ಚಿಕ್ಕಮಗಳೂರು, ಜನವರಿ 05: ಕರ್ನಾಟಕ ಸೇರಿದಂತೆ ಕೇರಳ, ಆಂಧ್ರಕ್ಕೆ ಬೇಕಾಗಿದ್ದ ಮೋಸ್ಟ್ ವಾಂಟೆಡ್ ಆರು ನಕ್ಸಲರು (Naxal) ಚಿಕ್ಕಮಗಳೂರಿನ ಜಿಲ್ಲಾಡಳಿತ ಮುಂದೆ ಶರಣಾಗತಿಗೆ ನಿರ್ಧರಿಸಿದ್ದಾರೆ. ಕರ್ನಾಟಕ ನಕ್ಸಲ್ ತುಂಗಾ ದಳದ ನಾಯಕಿ ಮುಂಡಗಾರು ಲತಾ, ಸುಂದರಿ, ವನಜಾಕ್ಷಿ, ದಕ್ಷಿಣ ಭಾರತದ ಮೋಸ್ಟ್ ವಾಂಟೆಡ್ ನಕ್ಸಲ್ ಜೀಶ, ಆಂಧ್ರ ಪ್ರದೇಶದ ಕೆ.ವಸಂತ, ಮಾರೆಪ್ಪ ಅರೋಲಿ ಶರಣಾಗತಿಗೆ ನಿರ್ಧರಿಸಿದ್ದು, ಮೂರು ದಿನಗಳಲ್ಲಿ ಆರು ನಕ್ಸಲರು ಶರಣಾಗುವ ಸಾಧ್ಯತೆ ಇದೆ.
ಈ ಬಗ್ಗೆ ಶಾಂತಿಗಾಗಿ ನಾಗರಿಕ ವೇದಿಕೆಗೆ ನಕ್ಸಲರು ಪತ್ರ ಬರೆದಿದ್ದಾರೆ. ಸಿಎಂ ಸಿದ್ದರಾಮಯ್ಯ ಜೊತೆ ನಾಗರಿಕ ವೇದಿಕೆಯ ಸದಸ್ಯರು ಚರ್ಚಿಸಿದ್ದಾರೆ. ಕಳೆದ 3 ತಿಂಗಳಿನಿಂದ ಚಿಕ್ಕಮಗಳೂರು, ಉಡುಪಿ ಭಾಗದಲ್ಲಿ ನಕ್ಸಲ್ ಚಟುವಟಿಕೆಗಳು ಕಂಡುಬಂದಿದ್ದವು.
ಇದನ್ನೂ ಓದಿ: ಉಡುಪಿ: ಎನ್‌ಕೌಂಟರ್ ನಡೆದ ಪೀತಬೈಲ್ನಲ್ಲಿ ತೀವ್ರ ಶೋಧ, ಶರಣಾಗತಿಗೆ ನಕ್ಸಲರಿಗೆ ಡಿಸಿಎಂ ಸೂಚನೆ
ಇತ್ತೀಚೆಗೆ ಉಡುಪಿ ಜಿಲ್ಲೆಯ ಕಬ್ಬಿನಾಲೆ ಅರಣ್ಯದ ಪೀತಬೈಲು ಪ್ರದೇಶದಲ್ಲಿ ಸೋಮವಾರದಂದು ಎನ್‌ಕೌಂಟರ್ ಆಗಿತ್ತು. ಎರಡು ದಶಕದಿಂದಲೂ ತಲೆಮರೆಸಿಕೊಂಡು ಓಡಾಡುತ್ತಿದ್ದ ನಕ್ಸಲ್ ನಾಯಕ ವಿಕ್ರಂಗೌಡ ಎನ್‌ಕೌಂಟರ್‌ಗೆ ಬಲಿ ಆಗಿದ್ದ.
ಇನ್ನು ಇತ್ತೀಚೆಗೆ ಸಿಎಂ ಸಿದ್ದರಾಮಯ್ಯ ನಕ್ಸಲೀಯರಿಗೆ ಶರಣಾಗುವಂತೆ ಕರೆ ನೀಡಿದ್ದರು. ಆ ಮೂಲಕ ಕರ್ನಾಟಕದ ಎಲ್ಲಾ ನಕ್ಸಲೀಯರು ಮುಖ್ಯವಾಹಿನಿಗೆ ಬರಲು ನಮ್ಮ ಸರ್ಕಾರವು ಬಯಸುತ್ತದೆ. ನಕ್ಸಲೀಯರು ಪ್ರಜಾತಾಂತ್ರಿಕತೆಯ ಮುಖ್ಯವಾಹಿನಿಗೆ ಬರಬೇಕೆಂದು ಹೇಳಿದ್ದರು.
ಇದನ್ನೂ ಓದಿ: ನಕ್ಸಲ್ ವಿಕ್ರಂ ಗೌಡ ಪೊಲೀಸ್ ಬಲೆಗೆ ಬಿದ್ದಿದ್ಹೇಗೆ? ರೋಚಕ ಕಾರ್ಯಾಚರಣೆಯ ರಹಸ್ಯ ಇಲ್ಲಿದೆ
ಅಷ್ಟೇ ಅಲ್ಲದೆ ಶರಣಾದ ನಕ್ಸಲೀಯರಿಗೆ ಹಂತ ಹಂತವಾಗಿ ಆರ್ಥಿಕ ನೆರವು, ಪ್ರೋತ್ಸಾಹ ಧನ, ಕೌಶಲ್ಯ ತರಬೇತಿಗಳು ನೀಡುವುದಲ್ಲದೆ ಅವರ ಪುನರ್ವಸತಿಗೂ ಸಹ ಎಲ್ಲ ಕ್ರಮಗಳನ್ನು ಸಹಾನುಭೂತಿಯಿಂದ ಹಾಗೂ ಆದ್ಯತೆ ಮೇರೆಗೆ ಪರಿಗಣಿಸಲು ಕ್ರಮವಹಿಸಲಾಗುವುದು. ಅವರ ಮೇಲಿನ ಮೊಕದ್ದಮೆ, ಪ್ರಕರಣಗಳನ್ನು ತ್ವರಿತವಾಗಿ ಇತ್ಯರ್ಥಗೊಳಿಸಲು ಸರ್ಕಾರದಿಂದ ಕ್ರಮ ಕೈಗೊಳ್ಳಲಾಗುವುದೆಂದು ಎಂದು ಭರವಸೆ ನೀಡಿದ್ದರು.
ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.
Published On - 4:39 pm, Sun, 5 January 25