ಡಿಪಿಐ ಕಚೇರಿ ಮೇಲೆ ಪೊಲೀಸ್​​​ ಅಧಿಕಾರಿಗಳ ದಾಳಿ: ದಾಖಲೆ ಪರಿಶೀಲನೆ

ಪಿಎಫ್​ಐ ಜಿಲ್ಲಾಧ್ಯಕ್ಷ ಚಾಂದ್ ಪಾಷಾ ಮನೆ ಮೇಲೆ ಪೊಲೀಸ್​ ಅಧಿಕಾರಿಗಳು ದಾಳಿ ಮಾಡಿದ್ದಾರೆ. ದಾಖಲೆಗಳನ್ನ ಪರಿಶೀಲನೆ ನಡೆಸಿದರು.

ಚಿಕ್ಕಮಗಳೂರು ಎಸ್​ಡಿಪಿಐ ಕಚೇರಿ ಮೇಲೆ ಪೊಲೀಸ್​​​ ಅಧಿಕಾರಿಗಳ ದಾಳಿ: ದಾಖಲೆ ಪರಿಶೀಲನೆ
SDPI ಕಚೇರಿ ಮೇಲೆ ಪೊಲೀಸರು ದಾಳಿ.
Follow us
TV9 Web
| Updated By: ಗಂಗಾಧರ​ ಬ. ಸಾಬೋಜಿ

Updated on: Sep 29, 2022 | 12:11 PM

ಚಿಕ್ಕಮಗಳೂರು: ಜಿಲ್ಲೆಯ ಎಸ್​ಡಿಪಿಐ (SDPI) ಕಚೇರಿ ಮೇಲೆ ಪೊಲೀಸರು ದಾಳಿ ಮಾಡಿದ್ದಾರೆ. ಪಿಎಫ್​ಐ ಜಿಲ್ಲಾಧ್ಯಕ್ಷ ಚಾಂದ್ ಪಾಷಾ ಮನೆ ಮೇಲೆ ಪೊಲೀಸ್​ ಅಧಿಕಾರಿಗಳು ದಾಳಿ ಮಾಡಿದ್ದಾರೆ. ನನ್ನ ಮನೆಯನ್ನು ಯಾಕೆ ರೇಡ್ ಮಾಡುತ್ತಿದ್ದೀರಿ ಎಂದು ಚಾಂದ್ ಪಾಷಾ ಪ್ರಶ್ನೆ ಮಾಡಿದ್ದಾರೆ. ಚಾಂದ್ ಪಾಷಾ ಪ್ರಶ್ನೆಗೆ ಜಾಸ್ತಿ ಮಾತನಾಡುವ ಅವಶ್ಯಕತೆ ಇಲ್ಲ ಎಂದ ಪೊಲೀಸರು. ನಮಗೆ ಆದೇಶ ಇದೆ ನಿಮ್ಮ ಮನೆಯನ್ನ ಸರ್ಚ್ ಮಾಡುತ್ತೇವೆ ಎಂದು ಹೇಳಿದ್ದಾರೆ. ಮನೆ ಬಾಗಿಲು ತೆಗೆದ ಮೇಲೆ ತನಿಖೆ ಆರಂಭಿಸಿದ ಅಧಿಕಾರಿಗಳು ದಾಖಲೆಗಳನ್ನ ಪರಿಶೀಲನೆ ನಡೆಸಿದ್ದಾರೆ. ಇನ್ನು ಪಿಎಫ್​ಐ ಕಾರ್ಯಕರ್ತ ಆಗಿರುವ ಆರೀಫ್ ಮನೆಗೂ ಡಿಸಿ ಮಾರ್ಗದರ್ಶನ ಮೇರೆಗೆ ಪೊಲೀಸ್ ಅಧಿಕಾರಿಗಳು ದಾಳಿ ಮಾಡಿದ್ದಾರೆ. ಎರಡು ದಿನದ ಹಿಂದೆ ಠಾಣೆಗೆ ಬಂದು ಹಾಜರಾಗುವಂತೆ ಪೊಲೀಸರು ಸೂಚಿಸಿದ್ದರು. ಠಾಣೆಗೆ ಹಾಜರಾಗದ ಹಿನ್ನೆಲೆ ಜಿಲ್ಲಾಧಿಕಾರಿಯಿಂದ ಸರ್ಚ್ ವಾರೆಂಟ್ ನೀಡಿದ್ದು, ಇಂದು ಮನೆ ಮೇಲೆ ದಾಳಿ ಮಾಡಿ ದಾಖಲೆಗಳ ಪರಿಶೀಲನೆ ಮಾಡಲಾಗಿದೆ. ಸಿಪಿಐ ಸತ್ಯನಾರಾಯಣ, ಪಿಎಸ್ಐಗಳಾಧ ಸಜಿತ್, ಕೀರ್ತಿ ಕುಮಾರ್ ಹಾಗೂ ಸಿಬ್ಬಂದಿಗಳಿಂದ ದಾಳಿ ಮಾಡಿದ್ದು, ಪೊಲೀಸರಿಗೆ ಕಂದಾಯ ಇಲಾಖೆ ಅಧಿಕಾರಿಗಳು ಸಾಥ್ ನೀಡಿದರು.

12 ಪಿಎಫ್ಐ ಕಚೇರಿಗಳಿಗೆ ಬೀಗ

ಪಿಎಫ್​ಐ ನಿಷೇಧ ಆದೇಶ ಹೊರಬಿದ್ದ ನಂತರ ಮಂಗಳೂರಿನ 12 ಪಿಎಫ್​​ಐ ಕಚೇರಿಗಳಿಗೆ ಬೀಗ ಹಾಕಲಾಗಿದೆ. ಮಂಗಳೂರು, ಪಣಂಬೂರು, ಸುರತ್ಕಲ್, ಬಜ್ಪೆ, ಉಳ್ಳಾಲ, ಕೋಣಾಜೆ ಸೇರಿದಂತೆ ವಿವಿಧೆಡೆ ತಡರಾತ್ರಿವರೆಗೂ ಪೊಲೀಸರು ದಾಳಿ ನಡೆಸಿದರು. ದಾಳಿ ಕಾರ್ಯಾಚರಣೆ ವೇಳೆ ದಾಖಲೆಗಳನ್ನೂ ಜಪ್ತಿ ಮಾಡಲಾಯಿತು. ಕಮಿಷನರ್ ಎನ್.ಶಶಿಕುಮಾರ್ ನೇತೃತ್ವದಲ್ಲಿ ಕಾರ್ಯಾಚರಣೆ ನಡೆಯಿತು.

ಪಿಎಫ್​ಐ ಕಚೇರಿ ಮೇಲೆ ದಾಳಿ

ಕೊಡಗು ಜಿಲ್ಲಾಧಿಕಾರಿ ಆದೇಶದ ಮೇರೆಗೆ ಮಡಿಕೇರಿಯ ಮಹದೇವ ಪೇಟೆಯಲ್ಲಿರುವ ಪಿಎಫ್​​ಐ ಕಚೇರಿ ಮೇಲೆ ಪೊಲೀಸರು ತಡರಾತ್ರಿ ದಾಳಿ ನಡೆಸಿ ಶೋಧ ನಡೆಸಿದರು. ಉಪವಿಭಾಗಾಧಿಕಾರಿ ಯತೀಶ್ ಉಳ್ಳಾಲ್ ನೇತೃತ್ವದಲ್ಲಿ ನಡೆದ ತಪಾಸಣೆ ನಡೆಯಿತು. ತಪಾಸಣೆ ಬಳಿಕ ಕಚೇರಿಗೆ ಬೀಗಮುದ್ರೆ ಹಾಕಲಾಯಿತು.

ಪಿಎಫ್​ಐ ಜಿಲ್ಲಾಧ್ಯಕ್ಷ ನಾಪತ್ತೆ

ಬೆಳಗಾವಿ: ದೇಶಾದ್ಯಂತ ಪಿಎಫ್‌ಐ ಸಂಘಟನೆ ನಿಷೇಧ ಆದೇಶ ಜಾರಿಗೆ ಬಂದಿದೆ. ಆದರೆ ಬೆಳಗಾವಿ ಪೊಲೀಸರಿಗೆ ಈವರೆಗೆ ಪಿಎಫ್​ಐ ಜಿಲ್ಲಾ ಘಟಕದ ಅಧ್ಯಕ್ಷ ನವೀದ್ ಕಟಗಿ ಎಲ್ಲಿದ್ದಾರೆ ಎಂದು ಪತ್ತೆ ಮಾಡಲು ಸಾಧ್ಯವಾಗಿಲ್ಲ. ಬೆಳಗಾವಿ ನಗರ ಪೊಲೀಸರು ದಾಳಿ ನಡೆಸಬಹುದು ಎಂಬುದನ್ನು ಅರಿತಿದ್ದ ನವೀದ್ ಸುಲಭವಾಗಿ ಪರಾರಿಯಾಗಿದ್ದ. ಇದೀಗ ಪ್ರತ್ಯೇಕ ತಂಡಗಳನ್ನು ರಚಿಸಿ ನವೀದ್ ಬಂಧನಕ್ಕೆ ಪೊಲೀಸರು ನೆರೆಯ ಗೋವಾ, ಮಹಾರಾಷ್ಟ್ರ ಸೇರಿದಂತೆ ಹಲವು ಕಡೆ ಶೋಧಕಾರ್ಯ ಆರಂಭಿಸಿದ್ದಾರೆ.

ನವೀದ್ ಕಟಗಿ ಮೊಬೈಲ್ ಬಳಸುತ್ತಿಲ್ಲ. ಹೀಗಾಗಿ ಅವನ ಪತ್ತೆಯು ಪೊಲೀಸರಿಗೆ ಕಷ್ಟವಾಗಿದೆ. ಪಿಎಫ್​ಐ ಮೇಲೆ ಎನ್‌ಐಎ ದಾಳಿ ನಡೆಸಿದ್ದನ್ನು ಖಂಡಿಸಿ ರಾಷ್ಟ್ರೀಯ ಹೆದ್ದಾರಿ ಬಂದ್ ಮಾಡುವಲ್ಲಿ ಈತ ಪ್ರಮುಖ ಪಾತ್ರ ವಹಿಸಿದ್ದ. ಯುವಕರನ್ನು ಸಂಘಟಿಸಿ ಸೆ 22ರಂದು ಕಾಕತಿ ಬಳಿ ಹೆದ್ದಾರಿ ಬಂದ್ ಮಾಡಿ ಪ್ರತಿಭಟನೆ ನಡೆಸಿದ್ದ.

ಮುಂದುವರಿದ ಶೋಧ

ಉಡುಪಿ: ನಗರ ಸೇರಿದಂತೆ ಜಿಲ್ಲೆಯಾದ್ಯಂತ ಪಿಎಫ್​ಐ ಮತ್ತು ಎಸ್​ಡಿಪಿಐ ಕಚೇರಿಗಳನ್ನು ಪೊಲೀಸರು ತಪಾಸಣೆ ಮಾಡಿದ್ದಾರೆ. ಪಿಎಫ್​ಐ ಕಚೇರಿಗೆ ಸೇರಿದ ದಾಖಲೆ, ಪೀಠೋಪಕರಣ ಜಪ್ತಿ ಮಾಡಿದ್ದಾರೆ. ಉಡುಪಿ ಜಿಲ್ಲೆಯ ಹೂಡೆ ಮತ್ತು ಗಂಗೊಳ್ಳಿಯಲ್ಲಿರುವ ಎಸ್​ಡಿಪಿಐ ಕಚೇರಿಗಳಿಗೆ ಬೀಗಮುದ್ರೆ ಹಾಕಲಾಗಿದೆ. ಎಸ್​ಡಿಪಿಐ ಮುಖಂಡರಾದ ಬಶೀರ್​, ನಜೀರ್​ ಮನೆಗಳನ್ನು ಪರಿಶೀಲಿಸಲು ಪೊಲೀಸರು ಮುಂದಾದರು. ಆದರೆ ಮನೆಗಳಿಗೆ ಬೀಗ ಹಾಕಿದ್ದ ಹಿನ್ನೆಲೆಯಲ್ಲಿ ಪೊಲೀಸರು ಬರಿಗೈಲಿ ಹಿಂದಿರುಗಬೇಕಾಯಿತು.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.