AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಚಿಕ್ಕಮಗಳೂರು ಕೋರ್ಟ್​​​ನಲ್ಲಿ ಗಣಪತಿ ದೇಗುಲಕ್ಕೆ ವಿರೋಧ: 1970ರಲ್ಲಿ ಬಂದ ವಿಘ್ನನಿವಾರಕನಿಗೆ ವಿಘ್ನ

ಕಾಫಿನಾಡು ಚಿಕ್ಕಮಗಳೂರಿನಲ್ಲಿ ಹೊಸ ವಿವಾದವೊಂದು ಬೆಳಕಿಗೆ ಬಂದಿದೆ. ನೂತನವಾಗಿ ನಿರ್ಮಾಣವಾಗಿರುವ ಜಿಲ್ಲಾ ನ್ಯಾಯಾಲಯದ ಆವರಣದಲ್ಲಿ ಗಣಪತಿ ದೇವಾಲಯ ನಿರ್ಮಾಣಕ್ಕೆ ದಲಿತ ಸಂಘಟನೆಗಳು ವಿರೋಧ ವ್ಯಕ್ತಪಡಿಸಿವೆ. ಕೋರ್ಟ್​ ಆವರಣದಲ್ಲಿ ಗಣಪತಿ ದೇಗುಲ ನಿರ್ಮಾಣಕ್ಕೆ ವಿರೋಧ ಏಕೆ? ಗಣಪತಿ ವಿಗ್ರಹದ ಇತಿಹಾಸವೇನು? ಎನ್ನುವ ಮಾಹಿತಿ ಇಲ್ಲಿದೆ.

ಚಿಕ್ಕಮಗಳೂರು ಕೋರ್ಟ್​​​ನಲ್ಲಿ  ಗಣಪತಿ ದೇಗುಲಕ್ಕೆ ವಿರೋಧ: 1970ರಲ್ಲಿ ಬಂದ ವಿಘ್ನನಿವಾರಕನಿಗೆ ವಿಘ್ನ
Chikkamagaluru Court
ಅಶ್ವಿತ್ ಮಾವಿನಗುಣಿ, ಚಿಕ್ಕಮಗಳೂರು
| Edited By: |

Updated on:Jan 20, 2026 | 6:55 PM

Share

ಚಿಕ್ಕಮಗಳೂರು, (ಜನವರಿ 20): ನಗರದ ಹೊರವಲಯದ ಹೌಸಿಂಗ್ ಬೋರ್ಡ್ ಬಳಿ ಕೋಟ್ಯಂತರ ರೂಪಾಯಿ ವೆಚ್ಚದಲ್ಲಿ ಸುಸಜ್ಜಿತವಾದ ಜಿಲ್ಲಾ ನ್ಯಾಯಾಲಯದ (Chikkamagaluru District Court) ಕಟ್ಟಡ ಕಾಮಗಾರಿ ನಡೆಯುತ್ತಿದೆ. ಸಂಪೂರ್ಣ ಕಾಮಗಾರಿ ಮುಗಿಯುವ ಹಂತಕ್ಕೆ ಬಂದಿದೆ. ಆದ್ರೆ,ಈ ನೂತನ ಚಿಕ್ಕಮಗಳೂರು ಜಿಲ್ಲಾ ನ್ಯಾಯಾಲಯದ ಆವರಣದೊಳಗೆ ಗಣಪತಿ ದೇವಾಲಯ (Ganapathi temple) ನಿರ್ಮಾಣಕ್ಕೆ ಇದೀಗ ವಿರೋಧ ವ್ಯಕ್ತವಾಗಿದೆ. ದಲಿತ ಸಂಘಟನೆಗಳ ಒಕ್ಕೂಟ ( Dalit organizations) ಕೋರ್ಟ್​​ನ ಆವರಣದಲ್ಲಿ ಗಣಪತಿ ದೇಗುಲ ನಿರ್ಮಾಣಕ್ಕೆ ವಿರೋಧ ಮಾಡಿದ್ದು, ಈ ಸಂಬಂಧ ಸಂಘಟನೆಗಳು ಜಿಲ್ಲಾಧಿಕಾರಿ ಕಚೇರಿ ಮಟ್ಟಿಲೇರಿವೆ. ಇದರ ಬೆನ್ನಲ್ಲೇ ವಕೀಲರು ಹಾಗೂ ಸಂಘಟನೆ ಸದಸ್ಯರ ನಡುವೆ ಪರ ವಿರೋಧದ ಚರ್ಚೆ ತಾರಕಕ್ಕೇರಿದೆ.

ದಲಿತ ಸಂಘಟನೆಗಳ ವಿರೋಧ ಏಕೆ?

ದಲಿತ ಸಂಘಟನೆಗಳ ಒಕ್ಕೂಟವು ನ್ಯಾಯಾಲಯ ಸರ್ವಧರ್ಮಕ್ಕೆ ಸೇರಿದ್ದು, ಸರ್ವಧರ್ಮ ಸಮಾನತೆಯ ಸರ್ವ ಜಾತಿಗಳಿಗೂ ಸಂವಿಧಾನಿಕ ಸಮಾನತೆಯನ್ನ ಪ್ರತಿಪಾದಿಸುವ ನ್ಯಾಯಾಲಯದ ಮುಂದೆ ಒಂದು ಧರ್ಮದ ದೇವಾಲಯ ನಿರ್ಮಾಣದಿಂದ ಧಾರ್ಮಿಕ ಭಾವನೆಯನ್ನ ಏರಿಕೆ ಮಾಡಿದಂತೆ. ಸರ್ವಧರ್ಮ ಸಮಾನತೆಗೆ ಧಕ್ಕೆ ತಂದಂತೆ. ಆದ್ದರಿಂದ ಗಣಪತಿ ದೇವಾಲಯ ನಿರ್ಮಾಣಕ್ಕೆ ಅನುಮತಿ ನೀಡಬಾರದು ಎಂದು ಪಟ್ಟು ಹಿಡಿದಿವೆ.

ಇದನ್ನೂ ನೋಡಿ: ಹಾಸನದಲ್ಲೊಂದು ಆಘಾತಕಾರಿ ಘಟನೆ: ಶಾಲಾ ಬಾಲಕಿಯನ್ನು ಹಿಂಬಾಲಿಸಿ ಮನೆಗೆ ಬಂದ ಆಗಂತುಕ

ಚಿಕ್ಕಮಗಳೂರು ಜಿಲ್ಲಾ ವಕೀಲರ ಸಂಘ ಆಕ್ರೋಶ

ಇನ್ನೂ ಕೋರ್ಟ್ ಆವರಣದಲ್ಲಿ ಇನ್ನೂ ನಿರ್ಮಾಣವಾಗದ ಗಣಪತಿ ದೇವಾಲಯಕ್ಕೆ ದಲಿತ‌ ಸಂಘಟನೆಗಳು ಆಕ್ರೋಶ ವಿರೋಧಿಸಿದ ಬೆನ್ನಲ್ಲೇ ಜಿಲ್ಲಾಡಳಿತವು, ನ್ಯಾಯಾಲಯದ ಆವರಣದಲ್ಲಿ ವಕೀಲರ ಸಂಘಕ್ಕೆ ಜಾಗವನ್ನ ನೀಡಿದೆ. ವಕೀಲರ ಸಂಘಕ್ಕೆ ನೀಡಿರುವ ಜಾಗದಲ್ಲಿ ಗಣಪತಿ ದೇವಾಲಯ ನಿರ್ಮಾಣಕ್ಕೆ ಚಿಕ್ಕಮಗಳೂರು ವಕೀಲರ ಸಂಘ ನಿರ್ಧಾರ ಮಾಡಿದೆ. ನಾವು ನಮಗೆ ನೀಡಿರುವ ಜಾಗದಲ್ಲಿ ನಾವು ಹಣ ಹಾಕಿ ದೇವಾಲಯ ಮಾಡಿದ್ರೆ ತಪ್ಪಾ ಎಂದು ಪ್ರಶ್ನೆ ಮಾಡಿದ್ದಾರೆ.

ಹೊಸ ಕೋರ್ಟ್ ಆವರಣದಲ್ಲಿ ಗಣಪತಿ ದೇವಾಲಯ ನಿರ್ಮಾಣಕ್ಕೆ ವಿರೋಧ ವ್ಯಕ್ತಪಡಿಸುತ್ತಿರುವವರ ವಿರುದ್ಧ ಚಿಕ್ಕಮಗಳೂರು ಜಿಲ್ಲಾ ವಕೀಲರ ಸಂಘ ಆಕ್ರೋಶ ವ್ಯಕ್ತಪಡಿಸಿದ್ದು,  ರಾಜ್ಯದ ಬಹುತೇಕ ನ್ಯಾಯಾಲಯಗಳು ಗಣಪತಿ ದೇವಸ್ಥಾನವಿದೆ. ಹಾಗೆಯೇ ಚಿಕ್ಕಮಗಳೂರಿನ ಕೋರ್ಟ್ ನಲ್ಲಿಯೂ ಗಣಪತಿ ದೇವಸ್ಥಾನ ಇದೆ.ಚಿಕ್ಕಮಗಳೂರು ಕೋರ್ಟಿನ ಆವರಣದಲ್ಲಿರುವ ಗಣಪತಿಗೆ ಅದರದ್ದೇ ಆದ ಇತಿಹಾಸವಿದೆ. ಹೊಯ್ಸಳರ ಕಾಲದಲ್ಲಿ ಕೆತ್ತನೆ ಮಾಡಿದ ಗಣಪತಿ ವಿಗ್ರಹವಿದು. ಬೇರೆ ದೇಶಕ್ಕೆ ಕೊಂಡೊಯ್ಯುವ ಸಂದರ್ಭದಲ್ಲಿ ಮದ್ರಾಸ್ ಹಾರ್ಬರ್ ವಿಗ್ರಹ ಸಿಕ್ಕಿತ್ತು ಎಂದಿದ್ದಾರೆ.

ಗಣಪತಿ ವಿಗ್ರಹದ ಇತಿಹಾಸ ಬಿಚ್ಚಿಟ್ಟ ವಕೀಲರು

ಇನ್ನು ದಲಿತ ಸಂಘಟನೆ ವಿರೋಧ ವ್ಯಕ್ತಪಡಿಸುತ್ತಿರುವ ಗಣಪತಿ ವಿಗ್ರಹಕ್ಕೆ ಇತಿಹಾಸವಿದ್ದು, ಅದನ್ನು ವಕೀಲರ ಸಂಘ ಅಧ್ಯಕ್ಷ ಎಳೆ ಎಳೆಯಾಗಿ ಬಿಚ್ಚಿಟ್ಟಿದ್ದಾರೆ. ಹೊಯ್ಸಳರ ಕಾಲದಲ್ಲಿ ಕೆತ್ತನೆ ಮಾಡಿದ ಗಣಪತಿ ವಿಗ್ರಹ 1960ರ ದಶಕದಲ್ಲಿ ಕಳವಾಗಿತ್ತು. ಈ ಪ್ರಕರಣ 1970ರಲ್ಲಿ ನಮ್ಮ ನ್ಯಾಯಾಲಯಕ್ಕೆ ಬಂದಿತ್ತು. ಬಳಿಕ ಗಣಪತಿ ಕಳುವಾದ ಸಂಬಂಧಪಟ್ಟ ಕೇಸ್ ಇಲ್ಲೇ ಅಂತ್ಯವಾಗಿತ್ತು. ಇನ್ನು ಕೇಸ್ ಮುಕ್ತಾಯವಾದ ವಸ್ತುಗಳನ್ನು ವಿಲೇವಾರಿ ಮಾಡುವ ಸಂದರ್ಭದಲ್ಲಿ ಇದನ್ನ ಇಲ್ಲಿಯೇ ಉಳಿಸಿಕೊಳ್ಳಲಾಗಿತ್ತು.1972 ರಲ್ಲಿ ಅಂದಿನ ನ್ಯಾಯಾಧೀಶರು ವಕೀಲರು ನ್ಯಾಯಾಲಯದ ಸಿಬ್ಬಂದಿ ಸೇರಿ ಇದನ್ನ ಇಲ್ಲಿ ಪ್ರತಿಷ್ಠಾಪನೆ ಮಾಡಿದ್ದರು. ಇದೀಗ ಹೊಸ ಕೋರ್ಟ್ ಕಟ್ಟಡವಾಗಿದೆ. ಈ ಗಣಪತಿಯನ್ನ ಇಲ್ಲಿ ಅನಾಥವಾಗಿ ಬಿಟ್ಟು ಹೋಗಲ್ಲ. ಹೊಸದಾಗಿ ಕಟ್ಟಡ ನಿರ್ಮಾಣವಾಗಿದೆ. ಅದರ ಪಕ್ಕದಲ್ಲಿಯೇ ವಕೀಲರಿಗಾಗಿ ಜಾಗವನ್ನು ಮೀಸಲಿಡಲಾಗಿದೆ ಆ ಜಾಗದಲ್ಲಿ ಗಣಪತಿ ದೇವಸ್ಥಾನ ಕಟ್ಟಿದರೆ ತಪ್ಪೇನು ಎನ್ನುವುದು ವಕೀಲರ ವಾದ.

ಜಿಲ್ಲಾ ವಕೀಲರ ಸಂಘದ ಅಧ್ಯಕ್ಷ ಹೇಳಿದ್ದಿಷ್ಟು

ಇದೆ ವಿಚಾರಕ್ಕೆ ಎರಡು ಬಾರಿ ವಕೀಲರ ಸಂಘದಲ್ಲಿ ಸಭೆ ನಡೆಸಲಾಗಿದ್ದು, ಎರಡು ಸಭೆಯಲ್ಲಿಯೂ ಒಮ್ಮತದ ನಿರ್ಧಾರ ಮಾಡಲಾಗಿದೆ. ನಮ್ಮ ಹಣದಿಂದ,ಸಿಬ್ಬಂದಿ ಹಣದಿಂದ ದೇವಸ್ಥಾನ ಕಟ್ಟುತ್ತಿದ್ದೇವೆ. ನಾವು ಕಟ್ಟಲು ಹೊರಟಿರುವುದು ನ್ಯಾಯಾಲಯದ ಒಳಗೂ ಅಲ್ಲ ಹೊರಗೂ ಅಲ್ಲ. ನಮಗೆ ನಮ್ಮ ವಕೀಲರ ಭವನಕ್ಕೆ ನೀಡಿರುವ ಜಾಗದಲ್ಲಿ ವಕೀಲರು ಧರ್ಮಾತೀತವಾಗಿ ಗಣಪತಿ ದೇವಸ್ಥಾನ ಕಟ್ಟಲು ಒಪ್ಪಿದ್ದಾರೆ. ಗಣಪತಿ ಎಲ್ಲಾ ಧರ್ಮದವರಿಗೂ ಸೇರಿದವನು. ನಾವಿನ್ನು ದೇವಾಲಯವನ್ನ ಕಟ್ಟಿಯೇ ಇಲ್ಲ. ಆಗಲೇ ವಿವಾದ ‌ಮಾಡುತ್ತಿರುವುದು ತಪ್ಪು ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ರಾಜ್ಯದ ಬಹುತೇಕ ಕೋರ್ಟ್ ನಲ್ಲಿ‌ ಗಣಪತಿ ದೇವಾಲಯಗಳಿದೆ. ಆದ್ರೆ ಕಾಫಿನಾಡಿನಲ್ಲಿ ನಿರ್ಮಾಣವಾಗಿರುವ ನೂತನ ‌ಕೋರ್ಟ್ ನಲ್ಲಿ‌ ಗಣಪತಿ ದೇವಾಲಯ ‌ನಿರ್ಮಾಣಕ್ಕೂ ಮುನ್ನವೇ ವಿವಾದ ಸೃಷ್ಟಿಯಾಗಿದೆ. ಗಣಪತಿ ದೇವಾಲಯ ನಿರ್ಮಾಣ ವಿವಾದ ಇನ್ಯಾವ ಹೊಸ ಸ್ವರೂಪ ಪಡೆಯುತ್ತೋ ಗೊತ್ತಿಲ್ಲ.

ಕರ್ನಾಟಕದ ಮತ್ತಷ್ಟು ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ

Published On - 6:50 pm, Tue, 20 January 26