
ಚಿಕ್ಕಮಗಳೂರು, ಏಪ್ರಿಲ್ 04: ಪಕ್ಕದ ಊರಿನಲ್ಲಿ ನಡೆಯುತ್ತಿದ್ದ ಮದುವೆ ಕಾರ್ಯಕ್ರಮಕ್ಕೆ ತನ್ನೂರಿನ ಊರಿನ ಪಾತ್ರೆಗಳನ್ನು ನೀಡಿದ್ದಕ್ಕೆ ಗ್ರಾಮದ ಮುಖ್ಯಸ್ಥನನ್ನೇ (Vilage Leader) ಊರವರೆಲ್ಲರೂ ಸೇರಿಕೊಂಡು ಬಹಿಷ್ಕಾರ ಹಾಕಿದ್ದಲ್ಲದೇ, ಅವರಿಗೆ 5,000 ದಂಡ ವಿಧಿಸಿರುವ ಅಮಾನವೀಯ ಘಟನೆ ಚಿಕ್ಕಮಗಳೂರು (Chikkamagaluru) ತಾಲೂಕಿನ ಮುಳ್ಳುವಾರೆ ಗ್ರಾಮದಲ್ಲಿ ನಡೆದಿದೆ.
ಮುಳ್ಳುವಾರೆ ಗ್ರಾಮದ ಭೈರಪ್ಪ ಎಂಬವುರ ಕುಟುಂಬವನ್ನು ಊರಿನಿಂದಲೇ ಬಹಿಷ್ಕಾರ ಹಾಕಲಾಗಿದೆ. ಅದಲ್ಲದೇ ಆ ಮನೆಯವರ ಜೊತೆ ಯಾರೂ ಮಾತನಾಡುವಂತಿಲ್ಲ, ಮನೆಗೆ ಯಾರೂ ಹೋಗುವಂತಿಲ್ಲ, ತೋಟದ ಕೆಲಸಕ್ಕೂ ಹೋಗುವಂತಿಲ್ಲ. ಯಾರಾದರೂ ಇದಕ್ಕೆ ವಿರೋಧವಾಗಿ ನಡೆದುಕೊಂಡರೆ ಅವರಿಗೂ 5,000 ರೂ. ದಂಡ ಎಂದು ಆದೇಶ ಹೊರಡಿಸಿದ್ದಾರೆ. ಇದೀಗ ಗ್ರಾಮಸ್ಥರಿಂದ ಬಹಿಷ್ಕಾರಕ್ಕೊಳಪಟ್ಟಿರುವ ಭೈರಪ್ಪ ಅವರು ನ್ಯಾಯಕ್ಕಾಗಿ ಜಿಲ್ಲಾಧಿಕಾರಿಗಳ ಕಚೇರಿ, ಪೋಲಿಸ್ ಠಾಣೆ ಅಲೆಯುತ್ತಿದ್ದಾರೆ.
ಭೈರಪ್ಪ ಅವರನ್ನು ಗ್ರಾಮಸ್ಥರು ಸೇರಿಕೊಂಡು ಮುಳ್ಳುವಾರೆ ಗ್ರಾಮದ ಮುಖಂಡರನ್ನಾಗಿಸಿದ್ದರು. ಮುಳ್ಳುವಾರೆ ಗ್ರಾಮದ ಪಕ್ಕದಲ್ಲಿರುವ ಕೆಸರಿಕೆ ಗ್ರಾಮದಲ್ಲಿ ಒಂದೇ ದಿನ ಮೂರು ಮದುವೆಯಾಗಿದ್ದವು. ಅಂದು ಅಡುಗೆ ಮಾಡಲು ಪಾತ್ರೆ ಸಮಸ್ಯೆಯಾಗಿದೆ ಎಂದು ಕೆಸರಿಕೆ ಗ್ರಾಮದವರು ಬಂದು ಬೈರಪ್ಪ ಅವರಿಗೆ ಪಾತ್ರೆ ಕೇಳಿದ್ದರು. ಅದಕ್ಕೆ ಭೈರಪ್ಪ ಕೊಟ್ಟಿದ್ದರು. ಗ್ರಾಮದ ಕಾರ್ಯಕ್ರಮಗಳಿಗೆ ಚುನಾವಣೆ ಸಮಯದಲ್ಲಿ ತಂದಿರುವ ಪಾತ್ರೆಗಳನ್ನು ಪಕ್ಕದ ಹಳ್ಳಿಗೆ ಕೊಟ್ಟಿದ್ದಕ್ಕೆ ಬಹಿಷ್ಕಾರ ಹಾಕಲಾಗಿದೆ. ಭೈರಪ್ಪ ಪಾತ್ರೆಗಳನ್ನು ಕೊಟ್ಟಿದ್ದು ಇದೇ ಮೊದಲಲ್ಲ. ಈ ಹಿಂದೆಯೂ ಕೊಟ್ಟಿದ್ದರು. ಈಗ ಮಾತ್ರ ಬಹಿಷ್ಕಾರ ಹಾಕಿದ್ದಾರೆ. 5,000 ಸಾವಿರ ರೂ. ದಂಡ ಹಾಕಿ, ಭೈರಪ್ಪನವರ ಮನೆಗೆ ಯಾರೂ ಹೋಗದಂತೆ ಗ್ರಾಮಸ್ಥರು ಎಚ್ಚರಿಕೆ ನೀಡಿದ್ದಾರೆ.
ಈ ಹಿಂದೆಯೂ ಪಕ್ಕದ ಊರಿನಲ್ಲಿ ನಡೆಯುವ ಕಾರ್ಯಕ್ರಮಗಳಿಗೆ ಪಾತ್ರೆ ನೀಡಿದ್ದೆ. ಆದರೆ, ಅಂದು ತಪ್ಪಾಗಿರಲಿಲ್ಲ. ಈಗ ನಾನು ಪಾತ್ರೆ ನೀಡಿರುವುದು ತಪ್ಪಾಗಿದ್ದು, ಹರೀಶ್, ಪುಟ್ಟಸ್ವಾಮಿ, ಮಂಜುನಾಥ್, ಸತೀಶ್, ಗಿರೀಶ್ ಹಾಗೂ ಪುಟ್ಟಸ್ವಾಮಿ ಎಂಬ ಆರು ಜನರು ಸೇರಿಕೊಂಡು ಗ್ರಾಮಸ್ಥರ ಸಮ್ಮುಖದಲ್ಲಿ ದಂಡ ವಿಧಿಸಿ, ಬಹಿಷ್ಕಾರ ಹಾಕಿದ್ದಾರೆ ಎಂದು ಆರೋಪಿಸಿ, ಜಿಲ್ಲಾಧಿಕಾರಿ ಹಾಗೂ ಆಲ್ದೂರು ಪೊಲೀಸರಿಗೂ ದೂರು ನೀಡಿದ್ದಾರೆ. ಆದರೆ ಇಲ್ಲಿಯವರೆಗೂ ಯಾವುದೇ ಕ್ರಮವಾಗಿಲ್ಲ. ನನಗೆ ನ್ಯಾಯ ಕೊಡಿಸಿ ಎಂದು ಭೈರಪ್ಪ ಅಳಲು ತೋಡಿಕೊಂಡಿದ್ದಾರೆ.
ಇದನ್ನೂ ಓದಿ: ಭಾರತದ ಮೊದಲ ಕಾಫಿ ತೋಟ ತಾಣದ ಕಥೆಯನ್ನು ಹಂಚಿಕೊಂಡ ಆನಂದ್ ಮಹೀಂದ್ರಾ
ಒಟ್ಟಿನಲ್ಲಿ ಚಿಕ್ಕ ವಿಚಾರಕ್ಕೆ ಗ್ರಾಮಸ್ಥರು ಸೇರಿಕೊಂಡು ಗ್ರಾಮದ ಮುಖ್ಯಸ್ಥನನ್ನೇ ಗ್ರಾಮದಿಂದ ಬಹಿಷ್ಕರಿಸಿ ದಂಡ ಹಾಕಿರುವುದು ಮಾತ್ರ ವಿಪರ್ಯಾಸವಾಗಿ. ಈ ಶತಮಾನದಲ್ಲೂ ಬಹಿಷ್ಕಾರ ಎಂಬ ಅನಿಷ್ಠ ಪದ್ಧತಿ ಜೀವಂತವಾಗಿರುವುದಕ್ಕೆ ಚಿಕ್ಕಮಗಳೂರು ಸಾಕ್ಷಿಯಾಗಿದೆ.